IPL 2021 ತೊರೆಯಲು ಮುಂದಾದ ಇಬ್ಬರು ವಿದೇಶಿ ಆಟಗಾರರು!

IPL 2021

IPL 2021

ಮೇ 1 ರಿಂದ ಅನ್ವಯವಾಗುವ ನಿಯಮಗಳ ಪ್ರಕಾರ, ಭಾರತ ಮತ್ತು ದಕ್ಷಿಣ ಆಫ್ರಿಕಾದಿಂದ ಬರುವ ಆಟಗಾರರು 14 ದಿನಗಳ ಕಾಲ ಕ್ಯಾರೆಂಟೈನ್‌ನಲ್ಲಿ ಇರಬೇಕಾಗುತ್ತದೆ.

  • Share this:

ಕೊರೋನಾತಂಕದ ನಡುವೆಯೂ ಇಂಡಿಯನ್ ಪ್ರೀಮಿಯರ್ ಲೀಗ್​ ಮುಂದುವರೆಸುವುದಾಗಿ ಬಿಸಿಸಿಐ ತಿಳಿಸಿದೆ. ಇತ್ತ ಬಯೋಬಬಲ್​ನಲ್ಲಿ ಇರುವವರಲ್ಲೂ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದು ಆಟಗಾರರ ಚಿಂತೆಗೆ ಕಾರಣವಾಗಿದೆ. ಈಗಾಗಲೇ ಕೊರೋನಾ ಆತಂಕದಿಂದ ಆಸ್ಟ್ರೇಲಿಯಾದ ಮೂವರು ಕ್ರಿಕೆಟಿಗರುಗಳಾದ ಆ್ಯಂಡ್ರ್ಯೂ ಟೈ, ಆ್ಯಡಂ ಝಂಪಾ ಹಾಗೂ ಕೇನ್ ರಿಚರ್ಡ್ಸನ್​ ತವರಿಗೆ ಮರಳಿದ್ದಾರೆ. ಅಲ್ಲದೆ ಇಂಗ್ಲೆಂಡ್​ ಆಟಗಾರ ಲಿಯಾಮ್ ಲಿವಿಂಗ್​​ಸ್ಟೋನ್ ಕೂಡ ಅರ್ಧದಲ್ಲೇ ಐಪಿಎಲ್ ತೊರೆದಿದ್ದಾರೆ. ಇದೀಗ ಕೆಕೆಆರ್ ತಂಡದ ಸ್ಟಾರ್ ಆಲ್​ರೌಂಡರ್ ಬಾಂಗ್ಲಾದೇಶದ ಶಕೀಬ್​ ಅಲ್ ಹಸನ್ ಹಾಗೂ ರಾಜಸ್ಥಾನ್ ರಾಯಲ್ಸ್​ ತಂಡದಲ್ಲಿರುವ ಮುಸ್ತಫಿಜುರ್ ರೆಹಮಾನ್ ಐಪಿಎಲ್ ತೊರೆಯಲಿದ್ದಾರೆ ಎಂದು ವರದಿಯಾಗಿದೆ.


ಕೋವಿಡ್-19 ಗೆ ಸಂಬಂಧಿಸಿದಂತೆ ಬಾಂಗ್ಲಾದೇಶದಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಅದರಂತೆ ವಿದೇಶದಲ್ಲಿರುವ ಆಟಗಾರರು ಹೊಸ ಕೋವಿಡ್ -19 ಪ್ರೋಟೋಕಾಲ್‌ನಿಂದಾಗಿ ಶೀಘ್ರದಲ್ಲೇ ಮರಳಬೇಕಾಗಬಹುದು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮುಖ್ಯಸ್ಥ ನಿಜಾಮುದ್ದೀನ್ ಚೌಧರಿ ಹೇಳಿದ್ದಾರೆ.


ಮೇ 1 ರಿಂದ ಅನ್ವಯವಾಗುವ ನಿಯಮಗಳ ಪ್ರಕಾರ, ಭಾರತ ಮತ್ತು ದಕ್ಷಿಣ ಆಫ್ರಿಕಾದಿಂದ ಬರುವ ಆಟಗಾರರು 14 ದಿನಗಳ ಕಾಲ ಕ್ಯಾರೆಂಟೈನ್‌ನಲ್ಲಿ ಇರಬೇಕಾಗುತ್ತದೆ. ಇದರಿಂದ ವಿನಾಯಿತಿ ಪಡೆಯಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಆರೋಗ್ಯ ಸೇವೆಗಳ ನಿರ್ದೇಶನಾಲಯದಿಂದ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ. ಈ ಹಿಂದೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ನಿಯಮಗಳನ್ನು ಸಡಿಲಗೊಳಿಸುವ ಅವಕಾಶವಿತ್ತು. ಆದರೀಗ ವಿಶ್ವದೆಲ್ಲೆಡೆ ಕೊರೋನಾ 2ನೇ ಅಲೆ ಆತಂಕ ಎದುರಾಗಿರುವುದರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾದಿಂದ ಬರುವರಿಗೆ ಕಠಿಣ ನಿಯಮ ಜಾರಿ ಮಾಡಲಾಗಿದೆ.


ಮೇ.23 ರಿಂದ ಬಾಂಗ್ಲಾದೇಶ ಶ್ರೀಲಂಕಾ ವಿರುದ್ದ ಸರಣಿ ಆಡಲಿದ್ದು, ಅದಕ್ಕೂ ಮುನ್ನ ಶಕೀಬ್ ಅಲ್ ಹಸನ್ ಹಾಗೂ ಮುಸ್ತಫಿಜುರ್ ಬಾಂಗ್ಲಾದೇಶವನ್ನು ತಲುಪಬೇಕಿದೆ. ಒಂದು ವೇಳೆ ತಡವಾದರೆ ಸರಣಿ ವೇಳೆ ಕ್ವಾರಂಟೈನ್​ನಲ್ಲಿ ಇರಬೇಕಾಗಿ ಬರಬಹುದು. ಹೀಗಾಗಿ ಈ ಇಬ್ಬರು ಆಟಗಾರರನ್ನು 14 ದಿನಗಳ ಮುಂಚಿತವಾಗಿ  ಕರೆಸಿಕೊಳ್ಳಲು ಬಿಸಿಬಿ ನಿರ್ಧರಿಸಿದೆ.

top videos


    ಈ ಬಗ್ಗೆ ಶಕೀಲ್ ಅಲ್ ಹಸನ್ ಹಾಗೂ ಮುಸ್ತಫಿಜುರ್ ರೆಹಮಾನ್ ಜೊತೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಚರ್ಚಿಸಲಿದ್ದು, ಮುಂದಿನ 15 ದಿನಗಳ ಯೋಜನೆಯ ಬಗ್ಗೆ ತಿಳಿದುಕೊಳ್ಳುತ್ತೇವೆ ಎಂದು ಬಿಸಿಬಿ ಮುಖ್ಯಸ್ಥ ನಿಜಾಮುದ್ದೀನ್ ಚೌಧರಿ ತಿಳಿಸಿದ್ದಾರೆ. ಕೆಲ ಮೂಲಗಳ ಪ್ರಕಾರ ಬಾಂಗ್ಲಾ ಕ್ರಿಕೆಟ್ ಮಂಡಳಿ ಈ ಇಬ್ಬರು ಆಟಗಾರರನ್ನು ಕಠಿಣ ನಿಯಮದ ಕಾರಣ ಇದೇ ವಾರದಲ್ಲಿ ಮುನ್ನವೇ ಕರೆಸಿಕೊಳ್ಳುವ ಇರಾದೆಯಲ್ಲಿದೆ. ಹೀಗಾಗಿ ಈ ಇಬ್ಬರು ಬಾಂಗ್ಲಾ ಕ್ರಿಕೆಟಿಗರೂ ಕೂಡ ಅರ್ಧದಲ್ಲೇ ಐಪಿಎಲ್ ತೊರೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.


    ಒಟ್ಟಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ಗೆ ಕೊರೋನಾ ಕಾರ್ಮೋಡ ಆವರಿಸಿದ್ದು, ಆತಂಕದ ನಡುವೆ ಟೂರ್ನಿಯ ಉಳಿದ 31 ಪಂದ್ಯಗಳನ್ನು ಆಯೋಜಿಸುವ ಸವಾಲು ಬಿಸಿಸಿಐಗೆ ಎದುರಾಗಿದೆ. ಈ ಸವಾಲನ್ನು ಮೆಟ್ಟಿ ನಿಂತು ಟೂರ್ನಿಯನ್ನು ಬಿಸಿಸಿಐ ಆಯೋಜಿಸಲಿದೆಯಾ ಕಾದು ನೋಡಬೇಕಿದೆ.

    First published: