ಬೆಂಗಳೂರು, ಜ. 9: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ (IPL 2022) ಎಲ್ಲಾ ಅಂದುಕೊಂಡಂತೆ ಆದಲ್ಲಿ ಏಪ್ರಿಲ್ 2ರಂದು ಆರಂಭವಾಗಲಿದೆ. ಆದರೆ, ದೇಶಾದ್ಯಂತ ಓಮೈಕ್ರಾನ್ ಕೋವಿಡ್ ಸೋಂಕಿನ ಅಲೆ (Omicron covid wave) ತೀವ್ರಗತಿಯಲ್ಲಿ ಹಬ್ಬುತ್ತಿದೆ. ಈ ಹೊತ್ತಿನಲ್ಲಿ ಐಪಿಎಲ್ ಟೂರ್ನಿ ನಡೆಯುವ ಸಾಧ್ಯತೆ ಬಗ್ಗೆಯೇ ಅನುಮಾನ ಮೂಡಿದೆ. ಅದರಲ್ಲೂ 10 ಸ್ಥಳಗಳಲ್ಲಿ ಪಂದ್ಯಗಳನ್ನ ಆಯೋಜಿಸುವುದು ಕೋವಿಡ್ ಕಾಲದಲ್ಲಿ ಮಹಾಮಾರಿಗೆ ರೆಡ್ ಕಾರ್ಪೆಟ್ ಸ್ವಾಗತ ಕೊಟ್ಟಹಾಗೆ. ಹಾಗಾದರೆ, ಬಿಸಿಸಿಐ (BCCI) ಬಳಿ ಏನಿದೆ ಬೇರೆ ಆಯ್ಕೆ?
ಇದೇ ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳ ಐಪಿಎಲ್ ಟೂರ್ನಿಗಳನ್ನ ಯುಎಇಯಲ್ಲಿ ಆಯೋಜಿಸಲಾಗಿತ್ತು. ಕಳೆದ ವರ್ಷ ಮೊದಲಾರ್ಧದ ಪಂದ್ಯಗಳು ಮಾತ್ರ ಭಾರತದಲ್ಲಿ ನಡೆದಿದ್ದವು. ಹೀಗಾಗಿ, ಬಿಸಿಸಿಐ ಬಳಿ ಪರ್ಯಾಯ ವ್ಯವಸ್ಥೆಗೆ ಹಲವು ಆಯ್ಕೆಗಳು ಇರುವುದಂತೂ ಹೌದು.
ಕೆಲವೇ ಸ್ಥಳಗಳಲ್ಲಿ ಮಾತ್ರ ಪಂದ್ಯಗಳು:
ಆರು ಸ್ಥಳಗಳಲ್ಲಿ ನಡೆಯಬೇಕಿದ್ದ ಪ್ರೋಕಬಡ್ಡಿ ಲೀಗ್ ಅನ್ನು ಕೋವಿಡ್ ಪರಿಸ್ಥಿತಿಯಲ್ಲಿ ಅಪಾಯಕ್ಕೆ ಆಹ್ವಾನ ಕೊಟ್ಟಂತಾಗುತ್ತದೆ ಎಂಬ ಕಾರಣಕ್ಕೆ ಒಂದೇ ಸ್ಥಳದಲ್ಲಿ ಆಡಿಸಲಾಗುತ್ತಿದೆ. ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ನ ಒಳಾಂಗಣದಲ್ಲಿ ಎಲ್ಲಾ ತಂಡಗಳ ಪಂದ್ಯಗಳನ್ನ ಆಯೋಜಿಸಲಾಗಿದೆ.
ಇದನ್ನೂ ಓದಿ: IPL Auction: ಬೆಂಗಳೂರಿನಲ್ಲಿ ಮುಂದಿನ ತಿಂಗಳು ಐಪಿಎಲ್ ಹರಾಜು? ದಿನಾಂಕ ಮತ್ತಿತರ ಮಾಹಿತಿ
ಐಪಿಎಲ್ ಪಂದ್ಯಗಳನ್ನೂ ಇದೇ ರೀತಿಯಲ್ಲಿ ಆಯೋಜಿಸುವ ಆಲೋಚನೆ ಬಿಸಿಸಿಐನಲ್ಲಿದೆ. ಒಂದೇ ಸ್ಥಳದಲ್ಲಿ ಎಲ್ಲಾ ಪಂದ್ಯಗಳನ್ನ ಆಯೋಜಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಮೂರ್ನಾಲ್ಕು ಸ್ಥಳಗಳಲ್ಲಿ ಮಾತ್ರ ಪಂದ್ಯಾವಳಿ ನಡೆಸಲು ಮುಂದಾಗಬಹುದು. ಇದರಿಂದ ಆಟಗಾರರು ಮತ್ತು ತಂಡದ ಸಿಬ್ಬಂದಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೆಚ್ಚು ಓಡಾಡುವುದು ತಪ್ಪುತ್ತದೆ. ಬಯೋಬಬಲ್ ವ್ಯವಸ್ಥೆಯನ್ನ ಸಮರ್ಪಕವಾಗಿ ನಡೆಸಲು ಸಾಧ್ಯವಾಗುತ್ತದೆ. ಕೋವಿಡ್ ಅಪಾಯ ಆದಷ್ಟೂ ತಗ್ಗುತ್ತದೆ ಎಂಬುದು ಲೆಕ್ಕಾಚಾರ.
ಯುಎಇ ಅಥವಾ ಬೇರೆ ದೇಶದಲ್ಲಿ ಪಂದ್ಯಾವಳಿ:
ಕಳೆದೆರಡು ಸೀಸನ್ನ ಐಪಿಎಲ್ ಪಂದ್ಯಾವಳಿಯನ್ನ ಯುಎಇಯಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಕೋವಿಡ್ ಸೋಂಕು ಹತೋಟಿಗೆ ಬರದೇ ಹೋದರೆ ಈ ಬಾರಿಯೂ ಐಪಿಎಲ್ ಅನ್ನ ವಿದೇಶದಲ್ಲಿ ಆಡಿಸುವ ಸಾಧ್ಯತೆ ಇದೆ.
“ವಿದೇಶದಲ್ಲಿ ಐಪಿಎಲ್ ನಡೆಸುವುದೂ ಸೇರಿ ನಾವು ಎಲ್ಲಾ ಆಯ್ಕೆಗಳನ್ನ ಆಲೋಚಿಸುತ್ತಿದ್ದೇವೆ. ಭಾರತದಲ್ಲಿ ಐಪಿಎಲ್ ನಡೆಸುವುದು ನಮ್ಮ ಗುರಿ. ಸದ್ಯ ಹರಾಜು ಪ್ರಕ್ರಿಯೆಗೆ ನಮ್ಮ ಆದ್ಯತೆ ಇದೆ. ಈ ಬಗ್ಗೆ ಶೀಘ್ರದಲ್ಲೇ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಬಿಸಿಸಿಐನ ಮೂಲಗಳನ್ನ ಉಲ್ಲೇಖಿಸಿ ಇಂಡಿಯಾ ಟುಡೇ ವಾಹಿನಿ ವರದಿ ಮಾಡಿದೆ.
ಇದನ್ನೂ ಓದಿ: Harshal patel: ಮತ್ತೆ IPL ನಲ್ಲಿ ಬೆಂಗಳೂರು ಪರ ಆಡಬೇಕು ಎಂದ ಸ್ಟಾರ್ ಬೌಲರ್
ಈ ಬಾರಿಯ ಐಪಿಎಲ್ ಹರಾಜು ಫೆಬ್ರವರಿ 12-13 ಅಥವಾ ಫೆ. 19- 20ರಂದು ನಡೆಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಹರಾಜು ಕಾರ್ಯಕ್ರಮ ಆಯೋಜಿಸಲು ಬಿಸಿಸಿಐ ಫಿಕ್ಸ್ ಆಗಿದೆ. ದುರದೃಷ್ಟಕ್ಕೆ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿದೆ. ಇದರಿಂದ ಹರಾಜು ಸ್ಥಳವನ್ನು ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರ ಮಾಡಿದರೂ ಅಚ್ಚರಿ ಇಲ್ಲ.
ಟೂರ್ನಿ ಬೇಗ ಪ್ರಾರಂಭ:
ಹಾಗೆಯೇ, ಏಪ್ರಿಲ್ 2ರಂದು ಐಪಿಎಲ್ ಪ್ರಾರಂಭ ಮಾಡಬೇಕೆಂದು ಬಿಸಿಸಿಐ ಸದ್ಯಕ್ಕೆ ದಿನ ಗೊತ್ತು ಮಾಡಿಟ್ಟುಕೊಂಡಿದೆ. ಇದರಲ್ಲಿ ಕೆಲವೊಂದು ದಿನ ಎರಡೆರಡು ಪಂದ್ಯಗಳು ನಡೆಯಲಿವೆ. ಇದನ್ನ ತಪ್ಪಿಸುವ ಸಲುವಾಗಿ ಐಪಿಎಲ್ ಪಂದ್ಯಾವಳಿಯನ್ನ ತುಸು ಬೇಗನೇ ಶುರು ಮಾಡುವ ಆಲೋಚನೆಯೂ ಬಿಸಿಸಿಐಗೆ ಇದೆ ಎಂದು ಮೂಲಗಳು ಹೇಳುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ