RCB Captain- ಮ್ಯಾಕ್ಸ್​ವೆಲ್ RCB ಕ್ಯಾಪ್ಟನ್? ಬೇಡವೇ ಬೇಡ ಎನ್ನುತ್ತಾರೆ ಇರ್ಫಾನ್ ಪಠಾಣ್; ಕಾರಣ ಇದು

Glenn Maxwell as RCB captain?: ಆಸ್ಟ್ರೇಲಿಯಾದ ಆಲ್​ರೌಂಡರ್ ಆಗಿರುವ ಗ್ಲೆನ್ ಮ್ಯಾಕ್ಸ್​​ವೆಲ್ ಅವರಿಗೆ ಆರ್​ಸಿಬಿ ತಂಡದ ನಾಯಕತ್ವ ವಹಿಸಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ನಿರ್ಧಾರ ತೆಗೆದುಕೊಂಡರೆ ತಪ್ಪಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳುತ್ತಾರೆ.

ಗ್ಲೆನ್ ಮ್ಯಾಕ್ಸ್​ವೆಲ್

ಗ್ಲೆನ್ ಮ್ಯಾಕ್ಸ್​ವೆಲ್

 • Share this:
  ನವದೆಹಲಿ, ಡಿ. 01: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ (Royal Challengers Bangalore) ನಾಯಕತ್ವ ಸ್ಥಾನವನ್ನು ತ್ಯಜಿಸಿದ್ದಾಗಿದೆ. ಆದರೆ, ಆರ್​ಸಿಬಿ ತಂಡ ಹೊಸ ನಾಯಕನನ್ನ ಹುಡುಕಬೇಕಿದೆ. ನಿನ್ನೆ ಆರ್​ಸಿಬಿ ತಂಡ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಮೊಹಮ್ಮದ್ ಸಿರಾಜ್ ಈ ಮೂವರು ಆಟಗಾರರನ್ನ ಉಳಿಸಿಕೊಂಡು ಉಳಿದವರನ್ನ ರಿಲೀಸ್ ಮಾಡಿದೆ. ಆದರೆ, ವಿರಾಟ್ ಕೊಹ್ಲಿ ನಾಯಕತ್ವ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆಗೆ ಉತ್ತರದ ಸುಳಿವು ಸಿಕ್ಕಿಲ್ಲ. ಆರ್​ಸಿಬಿ ರೀಟೈನ್ ಮಾಡಿಕೊಂಡಿರುವ ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನೇ ತಂಡದ ನಾಯಕರನ್ನಾಗಿಸಬಹುದು ಎಂಬ ಬಲವಾದ ಅನಿಸಿಕೆಗಳು ವಿವಿಧೆಡೆಗಳಿಂದ ಬರುತ್ತಿವೆ. ಆದರೆ, ಭಾರತ ತಂಡದ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಪ್ರಕಾರ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನ ಆರ್​ಸಿಬಿ ನಾಯಕರನ್ನಾಗಿ ಮಾಡುವ ಸಾಧ್ಯತೆ ಇಲ್ಲ. ಹಾಗೆ ಮಾಡಿದರೆ ಅದು ತಪ್ಪು ನಿರ್ಧಾರ ಆಗಬಹುದು ಎಂದು ಅಭಿಪ್ರಾಯಪಟ್ಟಿದ್ಧಾರೆ.

  ಮ್ಯಾಕ್ಸ್​ವೆಲ್ ಯಾಕೆ ನಾಯಕನಾಗಬಾರದು?

  ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಇರ್ಫಾನ್ ಪಠಾಣ್, ಆರ್​ಸಿಬಿ ತಂಡದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ನಾಯಕತ್ವದ ಜವಾಬ್ದಾರಿಯ ಹೊರೆ ಇಲ್ಲದೇ ಆಡಿದರೆ ಲಾಭ ಹೆಚ್ಚು ಎಂದಿದ್ದಾರೆ.

  ಮ್ಯಾಕ್ಸ್​ವೆಲ್ ಅವರಿಗೆ ಕ್ಯಾಪ್ಟನ್ಸಿ ಹೊರೆ ಕೊಡಬಾರದು. ಬೆಂಗಳೂರು ಫ್ರಾಂಚೈಸಿಗೂ ಇದು ಅರಿವಿರುತ್ತದೆ. ಅಷ್ಟು ರಿಸ್ಕ್ ತೆಗೆದುಕೊಳ್ಳುವುದಿಲ್ಲ ಅನಿಸುತ್ತದೆ. ಇನ್ನು, ವಿರಾಟ್ ಕೊಹ್ಲಿ ನಾಯಕನಾಗುವುದಿಲ್ಲ ಎಂದಿದ್ದಾರೆ. ಹೀಗಾಗಿ, ಆರ್​ಸಿಬಿ ತಂಡ ಐಪಿಎಲ್ ಹರಾಜಿನಲ್ಲಿ ಹೊಸ ನಾಯಕನನ್ನ ಆರಿಸಿಕೊಳ್ಳಬಹುದು ಎಂದು ಇರ್ಫಾನ್ ಹೇಳಿದ್ದಾರೆ.

  ಇದನ್ನೂ ಓದಿ: IPL Auction- ಐಪಿಎಲ್ ಹರಾಜಿನಲ್ಲಿ ಈ ಆಟಗಾರರಿಗೆ ಇದೆ ಭರ್ಜರಿ ಡಿಮ್ಯಾಂಡ್

  ಗ್ಲೆನ್ ಮ್ಯಾಕ್ಸ್​ವೆಲ್ ಅವರು ಈ ಹಿಂದೆ ಐಪಿಎಲ್ ತಂಡವೊಂದಕ್ಕೆ ನಾಯಕರಾಗಿದ್ದರು. 2017ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಅವರು ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಹೀಗಾಗಿ, ಇರ್ಫಾನ್ ಪಠಾಣ್ ಹೇಳಿದಂತೆ ಆರ್​ಸಿಬಿಯ ನಾಯಕತ್ವವನ್ನು ಮ್ಯಾಕ್ಸ್​​ವೆಲ್​ಗೆ ವಹಿಸಿದರೆ ತಂಡಕ್ಕೂ ಕಷ್ಟವಾಗಬಹುದು, ಮ್ಯಾಕ್ಸ್​ವೆಲ್​ಗೂ ಕಷ್ಟವಾಗಬಹುದು.

  ಬ್ಯಾಟಿಂಗ್ ಶಕ್ತಿ ಮ್ಯಾಕ್ಸ್​ವೆಲ್:

  ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡ ಭಾರಿ ಮೊತ್ತ ಕೊಟ್ಟು ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನ ಖರೀದಿಸಿತ್ತು. ಕೊಟ್ಟ ಹಣಕ್ಕೆ ಮೋಸ ಆಗಿಲ್ಲ. ಎಬಿ ಡೀವಿಲಿಯರ್ಸ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಅದಕ್ಕೆ ಬದಲಾಗಿ ಆರ್​ಸಿಬಿಯ ಬ್ಯಾಟಿಂಗ್​ಗೆ ಬೆನ್ನೆಲುಬಾಗಿ ನಿಂತವರು ಮ್ಯಾಕ್ಸ್​​ವೆಲ್. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿಯೂ ಅವರು 15 ಪಂದ್ಯಗಳಿಂದ 513 ರನ್ ಕಲೆಹಾಕಿದ್ದಾರೆ. ಹೀಗಾಗಿ, ಅವರು ಬ್ಯಾಟಿಂಗ್ ಮತ್ತು ಆಲ್​ರೌಂಡರ್ ಶಕ್ತಿಯಾಗಿ ಮಾತ್ರ ಆರ್​ಸಿಬಿ ತಂಡದಲ್ಲಿ ಆಡಿದರೆ ಅನುಕೂಲ ಆಗಬಹುದು.

  ಇದನ್ನೂ ಓದಿ: Pro Kabaddi- ಬೆಂಗಳೂರಿನ ಶೆರಟಾನ್ ಹೋಟೆಲ್​ನಲ್ಲಿ ಪ್ರೋಕಬಡ್ಡಿ ಪಂದ್ಯಾವಳಿ; ಇಲ್ಲಿದೆ ವೇಳಾಪಟ್ಟಿ

  ನಿರ್ಗಮಿತ ನಾಯಕ ವಿರಾಟ್ ಕೊಹ್ಲಿ ಸ್ಥಾನವನ್ನು ಯಾರು ತುಂಬಬಹುದು ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಐಪಿಎಲ್ ಶುರುವಾದ 2008ರಿಂದಲೂ ವಿರಾಟ್ ಕೊಹ್ಲಿ ಅವರು ಆರ್​ಸಿಬಿ ತಂಡದಲ್ಲಿದ್ದಾರೆ. 2013ರಿಂದ ತಂಡದ ನಾಯಕರಾಗಿದ್ದಾರೆ. ಆದರೆ, ಅವರ ನಾಯಕತ್ವದಲ್ಲಿ ಬೆಂಗಳೂರು ತಂಡಕ್ಕೆ ಐಪಿಎಲ್ ಚಾಂಪಿಯನ್ ಆಗುವ ಭಾಗ್ಯ ಸಿಕ್ಕಿಲ್ಲ. ಇದೊಂದು ಕೊರತೆಯ ಮಧ್ಯೆ ಅವರು ಕ್ಯಾಪ್ಟನ್ಸಿಗೆ ವಿದಾಯ ಹೇಳಿದ್ಧಾರೆ.

  ಯಾರಾಗುತ್ತಾರೆ ಕ್ಯಾಪ್ಟನ್?

  ಈಗ ಐಪಿಎಲ್ ಹರಾಜಿನಲ್ಲಿ ಕ್ಯಾಪ್ಟನ್ಸಿಯ ಸಾಮರ್ಥ್ಯ ಇರುವ ಆಟಗಾರರು ಹಲವರಿದ್ದಾರೆ. ಡೇವಿಡ್ ವಾರ್ನರ್, ಇಯಾನ್ ಮಾರ್ಗನ್, ಕೆ ಎಲ್ ರಾಹುಲ್, ಮನೀಶ್ ಪಾಂಡೆ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸ್ಟೀವ್ ಸ್ಮಿತ್ ಮೊದಲಾದವರಿದ್ದಾರೆ. ಇವರಲ್ಲಿ ಆರ್​ಸಿಬಿ ತಂಡಕ್ಕೆ ನಾಯಕರಾಗಿ ಹೊಂದಾಣಿಕೆ ಆಗಬಲ್ಲ ಆಟಗಾರ ಯಾರು ಎಂಬುದು ಪ್ರಶ್ನೆ.
  Published by:Vijayasarthy SN
  First published: