Brett Lee: ಭಾರತೀಯರ ನೆರವಿಗೆ ನಿಂತ ಬ್ರೇಟ್ ಲೀ: ಕೊರೋನಾ ಹೋರಾಟಕ್ಕೆ ದೇಣಿಗೆ ನೀಡಿದ ಆಸೀಸ್ ಕ್ರಿಕೆಟಿಗ

ನಾನು ಪಿಎಂ ಕೇರ್ಸ್ ಫಂಡ್‌ಗೆ ಸಹಾಯ ಮಾಡಲು ಮುಂದಾಗಿದ್ದೇನೆ. ಈ ಮೂಲಕ ಭಾರತದ ಆಸ್ಪತ್ರೆಗಳಲ್ಲಿ ಆಮ್ಲಜನಕದ ಪೂರೈಕೆಗೆ ನೆರವಾಗಬಹುದು. ಈ ಸಮಯದಲ್ಲಿ ನನ್ನಂತೆ ಎಲ್ಲಾ ಆಟಗಾರರು ಭಾರತೀಯರಿಗೆ ಸಹಾಯ ಮಾಡಬಹುದು.

Brett Lee

Brett Lee

 • Share this:
  ಕೊಲ್ಕತ್ತಾ ನೈಟ್ ರೈಡರ್ಸ್​ (KKR) ತಂಡದ ಆಟಗಾರ ಪ್ಯಾಟ್ ಕಮ್ಮಿನ್ಸ್ ನಂತರ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಭಾರತೀಯರ ನೆರವಿಗೆ ಮುಂದಾಗಿದ್ದಾರೆ. ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಗಾಗಿ ಬ್ರೆಟ್ ಲೀ 1 ಬಿಟ್‌ಕಾಯಿನ್ (ಸುಮಾರು 41 ಲಕ್ಷ ರೂಪಾಯಿ) ದಾನ ಮಾಡಿದ್ದಾರೆ. ಇದಕ್ಕೂ ಮೊದಲು ಕೆಕೆಆರ್ ಪರ ಆಡಿದ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್, ಭಾರತೀಯ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸಲು 'ಪಿಎಂ ಕೇರ್ಸ್ ಫಂಡ್'ಗೆ 50 ಸಾವಿರ ಡಾಲರ್ (ಸುಮಾರು 37 ಲಕ್ಷ ರೂ.) ದೇಣಿಗೆ ನೀಡಿದರು. ಅಲ್ಲದೆ ಇತರೆ ಆಟಗಾರರಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದರು.

  ಇದೀಗ ಬ್ರೆಟ್ ಲೀ ಕೂಡ ಭಾರತೀಯರ ನೆರವಿಗೆ ನಿಂತು ಹೃದಯ ವಿಶಾಲತೆ ಮೆರೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಲೀ, ಭಾರತ ನನ್ನ 2ನೇ ತವರು ಇದ್ದಂತೆ. 'ನನ್ನ ಕ್ರಿಕೆಟಿಂಗ್ ವೃತ್ತಿಜೀವನದಲ್ಲಿ ಮತ್ತು ನಿವೃತ್ತಿಯ ನಂತರ ಇಲ್ಲಿನ ಜನರಿಂದ ನಾನು ತುಂಬಾ ಪ್ರೀತಿ ಪಡೆದಿದ್ದೇನೆ. ಈ ಬಿಕ್ಕಟ್ಟಿನಲ್ಲಿ ಜನರು ಸಾಯುತ್ತಿರುವುದನ್ನು ನೋಡುವುದು ಹೃದಯ ವಿದ್ರಾವಕವಾಗಿದೆ. ಅವರಿಗೆ ಸಹಾಯ ಮಾಡುವ ಅವಕಾಶವನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ನಾನು www.cyptorelief.in ಗೆ ಬಿಟ್‌ಕಾಯಿನ್ ದಾನ ಮಾಡುತ್ತಿದ್ದೇನೆ. ಈ ಮೂಲಕ ಭಾರತದ ವಿವಿಧ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸಲಾಗುವುದು ಎಂದು ಬ್ರೆಟ್ ಲೀ ತಿಳಿಸಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ಬ್ರೇಟ್ ಲೀ ಕಮೆಂಟೇಟರ್ ಹಾಗೂ ವೀಕ್ಷಕ ವಿಶ್ಲೇಷಣೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  ಇದಕ್ಕೂ ಮುನ್ನ 50 ಸಾವಿರ ಡಾಲರ್ ದೇಣಿಗೆ ನೀಡಿದ್ದ ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್, ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಭಾರತದಲ್ಲಿ ಆಕ್ಸಿಜನ್ ಪೂರೈಕೆಗೆ ವ್ಯತ್ಯಯ ಉಂಟಾಗಿದ್ದು, ಹೀಗಾಗಿ ಆಮ್ಲಜನಕ ಪೂರೈಕೆಗೆ ಸಹಾಯ ಮಾಡಲು 50 ಸಾವಿರ ಡಾಲರ್‌ಗಳನ್ನು (ಸುಮಾರು 37 ಲಕ್ಷ 36 ಸಾವಿರ ರೂ) ನೀಡುವುದಾಗಿ ಕಮ್ಮಿನ್ಸ್ ಘೋಷಿಸಿದ್ದರು. ಅಲ್ಲದೆ ಇತರೆ ಆಟಗಾರರೂ ಕೂಡ ಸಹಾಯಹಸ್ತ ಚಾಚುವಂತೆ ಕಮಿನ್ಸ್ ಕೋರಿದ್ದರು.

  ತಮ್ಮ ನೆರವಿನ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಪ್ರಕಟಿಸಿರುವ ಕಮಿನ್ಸ್​ 'ನಾನು ಭಾರತದಲ್ಲಿ ಬಹಳ ಸಮಯದಿಂದ ಆಡುತ್ತಿದ್ದೇನೆ. ಇಲ್ಲಿನ ಅಭಿಮಾನಿಗಳು ತುಂಬಾ ಬೆಂಬಲ ನೀಡಿದ್ದಾರೆ. ಹಾಗೆಯೇ ನನ್ನನ್ನು ತುಂಬಾ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಆದರೆ ಈಗ ಬಹಳಷ್ಟು ಜನರು ತೊಂದರೆಯಲ್ಲಿದ್ದಾರೆ. ಇದು ನನಗೆ ನೋವುಂಟು ಮಾಡಿದೆ. ಈ ಕೋವಿಡ್ -19 ಸಮಯದಲ್ಲಿ ಐಪಿಎಲ್ ನಡೆಸುವುದು ಸರಿಯೇ ಎಂದು ಸಾಕಷ್ಟು ಚರ್ಚಿಸಿದ ನಂತರ ಇದನ್ನು ಬರೆಯುತ್ತಿದ್ದೇನೆ. ಲಾಕ್ ಡೌನ್ ಸಮಯದಲ್ಲಿ, ಬಹಳಷ್ಟು ಜನರು ಐಪಿಎಲ್​ನಿಂದ ಸಂತೋಷವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಾನು ಭಾರತ ಸರ್ಕಾರಕ್ಕೆ ಸಲಹೆ ನೀಡಲು ಬಯಸುತ್ತೇನೆ ಎಂದು ಕಮಿನ್ಸ್ ತಿಳಿಸಿದ್ದಾರೆ.

  ಮುಂದುವರೆದು, ಒಬ್ಬ ಆಟಗಾರನಾಗಿರುವುದರಿಂದ ನಾವು ಲಕ್ಷಾಂತರ ಜನರೊಂದಿಗೆ ಸಂಪರ್ಕದಲ್ಲಿರುತ್ತೇವೆ. ಇದನ್ನು ಗಮನದಲ್ಲಿಟ್ಟುಕೊಂಡು ನಾನು ಪಿಎಂ ಕೇರ್ಸ್ ಫಂಡ್‌ಗೆ ಸಹಾಯ ಮಾಡಲು ಮುಂದಾಗಿದ್ದೇನೆ. ಈ ಮೂಲಕ ಭಾರತದ ಆಸ್ಪತ್ರೆಗಳಲ್ಲಿ ಆಮ್ಲಜನಕದ ಪೂರೈಕೆಗೆ ನೆರವಾಗಬಹುದು. ಈ ಸಮಯದಲ್ಲಿ ನನ್ನಂತೆ ಎಲ್ಲಾ ಆಟಗಾರರು ಭಾರತೀಯರಿಗೆ ಸಹಾಯ ಮಾಡಬಹುದು. ನಾನು 50 ಸಾವಿರ ಡಾಲರ್‌ಗಳಿಂದ ಪ್ರಾರಂಭಿಸುತ್ತಿದ್ದೇನೆ. ಈ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ನನಗೆ ಅಸಹಾಯಕನಾಗಿ ಕಾಣುತ್ತಾನೆ. ಬಹುಶಃ ನಾನು ತಡವಾಗಿರಬಹುದು, ಆದರೆ ಇದರ ಮೂಲಕ ನಾವು ಜನರಿಗೆ ಹೊಸ ಜೀವನ ನೀಡಬಹುದು. ನನ್ನ ಸಹಾಯ ದೊಡ್ಡದಾಗಿಲ್ಲದಿದ್ದರೂ, ಅದು ಇನ್ನೊಬ್ಬರ ಜೀವನವನ್ನು ಬದಲಾಯಿಸಬಹುದು ಎಂದು ಪ್ಯಾಟ್ ಕಮಿನ್ಸ್​ ತಿಳಿಸಿದ್ದರು. ಇದೀಗ ಆಸ್ಟ್ರೇಲಿಯಾದ ಇಬ್ಬರು ಕ್ರಿಕೆಟಿಗರು ಭಾರತೀಯರ ನೋವಿಗೆ ಮಿಡಿಯುವ ಮೂಲಕ ಭಾರೀ ಮೆಚ್ಚುಗೆಗಳಿಸಿದ್ದಾರೆ.
  Published by:zahir
  First published: