CSK vs DC- ಹಿಟ್ಮ್ಯಾನ್ ಆದ ಹೆಟ್ಮಯರ್; ಸಿಎಸ್ಕೆ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ಗೆ ರೋಚಕ ಗೆಲುವು
IPL 2021, Match No. 50, Chennai Super Kings vs Delhi Capitals, Table Toppers fight- ಚೆನ್ನೈ ಸೂಪರ್ ಕಿಂಗ್ಸ್ ಒಡ್ಡಿದ 137 ರನ್ಗಳ ಸವಾಲನ್ನು ಡೆಲ್ಲಿ ಕ್ಯಾಪಿಟಲ್ಸ್ ಮೆಟ್ಟಿ ನಿಂತು ರೋಚಕ ಗೆಲುವು ಸಾಧಿಸಿ ಅಗ್ರಸ್ಥಾನಕ್ಕೇರಿದೆ.
ದುಬೈ, ಅ. 04: ವೆಸ್ಟ್ ಇಂಡೀಸ್ ಬ್ಯಾಟರ್ ಶಿಮ್ರಾನ್ ಹೆಟ್ಮಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಿಎಸ್ಕೆ ವಿರುದ್ಧ ರೋಚಕ ಗೆಲುವು ಸಾಧಿಸಿ ಮತ್ತೆ ಟೇಬಲ್ ಟಾಪರ್ ಆಗಿದೆ. ಗೆಲ್ಲಲು ಚೆನ್ನೈ ಸೂಪರ್ ಕಿಂಗ್ಸ್ ಒಡ್ಡಿದ 137 ರನ್ ಸವಾಲನ್ನು ಡೆಲ್ಲಿ 3 ವಿಕೆಟ್ ಕೈಲಿರುವಂತೆಯೇ ಮೆಟ್ಟಿ ನಿಂತಿತು. ರೋಚಕ ತಿರುವುಗಳಿಂದ ಕೂಡಿದ್ದ ಡೆಲ್ಲಿ ಚೇಸಿಂಗ್ನಲ್ಲಿ ಹೈಲೈಟ್ ಆಗಿದ್ದು ಶಿಮ್ರಾನ್ ಹೆಟ್ಮಯರ್. ಪತನದ ಹಾದಿಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಚೇಸಿಂಗ್ಗೆ ಪುಷ್ಟಿ ನೀಡಿ ಗೆಲುವು ತಂದುಕೊಟ್ಟವರು ಹೆಟ್ಮೆಯರ್. ಕನ್ನಡಿಗ ಗೌತಮ್ ಅವರು ಕ್ಯಾಚ್ ಡ್ರಾಪ್ ಮಾಡಿದ್ದು ಸೇರಿ ಒಂದೆರಡು ಜೀವದಾನ ಪಡೆದರೂ ಹೆಟ್ಮಯರ್ ಅವರ ಆಕರ್ಷಕ ಆಟ ಡೆಲ್ಲಿ ಗೆಲುವಿಗೆ ಕಾರಣವಾಯಿತು. ಹೆಟ್ಮಯರ್ಗೆ ಮುನ್ನ ಶಿಖರ್ ಧವನ್, ಪೃಥ್ವಿ ಶಾ ಅವರು ಉತ್ತಮ ಬ್ಯಾಟಿಂಗ್ ಆಡಿದರು. ಐಪಿಎಲ್ ಪದಾರ್ಪಣೆ ಮಾಡಿದ ರಿಪಲ್ ಪಟೇಲ್ ಕೂಡ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.
ಡೆಲ್ಲಿಯ ಚೇಸಿಂಗ್ನಲ್ಲಿ ಚೆನ್ನೈನ ಬೌಲರ್ಗಳಾದ ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ ಮತ್ತು ಹೇಜಲ್ವುಡ್ ಒಳ್ಳೆಯ ಪ್ರದರ್ಶನ ನೀಡಿ ಪಂದ್ಯ ಒನ್ಸೈಡ್ ಆಗದಂತೆ ನೋಡಿಕೊಂಡರು. ಇನ್ನಿಂಗ್ಸ್ನ 18ನೇ ಓವರ್ ಬೌಲ್ ಮಾಡಿದ ಡ್ವೇನ್ ಬ್ರಾವೋ ಅನಗತ್ಯ ರನ್ಗಳನ್ನ ನೀಡಿದರಾದರೂ ಕೊನೆಯ ಓವರ್ನಲ್ಲಿ ಉತ್ತಮವಾಗಿ ಬೌಲ್ ಮಾಡಿ ರೋಚಕತೆ ಉಳಿಯುವಂತೆ ಮಾಡಿದರು.
ಇದಕ್ಕೆ ಮುನ್ನ, ಅಂಬಾಟಿ ರಾಯುಡು ಅವರ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ವಿರುದ್ಧ 136 ರನ್ ಕಲೆಹಾಕಲು ಶಕ್ಯವಾಯಿತು. ರಾಯುಡು ಅಜೇಯ 55 ರನ್ ಗಳಿಸಿದರು. ಇದು ಈ ಸೀಸನ್ನಲ್ಲಿ ಅವರ ಚೊಚ್ಚಲ ಅರ್ಧಶತಕವಾಗಿದೆ. 2 ಸಿಕ್ಸರ್, 5 ಬೌಂಡರಿ ಒಳಗೊಂಡಂತೆ 43 ಬಾಲ್ನಲ್ಲಿ ಅವರು 55 ರನ್ ಗಳಿಸಿದರು. ರಾಬಿನ್ ಉತ್ತಪ್ಪ 19 ರನ್ ಗಳಿಸಿದರು. ಅಂಬಾಟಿ ರಾಯುಡು ಮತ್ತು ನಾಯಕ ಎಂಎಸ್ ಧೋನಿ 5ನೇ ವಿಕೆಟ್ಗೆ 70 ರನ್ ಜೊತೆಯಾಟ ಆಡಿದರು. ಇದರಲ್ಲಿ ಧೋನಿ ಗಳಿಸಿದ್ದು ಕೇವಲ 18 ರನ್ ಮಾತ್ರ. ರಾಯುಡು ಅವರೇ ಹೆಚ್ಚೂಕಡಿಮೆ ಇಡೀ ಇನ್ನಿಂಗ್ಸ್ ಆವರಿಸಿದ್ದರು. ಗೆಲ್ಲಲು 137 ರನ್ ಗುರಿ ಬೆನ್ನತ್ತಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಾಕಷ್ಟು ಪ್ರಯಾಸ ಪಡಬೇಕಾಯಿತು.
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಯಿತು. ರಿಪಲ್ ಪಟೇಲ್ ಅವರು ಐಪಿಎಲ್ಗೆ ಪದಾರ್ಪಣೆ ಮಾಡಿದರು. ಸ್ಟೀವನ್ ಸ್ಮಿತ್ ಅವರಿಗೆ ವಿಶ್ರಾಂತಿ ನೀಡಲಾಯಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮೂರು ಬದಲಾವಣೆ ಮಾಡಲಾಯಿತು. ಸುರೇಶ್ ರೈನಾ ಬದಲು ರಾಬಿನ್ ಉತ್ತಪ್ಪ ಅವರಿಗೆ ಅವಕಾಶ ಕೊಡಲಾಯಿತು. ಸ್ಯಾಮ್ ಕುರನ್ ಮತ್ತು ಕೆಎಂ ಆಸಿಫ್ ಅವರನ್ನ ಕೈಬಿಟ್ಟು ಡ್ವೇನ್ ಬ್ರಾವೋ ಮತ್ತು ದೀಪಕ್ ಚಾಹರ್ ಅವರನ್ನ ಆಡಿಸಲಾಯಿತು.
POINTS TABLE:
ಡೆಲ್ಲಿ ಕ್ಯಾಪಿಟಲ್ಸ್ ಈ ಗೆಲುವಿನಿಂದ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿತು. ಬೆಂಗಳೂರು ವಿರುದ್ಧ ಡೆಲ್ಲಿಗೆ ಒಂದು ಪಂದ್ಯ ಬಾಕಿ ಇದೆ. ಚೆನ್ನೈಗೂ ಒಂದು ಪಂದ್ಯ ಬಾಕಿ ಇದೆ. ಡೆಲ್ಲಿ ತಂಡ ಮೊದಲೆರಡು ಸ್ಥಾನದೊಂದಿಗೆ ಲೀಗ್ ಹಂತ ಮುಗಿಸುವುದು ಬಹುತೇಕ ಖಚಿತವಾಗಿದೆ. ಡೆಲ್ಲಿ ಗೆಲುವು ಈಗ ಆರ್ಸಿಬಿಯ ಟಾಪ್-2 ಸ್ಥಾನದ ಕನಸಿಗೆ ತಣ್ಣೀರೆರಚಿದಂತಾಗಿದೆ.