IPL 2021 ರದ್ದಾದ ಬಳಿಕ ಆಸ್ಟ್ರೇಲಿಯಾದ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಮಾಲ್ಡೀವ್ಸ್‌ಗೆ ಹಾರಲು ಸಜ್ಜಾಗಿದ್ದಾರೆ. ಕೊರೋನಾ ಕಾರಣದಿಂದ ಭಾರತ-ಆಸ್ಟ್ರೇಲಿಯಾ ನಡುವಣ ವಿಮಾನಯಾನವನ್ನು ರದ್ದುಗೊಳಿಸಲಾಗಿದ್ದು, ಹೀಗಾಗಿ ಐಪಿಎಲ್ನಲ್ಲಿ ಭಾಗವಹಿಸಿದ ಆಟಗಾರರು ತವರಿಗೆ ಮರಳಲು ತೊಡಕಾಗಿದೆ. ಹೀಗಾಗಿ ಐಪಿಎಲ್‌ನ ಬಯೋ ಬಬಲ್ನಲ್ಲಿದ್ದ 40 ಆಸ್ಟ್ರೇಲಿಯಾ ಸದಸ್ಯರು ಮಾಲ್ಡೀವ್ಸ್‌ಗೆ ತೆರಳಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅದರಂತೆ ಪ್ಯಾಟ್ ಕಮ್ಮಿನ್ಸ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್, ಸೈಮನ್ ಕ್ಯಾಟಿಚ್ ಸೇರಿದಂತೆ ಆಸ್ಟ್ರೇಲಿಯಾದವರು ಮಾಲ್ಡೀವ್ಸ್‌ಗೆ ತೆರಳಲಿದ್ದಾರೆ.
ಈಗಾಗಲೇ ಐಪಿಎಲ್ ಕಮೇಂಟೇಟರ್ ಮೈಕೆಲ್ ಸ್ಲೇಟರ್ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಇನ್ನುಳಿದವರು ಶೀಘ್ರದಲ್ಲೇ ಮಾಲ್ಡೀವ್ಸ್‌ಗೆ ತೆರಳಲಿದ್ದು, ಮೇ. 15 ರವರಗೆ ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಮೇ 15 ರ ಬಳಿಕ ಆಸ್ಟ್ರೇಲಿಯಾ ವಿಮಾನಯಾನ ಆರಂಭಗೊಳ್ಳುವ ನಿರೀಕ್ಷೆಯಿದ್ದು, ಹೀಗಾಗಿ ಅಲ್ಲಿಂದಲೇ ತವರಿಗೆ ತೆರಳಲು ಆಸೀಸ್ ಕ್ರಿಕೆಟಿಗರು ನಿರ್ಧರಿಸಿದ್ದಾರೆ.
ಇದಾಗ್ಯೂ ಆರ್ಸಿಬಿ ತಂಡದಲ್ಲಿದ್ದ ಆಸ್ಟ್ರೇಲಿಯಾ ಆಟಗಾರ ಡೇನಿಯಲ್ ಕ್ರಿಶ್ಚಿಯನ್ ಈ ಪ್ಲ್ಯಾನ್ನಿಂದ ಹೊರಗುಳಿಯಲಿದ್ದಾರೆ. ಕ್ರಿಶ್ಚಿಯನ್ ಬ್ರಿಟನ್‌ನಲ್ಲಿ ಆಡಲು ಸಹಿ ಹಾಕಿದ್ದು, ಹೀಗಾಗಿ ಅವರು ಭಾರತದಿಂದ ಇಂಗ್ಲೆಂಡ್ಗೆ ತೆರಳಲಿದ್ದಾರೆ. ಆದರೆ ಇದೀಗ ಬ್ರಿಟನ್ ತನ್ನ ದೇಶದವರನ್ನು ಮಾತ್ರ ಭಾರತದಿಂದ ಮಾತ್ರ ಕರೆಸಿಕೊಳ್ಳುತ್ತಿದೆ. ಹೀಗಾಗಿ ಡೇನಿಯಲ್ ಕ್ರಿಶ್ಚಿಯನ್ ದುಬೈಗೆ ತೆರಳಿ ಅಲ್ಲಿಂದ ಇಂಗ್ಲೆಂಡ್ನತ್ತ ಮುಖ ಮಾಡಲಿದ್ದಾರೆ ಎನ್ನಲಾಗಿದೆ.
ಆಸ್ಟ್ರೇಲಿಯಾ ಆಟಗಾರರ ಪ್ಲ್ಯಾನ್ ಬಗ್ಗೆ ಮಾತನಾಡಿರುವ ಪ್ಯಾಟ್ ಕಮಿನ್ಸ್, ದೇಶದ ಗಡಿಯನ್ನು ಮುಚ್ಚಲಿದೆ ಎಂದು ಅಂದುಕೊಂಡಿರಲಿಲ್ಲ. ಇದೀಗ ಮೇ 15 ರ ಬಳಿಕ ವಿಮಾನ ಸೌಲಭ್ಯ ದೊರೆಯುವ ಸಾಧ್ಯತೆಯಿದ್ದು, ಹೀಗಾಗಿ ನಾವು ಯೋಜಿಸಿದ ಯೋಜನೆಗೆ ಅನುಗುಣವಾಗಿ ನಾವು ಮನೆಗೆ ತಲುಪಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ