ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಆಸ್ಟ್ರೇಲಿಯಾ ಕ್ರಿಕೆಟಿಗರು ಹಿಂತಿರುಗುತ್ತಿದ್ದಾರೆ. ಭಾರತದಲ್ಲಿ ಕೊರೋನಾ ಪ್ರಕರಣ ಮಿತಿ ಮೀರುತ್ತಿದ್ದು, ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರು ತವರಿಗೆ ವಾಪಾಸ್ ಆಗಲು ಬಯಸಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರನಡೆದಿರುವ ಆ್ಯಂಡ್ಯ್ರೂ ಟೈ ಹೇಳಿದ್ದಾರೆ. ಟೈ ಐಪಿಎಲ್ ತೊರೆದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ಆ್ಯಡಂ ಝಂಪಾ ಹಾಗೂ ಕೇನ್ ರಿಚರ್ಡ್ಸನ್ ಕೂಡ ಟೂರ್ನಿಗೆ ಗುಡ್ ಬೈ ಹೇಳಿದ್ದರು. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರು ಅರ್ಧದಲ್ಲೇ ತೆರಳಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಆದರೆ ಈ ಬಗ್ಗೆ ಮಾತನಾಡಿರುವ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯಾ ಆಟಗಾರ ಕ್ರಿಸ್ ಲಿನ್, ನಾವು ಐಪಿಎಲ್ನಲ್ಲಿ ಮುಂದುವರೆಯಲಿದ್ದೇವೆ ಎಂದಿದ್ದಾರೆ. ಆದರೆ ತವರಿಗೆ ವಾಪಸ್ ತೆರಳಲು ನಮಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಿಕೊಡುವಂತೆ ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಮಾಡಿದ್ದಾರೆ.
ಐಪಿಎಲ್ನಲ್ಲಿ ಮುಂದುವರೆಯುವ ಆಸ್ಟ್ರೇಲಿಯಾ ಆಟಗಾರರನ್ನು ಟೂರ್ನಿ ಮುಗಿದ ಬಳಿಕ ಕೊಂಡೊಯ್ಯಲು ವಿಶೇಷ ವಿಮಾನ ವ್ಯವಸ್ಥೆ ಮಾಡಿಕೊಡಿ. ಹಾಗೆಯೇ ಎಲ್ಲರಿಗೂ ಲಸಿಕೆ ನೀಡುವಂತೆ ಕ್ರಿಸ್ ಲಿನ್ ಕೇಳಿಕೊಂಡಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ಆಟಗಾರರಿಗೆ ಕೋವಿಡ್ ಲಸಿಕೆ ನೀಡುವುದಾಗಿ ಈಗಾಗಲೇ ಫ್ರಾಂಚೈಸಿ ಘೋಷಿಸಿದೆ. ಹಾಗಾಗಿ ಸದ್ಯ ವಿಮಾನ ವ್ಯವಸ್ಥೆ ಮಾಡಿಕೊಡುವಂತೆ ನಾವು ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಸಲ್ಲಿಸಿದ್ದೇವೆ ಎಂದು ಲಿನ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ನಾವು ಸಂಪಾದಿಸಿರುವ ಶೇ.10 ರಷ್ಟು ಮೊತ್ತವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪಡೆದುಕೊಳ್ಳುತ್ತದೆ. ಹೀಗಾಗಿ ಐಪಿಎಲ್ನಲ್ಲಿ ಆಡುತ್ತಿರುವ ಆಸ್ಟ್ರೇಲಿಯಾ ಆಟಗಾರರಿಗೆ ವಿಮಾನ ವ್ಯವಸ್ಥೆ ಮಾಡಿಕೊಡಲಿದೆಯಾ?. ಪ್ರಸ್ತುತ ಟೂರ್ನಿಯಲ್ಲಿ ಮುಂದುವರೆಯುತ್ತಿರುವ ಆಟಗಾರರಿಗೆ ಚಾರ್ಟೆಟ್ ಫ್ಲ್ಯಾಟ್ ವ್ಯವಸ್ಥೆ ಮಾಡಿಕೊಡಿ ಎಂದು ಕ್ರಿಸ್ ಲಿನ್ ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಸಲ್ಲಿಸಿದ್ದಾರೆ.
ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅನೇಕ ರಾಷ್ಟ್ರಗಳು ಭಾರತದೊಂದಿಗಿನ ವಿಮಾನಯಾನವನ್ನು ಕಡಿತಗೊಳಿಸಿದೆ. ಹಾಗೆಯೇ ಆಸ್ಟ್ರೇಲಿಯಾ ಕೂಡ ಭಾರತಕ್ಕಿರುವ ಶೇ.30 ಫ್ಲ್ಯಾಟ್ಗಳನ್ನು ಕ್ಯಾನ್ಸಲ್ ಮಾಡಿದೆ ಎಂದು ವರದಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಂಪೂರ್ಣ ವಿಮಾನ ವ್ಯವಸ್ಥೆ ರದ್ದಾದರೆ, ತೆರಳಲು ವಿಶೇಷ ವಿಮಾನದ ಸೌಲಭ್ಯ ಒದಗಿಸುವಂತೆ ಕ್ರಿಸ್ ಲಿನ್ ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ