MS Dhoni- ಜಡೇಜಾಗಿಂತ ಮುಂಚೆ ಧೋನಿ ಬ್ಯಾಟಿಂಗ್​ಗೆ ಯಾಕೆ ಬಂದ್ರು? ಇಲ್ಲಿದೆ ಕಾರಣ

IPL 2021- ನಿನ್ನೆ ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಫಾರ್ಮ್​ನಲ್ಲಿದ್ದ ಜಡೇಜಾ ಬದಲು ಧೋನಿ ಮೊದಲು ಕ್ರೀಸ್​ಗೆ ಹೋಗುವ ನಿರ್ಧಾರ ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಆದರೆ, ಧೋನಿ ಲೆಕ್ಕಾಚಾರ ಸರಿಯಾಗಿ ಮಾಡಿಯೇ ಕ್ರೀಸ್​ಗೆ ಬಂದಿದ್ದರು.

ಧೋನಿ ಮತ್ತು ಜಡೇಜಾ

ಧೋನಿ ಮತ್ತು ಜಡೇಜಾ

 • Share this:
  ದುಬೈ: ಮಹೇಂದ್ರ ಸಿಂಗ್ ಧೋನಿ ಅವರಿಂದ ಇತ್ತೀಚೆಗೆ ದೂರವಾಗಿದ್ದ ಮ್ಯಾಚ್ ಫಿನಿಶರ್ ಬಿರುದು ಮತ್ತೆ ಅವರಿಗೆ ಅಂಟಿಕೊಂಡಿದೆ. ಇಡೀ ಐಪಿಎಲ್ ಸೀಸನ್​ನಲ್ಲಿ ರನ್​ಗಾಗಿ ಪರದಾಡುತ್ತಿದ್ದ ಎಂಎಸ್ ಧೋನಿ ನಿನ್ನೆ ಸ್ಫೋಟಕ ಆಟವಾಡಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈಗೆ ರೋಚಕ ಜಯ ದಕ್ಕುವಂತೆ ಮಾಡಿದರು. ಗೆಲ್ಲುವುದು ಕಷ್ಟ ಎಂಬಂತಿದ್ದ ಸ್ಥಿತಿಯಲ್ಲಿ ಕ್ರೀಸ್​ಗೆ ಬಂದ ಧೋನಿ 6 ಬಾಲ್​ನಲ್ಲಿ 18 ರನ್ ಗಳಿಸಿದರು. 19ನೇ ಓವರ್​ನಲ್ಲಿ ಧೋನಿ ಕ್ರೀಸ್​ಗೆ ಬಂದಾಗ 2 ಓವರ್​ನಲ್ಲಿ 24 ರನ್ ಅಗತ್ಯ ಇತ್ತು. ಅದ್ಭುತ ಫಾರ್ಮ್​ನಲ್ಲಿದ್ದ ರವೀಂದ್ರ ಜಡೇಜಾ ಬದಲು ಫಾರ್ಮ್​ನಲ್ಲಿಲ್ಲದ ಧೋನಿ ಕ್ರೀಸ್​ಗೆ ಬಂದದ್ದು ಬಹಳಷ್ಟು ಅಚ್ಚರಿ ಹುಟ್ಟಿಸಿತು. ಇನ್ನೂ ಅಚ್ಚರಿ ಎಂಬಂತೆ ಧೋನಿ ಹಲವು ವರ್ಷಗಳ ಹಿಂದಿನ ಧೋನಿಯ ಶಕ್ತಿ ಇನ್ನೂ ಇದೆ ಎಂಬುದು ಜಗಜ್ಜಾಹೀರುಗೊಳ್ಳುವಂತೆ ಆಡಿದರು. ಆಟಕ್ಕೆ ಕುದುರಿಕೊಂಡಿದ್ದ ಮೊಯೀನ್ ಅಲಿ ಔಟಾದರೂ ಧೋನಿ ಏಕಾಂಗಿಯಾಗಿಯೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

  ಜಡೇಜಾಗಿಂತ ಮುಂಚೆ ಧೋನಿ ಬಂದದ್ದು ಏಕೆ?: ಧೋನಿ ಮುಂಬಡ್ತಿ ಪಡೆದುಕೊಂಡು ಬೇಗ ಕ್ರೀಸ್​ಗೆ ಬಂದು ಮ್ಯಾಚ್ ಫಿನಿಶರ್ ಕೆಲಸವನ್ನ ಯಶಸ್ವಿಯಾಗಿ ನಿಭಾಯಿಸಿದರು. ಆದರೆ, ಒಂದು ವೇಳೆ, ಅವರು ಆ ಕೆಲಸದಲ್ಲಿ ವಿಫಲರಾಗಿದ್ದರೆ ಬಹುಶಃ ಚೆನ್ನೈ ತಂಡಕ್ಕೆ ಗೆಲುವಿನ ಸಾಧ್ಯತೆ ನಶಿಸಿಹೋಗುತ್ತಿತ್ತು. ಜಡೇಜಾಗೂ ಪಂದ್ಯ ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವೇನೋ. ಧೋನಿ ಯಾಕೆ ಅಷ್ಟು ದೊಡ್ಡ ರಿಸ್ಕ್ ತೆಗೆದುಕೊಂಡರು ಎಂಬ ಪ್ರಶ್ನೆ ಏಳುವುದು ಸಹಜ. ಈ ಬಗ್ಗೆ ಸಿಎಸ್​ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಿಎಸ್​ಕೆ ಬ್ಯಾಟಿಂಗ್ ವೇಳೆ ಡಗ್ ಔಟ್​ನಲ್ಲಿ ನಡೆದ ಘಟನೆಗಳ ವಿವರ ನೀಡಿದ್ದಾರೆ.

  “ಸಾಕಷ್ಟು ಚರ್ಚೆಗಳು ನಡೆದವು. ಆ 20 ಓವರ್​ನಲ್ಲಿ ನಾವು ಬಹಳಷ್ಟು ಮಾತನಾಡಿದೆವು. ಪಂದ್ಯ ಗತಿ ಎತ್ತ ಹೋಗಬಹುದು ಇತ್ಯಾದಿ ಬಗ್ಗೆ ನಾವು ಸಾಕಷ್ಟು ತಾಂತ್ರಿಕ ಚರ್ಚೆಗಳನ್ನ ಮಾಡಿದೆವು. ನಾಯಕನತ್ತ ನಾವು ನೋಡಿದಾಗ ಅವರು ನಾನು ಹೋಗುತ್ತೇನೆ ಎಂದರು. ಹಿಂದೆ ಬಹಳಷ್ಟು ಬಾರಿ ಇಂಥ ಸನ್ನಿವೇಶಗಳಲ್ಲಿ ಧೋನಿ ಇಂಥ ನಿರ್ಧಾರ ಕೈಗೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಇವತ್ತೂ ಅವರಿಂದ ಅಂಥದ್ದೊಂದು ನಿರ್ಧಾರ ಬಂದಿತು. ನಾನು ಅವರನ್ನ ತಡೆಯುವ ಪ್ರಯತ್ನ ಮಾಡಲಿಲ್ಲ. ಅದರ ಪ್ರತಿಫಲ ನಮ್ಮ ಕಣ್ಣೆದುರೇ ಇದೆ” ಎಂದು ಸ್ಟೀಫನ್ ಫ್ಲೆಮಿಂಗ್ ಹೇಳಿದ್ಧಾರೆ.

  ಅಂದರೆ ಧೋನಿ ಅವರು ಜಡೇಜಾಗಿಂತ ಮುಂಚೆ ಹೋಗುವುದು ಆ ಕ್ಷಣಕ್ಕೆ ತೆಗೆದುಕೊಂಡ ನಿರ್ಧಾರವಾಗಿತ್ತು. ಧೋನಿಗೆ ಅವರ ಮನಸಿನ ಮಾತು ಬಹಳಷ್ಟು ಬಾರಿ ಕೈಹಿಡಿದಿದೆ. ಆನ್​ಫೀಲ್ಡ್​ನಲ್ಲಿ ಅವರು ತೆಗೆದುಕೊಳ್ಳುವ ಇಂಥ ಅನೇಕ ನಿರ್ಧಾರಗಳು ಅವರ ತಂಡಕ್ಕೆ ಒಳ್ಳೆಯದು ಮಾಡಿವೆ. ನಿನ್ನೆಯೂ ಅವರ ಲೆಕ್ಕಾಚಾರ ಸರಿಯಾಗಿಯೇ ಆಗಿತ್ತು.

  ಇದನ್ನೂ ಓದಿ: IPL 2021 Eliminator- RCB vs KKR- ಪುಟಿದೇಳುತ್ತಿರುವ ಎರಡು ತಂಡಗಳ ಮಧ್ಯೆ ಗೆಲ್ಲೋದ್ಯಾರು?

  “ಭಾವನಾತ್ಮಕವಾಗಿ ಅದು ನಮಗೆ ಅದ್ಭುತ ಎನಿಸಿದೆ. ಅವರು ಆಡಲು ಹೋದಾಗೆಲ್ಲಾ ನಾವು ಹಾರೈಸುತ್ತೇವೆ. ಅವರ ಮೇಲೆ ಇರುವ ನಿರೀಕ್ಷೆ ಮತ್ತು ಒತ್ತಡ ಎಷ್ಟು ಎಂಬುದು ನಮಗೆ ಗೊತ್ತು. ಅವರು ಮತ್ತೊಮ್ಮೆ ನಮ್ಮ ಗೆಲುವಿಗೆ ಕಾರಣರಾಗಿದ್ದಾರೆ” ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ತಿಳಿಸಿದ್ದಾರೆ.

  ನಿನ್ನೆ ದುಬೈ ಇಂಟರ್​ನ್ಯಾಷನಲ್ ಗ್ರೌಂಡ್​ನಲ್ಲಿ ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ 172 ರನ್ ಮೊತ್ತವನ್ನು ಚೆನ್ನೈ ತಂಡ 2 ಎಸೆತ ಇರುವಂತೆ ಚೇಸ್ ಮಾಡಿತು. ಋತುರಾಜ್ ಗಾಯಕ್ವಾಡ್ ಮತ್ತು ರಾಬಿನ್ ಉತ್ತಪ್ಪ ಅವರಿಬ್ಬರು ಅರ್ಧಶತಕಗಳನ್ನ ಗಳಿಸಿ ಸಿಎಸ್​ಕೆ ಚೇಸಿಂಗ್​ಗೆ ಬುನಾದಿ ಹಾಕಿದರು. ಉತ್ತಪ್ಪ ಔಟಾದ ಬಳಿಕ ಮಧ್ಯದಲ್ಲಿ ಸಿಎಸ್​ಕೆ ಸತತ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿದಂತಿತ್ತು. ಆದರೆ, ಧೋನಿ ಅವರು ಮಿಂಚಿನ ಆಟ ಆಡಿ ಚೆನ್ನೈ ತಂಡ 9ನೇ ಬಾರಿ ಐಪಿಎಲ್ ಫೈನಲ್ ತಲುಪುವಂತೆ ನೋಡಿಕೊಂಡರು.
  Published by:Vijayasarthy SN
  First published: