ಶಾರ್ಜಾ, ಸೆ. 24: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಸೋಲುಂಡಿದೆ. ಕೋಲ್ಕತಾ ನೈಟ್ ರೈಡರ್ಸ್ ಎದುರು ಹೀನಾಯ ಸೋಲುಂಡಿದ್ದ ಆರ್ಸಿಬಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪರಾಭವಗೊಂಡಿತು. ಶಾರ್ಜಾ ಮೈದಾನದಲ್ಲಿ ನಡೆದ ಐಪಿಎಲ್ 2021ನ 35ನೇ ಪಂದ್ಯದಲ್ಲಿ ಸಿಎಎಸ್ಕೆ ತಂಡ 6 ವಿಕೆಟ್ಗಳಿಂದ ಜಯಭೇರಿ ಭಾರಿಸಿತು. ಈ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿತು. ಆರ್ಸಿಬಿ ತಂಡ ಗೆಲ್ಲಲು ಒಡ್ಡಿದ 157 ರನ್ ಗುರಿಯನ್ನು ಇನ್ನೂ ಹಲವು ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿತು. ಚಿಕ್ಕ ಬೌಂಡರಿ ಇರುವ ಶಾರ್ಜಾ ಮೈದಾನದಲ್ಲಿ ಆರ್ಸಿಬಿ ಒಡ್ಡಿದ ಸವಾಲು ಸಿಎಸ್ಕೆ ದೊಡ್ಡದಾಗಿರಲಿಲ್ಲ. ಎಲ್ಲಾ ಬ್ಯಾಟರ್ಗಳು ತಂಡದ ಗೆಲುವಿನಲ್ಲಿ ಕೊಡುಗೆ ನೀಡಿದರು. ಋತುರಾಜ್ ಗಾಯಕ್ವಡ್ ಮತ್ತು ಡುಪ್ಲೆಸಿಸ್ ಅವರು ಮೊದಲ ವಿಕೆಟ್ಗೆ 71 ರನ್ ಜೊತೆಯಾಟ ನೀಡಿ ಗೆಲುವಿನ ಹಾದಿ ಸುಗಮವಾಗುವಂತೆ ಮಾಡಿದರು.
ಋತುರಾಜ್ ಗಾಯಕ್ವಡ್ ಕೇವಲ 26 ಬಾಲ್ನಲ್ಲಿ 38 ರನ್ ಗಳಿಸಿದರು. ಅವರು ಔಟಾದ ಬಳಿಕ ಆಗಾಗ್ಗೆ ವಿಕೆಟ್ಗಳು ಉರುಳುತ್ತಿದ್ದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಚೇಸಿಂಗ್ ಹಳಿ ತಪ್ಪಲಿಲ್ಲ. ರನ್ ರೇಟ್ ಎಲ್ಲಿಯೂ ಬೀಳದಂತೆ ನೋಡಿಕೊಂಡರು.
ಇದಕ್ಕೆ ಮುನ್ನ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಬೃಹತ್ ಮೊತ್ತ ದಾಖಲಿಸುವ ಸನ್ನಾಹದಲ್ಲಿದ್ದರೂ ಅಂತಿಮವಾಗಿ 156 ರನ್ ಗಳಿಸಿ ನಿರಾಸೆ ಕಂಡಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 157 ರನ್ಗಳ ಸುಲಭ ಸವಾಲು ನೀಡಿದೆ. ಒಂದು ಹಂತದಲ್ಲಿ 111 ರನ್ಗಳ ಆರಂಭಿಕ ಜೊತೆಯಾಟ ಕಂಡಿದ್ದ ಬೆಂಗಳೂರು ತಂಡ 200 ರನ್ ಗಡಿ ದಾಟುವ ಕುರುಹು ತೋರಿತ್ತು. ಆದರೆ, 16 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟುಕೊಂಡಿತು. ದೇವದತ್ ಪಡಿಕ್ಕಲ್ 70 ಮತ್ತು ವಿರಾಟ್ ಕೊಹ್ಲಿ 53 ರನ್ ಗಳಿಸಿದ್ದು ಆರ್ಸಿಬಿ ಇನ್ನಿಂಗ್ಸ್ನ ಹೈಲೈಟ್ ಎನಿಸಿತು. ಕೊಹ್ಲಿ ಮತ್ತು ಪಡಿಕ್ಕಲ್ ಮೊದಲ ವಿಕೆಟ್ಗೆ 111 ರನ್ ಜೊತೆಯಾಟ ಆಡಿದರು. ಕೊಹ್ಲಿ ನಿರ್ಗಮನದ ಬಳಿಕ ಉಳಿದವರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಸ್ಟಾರ್ ಬ್ಯಾಟರ್ಸ್ ಆದ ಎಬಿ ಡೀವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಟಿಮ್ ಡೇವಿಡ್ ನಿರಾಸೆಗೊಳಿಸಿದರು.
ಮೊದಲಿಗೆ ಆರ್ಸಿಬಿ ಮತ್ತು ಸಿಎಎಸ್ಕೆ ಪಂದ್ಯ ಆರಂಭಕ್ಕೆ ಮರಳು ಬಿರುಗಾಳಿ ಸ್ವಲ್ಪ ಹೊತ್ತು ವಿಳಂಬಗೊಳಿಸಿತು. ನಂತರ ಸಿಎಸ್ಕೆ ಕ್ಯಾಪ್ಟನ್ ಎಂ ಎಸ್ ಧೋನಿ ಟಾಸ್ ಗೆದ್ದು ಆರ್ಸಿಬಿಗೆ ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದರು. ಟಾಸ್ ಗೆದ್ದ ಬಳಿಕ ಮಾತನಾಡಿದ ಧೋನಿ, ಶಾರ್ಜಾದ ಪಿಚ್ ಚಿಕ್ಕದಾಗಿದ್ದು ಬ್ಯಾಟಿಂಗ್ಗೆ ಅನುಕೂಲವಾಗಿದೆ. ಇಲ್ಲಿ ಚೇಸಿಂಗ್ ಸುಲಭವಾಗುತ್ತದೆ ಎಂದರು. ವಿರಾಟ್ ಕೊಹ್ಲಿ ಕೂಡ ತಾನು ಟಾಸ್ ಗೆದ್ದಿದ್ದರೆ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದರು. ಆದರೆ, ಸಿಎಸ್ಕೆ ವಿರುದ್ಧ ಆರ್ಸಿಬಿ ಗೆಲ್ಲುತ್ತದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು. ಆದರೆ, ಅಂತಿಮವಾಗಿ ಚೆನ್ನೈ ತಂಡಕ್ಕೆ ವಿಜಯಮಾಲೆ ಸಿಕ್ಕಿತು. ಇಂದು ಆರ್ಸಿಬಿ ತಂಡದಲ್ಲಿ ಸಚಿನ್ ಬೇಬಿ ಬದಲು ನವದೀಪ್ ಸೈನಿ ಅವರನ್ನ ತರಲಾಯಿತು. ಹಾಗೆಯೇ, ಸಿಂಗಾಪುರ ಮೂಲದ ಟಿಮ್ ಡೇವಿಡ್ ಅವರು ಐಪಿಎಲ್ಗೆ ಪದಾರ್ಪಣೆ ಮಾಡಿದರು. ಕೈಲ್ ಜೇಮೀಸನ್ ಬದಲು ಆಲ್ರೌಂಡರ್ ಆಗಿರುವ ಟಿಮ್ ಡೇವಿಡ್ ಆಡಿದರು.
ಎಂ.ಎಸ್. ಧೋನಿ (MS Dhoni) ನೇತೃತ್ವದ ಸೂಪರ್ ಕಿಂಗ್ಸ್ ಈ ಗೆಲುವಿನೊಂದಿಗೆ ಎರಡು ಅಂಕ ಗಳಿಸಿ ಒಟ್ಟಾರೆ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತು, 5 ಗೆಲುವಿನೊಂದಿಗೆ 10 ಅಂಕ ಗಳಿಸಿರುವ ಆರ್ಸಿಬಿ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಸತತ ಎರಡು ಸೋಲು ಕಂಡಿರುವ ಆರ್ಸಿಬಿ ಮುಂದೆ ನಾಕೌಟ್ ಹಂತ ತಲುಪಲೂ ಕಷ್ಟವಾಗಬಹುದು. ರನ್ ರೇಟ್ ತೀರಾ ಕುಗ್ಗಿಹೋಗಿದೆ. ಪ್ಲೇ ಆಫ್ಗೆ ಆಯ್ಕೆಯಾಗಲು ಆರ್ಸಿಬಿಯ ಮುಂದಿನ ಪಂದ್ಯಗಳು ನಿರ್ಣಾಯಕವಾಗಿರಲಿವೆ. ಆರ್ಸಿಬಿಯನ್ನು ಕೆಳೆಕ್ಕೆ ತಳ್ಳಿ ಮುಂಬೈ ಇಂಡಿಯನ್ಸ್ (Mumbai Indians) ಅಥವಾ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಸಾಧ್ಯತೆ ಇದೆ.
ಇದನ್ನೂ ಓದಿ: Dhoni craze in Karnataka- ಧೋನಿಗೆ ಕರ್ನಾಟಕದಲ್ಲಿ ಇಂಥ ಕ್ರೇಜಾ? ಸಿಎಸ್ಕೆ ಫ್ಯಾನ್ಸೂ ಡಮ್ಮಿ
ತಂಡಗಳು:
ಆರ್ಸಿಬಿ ತಂಡ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಎಸ್ ಭರತ್, ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡೀವಿಲಿಯರ್ಸ್, ಟಿಮ್ ಟೇವಿಡ್, ವನಿಂದು ಹಸರಂಗ, ನವದೀಪ್ ಸೈನಿ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಲ್
ಸಿಎಸ್ಕೆ ತಂಡ: ರುತುರಾಜ್ ಗಾಯಕ್ವಡ್, ಫ್ಯಾಫ್ ಡುಪ್ಲೆಸಿಸ್, ಮೊಯೀನ್ ಅಲಿ, ಅಂಬಾಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಷ್ ಹೇಜಲ್ವುಡ್.
ಸ್ಕೋರು ವಿವರ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ 156/6
(ದೇವದತ್ ಪಡಿಕ್ಕಲ್ 70, ವಿರಾಟ್ ಕೊಹ್ಲಿ 53 ರನ್ – ಡ್ವೇನ್ ಬ್ರಾವೋ 24/3, ಶಾರ್ದೂಲ್ ಠಾಕೂರ್ 29/2)
ಚೆನ್ನೈ ಸೂಪರ್ ಕಿಂಗ್ಸ್ ತಂಡ 18.1 ಓವರ್ 157/4
(ಋತುರಾಜ್ ಗಾಯಕ್ವಾಡ್ 38, ಫ್ಯಾಫ್ ಡುಪ್ಲೆಸಿಸ್ 31, ಅಂಬಾಟಿ ರಾಯುಡು 32, ಮೊಯೀನ್ ಅಲಿ 23 ರನ್ – ಹರ್ಷಲ್ ಪಟೇಲ್ 23/2)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ