ದುಬೈ, ಅ. 10: ರಾಬಿನ್ ಉತ್ತಪ್ಪ ಮತ್ತು ಎಂಎಸ್ ಧೋನಿ ಇಂದು ಸರಿಯಾದ ಸಮಯಕ್ಕೆ ಫಾರ್ಮ್ ಕಂಡುಕೊಂಡ ಫಲವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2021ನ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲ್ಲಲು ಒಡ್ಡಿದ 173 ರನ್ ಸವಾಲನ್ನು ಬೆನ್ನುತ್ತವ ಹಾದಿಯಲ್ಲಿ ಹಲವು ಎಡರುತೊಡರುಗಳೊಂದಿಗೆ ಚೆನ್ನೈ ತಂಡ ಗೆಲುವಿನತ್ತ ದಾಪುಗಾಲಿಕ್ಕಿತು. 4 ವಿಕೆಟ್ಗಳಿಂದ ಡೆಲ್ಲಿಯನ್ನ ಸೋಲಿಸಿ ಫೈನಲ್ ತಲುಪಿತು. ಇಡೀ ಟೂರ್ನಿಯಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ನಾಯಕ ಎಂಎಸ್ ಧೋನಿ ಈ ಸೀಸನ್ನಲ್ಲಿ ಇದೇ ಮೊದಲ ಬಾರಿಗೆ ಮ್ಯಾಚ್ ಫಿನಿಶರ್ ಆಗಿ ಕಂಗೊಳಿಸಿದರು. ಈ ಮೂಲಕ ತಮ್ಮಲ್ಲಿ ಇನ್ನೂ ಆಡುವ ಸಾಮರ್ಥ್ಯ ಇದೆ ಎಂದು ಸಾಬೀತು ಮಾಡಿದರು. ಚೆನ್ನೈ ತಂಡ 9ನೇ ಬಾರಿಗೆ ಐಪಿಎಲ್ ಫೈನಲ್ ತಲುಪುವಂತೆ ನೋಡಿಕೊಂಡರು.
ಇಡೀ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದ ಋತುರಾಜ್ ಗಾಯಕ್ವಾಡ್ ಇವತ್ತಿನ ಪಂದ್ಯದಲ್ಲೂ ಅದನ್ನ ಮುಂದುವರಿಸಿದರು. ಆದರೆ, ಅವರ ಜೊತೆ ಇನ್ನೂ ಗಟ್ಟಿಯಾಗಿ ನಿಲ್ಲುತ್ತಿದ್ದ ಫ್ಯಾಫ್ ಡುಪ್ಲೆಸಿ ಇವತ್ತು ಮೊದಲ ಓವರ್ನಲ್ಲೇ ನಿರ್ಗಮಿಸಿದರು. ಇದರ ಆಘಾತ ಹೆಚ್ಚು ಮಟ್ಟಕ್ಕೆ ಆಗದ ಹಾಗೆ ರಾಬಿನ್ ಉತ್ತಪ್ಪ ಮತ್ತು ಗಾಯಕ್ವಾಡ್ ನೋಡಿಕೊಂಡರು. ಇಬ್ಬರೂ ಕೂಡ 2ನೇ ವಿಕೆಟ್ಗೆ 110 ರನ್ ಜೊತೆಯಾಟ ಆಡಿದರು. ಇದು ಚೆನ್ನೈ ಚೇಸಿಂಗ್ಗೆ ಬುನಾದಿ ಹಾಕಿಕೊಟ್ಟಿತು. ರಾಬಿನ್ ಉತ್ತಪ್ಪ 44 ಬಾಲ್ನಲ್ಲಿ 62 ರನ್ ಗಳಿಸಿದರು. ಇದು ಈ ಸೀಸನ್ನಲ್ಲಿ ಮೊದಲ ಅರ್ಧಶತಕ. ಉತ್ತಪ್ಪ ನಿರ್ಗಮನದ ಬಳಿಕ ಚೆನ್ನೈ ದಿಢೀರ್ ಪತನಗೊಂಡು ಸೋಲಿನ ಸುಳಿಯಲ್ಲಿ ಸಿಲುಕಿದರೂ ನಾಯಕ ಎಂಎಸ್ ಧೋನಿ ಮುಂಬಡ್ತಿ ಪಡೆದು ಬಂದು ಮ್ಯಾಚ್ ಫಿನಿಶಿಂಗ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ರಾಬಿನ್ ಉತ್ತಪ್ಪ ಮತ್ತು ಧೋನಿ ಇಬ್ಬರೂ ಸರಿಯಾದ ಸಮಯಕ್ಕೆ ಫಾರ್ಮ್ಗೆ ಮರಳಿದ್ದು ಚೆನ್ನೈ ತಂಡದ ಬಲವನ್ನು ಇಮ್ಮಡಿಗೊಳಿಸಿದೆ.
ಇದಕ್ಕೆ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದರು. ಪೃಥ್ವಿ ಶಾ ಅವರು ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. 11ನೇ ಓವರ್ನಲ್ಲಿ ಔಟಾಗುವವರೆಗೂ ಪೃಥ್ವಿ ಶಾ ಅವರೇ ಬಹುತೇಕ ಏಕಾಂಗಿಯಾಗಿ ಇನ್ನಿಂಗ್ಸ್ ಕಟ್ಟಿದರು. ಸ್ಕೋರು 80 ರನ್ ಇದ್ದಾಗ ಪೃಥ್ವಿ ಶಾ ಔಟಾದರು. ಈ 80 ರನ್ನಲ್ಲಿ ಪೃಥ್ವಿ ಶಾ ಒಬ್ಬರೇ 60 ರನ್ ಗಳಿಸಿದ್ದರು. ಶಾ ಅವರದ್ದು ನಾಲ್ಕನೆಯ ವಿಕೆಟ್. ಅದಾದ ಬಳಿಕ ಶಿಮ್ರಾನ್ ಹೆಟ್ಮೆಯರ್ ಮತ್ತು ನಾಯಕ ರಿಷಭ್ ಪಂತ್ ಅವರು ಡೆಲ್ಲಿ ತಂಡಕ್ಕೆ ಉತ್ತಮ ಮೊತ್ತ ಸಿಗುವಂತೆ ನೋಡಿಕೊಂಡರು. ಇಬ್ಬರೂ 5ನೇ ವಿಕೆಟ್ಗೆ 83 ರನ್ ಜೊತೆಯಾಟ ಆಡಿದರು. ಪಂತ್ ಅಜೇಯ 51 ರನ್ ಗಳಿಸಿದರೆ, ಹೆಟ್ಮೆಯರ್ 37 ರನ್ ಗಳಿಸಿ 19ನೇ ಓವರ್ನಲ್ಲಿ ಔಟಾದರು. ಅಂತಿಮವಾಗಿ ಡೆಲ್ಲಿ ತಂಡ 5 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕುವಲ್ಲಿ ಶಕ್ಯವಾಯಿತು.
ನಾಳೆ ಸೋಮವಾರ ಪ್ಲೇ ಆಫ್ನಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಶಾರ್ಜಾದಲ್ಲಿ ನಡೆಯುವ ಆ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಯುಎಇಗೆ ಟೂರ್ನಿ ಶಿಫ್ಟ್ ಆದಾಗಿನಿಂದ ಅದ್ಭುತ ಫಾರ್ಮ್ನಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಬೆಂಗಳೂರಿಗರು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಒಂದು ವೇಳೆ ಆ ಪಂದ್ಯವನ್ನು ಆರ್ಸಿಬಿ ಗೆದ್ದರೆ ಎರಡನೇ ಕ್ವಾಲಿಫಯರ್ ಪಂದ್ಯದ ಮೂಲಕ ಫೈನಲ್ ತಲುಪಲು ಪ್ರಯತ್ನಿಸಬಹುದಾಗಿದೆ. ಇದೇ ವೇಳೆ ಚೆನ್ನ ವಿರುದ್ಧ ಮೊದಲ ಕ್ವಾಲಿಫಯರ್ನಲ್ಲಿ ಸೋತಿರುವ ಡೆಲ್ಲಿ ತಂಡ ಎರಡನೇ ಕ್ವಾಲಿಫಯರ್ನಲ್ಲಿ ಆಡಿ ಫೈನಲ್ಗೆ ತಲುಪುವ ಅವಕಾಶ ಹೊಂದಿದೆ.
ಇದನ್ನೂ ಓದಿ: Abu Dhabi T10: ಅಬುಧಾಬಿ ಟಿ10 ಲೀಗ್ನಲ್ಲಿ ಕರ್ನಾಟಕದ ಕ್ರಿಕೆಟಿಗರು; ಇಲ್ಲಿದೆ ಆಟಗಾರರ ಲಿಸ್ಟ್
ತಂಡಗಳು:
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರಿಷಭ್ ಪಂತ್, ಶಿಮ್ರೋನ್ ಹೆಟ್ಮೆಯರ್, ಟಾಮ್ ಕುರನ್, ಆರ್ ಅಶ್ವಿನ್, ಕಗಿಸೋ ರಬಡ, ಅವೇಶ್ ಖಾನ್, ಆನ್ರಿಕ್ ನೋರ್ಟಿಯಾ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಋತುರಾಜ್ ಗಾಯಕ್ವಾಡ್, ಫ್ಯಾಫ್ ಡುಪ್ಲೆಸಿ, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಾಟಿ ರಾಯುಡು, ಎಂಎಸ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಶ್ ಹೇಜಲ್ವುಡ್.
ಸ್ಕೋರು ವಿವರ:
ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ 172/5
(ಪೃಥ್ವಿ ಶಾ 60, ರಿಷಭ್ ಪಂತ್ ಅಜೇಯ 51, ಶಿಮ್ರಾನ್ ಹೆಟ್ಮೆಯರ್ 37 ರನ್ – ಜೋಶ್ ಹೇಜಲ್ವುಡ್ 29/2)
ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್ 173/6
(ಋತುರಾಜ್ ಗಾಯಕ್ವಾಡ್ 70, ರಾಬಿನ್ ಉತ್ತಪ್ಪ 62, ಎಂಎಸ್ ಧೋನಿ 18 , ಮೊಯೀನ್ ಅಲಿ 16 ರನ್- ಟಾಮ್ ಕುರನ್ 29/3)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ