ದುಬೈ: ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರನ್ನ ಮುಂಬೈ ಇಂಡಿಯನ್ಸ್ ತಂಡ 20 ಲಕ್ಷದ ಮೂಲ ಬೆಲೆ ಕೊಟ್ಟು ಖರೀದಿ ಮಾಡಿದ ಬಳಿಕ ಅವರ ಹೆಸರೇ ಕೇಳದಂತಾಗಿದೆ. ಯಾವ ಪಂದ್ಯದಲ್ಲೂ ಅರ್ಜುನ್ ಅವರಿಗೆ ಅವಕಾಶ ಸಿಕ್ಕಿಲ್ಲ. ಎಡಗೈ ವೇಗದ ಬೌಲರ್ ಹಾಗೂ ಆಲ್ರೌಂಡರ್ ಆಗಿರುವ ಅರ್ಜುನ್ ತೆಂಡೂಲ್ಕರ್ ಅವರ ಬದಲು ಇದೀಗ ದೆಹಲಿಯ ವೇಗದ ಬೌಲರ್ ಸಿಮರ್ಜೀತ್ ಸಿಂಗ್ ಅವರನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯವರು ಹೇಳಿಕೆ ಬಿಡುಗಡೆ ಮಾಡಿ ಈ ವಿಚಾರವನ್ನು ತಿಳಿಸಿದ್ಧಾರೆ. ಆ ಹೇಳಿಕೆ ಪ್ರಕಾರ, ಅರ್ಜುನ್ ತೆಂಡೂಲ್ಕರ್ ಅವರಿಗೆ ಗಾಯದ ಸಮಸ್ಯೆ ಕಾರಣ ಅವರ ಬದಲು ಸಿಮರ್ಜೀತ್ ಸಿಂಗ್ ಅವರಿಗೆ ಅವಕಾಶ ಕೊಡಲಾಗಿದೆ ಎನ್ನಲಾಗಿದೆ.
ಸಿಮರ್ಜಿತ್ ಸಿಂಗ್ ಅವರು ಈಗಾಗಲೇ ಭಾರತದಿಂದ ಯುಎಇಗೆ ಆಗಮಿಸಿ ಇಲ್ಲಿನ ಐಪಿಎಲ್ ನಿಯಮಾವಳಿಯಂತೆ ಕ್ವಾರಂಟೈನ್ ಅವಧಿಯಲ್ಲಿದ್ದು ತರಬೇತಿಯನ್ನೂ ಆರಂಭಿಸಿದ್ಧಾರೆ. ಮುಂಬೈಗೆ ಉಳಿದಿರುವ ಮೂರು ಪಂದ್ಯಗಳಲ್ಲಿ ಯಾವುದಾದರೂ ಒಂದು ಪಂದ್ಯದಲ್ಲಿ ಸಿಮರ್ಜಿತ್ ಸಿಂಗ್ ಅವರಿಗೆ ಅವಕಾಶ ಸಿಕ್ಕರೂ ಸಿಗಬಹುದು.
ಇನ್ನು, ಅರ್ಜುನ್ ತೆಂಡೂಲ್ಕರ್ ಅವರಿಗೆ ಯಾವ ರೀತಿಯ ಗಾಯದ ಸಮಸ್ಯೆ ಇದೆ ಎಂಬುದು ಸ್ಪಷ್ಟವಾಗಿಲ್ಲ. ಅವರು ಭಾರತದಲ್ಲಿ ಐಪಿಎಲ್ ಪಂದ್ಯಗಳು ನಡೆದಾಗ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ಸ್ಗೆ ನೆಟ್ನಲ್ಲಿ ಬೌಲಿಂಗ್ ಮಾಡಿ ಸಹಾಯವಾಗಿದ್ದರು. ಅದು ಬಿಟ್ಟರೆ ಅವರು ಐಪಿಎಲ್ನಲ್ಲಿ ಆಡಲೇ ಇಲ್ಲ. ಈ ವರ್ಷದ ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅವರು ಮುಂಬೈ ಟಿ20 ತಂಡದಲ್ಲಿ ಆಡಿದ್ದಾರೆ. ಅದು ಬಿಟ್ಟರೆ ಅರ್ಜುನ್ ತೆಂಡೂಲ್ಕರ್ ಅವರಿಗೆ ಸದ್ಯಕ್ಕೆ ಹೆಚ್ಚಿನ ಎಕ್ಸ್ಪೋಷರ್ ಸಿಕ್ಕಿಲ್ಲ.
🚨 Squad Update 🚨
Right-arm medium pacer Simarjeet Singh will be replacing Arjun Tendulkar for the remainder of #IPL2021
📰 Read all the details 👇#OneFamily #MumbaiIndians https://t.co/AcfBJsYf2w
— Mumbai Indians (@mipaltan) September 29, 2021
ಇನ್ನು, ಮುಂಬೈ ಇಂಡಿಯನ್ಸ್ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್ ಬದಲು ಸ್ಥಾನ ಪಡೆದಿರುವ 23 ವರ್ಷದ ಬೌಲರ್ ಸಿಮರ್ಜಿತ್ ಸಿಂಗ್ ಅವರಿಗೂ ಇದು ಚೊಚ್ಚಲ ಐಪಿಎಲ್ ಆಗಿದೆ. 2018ರಲ್ಲಿ ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಸಿಮರ್ಜಿತ್ ಸಿಂಗ್ ಅವರು ಇದೂವರೆಗೂ 10 ಪ್ರಥಮ ದರ್ಜೆ ಕ್ರಿಕೆಟ್, 19 ಲಿಸ್ಟ್ ಎ ಕ್ರಿಕೆಟ್ ಹಾಗೂ 15 ಟಿ20 ಕ್ರಿಕೆಟ್ ಪಂದ್ಯಗಳನ್ನ ದೆಹಲಿ ತಂಡದಲ್ಲಿ ಆಡಿದ್ದಾರೆ. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 37 ವಿಕೆಟ್ ಪಡೆದಿರುವ ಅವರು ಒಮ್ಮೆ ಒಂದು ಪಂದ್ಯದಲ್ಲಿ ಐದು ವಿಕೆಟ್ ಪಡೆದರೆ ಐದು ಬಾರಿ ನಾಲ್ಕು ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ: RCB vs RR- ರಾಯಲ್ಸ್ ವಿರುದ್ಧ ಆರ್ಸಿಬಿಗೆ 7 ವಿಕೆಟ್ ಭರ್ಜರಿ ಜಯ; ಮ್ಯಾಕ್ಸ್ವೆಲ್, ಭರತ್ ಅಮೋಘ ಬ್ಯಾಟಿಂಗ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ನಡೆದ ಹೊತ್ತಲ್ಲೇ ಶ್ರೀಲಂಕಾ ಪ್ರವಾಸ ಹೋಗಿದ್ದ ಭಾರತ ತಂಡದಲ್ಲಿ ಸಿಮರ್ಜಿತ್ ಸಿಂಗ್ ನೆಟ್ ಬೌಲರ್ ಆಗಿಯೂ ಕೆಲಸ ಮಾಡಿದ್ದರು. ಆ ಪ್ರವಾಸದಲ್ಲಿ ಭಾರತ ತಂಡದೊಂದಿಗೆ ಇದ್ದ ಆರು ನೆಟ್ ಬೌಲರ್ಗಳಲ್ಲಿ ಸಿಮರ್ಜಿತ್ ಕೂಡ ಒಬ್ಬರು. ಲಂಕಾ ಪ್ರವಾಸದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಮರ್ಜಿತ್ ಅವರಿಗೆ ಸಿಕ್ಕದೇ ಹೋದರೂ ಭುವನೇಶ್ವರ್ ಕುಮಾರ್, ದೀಪಕ್ ಚಾಹರ್ ಮೊದಲಾದ ವೇಗದ ಬೌಲರ್ಗಳೊಂದಿಗೆ ಕೆಲಸ ಮಾಡುವ ಅವಕಾಶವಂತೂ ಅವರಿಗೆ ಸಿಕ್ಕಿತ್ತು. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈಗ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಆಡುತ್ತಿರುವುದು ಅವರಿಗೆ ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಪೊಲಾರ್ಡ್ ಮೊದಲಾದ ಬೌಲರ್ಗಳ ಅನುಭವ ಹಂಚಿಕೊಳ್ಳುವ ಅವಕಾಶವೂ ಸಿಕ್ಕಿದೆ.
ಸದ್ಯ ಮುಂಬೈ ಇಂಡಿಯನ್ಸ್ ತಂಡ ತುಸು ಸಂಕಷ್ಟದ ಸ್ಥಿತಿಯಲ್ಲಿದೆ. ಪ್ಲೇ ಆಫ್ ಪ್ರವೇಶ ಇನ್ನೂ ಖಚಿತವಾಗಿಲ್ಲ. 10 ಅಂಕಗಳನ್ನ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ ಈಗ ಉಳಿದಿರುವ ಮೂರು ಪಂದ್ಯಗಳಲ್ಲಿ ಎರಡನ್ನಾದರೂ ಗೆಲ್ಲುವ ಅಗತ್ಯತೆಯಲ್ಲಿ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ