Rishabh Pant- ಎರಡು ಬಾರಿ ಧೋನಿ ಔಟ್ ಮಾಡಲು ರಿಷಭ್ ಪಂತ್ ಹೆಣೆದ ಬಲೆ ನಿಜಕ್ಕೂ ಸೋಜಿಗ

MS Dhoni Trapped- ಪ್ಲೇ ಆಫ್​ನಲ್ಲಿ ಡೆಲ್ಲಿ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಎಂಎಸ್ ಧೋನಿ, ಲೀಗ್ ಹಂತದಲ್ಲಿ ಡೆಲ್ಲಿ ವಿರುದ್ಧದ ಎರಡು ಪಂದ್ಯಗಳಲ್ಲಿ ಬೇಗನೇ ಔಟಾಗಿದ್ದರು. ಆ ಎರಡೂ ಬಾರಿ ಅವರು ರಿಷಭ್ ಪಂತ್ ಹೆಣೆದ ಬಲೆಗೆ ಬಿದ್ದಿದ್ದರು.

ಎಂಎಸ್ ಧೋನಿ ಮತ್ತು ರಿಷಭ್ ಪಂತ್

ಎಂಎಸ್ ಧೋನಿ ಮತ್ತು ರಿಷಭ್ ಪಂತ್

  • Share this:
    ದುಬೈ: ಈ ಐಪಿಎಲ್​ನಲ್ಲಿ (IPL 2021) ಅತಿ ಹೆಚ್ಚು ಛಾಪು ಮೂಡಿಸಿದ ಬೌಲರ್​ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನ ಅವೇಶ್ ಖಾನ್ (Delhi Capitals fast bowler Avesh Khan) ಕೂಡ ಒಬ್ಬರು. ಆರ್​ಸಿಬಿಯ ಹರ್ಷಲ್ ಪಟೇಲ್ ಬಿಟ್ಟರೆ ಈ ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವುದು ಅವೇಶ್ ಖಾನ್. ಪಂದ್ಯದ ಎಲ್ಲಾ ಸಂದರ್ಭದಲ್ಲೂ ಅವೇಶ್ ಖಾನ್ ವಿಕೆಟ್ ಪಡೆಯುವ ಸಾಮರ್ಥ್ಯ ತೋರಿದ್ಧಾರೆ. ತಂಡದ ಇತರ ಸ್ಟಾರ್ ಬೌಲರ್​ಗಳಾದ ಕಗಿಸೋ ರಬಡ, ಆರ್ನಿಕ್ ನೋರ್ಟಿಯಾ ಅವರನ್ನೂ ಮೀರಿಸುವ ಪ್ರದರ್ಶನವನ್ನ ಅವೇಶ್ ಖಾನ್ ನೀಡಿದ್ದಾರೆ. ಈ ಐಪಿಎಲ್​ನಲ್ಲಿ ಅವೇಶ್ ಖಾನ್ ಎರಡು ಬಾರಿ ಎಂಎಸ್ ಧೋನಿಯನ್ನ (MS Dhoni) ಔಟ್ ಮಾಡಿರುವುದು ಗಮನಾರ್ಹ. ಈ ಎರಡು ವಿಕೆಟ್ ಪಡೆಯಲು ಅವರಿಗೆ ಸಾಧ್ಯವಾಗಿದ್ದು ರಿಷಭ್ ಪಂತ್ (Rishabh Pant) ಹೆಣೆದ ಬಲೆಯಿಂದಾಗಿಯಂತೆ. ಈ ವಿಚಾರವನ್ನ ಅವರು ಇಎಸ್​ಪಿಎನ್ ಕ್ರಿಕ್ ಇನ್ಫೋ ವೆಬ್ ಸೈಟ್ ಜೊತೆ ಹಂಚಿಕೊಂಡಿದ್ದಾರೆ.

    ಮೊದಲ ಬಲಿ: ಎಂಎಸ್ ಧೋನಿ ಅವರನ್ನ ಅವೇಶ್ ಖಾನ್ ಮೊದಲು ಬಲಿ ಪಡೆದದ್ದು ಭಾರತದಲ್ಲಿ ನಡೆದ ಪಂದ್ಯದಲ್ಲಿ. ಧೋನಿ ಸೊನ್ನೆಗೆ ಔಟಾಗಿದ್ದರು. “ಮಹಿ ಭಾಯ್ ಕ್ರೀಸ್​ಗೆ ಬರುತ್ತಿರುವಂತೆ, ಮಿಡ್ ಆನ್ ಮತ್ತು ಮಿಡ್ ಆಫ್​ನಲ್ಲಿ ಫೀಲ್ಡರ್ ನಿಲ್ಲಿಸುವಂತೆ ನನಗೆ ರಿಷಭ್ ಪಂತ್ ಹೇಳಿದರು. ನಿನ್ನ ಬಾಲ್ ಅನ್ನು ಧೋನಿ ಮಿಡ್ ಆನ್ ಅಥವಾ ಮಿಡ್ ಆಫ್ ಮೇಲೆ ಬೇಕಾದರೆ ಹೊಡೆಯಲಿ. ನಿನ್ನ ಲೆಂತ್​ನಲ್ಲೇ ಬೌಲ್ ಮಾಡಬೇಕು. ಫುಲ್ ಲೆಂತ್​ನಲ್ಲಿ ಬಾಲ್ ಎಸೆಯಬೇಡ ಎಂದು ಸಲಹೆ ನೀಡಿದರು” ಎಂದು ಅವೇಶ್ ಖಾನ್ ಆ ಸಂದರ್ಭವನ್ನು ಸ್ಮರಿಸಿದ್ಧಾರೆ.

    “ಮೊದಲಿಗೆ ನಾನು ಅವರ ಮಾತನ್ನ ಒಪ್ಪಲಿಲ್ಲ. ಒಳಗೆ (ಪಿಚ್​ನಿಂದ 30 ಯಾರ್ಡ್ ಸರ್ಕಲ್) ಐವರು ಫೀಲ್ಡರ್ ಇರುವುದು ಬೇಡ, ನಾಲ್ವರು ಮಾತ್ರ ಇರಲಿ ಎಂದು ನಾನು ಹೇಳೀದೆ. ಆದರೆ, ಪಂತ್ ಮಿಡ್ ಆನ್ ಮತ್ತು ಮಿಡ್ ಆಫ್​ನಲ್ಲಿ ಫೀಲ್ಡರ್ ನಿಯೋಜಿಸುವುದಕ್ಕೆ ಬದ್ಧರಾಗಿದ್ದರು. ನಾನು ಅವರು ಹೇಳಿದಂತೆಯೇ ಮಾಡಿದೆ. ಮಿಡ್ ಆನ್ ಮತ್ತು ಮಿಡ್ ಆಫ್​ನಲ್ಲಿ ಫೀಲ್ಡರ್ ಇದ್ದುದನ್ನು ಗಮನಿಸಿ ಧೋನಿ ಎರಡನೇ ಬಾಲ್ ಅನ್ನು ಮೇಲಕ್ಕೆ ಹೊಡೆಯಲು ಯತ್ನಿಸಿದರು. ಧೋನಿ ಬಹಳ ದಿನದಿಂದ ಪಂದ್ಯ ಆಡಿರಲಿಲ್ಲ. ಆ ಕೊರತೆಯನ್ನ ರಿಷಭ್ ಸರಿಯಾಗಿ ಉಪಯೋಗಿಸಿ ಅವರು ಔಟಾಗುವಂತೆ ಮಾಡಿದರು” ಎಂದು ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಅವೇಶ್ ಖಾನ್ ವಿವರಿಸಿದ್ದಾರೆ.

    ಇದನ್ನೂ ಓದಿ: Brian Lara to RCB- ಈ ಮೂರು ಆಟಗಾರರನ್ನ ಉಳಿಸಿಕೊಳ್ಳಿ: ಆರ್​ಸಿಬಿಗೆ ಬ್ರಿಯಾನ್ ಲಾರಾ ಸಲಹೆ

    ಎರಡನೇ ಬಾರಿ ಬಲಿಯಾಗಿದ್ದು ಹೀಗೆ: ಧೋನಿ ಈ ಸೀಸನ್​ನಲ್ಲಿ ಅವೇಶ್ ಖಾನ್​ಗೆ ಎರಡನೇ ಬಾರಿ ಬಲಿಯಾಗಿದ್ದು ಯುಎಇಯಲ್ಲಿ ನಡೆದ ಲೀಗ್ ಪಂದ್ಯದಲ್ಲಿ. ಆ ಪಂದ್ಯದಲ್ಲಿ ಧೋನಿ ಔಟ್ ಮಾಡಲು ರಿಷಭ್ ಪಂತ್ ಇನ್ನೊಂದು ರೀತಿಯಲ್ಲಿ ಬಲೆ ಬೀಸಿದ್ದಾರಂತೆ. “ಧೋನಿ ಕ್ರೀಸ್​ಗೆ ಬರುವಾತಗ ನಾನು ರಿಷಭ್ ಜೊತೆ ಸಲಹೆ ಕೇಳಿದೆ. ಹಾರ್ಡ್ ಲೆಂತ್ (ಗುಡ್ ಲೆಂತ್) ನಲ್ಲಿ ಬಾಲ್ ಎಸೆದರೆ ಅದನ್ನ ಹೊಡೆಯುವುದು ಕಷ್ಟ ಎಂದು ಪಂತ್ ತಿಳಿಸಿದರು. ಅದರಂತೆ ನಾನು ಗುಡ್ ಲೆಂತ್ ಬಾಲ್ ಹಾಕಿದೆ. ಧೋನಿ ಎಡ್ಜ್ ಮಾಡಿ ಕ್ಯಾಚಿತ್ತು ಔಟಾದರು” ಎಂದು ಅವೇಶ್ ಖಾನ್ ತಿಳಿಸಿದ್ಧಾರೆ.
    PURPLE CAP:
    15 ಪಂದ್ಯಗಳಿಂದ 23 ವಿಕೆಟ್ ಪಡೆದಿರುವ ಅವೇಶ್ ಖಾನ್ ಅವರು ಪರ್ಪಲ್ ಕ್ಯಾಪ್ ಪಡೆಯಲು ಇನ್ನೂ 10 ವಿಕೆಟ್ ಗಳಿಸಬೇಕಿದೆ. ಪರ್ಪಲ್ ಕ್ಯಾಪ್ ಸಿಗದೇ ಹೋದರೂ ಎರಡನೇ ಸ್ಥಾನವಂತೂ ಅವೇಶ್ ಖಾನ್​ಗೆ ಖಚಿತ ಎಂಬಂತಿದೆ. ನಾಳೆ ಬುಧವಾರ ಡೆಲ್ಲಿ ತಂಡ ಕೆಕೆಆರ್ ವಿರುದ್ಧ ಎರಡನೇ ಕ್ವಾಲಿಫಯರ್ ಪಂದ್ಯ ಆಡಲಿದೆ. ಮೊದಲ ಕ್ವಾಲಿಫಯರ್​ನಲ್ಲಿ ಚೆನ್ನೈ ಎದುರು ಸೋತಿದ್ದ ಡೆಲ್ಲಿ ತಂಡ ಎರಡನೇ ಕ್ವಾಲಿಫಯರ್​ನಲ್ಲಿ ಗೆದ್ದರೆ ಫೈನಲ್​ನಲ್ಲಿ ಮತ್ತೊಮ್ಮೆ ಧೋನಿ ಪಡೆಯನ್ನ ಎದಿರುಗೊಳ್ಳಲಿದೆ.
    Published by:Vijayasarthy SN
    First published: