ದುಬೈ; ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂದು ಖ್ಯಾತಿ ಪಡೆದಿರುವ ಐಪಿಎಲ್-2021 (IPL 2021) ಕೊರೋನಾ (CoronaVirus) ಕಾಟದ ನಡುವೆ ಕೊನೆಗೂ ಮುಕ್ತಾಯವಾಗಿದೆ. ಕೆಕೆಆರ್ ತಂಡವನ್ನು ಮಣಿಸುವ ಮೂಲಕ ಸಿಎಸ್ಕ್ (CSK) 4ನೇ ಬಾರಿ ಟ್ರೋಫಿಗೆ ಮುತ್ತಿಟ್ಟಿದೆ. ಆದರೆ, ಈ ಪಂದ್ಯ ಆರಂಭಕ್ಕೂ ಮುನ್ನವೇ ಸನ್ರೈಸರ್ಸ್ ಹೈದ್ರಾಬಾದ್ (SRH) ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದ ಪೋಟೋ ಇದೀಗ ಭಾರೀ ಕುತೂಹಲ ಮೂಡಿಸಿದೆ. ಡೇವಿಡ್ ವಾರ್ನರ್ (David Warner) ಮತ್ತು ಆತನ ಮಗಳು ಸಿಎಸ್ಕೆ ಜರ್ಸಿ ಧರಿಸಿರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಳ್ಳುವ ಮೂಲಕ ತಮ್ಮ ಬೆಂಬಲ ಯಾರಿಗೆ? ಎಂಬುದನ್ನು ವಾರ್ನರ್ ಬಹಿರಂಗವಾಗಿ ಘೋಷಿಸಿದ್ದರು. ಆದರೆ, ಸಿಎಸ್ಕೆ ಬೆಂಬಲ ಘೋಷಿಸಿರುವ ಆ ಪೋಟೋ ಇದೀಗ ಹಲವಾರು ಚರ್ಚೆಗೆ ಕಾರಣವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಲಿದ್ದಾರಾ ವಾರ್ನರ್?
ಕಳಪೆ ಫಾರ್ಮ್ನಲ್ಲಿದ್ದ ಡೇವಿಡ್ ವಾರ್ನರ್ ಅವರನ್ನು ಸನ್ರೈಸರ್ಸ್ ಹೈದ್ರಾಬಾದ್ ತಂಡ ಇತ್ತೀಚೆಗೆ ನಾಯಕತ್ವದಿಂದ ಕೆಳಗೆ ಇಳಿಸಿತ್ತು. ಅಲ್ಲದೆ, ಅವರೊಂದಿಗಿನ ಒಪ್ಪಂದವನ್ನೂ ಮುರಿದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂಬರುವ ಮೆಗಾ ಹರಾಜಿನಲ್ಲಿ ಪ್ರತಿ ತಂಡವು ಗರಿಷ್ಠ ಎರಡು ಆಟಗಾರರನ್ನು ಮಾತ್ರ ಉಳಿಸಿಕೊಳ್ಳು ಅವಕಾಶವನ್ನು ಪಡೆಯುತ್ತದೆ. ಹೀಗಾಗಿ ಸನ್ರೈಸರ್ಸ್ ತಂಡ ವಾರ್ನರ್ ಅವರನ್ನು ಕೈಬಿಡುವ ಎಲ್ಲಾ ಸಾಧ್ಯತೆಗಳೂ ಇದೆ ಎನ್ನಲಾಗಿದೆ.
![]()
ಸಿಎಸ್ಕೆ ಜರ್ಸಿಯಲ್ಲಿ ಡೇವಡ್ ವಾರ್ನರ್.
ಈ ನಡುವೆ ಮುಂದಿನ ವರ್ಷ ಐಪಿಎಲ್ನಲ್ಲಿ ಇನ್ನೂ ಎರಡು ತಂಡಗಳು ಹೆಚ್ಚಾಗಿ ಭಾಗವಹಿಸಲಿದ್ದು, ಆ ತಂಡಗಳ ನಾಯಕತ್ವ ವಹಿಸಲು ನಾನು ಉತ್ಸುಕನಾಗಿದ್ದೇನೆ ಎಂದು ಇತ್ತೀಚೆಗೆ ಸ್ವತಃ ಡೇವಿಡ್ ವಾರ್ನರ್ ಸಹ ತಿಳಿಸಿದ್ದರು. ಈ ಹೇಳಿಕೆ ಅವರು ಎಸ್ಆರ್ಹೆಚ್ನಲ್ಲಿ ಉಳಿಯುವುದಿಲ್ಲ ಎಂಬುದನ್ನು ಖಚಿತಪಡಿಸಿತ್ತು. ಈ ನಡುವೆ ನಿನ್ನೆ ಅವರು ಸಿಎಸ್ಕೆ ಜರ್ಸಿಯಲ್ಲಿ ಕಾಣಿಸಿಕೊಂಡಿರುವುದು ಮುಂದಿನ ಹರಾಜಿನಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಲಿದ್ದಾರ? ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: CSK Champions- ಕೆಕೆಆರ್ ನಿರಾಸೆ; ಚೆನ್ನೈ ಸೂಪರ್ ಕಿಂಗ್ಸ್ 4ನೇ ಬಾರಿ ಐಪಿಎಲ್ ಚಾಂಪಿಯನ್
ಸನ್ರೈಸರ್ಸ್ ಬಗ್ಗೆ ವಾರ್ನರ್ ನಿರ್ಧಾರ?
ಸನ್ರೈಸರ್ಸ್ ಹೈದ್ರಾಬಾದ್ ತಂಡವನ್ನು ಪ್ರತಿನಿಧಿಸುವ ಮತ್ತು ಅದೇ ತಂಡದಲ್ಲಿ ಉಳಿಯುವ ಬಗ್ಗೆಯೂ ಇತ್ತೀಚೆಗೆ 'ಸ್ಪೋರ್ಟ್ಸ್ ಟುಡೆ'ಗೆ ಜೊತೆಗೆ ಮಾತನಾಡಿದ್ದ ಡೇವಿಡ್ ವಾರ್ನರ್, "ನಾನು ಸನ್ ರೈಸರ್ಸ್ ಅನ್ನು ಪ್ರತಿನಿಧಿಸುವುದಕ್ಕಿಂತ ಹೆಚ್ಚೇನೂ ಇಷ್ಟಪಡುವುದಿಲ್ಲ. ಆದರೆ ನಿಸ್ಸಂಶಯವಾಗಿ, ಆ ನಿರ್ಧಾರವು ಮಾಲೀಕರದ್ದಾಗಿದೆ" ಎಂದು ಹೇಳಿದ್ದರು. ತಂಡದ ತರಬೇತುದಾರರಾದ ಟ್ರೆವರ್ ಬೈಲಿಸ್, ವಿವಿಎಸ್ ಲಕ್ಷ್ಮಣ್, ಡಾಮ್ ಮೂಡಿ ಮತ್ತು ಮುತ್ತಯ್ಯಾ ಮುರಳೀಧರನ್ ಒಟ್ಟಾಗಿ ಡೇವಿಡ್ ವಾರ್ನರ್ ಬಗೆಗಿನ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
"ಸನ್ರೈಸರ್ಸ್ ಹೈದ್ರಾಬಾದ್ಗಾಗಿ ನಾನು 100ಕ್ಕೂ ಅಧಿಕ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದೇನೆ. ಆದರೆ, ಈ ಋತುವಿನಲ್ಲಿ ಚೆನ್ನೈನಲ್ಲಿ ಆಡಿದ ಮೊದಲ 5 ಪಂದ್ಯಗಳಲ್ಲಿ ನಾನು ಕಳಪೆ ಆಟವನ್ನು ಪ್ರದರ್ಶಿಸಿದ್ದೆ. ಈ ಕಷ್ಟದ ದಿನಗಳನ್ನು ಸಹಿಸಿಕೊಳ್ಳುವುದು ಕಷ್ಟ. ನನ್ನ ಮುಂದೆ ಹಲವು ಪ್ರಶ್ನೆಗಳಿದ್ದು, ಅವಕ್ಕೆ ಉತ್ತರವನ್ನು ಕಂಡುಕೊಳ್ಳುವುದೂ ಕಷ್ಟ" ಎಂದು ಡೇವಿಡ್ ವಾರ್ನರ್ ಈ ವೇಳೆ ವಿಷಾಧಿಸಿದ್ದರು.
ಇದನ್ನೂ ಓದಿ: Beautiful Girls in IPL- ಐಪಿಎಲ್ನಲ್ಲಿ ಪ್ರೇಕ್ಷಕರ ಕಣ್ ಸೆಳೆದ ಚಂದುಳ್ಳಿ ಚೆಲುವೆಯರು ಇವರು
ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 2021ರ ಐಪಿಎಲ್ ಚಾಂಪಿಯನ್ ಆಗಿದೆ. ಫ್ಯಾಫ್ ಡುಪ್ಲೆಸಿ ಅವರ ಅಮೋಘ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯ ಅದ್ಭುತ ಪ್ರದರ್ಶನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಫೈನಲ್ನಲ್ಲಿ ಕೆಕೆಆರ್ ತಂಡವನ್ನು 27 ರನ್ಗಳಿಂದ ಸುಲಭವಾಗಿ ಮಣಿಸಿತು. ಗೆಲ್ಲಲು 193 ರನ್ಗಳ ಬೃಹತ್ ಮೊತ್ತದ ಗುರಿಗೆ ಪ್ರತಿಯಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಇನ್ನಿಂಗ್ಸ್ 165 ರನ್ಗೆ ಅಂತ್ಯಗೊಂಡಿತು. ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕನೇ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ