R Ashwin- ಆರ್ ಅಶ್ವಿನ್ ಯಾವುದೇ ತಂಡಕ್ಕೂ ಅಗತ್ಯ ಇಲ್ಲದ ಟಿ20 ಬೌಲರ್: ಸಂಜಯ್ ಮಂಜ್ರೇಕರ್

Sanjay Manjrekar on R Ashwin- ಆರ್ ಅಶ್ವಿನ್ ಬದಲಾಗುವುದಿಲ್ಲ. ಕಳೆದ ಐದಾರು ವರ್ಷದಿಂದ ಒಂದೇ ರೀತಿಯಲ್ಲಿ ಬೌಲಿಂಗ್ ಮಾಡುತ್ತಿದ್ಧಾರೆ. ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದ ಬೌಲರ್ ಅವರಲ್ಲ. ಅವರಂಥವರನ್ನ ನನ್ನ ತಂಡಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ಆರ್ ಅಶ್ವಿನ್.

ಆರ್ ಅಶ್ವಿನ್.

 • Share this:
  ದುಬೈ, ಅ. 14: ಭಾರತದ ಅತ್ಯುತ್ತಮ ಸ್ಪಿನ್ನರ್ ಮತ್ತು ಭಾರತದ ನಿರುಪಯುಕ್ತ ಸ್ಪಿನ್ನರ್ ಎಂದು ಏಕಕಾಲದಲ್ಲಿ ಕರೆಸಿಕೊಳ್ಳುವ ಆಟಗಾರ ಯಾರಾದರೂ ಇದ್ದರೆ ಅದು ಆರ್ ಅಶ್ವಿನ್. ತಮಿಳುನಾಡಿನ ಈ ಆಟಗಾರನ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುವ ಮಂದಿಯಂತೆ ಅಷ್ಟೇ ಸಂಖ್ಯೆಯಲ್ಲಿ ಇವರನ್ನ ಛೇಡಿಸುವವರು ಇದ್ದಾರೆ. ಈ ಸಾಲಿಗೆ ಸಂಜಯ್ ಮಂಜ್ರೇಕರ್ ಸೇರಿದ್ಧಾರೆ. ಟಿ20 ಕ್ರಿಕೆಟ್​ಗೆ ಆರ್ ಅಶ್ವಿನ್ ಲಾಯಕ್ ಅಲ್ಲ ಎಂದು ಸಂಜಯ್ ಮಂಜ್ರೇಕರ್ ನಿಷ್ಠುರವಾಗಿ ಹೇಳಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಆರ್ ಅಶ್ವಿನ್ ನಿರಾಸೆಯ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಮಂಜ್ರೇಕರ್ ಈ ಅಭಿಪ್ರಾಯಕ್ಕೆ ಬಂದಿದ್ದಾರೆ.

  ಚುಟುಕು ಕ್ರಿಕೆಟ್ ಕ್ಷೇತ್ರದಲ್ಲಿ ಆರ್ ಅಶ್ವಿನ್ ಬಗ್ಗೆ ಚರ್ಚಿಸಿ ಸಮಯ ವ್ಯರ್ಥ ಮಾಡಲಾಗುತ್ತಿದೆ. ನನ್ನ ಟಿ20 ತಂಡದಲ್ಲಿ ಆರ್ ಅಶ್ವಿನ್ ಅವರಂಥವರಿಗೆ ಸ್ಥಾನವೇ ಇಲ್ಲ. ಟಿ20 ಬೌಲರ್ ಆಗಿ ಅಶ್ವಿನ್ ಯಾವ ತಂಡಕ್ಕೂ ದೊಡ್ಡ ಪ್ರಯೋಜನ ತರುವುದಿಲ್ಲ. ಅಶ್ವಿನ್ ಬದಲಾಗುತ್ತಾರೆ ಎಂದು ನೀವು ಅಂದುಕೊಂಡಿದ್ದರೆ ಅದು ಸುಳ್ಳು. ಯಾಕೆಂದರೆ ಕಳೆದ ಐದಾರು ವರ್ಷಗಳಲ್ಲಿ ಆರ್ ಅಶ್ವಿನ್ ಇದ್ದಂತೆಯೇ ಇದ್ದಾರೆ ಎಂದು ಮಾಜಿ ಟೆಸ್ಟ್ ಬ್ಯಾಟರ್ ಆದ ಸಂಜಯ್ ಮಂಜ್ರೇಕರ್ ಟೀಕಿಸಿದ್ದಾರೆ.

  ಅಶ್ವಿನ್ ಟೆಸ್ಟ್ ಕ್ರಿಕೆಟ್​ಗೆ ಸಲ್ಲುವ ಬೌಲರ್:

  “ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್​ನಲ್ಲಿ ಇರಲಿ ಎಂದು ಅಭಿಲಾಷೆ ಪಡುವುದು ಸರಿ. ಟೆಸ್ಟ್ ಪಂದ್ಯಗಳಲ್ಲಿ ಆರ್ ಅಶ್ವಿನ್ ಒಳ್ಳೆಯ ಆಟಗಾರ. ಇಂಗ್ಲೆಂಡ್ ಸರಣಿಯಲ್ಲಿ ಅವರು ಒಂದೂ ಟೆಸ್ಟ್ ಪಂದ್ಯ ಆಡದೇ ಹೋಗಿದ್ದು ದುರ್ದೈವ. ಆದರೆ, ಐಪಿಎಲ್ ಮತ್ತು ಟಿ20 ಕ್ರಿಕೆಟ್ ಬಂದಾಗ ಅಶ್ವಿನ್ ಬಗ್ಗೆ ಮಾತನಾಡುವುದು ವೃಥಾ ಕಾಲಹರಣ ಮಾಡಿದಂತೆ ಅಂತ ಅನಿಸುತ್ತದೆ” ಎಂದು ಮಂಜ್ರೇಕರ್ ಹೇಳಿದ್ದನ್ನ ಉಲ್ಲೇಖಿಸಿ ಇಎಸ್​ಪಿಎನ್ ಕ್ರಿಕ್ ಇನ್ಫೋ ವೆಬ್​ಸೈಟ್​ನಲ್ಲಿ ವರದಿ ಪ್ರಕಟವಾಗಿದೆ.

  ಅಶ್ವಿನ್ ಬದಲಾಗಲ್ಲ:

  “ಕಳೆದ ಐದು ವರ್ಷದಲ್ಲಿ ಅಶ್ವಿನ್ ಒಂದೇ ರೀತಿ ಬೌಲಿಂಗ್ ಮಾಡುತ್ತಾ ಬಂದಿದ್ದಾರೆ. ನನ್ನ ತಂಡದಲ್ಲಿ ಅಶ್ವಿನ್ ಅವರಂಥವರನ್ನ ಯಾವತ್ತೂ ಸೇರಿಸಿಕೊಳ್ಳುವುದಿಲ್ಲ. ಯಾಕೆಂದರೆ ಟರ್ನಿಂಗ್ ಪಿಚ್ ಸಿಕ್ಕಿದಾಗ ನಾನು ವರುಣ್ ಚಕ್ರವರ್ತಿ ಅಥವಾ ಸುನೀಲ್ ನರೈನ್ ಅಥವಾ ಯುಜವೇಂದ್ರ ಚಹಲ್ ಅವರಂಥ ಬೌಲರ್​ಗಳ ಕಡೆ ನೋಡುತ್ತೇನೆ. ಈ ಬೌಲರ್​ಗಳಿಗೆ ಈ ಟರ್ನಿಂಗ್ ಪಿಚ್​​ಗಳಲ್ಲಿ ಹೇಗೆ ಬೌಲ್ ಮಾಡಬೇಕು, ಹೇಗೆ ವಿಕೆಟ್ ತೆಗೆಯಬೇಕು ಅಂತ ಗೊತ್ತಿದೆ” ಎಂದು ಮಂಜ್ರೇಕರ್ ಕಡ್ಡಿತುಂಡು ಮಾಡಿದಂತೆ ಅಶ್ವಿನ್ ಬೌಲಿಂಗ್ ಅನ್ನ ಹೀಗಳೆದಿದ್ದಾರೆ.

  ಇದನ್ನೂ ಓದಿ: Indian Cricket- ವಿಶ್ವಕಪ್ ನಂತರದ ಸರಣಿಯಲ್ಲಿ ಭಾರತ ತಂಡದಲ್ಲಿ ಇರಲ್ಲ ಕೊಹ್ಲಿ, ರೋಹಿತ್, ಬುಮ್ರಾ

  ಐಪಿಎಲ್ 2021ನಲ್ಲಿ ಅಶ್ವಿನ್ ನಿರಾಶೆ:

  ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್​ಗೆ ಹೆಚ್ಚು ಸೀಮಿತವಾಗಿರುವ ಬೌಲಿಂಗ್ ಆಲ್​ರೌಂಡರ್. ಆದರೆ, ಕಳೆದ ಸೀಸನ್​​ನ ಐಪಿಎಲ್​ನಲ್ಲಿ ಅವರು ತುಸು ಉತ್ತಮ ಪ್ರದರ್ಶನ ನೀಡಿದ್ದರು. ಇದೇ ಕಾರಣಕ್ಕೆ ಅವರನ್ನ ಟಿ20 ವಿಶ್ವಕಪ್​ನ ಟೀಮ್ ಇಂಡಿಯಾಗೆ ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರನ್ನ ಆಡಿಸಿರಲಿಲ್ಲ ಬಳಿಕ ಘೋಷಣೆಯಾದ ವಿಶ್ವಕಪ್ ತಂಡದಲ್ಲಿ ಅವರಿಗೆ ಸ್ಥಾನ ಕೊಡಲಾಗಿತ್ತು. ಅದರ ಬೆನ್ನಲ್ಲೇ ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಆರ್ ಅಶ್ವಿನ್ ತಮ್ಮ ಛಾಪು ಮೂಡಿಸಲು ವಿಫಲರಾಗಿದ್ದಾರೆ.

  ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಆರ್ ಅಶ್ವಿನ್ ನಿರ್ಣಾಯಕ ಕೊನೆಯ ಓವರ್ ಬೌಲ್ ಮಾಡಿದ್ದರು. ಆ ಓವರ್​ನಲ್ಲಿ ಅವರು ಎರಡು ವಿಕೆಟ್ ಪಡೆದು ಡೆಲ್ಲಿ ತಂಡವನ್ನ ಗೆಲುವಿನ ಹೊಸ್ತಿಲಿಗೆ ತಂದೊಯ್ದಿದ್ದರಾದರೂ ಐದನೇ ಎಸೆತವನ್ನ ರಾಹುಲ್ ತ್ರಿಪಾಠಿ ಸಿಕ್ಸರ್ ಎತ್ತಿದ್ದರಿಂದ ಕೆಕೆಆರ್ ಗೆದ್ದು ಫೈನಲ್ ತಲುಪಿತು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿಹಿಡಿಯುವ ಕನಸು ನುಚ್ಚುನೂರಾಯಿತು. ಈ ಪಂದ್ಯ ಹೊರತುಪಡಿಸಿ ಯುಎಇಯಲ್ಲಿ ನಡೆದ ಇತರ ಪಂದ್ಯಗಳಲ್ಲಿ ಅಶ್ವಿನ್ ಬೌಲಿಂಗ್ ಸಾಧನೆ ಅಷ್ಟಕಷ್ಟೇ.
  Published by:Vijayasarthy SN
  First published: