IPL 2021- ಹರ್ಷಲ್​ಗೆ ಅತಿ ಹೆಚ್ಚು ಪ್ರಶಸ್ತಿ; ಐಪಿಎಲ್ 2021ರ ಎಲ್ಲಾ ಅವಾರ್ಡ್ ವಿಜೇತರ ಪಟ್ಟಿ

IPL 2021 Awards Winners List- ಹರ್ಷಲ್ ಪಟೇಲ್​ಗೆ ಪರ್ಪಲ್ ಕ್ಯಾಪ್, ಮೋಸ್ಟ್ ವ್ಯಾಲ್ಯುವಬಲ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿಗಳು ಬಂದಿವೆ. ಈ ಐಪಿಎಲ್​ನಲ್ಲಿ ಇರುವ ಎಲ್ಲಾ ಪ್ರಶಸ್ತಿಗಳು ಯಾರಾರಿಗೆ ದಕ್ಕಿವೆ, ಅದರ ಲಿಸ್ಟ್ ಇಲ್ಲಿದೆ:

ಐಪಿಎಲ್ ಟ್ರೋಫಿ

ಐಪಿಎಲ್ ಟ್ರೋಫಿ

 • Share this:
  ದುಬೈ: ನಿನ್ನೆ ಮುಗಿದ 14ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದುಕೊಂಡಿದೆ. ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಇತ್ಯಾದಿ ಸೇರಿದಂತೆ ವಿವಿಧ ಸಾಧನೆಗೆ ಪ್ರಶಸ್ತಿಗಳನ್ನ ನೀಡಲಾಗಿದೆ. ಆರ್​ಸಿಬಿ ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ವೈಯಕ್ತಿಕವಾಗಿ ಅತಿ ಹೆಚ್ಚು ಪ್ರಶಸ್ತಿಗಳನ್ನ ಗೆದ್ದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದವರಿಗೆ ನೀಡುವ ಪರ್ಪಲ್ ಕ್ಯಾಪ್ ಪ್ರಶಸ್ತಿ ಅವರಿಗೆ ಸಿಕ್ಕಿದೆ. ಹಾಗೆಯೇ, ಅತಿ ಹೆಚ್ಚು ಮೌಲ್ಯದ ಆಟಗಾರ (Most Valuable Player) ಪ್ರಶಸ್ತಿ ಮತ್ತು ಗೇಮ್ ಚೇಂಜರ್ ಪ್ರಶಸ್ತಿಗಳೂ ಅವರ ಬುಟ್ಟಿಗೆ ಬಂದಿವೆ.

  ಆರೆಂಜ್ ಕ್ಯಾಪ್ ಸ್ವಲ್ಪದರಲ್ಲಿ ಮಿಸ್ ಮಾಡಿಕೊಂಡಿದ್ದ ಕೆಎಲ್ ರಾಹುಲ್ ಅವರು ಅತಿ ಹೆಚ್ಚು ಸಿಕ್ಸರ್ ಭಾರಿಸಿದವರಿಗೆ ನೀಡುವ ಪ್ರಶಸ್ತಿ ಸಂಪಾದಿಸಿದ್ದಾರೆ. ಪವರ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಇತ್ಯಾದಿ ಪ್ರಶಸ್ತಿಗಳನ್ನ ಯಾರ್ಯಾರು ಗೆದ್ದಿದ್ದಾರೆ ಅದರ ವಿವರ ಕೆಳಕಂಡಂತಿದೆ.

  ಐಪಿಎಲ್ 2021ನಲ್ಲಿ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ:

  ಚಾಂಪಿಯನ್ ತಂಡ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ ನಾಲ್ಕನೇ ಬಾರಿ ಐಪಿಎಲ್ ಚಾಂಪಿಯನ್ ಆಗಿದೆ.)

  ರನ್ನರ್ಸ್ ಅಪ್: ಕೋಲ್ಕತಾ ನೈಟ್ ರೈಡರ್ಸ್; 2012 ಮತ್ತು 2014ರಲ್ಲಿ ಚಾಂಪಿಯನ್ ಆಗಿದ್ದ ಕೆಕೆಆರ್ ಇದೇ ಮೊದಲ ಬಾರಿಗೆ ಐಪಿಎಲ್ ಫೈನಲ್​ನಲ್ಲಿ ರನ್ನರ್ ಅಪ್ ಆಗಿದೆ.

  ಫೇರ್​ಪ್ಲೇ ಅವಾರ್ಡ್: ರಾಜಸ್ಥಾನ್ ರಾಯಲ್ಸ್- ಆಟದಲ್ಲಿ ಪ್ರಾಮಾಣಿಕತೆ, ಕ್ರೀಡಾಸ್ಫೂರ್ತಿ ತೋರುವ ತಂಡಕ್ಕೆ ನೀಡುವ ಪ್ರಶಸ್ತಿ ಇದು.

  ಆರೆಂಜ್ ಕ್ಯಾಪ್: ಋತುರಾಜ್ ಗಾಯಕ್ವಾಡ್. ಸೀಸನ್​ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಆಟಗಾರನಿಗೆ ನೀಡುವ ಅವಾರ್ಡ್ ಇದು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಋತುರಾಜ್ ಗಾಯಕ್ವಾಡ್ ಈ ಸೀಸನ್​ನಲ್ಲಿ 635 ರನ್ ಗಳಿಸಿ ನಂಬರ್ ಒನ್ ಬ್ಯಾಟರ್ ಎನಿಸಿದ್ದಾರೆ. ಅದೇ ತಂಡದ ಫ್ಯಾಫ್ ಡುಪ್ಲೆಸಿ ಅವರು 633 ರನ್ ಗಳಿಸಿ ಎರಡನೇ ಸ್ಥಾನ ಪಡೆದರು. ಕೆಎಲ್ ರಾಹುಲ್ 626 ರನ್ ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

  ಪರ್ಪಲ್ ಕ್ಯಾಪ್: ಹರ್ಷಲ್ ಪಟೇಲ್. ಅತಿ ಹೆಚ್ಚು ವಿಕೆಟ್​ಗಳನ್ನ ಪಡೆದವರಿಗೆ ಪ್ರಶಸ್ತಿ ಇದು. ಇವರು 15 ಪಂದ್ಯಗಳಿಂದ 32 ವಿಕೆಟ್ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅವೇಶ್ ಖಾನ್ 23 ವಿಕೆಟ್ ಮಾತ್ರ ಗಳಿಸಿರುವುದು.

  ಇದನ್ನೂ ಓದಿ: Dravid Alert- ದ್ರಾವಿಡ್ ಬರ್ತಾರೆ, ಹುಷಾರ್…. ಇತರ ಕ್ರಿಕೆಟ್ ತಂಡಗಳಿಗೆ ಮಾಜಿ ಕ್ರಿಕೆಟಿಗ ವಾನ್ ಎಚ್ಚರಿಕೆ

  ಮೋಸ್ಟ್ ವ್ಯಾಲ್ಯುವಬಲ್ ಪ್ಲೇಯರ್: ಹರ್ಷಲ್ ಪಟೇಲ್. ಆರ್​ಸಿಬಿಯ ಈ ಬೌಲರ್ 15 ಪಂದ್ಯಗಳಿಂದ 32 ವಿಕೆಟ್ ಪಡೆದಿದ್ದಾರೆ. ವಿವಿಧ ಸಂದರ್ಭಗಳಲ್ಲಿ ತೋರಿದ ಪ್ರದರ್ಶನ, ತಂಡಕ್ಕೆ ಉಪಯುಕ್ತವೆನಿಸುವ ಆಟ ಇತ್ಯಾದಿ ಪರಿಗಣಿಸಿ ನೀಡಲಾಗುವ ಮೋಸ್ಟ್ ವ್ಯಾಲ್ಯುವಬಲ್ ಪ್ಲೇಯರ್ ಪ್ರಶಸ್ತಿಯನ್ನ ನೀಡಲಾಗುತ್ತದೆ. ಹರ್ಷಲ್ ಪಟೇಲ್ 264.5 ಅಂಕ ಪಡೆದು ಅಗ್ರಸ್ಥಾನ ಪಡೆದಿದ್ದಾರೆ.

  ಎಮರ್ಜಿಂಗ್ ಪ್ಲೇಯರ್: ಋತುರಾಜ್ ಗಾಯಕ್ವಾಡ್. ಸೀಮಿತ ವಯಸ್ಸು ಮತ್ತು ಅಂತರರಾಷ್ಟ್ರೀಯ ಅನುಭವ ಮಾತ್ರ ಇರುವ ಆಟಗಾರರ ಪೈಕಿ ಅತ್ಯುತ್ತಮ ಪ್ರದರ್ಶನ ತೋರಿದವರಿಗೆ ನೀಡುವ ಅವಾರ್ಡ್ ಇದು.

  ಗೇಮ್ ಚೇಂಜರ್: ಹರ್ಷಲ್ ಪಟೇಲ್. ಇದರಲ್ಲೂ ಆರ್​ಸಿಬಿ ಬೌಲರ್ 1081 ಪಾಯಿಂಟ್ಸ್ ಪಡೆದು ನಂಬರ್ ಒನ್ ಎನಿಸಿದ್ದಾರೆ.

  ಸೂಪರ್ ಸ್ಟ್ರೈಕರ್: ಶಿಮ್ರಾನ್ ಹೆಟ್ಮೆಯರ್. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ ವಿಂಡೀಸ್ ಬ್ಯಾಟರ್ ಹೆಟ್ಮೆಯರ್ ಈ ಸೀಸನ್​ನಲ್ಲಿ 168 ಸ್ಟ್ರೈಕ್ ರೇಟ್​ನಲ್ಲಿ ರನ್ ಗಳಿಸಿದ್ದಾರೆ.

  ಅತಿ ಹೆಚ್ಚು ಸಿಕ್ಸ್: ಕೆಎಲ್ ರಾಹುಲ್. ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ರಾಹುಲ್ ಈ ಸೀಸನ್​ನಲ್ಲಿ 30 ಸಿಕ್ಸರ್ ಭಾರಿಸಿದ್ದಾರೆ.

  ಪವರ್ ಪ್ಲೇಯರ್: ವೆಂಕಟೇಶ್ ಅಯ್ಯರ್. ಪವರ್ ಪ್ಲೇ ಓವರ್​ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ಕೊಡುವ ಅವಾರ್ಡ್ ಇದು. ಕೋಲ್ಕತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ ನಾಲ್ಕು ಪಂದ್ಯಗಳಲ್ಲಿ ಪವರ್ ಪ್ಲೇಯರ್ ಪ್ರಶಸ್ತಿ ಗೆದ್ದಿದ್ದರು.

  ಪರ್ಫೆಕ್ಟ್ ಕ್ಯಾಚ್: ರವಿ ಬಿಷ್ಣೋಯ್. ಪಂಜಾಬ್ ಕಿಂಗ್ಸ್ ತಂಡದ ಈ ಆಟಗಾರ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಡೀಪ್ ಪಾಯಿಂಟ್​ನಲ್ಲಿ ಸಾಕಷ್ಟು ದೂರ ಓಡಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು.
  Published by:Vijayasarthy SN
  First published: