news18-kannada Updated:November 2, 2020, 4:34 PM IST
Virat Kohli
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಪ್ರವೇಶಿಸಲಿದೆಯಾ ಎಂಬುದು ನಿರ್ಧಾರವಾಗಲಿದೆ. ಒಂದು ವೇಳೆ ಕೊಹ್ಲಿ ಪಡೆ ಡೆಲ್ಲಿ ವಿರುದ್ಧ ಸೋತರೆ, ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಕೊನೆಯ ಪಂದ್ಯದ ಫಲಿತಾಂಶವನ್ನು ಆರ್ಸಿಬಿ ಅವಲಂಭಿಸಬೇಕಾಗುತ್ತದೆ. ಹೀಗಾಗಿ ಇಂದಿನ ಪಂದ್ಯವು ಉಭಯ ತಂಡಗಳಿಗೂ ಮಾಡು ಇಲ್ಲವೆ ಮಡಿ ಎನ್ನಬಹುದು.
ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಲಿದೆ. ಹೀಗಾಗಿ ಸೋಲಿನ ಸುಳಿಯಿಂದ ಹೊರಬಂದು ಪ್ರಶಸ್ತಿ ಸುತ್ತಿಗೆ ಅಣಿಯಾಗಲು ಇದು ಕೊಹ್ಲಿ ಪಡೆಗೆ ಕೊನೆಯ ಅವಕಾಶ. ಆದರೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಇಂತಹದೊಂದು ನಿರ್ಣಾಯಕ ಪಂದ್ಯವನ್ನು ಆಡುತ್ತಿರುವುದು ತಮ್ಮ ತವರು ತಂಡದ ವಿರುದ್ಧ ಎಂಬುದು ವಿಶೇಷ. ದೆಹಲಿ ಮೂಲದ ಕೊಹ್ಲಿ ಇಂದು ತವರು ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಬೇಕಿದೆ.
ತಮ್ಮ ತವರಿನ ತಂಡದ ವಿರುದ್ಧವೇ ನಿರ್ಣಾಯಕ ಪಂದ್ಯವಾಡುತ್ತಿರುವ ಬಗ್ಗೆ ಖುದ್ದು ಕೊಹ್ಲಿ ಕೂಡ ಮಾತನಾಡಿದ್ದಾರೆ. "ಇದು ಸ್ಪರ್ಧಾತ್ಮಕ ಪಂದ್ಯಾವಳಿ. ಇಲ್ಲಿ ಪಂದ್ಯವನ್ನು ಅಥವಾ ತಂಡಗಳನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮೊದಲ ಎರಡು ಸ್ಥಾನಗಳಲ್ಲಿ ಉಳಿದುಕೊಳ್ಳಲು ನಾವು ಕೊನೆಯ ಪಂದ್ಯವನ್ನು ಗೆಲ್ಲಬೇಕಾಗಿದೆ" ಎಂದು ಕೊಹ್ಲಿ ತಿಳಿಸಿದರು.
ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಮೂಲಕ ನಾವು ಮುಂದಿನ ಹಂತಕ್ಕೆ ಪ್ರವೇಶಿಸುತ್ತೇವೆ. ಐಪಿಎಲ್ ವಿಷಯ ಬಂದಾಗ ನಾನು ಯಾವತ್ತಿದ್ದರೂ ಬೆಂಗಳೂರು ಹುಡುಗ ಎಂದು ಭಾವಿಸಿ ಆಡುತ್ತೇನೆ. ಒಮ್ಮೆಯೂ ದೆಹಲಿ ಕಡೆ ಮುಖ ಮಾಡಿಲ್ಲ ಎಂದು ವಿರಾಟ್ ಕೊಹ್ಲಿ ತಿಳಿಸಿದರು.
2008 ರ ಚೊಚ್ಚಲ ಐಪಿಎಲ್ನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಟ್ ಕೊಹ್ಲಿ, 2013 ರಿಂದ ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ 7 ಸೀಸನ್ಗಳಿಂದಲೂ ತಂಡದ ಸಾರಥ್ಯವಹಿಸಿದರೂ ಒಂದು ಬಾರಿ ಕೂಡ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ. ಈ ಬಾರಿ ಆರ್ಸಿಬಿಗೆ ಪ್ರಶಸ್ತಿ ಗೆಲ್ಲಲು ಉತ್ತಮ ಅವಕಾಶವಿದ್ದು, ಈ ಕನಸು ಈಡೇರುತ್ತಾ ಕಾದು ನೋಡಬೇಕಿದೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ
Published by:
zahir
First published:
November 2, 2020, 4:34 PM IST