ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14 ಅನ್ನು ಮುಂದೂಡಲಾಗಿದೆ. ಆದರೆ ಇನ್ನೂ 31 ಪಂದ್ಯಗಳನ್ನು ಆಯೋಜಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ. ಏಕೆಂದರೆ ಟೂರ್ನಿಯನ್ನು ಪೂರ್ಣಗೊಳಿಸದಿದ್ದರೆ, ಬಿಸಿಸಿಐಗೆ ಸುಮಾರು 2 ಸಾವಿರ ಕೋಟಿಗಿಂತ ಅಧಿಕ ನಷ್ಟ ಉಂಟಾಗಲಿದೆ. ಹೀಗಾಗಿ ಐಪಿಎಲ್ನ್ನು ಮತ್ತೆ ಆಯೋಜಿಸಲು ಬಿಸಿಸಿಐ ಬಿಗ್ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.
ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಅದರಂತೆ ಸೆಪ್ಟೆಂಬರ್ ತಿಂಗಳಲ್ಲಿ ಐಪಿಎಲ್ನ ಉಳಿದ ಪಂದ್ಯಗಳನ್ನು ಆಯೋಜಿಸುವ ಸುಳಿವು ನೀಡಿದ್ದಾರೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ. ಈ ಬಗ್ಗೆ ಮಾತನಾಡಿರುವ ರಾಜೀವ್ ಶುಕ್ಲಾ, ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ಸದ್ಯಕ್ಕಂತು ಐಪಿಎಲ್ ಆಯೋಜಿಸಲಾಗುವುದಿಲ್ಲ. ಹೀಗಾಗಿ ಟೂರ್ನಿಯ ಉಳಿದ ಪಂದ್ಯಗಳನ್ನು ನಿರ್ದಿಷ್ಟ ಸಮಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ವರ್ಷದೊಳಗೆ ಟೂರ್ನಿಯನ್ನು ನಡೆಸಲು ಚಿಂತಿಸಲಾಗಿದೆ.
ಅಂದರೆ ಸೆಪ್ಟೆಂಬರ್ನಲ್ಲಿ ನಡೆಸುವ ಆಯ್ಕೆ ನಮ್ಮ ಮುಂದಿದೆ. ಏಕೆಂದರೆ ಟಿ20 ವಿಶ್ವಕಪ್ಗೆ ಮೊದಲು ಎಲ್ಲಾ ತಂಡಗಳು ಭಾರತಕ್ಕೆ ಬರಬೇಕಾಗಿದೆ. ಈ ಸಮಯದಲ್ಲಿ ಉಳಿದ ಪಂದ್ಯಗಳನ್ನು ಆಯೋಜಿಸಲು ಸೂಕ್ತ ಸಮಯ ಎಂದು ಅಂದಾಜಿಸಲಾಗಿದೆ ಎಂದು ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್, ಐಪಿಎಲ್ ಮರು ಆಯೋಜನೆಗೆ ಇರುವ ಅವಕಾಶಗಳನ್ನು ನೋಡುತ್ತಿದ್ದೇವೆ. ಅದರಂತೆ ಸೆಪ್ಟೆಂಬರ್ನಲ್ಲಿ ಐಪಿಎಲ್ ಆಯೋಜಿಸಲು ಸಾಧ್ಯವಿದೆಯೇ ಎಂಬುದರತ್ತ ನಾವು ಗಮನಹರಿಸಿದ್ದೇವೆ. ಈ ಬಗ್ಗೆ ಐಸಿಸಿ ಜೊತೆಗೆ ಚರ್ಚೆ ನಡೆಸಬೇಕಿದ್ದು, ಹೀಗಾಗಿ ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ