IPL 2020 - ಆರ್​ಸಿಬಿ ಕ್ವಾಲಿಫೈ ಆಗುವ ಸಾಧ್ಯತೆ ಎಷ್ಟು? ಸೋತರೂ ಎಷ್ಟು ಮಾರ್ಜಿನ್? ಇಲ್ಲಿದೆ ಲೆಕ್ಕಾಚಾರ

ಉತ್ತಮ ರನ್ ರೇಟ್ ಆಧಾರದ ಮೇಲೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಆರ್ಸಿಬಿ ಡೆಲ್ಲಿ ವಿರುದ್ಧದ ಇವತ್ತಿನ ಪಂದ್ಯದಲ್ಲಿ ಸೋತರೂ ಕ್ವಾಲಿಫೈ ಆಗುವ ಅವಕಾಶ ಇದೆ. ಹೆಚ್ಚು ಅಂತರದಿಂದ ಸೋಲಾಗದಂತೆ ಎಚ್ಚರ ವಹಿಸಬೇಕಷ್ಟೇ.

RCB

RCB

  • News18
  • Last Updated :
  • Share this:
    ಬೆಂಗಳೂರು: ಐಪಿಎಲ್​ನ ಲೀಗ್ ಹಂತದ ಹಣಾಹಣಿ ಮುಗಿಯಲು ಎರಡೇ ಪಂದ್ಯ ಬಾಕಿ ಇದೆ. ಈ ಹಂತದಲ್ಲಿ ಪ್ಲೇ ಆಫ್ ಖಚಿತಪಡಿಸಿಕೊಂಡಿದ್ದು ಒಂದೇ ತಂಡ. ಅದು ಮುಂಬೈ ಇಂಡಿಯನ್ಸ್. ಕಳೆದ ಎರಡು ಪಂದ್ಯಗಳ ಹಿಂದಿನವರೆಗೂ ಸಿಎಸ್​ಕೆ ಹೊರತುಪಡಿಸಿ 6 ತಂಡಗಳು ಕ್ವಾಲಿಫೈ ಆಗುವ ಅವಕಾಶ ಹೊಂದಿದ್ದವು. ಈಗ ಮುಂಬೈ ಇಂಡಿಯನ್ಸ್ ನಂತರದ 3 ಸ್ಥಾನಗಳಿಗೆ ನಾಲ್ಕು ತಂಡಗಳ ಮಧ್ಯೆ ಪೈಪೋಟಿ ಇದೆ. ಆರ್​ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳಿಗೆ ಚಾನ್ಸಸ್ ಇವೆ. ಇದರಲ್ಲಿ ಇವತ್ತು ಮತ್ತು ನಾಳೆ ನಡೆಯುವ ಪಂದ್ಯಗಳಲ್ಲಿ ಬೆಂಗಳೂರು, ಡೆಲ್ಲಿ ಮತ್ತು ಹೈದರಾಬಾದ್ ತಂಡಗಳು ಗೆಲುವು ಸಾಧಿಸಿದರೆ ಸೀದಾ ಪ್ಲೇ ಆಫ್ ಪ್ರವೇಶಿಸುತ್ತವೆ. ಅದರಲ್ಲೂ ಆರ್​ಸಿಬಿ ಮತ್ತು ಡೆಲ್ಲಿ ನಡುವಿನ ಇವತ್ತಿನ ಪಂದ್ಯ ಬಹಳ ಮಹತ್ವ ಪಡೆದಿದೆ. ಒಂದು ವೇಳೆ ಆರ್​ಸಿಬಿ ಸೋತರೆ ಅದು ಕ್ವಾಲಿಫೈ ಆಗುವ ಸಾಧ್ಯತೆ ಎಷ್ಟು.

    ಡೆಲ್ಲಿ, ಬೆಂಗಳೂರು ಮತ್ತು ಕೆಕೆಆರ್ ತಲಾ 14 ಅಂಕಗಳನ್ನ ಹೊಂದಿವೆ. ಆದರೆ, ಆರ್​ಸಿಬಿ ಸದ್ಯಕ್ಕೆ ಉತ್ತಮ ರನ್ ರೇಟ್ ಆಧಾರದಲ್ಲಿ 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಕೆಕೆಆರ್ ತಂಡದ ಎಲ್ಲಾ ಪಂದ್ಯಗಳು ಮುಗಿದಿವೆ. ಅದೇನಿದ್ದರೂ ಬಾಕಿ ಎರಡು ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಹೊಂದಿದೆ ಅಷ್ಟೇ.

    ಇದನ್ನೂ ಓದಿ: IPL Points Table: ಐಪಿಎಲ್​ ಅಂಕ ಪಟ್ಟಿ - ಕೋಲ್ಕತ್ತಾಗೆ ಪ್ಲೇಆಫ್​ ಕನಸು ಜೀವಂತ; ರಾಜಸ್ಥಾನ್​, ಪಂಜಾಬ್​ ಔಟ್

    ಇವತ್ತು ನಡೆಯುವ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಆರ್​ಸಿಬಿ ಎರಡನೇ ಸ್ಥಾನದೊಂದಿಗೆ ಕ್ವಾಲಿಫೈ ಆಗುತ್ತದೆ. ಒಂದು ವೇಳೆ ಸೋತರೂ ಕೂಡ ಕ್ವಾಲಿಫೈ ಆಗಲು ಚಾನ್ಸ್ ಹೊಂದಿದೆ. ನಾಳೆ ನಡೆಯುವ ಮುಂಬೈ ಮತ್ತು ಹೈದರಾಬಾದ್ ನಡುವಿನ ಪಂದ್ಯದಲ್ಲಿ ಹೈದರಾಬಾದ್ ಸೋತರೆ ಉಳಿದ ಮೂರೂ ತಂಡಗಳು ಅರ್ಹತೆ ಗಿಟ್ಟಿಸುತ್ತವೆ. ಒಂದು ವೇಳೆ ಹೈದರಾಬಾದ್ ಗೆದ್ದುಬಿಟ್ಟು, ಆರ್​ಸಿಬಿ ಸೋತರೆ ಏನು ಕಥೆ? ಆರ್​ಸಿಬಿ ಎಷ್ಟು ಮಾರ್ಜಿನ್​ನಲ್ಲಿ ಸೋಲುವ ರಿಸ್ಕ್ ತೆಗೆದುಕೊಳ್ಳಬಹುದು? ಎಲ್ಲಾ ಅಂಶಗಳನ್ನ ಗಣನೆಗೆ ತೆಗೆದುಕೊಂಡು ಹೀಗೊಂದು ಲೆಕ್ಕಾಚಾರ ಮಾಡಲಾಗಿದೆ. ಡೆಲ್ಲಿ ವಿರುದ್ಧದ ಇವತ್ತಿನ ಪಂದ್ಯದಲ್ಲಿ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ 160 ರನ್ ಗಳಿಸಿತೆಂದಿಟ್ಟುಕೊಳ್ಳಿ. ಆಗ ಚೇಸ್ ಮಾಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 17 ಓವರ್​ನೊಳಗೆ ಚೇಸ್ ಮಾಡದಂತೆ ನೋಡಿಕೊಳ್ಳಬೇಕು. ಅಂದರೆ 3 ಓವರ್ ಅಂತರದಲ್ಲಿ ಸೋಲಬಾರದು. ಒಂದು ವೇಳೆ, ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟ್ ಮಾಡಿ 160 ರನ್ ಗಳಿಸಿದ್ದೇ ಆದಲ್ಲಿ ಚೇಸ್ ಮಾಡುವ ಆರ್​ಸಿಬಿ 22 ರನ್​ಗೂ ಹೆಚ್ಚು ಅಂತರದಲ್ಲಿ ಸೋಲಬಾರದು. ಅಂದರೆ ಕನಿಷ್ಠ 138 ರನ್​ಗಳನ್ನಾದರೂ ಗಳಿಸಬೇಕು. ಆಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತರೂ ಕ್ವಾಲಿಫೈ ಆಗುತ್ತದೆ.

    ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಹೆಚ್ಚೂಕಡಿಮೆ ಇಂಥದ್ದೇ ಸ್ಥಿತಿ ಇದೆ. ಆರ್​ಸಿಬಿಗಿಂತ ಕಡಿಮೆ ರನ್ ರೇಟ್ ಹೊಂದಿರುವ ಡೆಲ್ಲಿ ತಂಡದ ಸೋಲಿನ ಮಾರ್ಜಿನ್ ಇನ್ನಷ್ಟು ಕಡಿಮೆ ಇರಬೇಕು. ಡೆಲ್ಲಿ ತಂಡ ಸೋತರೂ ನಿಕಟ ಪೈಪೋಟಿ ನೀಡಿಯೇ ಸೋಲಬೇಕಾಗುತ್ತದೆ.

    ನಾಳೆ ಮುಂಬೈ ಇಂಡಿಯನ್ಸ್ ವಿರುದ್ಧ ಹೈದರಾಬಾದ್ ತಂಡದ್ದು ಮಾಡು ಇಲ್ಲವೇ ಮಡಿ ಪಂದ್ಯ. ಗೆದ್ದರೆ ಸೀದಾ ಪ್ಲೇ ಆಫ್ ಹೋಗುತ್ತದೆ. ಸೋತರೆ ನಿರ್ಗಮಿಸುತ್ತದೆ. ಅದು ಬಹಳ ಸ್ಪಷ್ಟ.

    ಇದನ್ನೂ ಓದಿ: IPL 2020: ಮುಂಬೈ ಇಂಡಿಯನ್ಸ್​ ಬೌಲರ್​ ಬೂಮ್ರಾಗೆ ಪರ್ಪಲ್​ ಕ್ಯಾಪ್​; ರಾಹುಲ್​ಗೆ ಆರೆಂಜ್​ ಕ್ಯಾಪ್​

    ಇನ್ನು, ಕೆಕೆಆರ್ ತಂಡದ ಕೈಯಲ್ಲಿ ಯಾವುದೇ ಪಂದ್ಯಗಳಿಲ್ಲ. ಎರಡು ಅವಕಾಶಗಳು ಮಾತ್ರ ಇವೆ. ಡೆಲ್ಲಿ ಮತ್ತು ಆರ್​ಸಿಬಿ ನಡುವಿನ ಪಂದ್ಯದಲ್ಲಿ ಯಾರೇ ಗೆದ್ದರೂ ದೊಡ್ಡ ಅಂತರದಿಂದ ಗೆದ್ದರೆ ಕೋಲ್ಕತಾಗೆ ಪ್ಲೇ ಆಫ್ ಚಾನ್ಸ್ ಇರುತ್ತದೆ. ನಾಳೆ ನಡೆಯುವ ಪಂದ್ಯದಲ್ಲಿ ಹೈದರಾಬಾದ್ ಸೋತರೂ ಕೆಕೆಆರ್ ಕ್ವಾಲಿಫೈ ಆಗುತ್ತದೆ.

    ನವೆಂಬರ್ 5ರಂದು ಮೊದಲ ಎರಡು ಸ್ಥಾನ ಪಡೆಯುವ ತಂಡಗಳ ಮಧ್ಯೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದವರು ಫೈನಲ್ ಪ್ರವೇಶಿಸುತ್ತಾರೆ. ಸೋತವರಿಗೆ ಎರಡನೇ ಕ್ವಾಲಿಫೈಯರ್ ಪಂದ್ಯ ಆಡುವ ಅವಕಾಶ ಇರುತ್ತದೆ. ಮರುದಿನ, ಅಂದರೆ ನ. 6ರಂದು 3 ಮತ್ತು 4ನೇ ಸ್ಥಾನ ಪಡೆದ ತಂಡಗಳ ಮಧ್ಯೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದವರು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯುತ್ತಾರೆ. ಅಲ್ಲಿ ಮೊದಲ ಕ್ವಾಲಿಫಯರ್​ನಲ್ಲಿ ಸೋತ ತಂಡವನ್ನು ಎದಿರುಗೊಳ್ಳುತ್ತಾರೆ. ನ. 8ರಂದು ನಡೆಯುವ ಈ ಎರಡನೇ ಕ್ವಾಲಿಫೈರ್​ನಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶಿಸುತ್ತದೆ. ನ. 10ರಂದು ಪ್ರಶಸ್ತಿಗಾಗಿ ಹಣಾಹಣಿ ನಡೆಯುತ್ತದೆ.
    Published by:Vijayasarthy SN
    First published: