IPL ಆಡುತ್ತಿರುವ ಆಟಗಾರರಿಗೆ ಶಾಕ್ ನೀಡಿದ ಆಸ್ಟ್ರೇಲಿಯಾ ಸರ್ಕಾರ..!

ಸದ್ಯ ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ಲಿನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್​ವೆಲ್, ಪ್ಯಾಟ್ ಕಮಿನ್ಸ್, ಡೇವಿಡ್ ವಾರ್ನರ್ ಸೇರಿದಂತೆ ಹಲವು ಆಟಗಾರರು ಆಡುತ್ತಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ ಮುಂದುವರೆಯಲು ಬಯಸಿದ್ದಾರೆ.

IPL

IPL

 • Share this:
  ಕೊರೋನಾ ಆತಂಕದ ನಡುವೆಯೂ ಇಂಡಿಯನ್ ಪ್ರೀಮಿಯರ್ ಲೀಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಟೂರ್ನಿಯ ಮೊದಲಾರ್ಧ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇದರ ನಡುವೆ ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರುಡತ್ತಿರುವುದರಿಂದ ಆಟಗಾರರು ಕೂಡ ಆತಂಕಗೊಂಡಿದ್ದಾರೆ. ಅದರಂತೆ ಆಸ್ಟ್ರೇಲಿಯಾದ ಮೂವರು ಆಟಗಾರರು ಈಗಾಗಲೇ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ.

  ಆರ್​ಸಿಬಿ ತಂಡದಿಂದ ಕೇನ್ ರಿಚರ್ಡ್ಸನ್ ಹಾಗೂ ಆ್ಯಡಂ ಝಂಪಾ ಕೊರೋನಾ ಆತಂಕದ ಕಾರಣದೊಂದಿಗೆ ತವರಿಗೆ ತೆರಳಿದರೆ, ರಾಜಸ್ಥಾನ್ ರಾಯಲ್ಸ್​ ತಂಡದಿಂದ ಆ್ಯಂಡ್ರ್ಯೂ ಟೈ ಇದೇ ಕಾರಣದಿಂದ ಹೊರನಡೆದಿದ್ದಾರೆ. ಈಗಾಗಲೇ ಹಲವು ದೇಶಗಳು ಭಾರತದೊಂದಿಗಿನ ವಿಮಾನ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದು, ಹೀಗಾಗಿ ಮುಂದೆ ಇಲ್ಲೇ ಸಿಲುಕಿ ಹಾಕಿಕೊಳ್ಳುವ ಭಯ ಆಟಗಾರರನ್ನು ಕಾಡುತ್ತಿದೆ. ಹೀಗಾಗಿ ಆಸ್ಟ್ರೇಲಿಯಾ ಆಟಗಾರ ಮುಂಬೈ ಇಂಡಿಯನ್ಸ್ ಬ್ಯಾಟ್ಸ್​ಮನ್ ಕ್ರಿಸ್ ಲಿನ್ ಆಸೀಸ್ ಆಟಗಾರರಿಗೆ ವಿಮಾನ ವ್ಯವಸ್ಥೆ ಮಾಡಿಕೊಡುವಂತೆ ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಸಲ್ಲಿಸಿದ್ದರು.

  ಐಪಿಎಲ್ ಮುಗಿದ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ನಮಗಾಗಿ ವಿಶೇಷ ವಿಮಾನ ಸೌಲಭ್ಯ ಒದಗಿಸಿಕೊಡಬೇಕೆಂದು ಕ್ರಿಸ್ ಲಿನ್ ತಿಳಿಸಿದ್ದರು. ಇದಕ್ಕಾಗಿ ನಾವು ಪಡೆಯುತ್ತಿರುವ ಸಂಭಾವನೆಯ ಶೇ.10 ರಷ್ಟು ಹಣವನ್ನು ಪಾವತಿಸುವುದಾಗಿ ತಿಳಿಸಿದ್ದರು. ಆದರೆ ಆಸೀಸ್ ಆಟಗಾರನ ಈ ಮನವಿಯನ್ನು ಆಸ್ಟ್ರೇಲಿಯಾ ಸರ್ಕಾರ ಸಂಪೂರ್ಣ ನಿರಾಕರಿಸಿದೆ.

  ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಐಪಿಎಲ್ ಆಡುತ್ತಿರುವ ಆಸ್ಟ್ರೇಲಿಯಾ ಆಟಗಾರರು ತವರಿಗೆ ಮರಳಲು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಏಕೆಂದರೆ ಇದು ಆಸ್ಟ್ರೇಲಿಯಾ ತಂಡದ ಪ್ರವಾಸವಲ್ಲ. ಖಾಸಗಿ ಟೂರ್ನಿಯಲ್ಲಿ ನೀವು ಭಾಗವಹಿಸುತ್ತಿದ್ದೀರಿ. ಹೀಗಾಗಿ ನಿಮ್ಮ ಪ್ರಯಾಣದ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

  ಇದರೊಂದಿಗೆ ಕ್ರಿಕೆಟ್ ಆಸ್ಟ್ರೇಲಿಯಾದಿಂದ ವಿಮಾನ ವ್ಯವಸ್ಥೆಯ ನಿರೀಕ್ಷೆಯಲ್ಲಿದ್ದ ಕ್ರಿಸ್ ಲಿನ್ ಸೇರಿದಂತೆ ಎಲ್ಲಾ ಆಟಗಾರರಿಗೆ ನಿರಾಸೆಯಾಗಿದೆ. ಸದ್ಯ ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ಲಿನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್​ವೆಲ್, ಪ್ಯಾಟ್ ಕಮಿನ್ಸ್, ಡೇವಿಡ್ ವಾರ್ನರ್ ಸೇರಿದಂತೆ ಹಲವು ಆಟಗಾರರು ಆಡುತ್ತಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ ಮುಂದುವರೆಯಲು ಬಯಸಿದ್ದಾರೆ.
  Published by:zahir
  First published: