ಕೊರೋನಾ ಕಾರಣದಿಂದ ಐಪಿಎಲ್ ಮುಂದೂಡಲಾಗಿದೆ. ಆದರೆ ಅತ್ತ ಸೋಂಕಿಗೆ ಒಳಗಾಗಿರುವ ಆಟಗಾರರ ಆತಂಕ ಇನ್ನೂ ಕೂಡ ದೂರವಾಗಿಲ್ಲ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಹಾಗೂ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಅವರು ಇನ್ನೂ ಸಹ ಗುಣಮುಖರಾಗಿಲ್ಲ. ಇದೀಗ ಸಿಎಸ್ಕೆ ಫ್ರಾಂಚೈಸಿ ದೆಹಲಿಯಿಂದ ಏರ್ ಆಂಬ್ಯುಲೆನ್ಸ್ ಈ ಇಬ್ಬರು ಸದಸ್ಯರನ್ನು ಚೆನ್ನೈಗೆ ರವಾನಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿಎಸ್ಕೆ ಅಧಿಕಾರಿಯೊಬ್ಬರು, ಆತಂಕ ಪಡುವ ಯಾವುದೇ ಅಗತ್ಯವಿಲ್ಲ. ನಾವು ಹಸ್ಸಿ ಹಾಗೂ ಬಾಲಾಜಿಯನ್ನು ಚೆನ್ನೈಗೆ ಕಳುಹಿಸಲು ಮುಖ್ಯ ಕಾರಣ ಅಲ್ಲಿನ ಸೌಲಭ್ಯ. ಏಕೆಂದರೆ ನಮಗೆ ಚೆನ್ನೈನಲ್ಲಿ ಉತ್ತಮ ಸಂಪರ್ಕವಿದೆ. ಹೀಗಾಗಿ ಇಬ್ಬರನ್ನೂ ಏರ್ ಆಂಬುಲೆನ್ಸ್ ಮೂಲಕ ಚೆನ್ನೈಗೆ ಕರೆದೊಯ್ಯಲು ನಿರ್ಧರಿಸಲಾಯಿತು" ಎಂದು ಹೇಳಿದ್ದಾರೆ.
ಬಾಲಾಜಿ ಹಾಗೂ ಹಸ್ಸಿ ಅವರು ಕೊರೋನಾ ಸೋಂಕಿಗೆ ಒಳಗಾಗಿದ್ದರೂ, ಅದೃಷ್ಟವಶಾತ್, ಅವರಲ್ಲಿ ಇನ್ನೂ ಕೂಡ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲ. ಹೀಗಾಗಿ ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖರಾಗಲಿದ್ದಾರೆ. ಅಲ್ಲದೆ ಮೈಕ್ ಹಸ್ಸಿ ಅವರಿಗೆ ಆಸ್ಟ್ರೇಲಿಯಾಗೆ ತೆರಳಲು ನಾವೇ ವಿಶೇಷ ಚಾರ್ಟೆಟ್ ಫ್ಲೈಟ್ ವ್ಯವಸ್ಥೆ ಮಾಡಲಿದ್ದೇವೆ ಎಂದು ಸಿಎಸ್ಕೆ ಅಧಿಕಾರಿ ತಿಳಿಸಿದ್ದಾರೆ.
ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಮೈಕ್ ಹಸ್ಸಿ ಕಳೆದ ಕೆಲವು ಸೀಸನ್ಗಳಿಂದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಸಿಎಸ್ಕೆ ಪರವಾಗಿ ಮೊದಲ ಐಪಿಎಲ್ ಶತಕ ಬಾರಿಸಿದ ದಾಖಲೆ ಕೂಡ ಹಸ್ಸಿ ಹೆಸರಿನಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ