ABD Tips - ಕೊಹ್ಲಿಗೆ ಎಬಿಡಿ ಕೊಟ್ಟ ಈ ನಾಲ್ಕು ಟಿಪ್ಸ್ ಎಲ್ಲಾ ಕ್ರಿಕೆಟಿಗರಿಗೂ ದಾರಿದೀಪ

ರನ್ ಗಳಿಸಲು ಪರದಾಡುವಾಗ ಬ್ಯಾಟುಗಾರನ ಮನಸಲ್ಲಿ ಬಹಳ ಗೊಂದಲಗಳಿರುತ್ತವೆ. ಮನಸಿನ ಸಿಕ್ಕುಗಳನ್ನ ಬಿಡಿಸಿ ಲಯ ಕಂಡುಕೊಳ್ಳುವುದು ಕಷ್ಟ ಕಷ್ಟ. ಆದರೆ, ಎಬಿಡಿ ಕೊಟ್ಟಿರುವ ನಾಲ್ಕು ಸಿಂಪಲ್ ಸಲಹೆ ಮ್ಯಾಜಿಕ್​ನಂತೆ ಕೆಲಸ ಮಾಡುತ್ತವೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಎಂಥ ಘಟಾನುಘಟಿ ಅಥವಾ ಅನುಭವಿ ಕ್ರಿಕೆಟಿಗನಾದರೂ ಆತನಿಗೆ ಲೀನ್ ಪ್ಯಾಚ್, ಅಂದರೆ ಕಳಪೆ ಫಾರ್ಮ್ ಅವಧಿ ಇರುತ್ತದೆ. ಕೊಹ್ಲಿಯಂಥ ಕೊಹ್ಲಿಯೂ ಇದಕ್ಕೆ ಹೊರತಲ್ಲ. ಶತಕಗಳ ಮೇಲೆ ಶತಗಳನ್ನ ಭಾರಿಸುತ್ತಾ, ಎಲ್ಲ ಎಲ್ಲಾ ಮಾದರಿ ಕ್ರಿಕೆಟ್​ನಲ್ಲೂ ಅದ್ಭುತ ಸರಾಸರಿಯಲ್ಲಿ ರನ್ ಕಲೆಹಾಕುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿ ಅನೇಕ ಬಾರಿ ಫಾರ್ಮ್ ಕಳೆದುಕೊಂಡಿದ್ದಿದೆ. ಸಾಕಷ್ಟು ಟೀಕಾ ಪ್ರಹಾರಗಳನ್ನ ಎದುರಿಸಿದ್ದಾರೆ. ಐಪಿಎಲ್​ಗೆ ಮುಂಚೆ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯೇ ಇದಕ್ಕೆ ಒಂದು ಉದಾಹರಣೆ. ಇಲ್ಲಿ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ರನ್ ಗಳಿಸಲು ಪರದಾಡಿದ್ದರು. ಇಡೀ ಸರಣಿಯಲ್ಲಿ ಇವರು ಗಳಿಸಿದ್ದು ಕೇವಲ 2 ಅರ್ಧಶತಕ ಮಾತ್ರ. ನಂತರ ಪ್ರಾರಂಭವಾದ ಟಿ20 ಸರಣಿಯಲ್ಲೂ ಇದೇ ಕಳಪೆ ಫಾರ್ಮ್ ಮುಂದುವರಿಯುತ್ತಿರುವಂತೆ ತೋರಿತ್ತು. ಆದರೆ, ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 73 ರನ್ ಗಳಿಸಿ ಇಂಗ್ಲೆಂಡ್ ತಂಡವನ್ನ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊಹ್ಲಿ ದಿಢೀರನೇ ಫಾರ್ಮ್ ಕಂಡುಕೊಳ್ಳಲು ಕಾರಣವಾಗಿದ್ದು ಎಬಿ ಡೀವಿಲಿಯರ್ಸ್ ಅವರಂತೆ. ಎಬಿಡಿ ಕೊಟ್ಟ ನಾಲ್ಕು ಸಿಂಪಲ್ ಸೂತ್ರಗಳು ಕೊಹ್ಲಿಗೆ ಪಾಲಿಗೆ ಮ್ಯಾಜಿಕ್​ನಂತೆ ಕೆಲಸ ಮಾಡಿದ್ದವು.

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಎಬಿ ಡೀವಿಲಿಯರ್ಸ್ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಕೊಹ್ಲಿ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಒಂದು ಹಂತದಲ್ಲಿ ನನಗೆ ರನ್ ಗಳಿಸಲು ಅತೀವ ಕಷ್ಟವೆನಿಸಿತ್ತು. ಮನಸಿನಲ್ಲಿ ಸ್ಪಷ್ಟತೆ (ಕ್ಲಾರಿಟಿ) ಇರಲಿಲ್ಲ. ಬ್ಯಾಟಿಂಗ್ ಮಾಡುವಾಗ ಬಹಳ ಯೋಚನೆಗಳು ತಲೆ ತಿನ್ನುತ್ತಿರುತ್ತಿದ್ದವು. ಮನಸಿನೊಳಗಿನ ಭೂತಕ್ಕಿಂತ ಹೊರಗಿನ ವಿಚಾರಗಳೇ ಬಾಧಿಸುತ್ತಿದೆ ಎನಿಸಿತ್ತು. ಅದಕ್ಕೆ ಎಬಿ ಡೀವಿಲಿಯರ್ಸ್ ಅವರ ಸಲಹೆ ಕೇಳಿದೆ. ಎಬಿಡಿ ಕೊಟ್ಟ ಸಲಹೆ ಬಹಳ ವರ್ಕೌಟ್ ಆಯಿತು ಎಂದು ಕೊಹ್ಲಿ ಹೇಳಿದ್ಧಾರೆ.

“ನಾನು ಕೊಹ್ಲಿಗೆ ನಾಲ್ಕು ಅಂಶಗಳನ್ನ ತಿಳಿಸಿದೆ. ಎರಡು ಅಂಶಗಳು ಆಟದ ಹೊರತದಾದವು; ಇನ್ನೆರಡು ಅಂಶಗಳು ಬ್ಯಾಟಿಂಗ್​ನ ಟೆಕ್ನಿಕಲ್ ವಿಷಯಗಳಾಗಿದ್ದವು. ಆದರೆ, ಆ ನಾಲ್ಕು ಅಂಶಗಳು ಬಹಳ ಬೇಸಿಕ್ ಆಗಿರುವಂಥವು. ನಾನು ಕೆಲ ತಿಂಗಳುಗಳಿಂದ ಕೊಹ್ಲಿ ಆಟವನ್ನು ಗಮನಿಸುತ್ತಿದ್ದವ. ಹೀಗಾಗಿ, ಕೊಹ್ಲಿಗೆ ಈಗ ಅಗತ್ಯ ಏನು ಎಂಬುದು ನನಗೆ ತಿಳಿಯಲು ಕಷ್ಟವಾಗಲಿಲ್ಲ” ಎಂದು ಎಬಿಡಿ ತಿಳಿಸುತ್ತಾರೆ.

ಇದನ್ನೂ ಓದಿ: IPL 2021 - ಆಂಡ್ರೆ ರಸೆಲ್, ಕುಮಿನ್ಸ್ ಬ್ಯಾಟಿಂಗ್ ಆರ್ಭಟಕ್ಕೆ ಎಂಎಸ್ ಧೋನಿ ಮಾಡಿದ ಕಾಮೆಂಟ್ ಇದು

ಎಬಿಡಿ ಕೊಟ್ಟ ನಾಲ್ಕು ಸೂತ್ರಗಳೇನು?

1) ಬ್ಯಾಟ್ ಮಾಡುವಾಗ ಚೆಂಡನ್ನು ಗಮನಿಸಬೇಕು
2) ಸಮಾಧಾನದಿಂದ ಇರಿ (Still Head)
3) ಚೆಂಡನ್ನು ನಿಮ್ಮ ಬಳಿಗೆ ಬರುವವರೆಗೂ ಕಾಯಿರಿ
4) ಬಾಡಿ ಲ್ಯಾಂಗ್ವೇಜ್ ಮತ್ತು ಆಟಿಟ್ಯೂಡ್ ಸರಿಯಾಗಿರಲಿ

ಎಬಿ ಡೀವಿಲಿಯರ್ಸ್ ಪ್ರಕಾರ ಈ ನಾಲ್ಕು ಅಂಶಗಳು ಎಲ್ಲಾ ಕ್ರಿಕೆಟಿಗರಿಗೂ ಬಹಳ ಮೂಲವಾಗಿರುವಂಥವು. ಇದು ಸಣ್ಣ ವಿಷಯಗಳಾದರೂ ಬಹಳ ಮಹತ್ವದ್ದು. ನಾವು ಇದನ್ನ ಬೇಗ ಮರೆತುಬಿಡುತ್ತೇವೆ. ನೀವು ಆಟದಲ್ಲಿ ಲಯ ಕಂಡುಕೊಳ್ಳಲು ಪರದಾಡುವಾಗ ಸಮಾಧಾನ ಚಿತ್ತ ಕಳೆದುಕೊಳ್ಳುತ್ತೀರಿ. ಚೆಂಡನ್ನು ನಿಮ್ಮ ಬಳಿ ಬರುವವರೆಗೆ ಕಾಯುವ ತಾಳ್ಮೆಯನ್ನೂ ಕಳೆದುಕೊಳ್ಳುತ್ತೀರಿ ಎಂದು ಎಬಿಡಿ ವಿವರಿಸುತ್ತಾರೆ.

ನಾಲ್ಕನೇ ಅಂಶವಾದ ಬಾಡಿ ಲಾಂಗ್ವೇಜ್ ಮತ್ತು ಆಟಿಟ್ಯೂಡ್ ಬಗ್ಗೆ ವಿವರಣೆ ನೀಡಿದ ಎಬಿಡಿ, ನೀವು ಕ್ರೀಸ್​ಗೆ ಹೋಗುವಾಗ ಎದೆ ಎತ್ತಿ ಹೋಗಿರಿ. ಎದುರಾಳಿ ಆಟಗಾರರನ್ನು ಹೊಡೆದುರುಳಿಸಲು ಸಜ್ಜಾಗಿರುವಂತಹ ಧೋರಣೆ ನಿಮ್ಮದಾಗಿರಲಿ ಎಂದು ಹೇಳುತ್ತಾರೆ.

ಎಬಿಡಿ ಕೊಟ್ಟ ನಾಲ್ಕು ಸಲಹೆಗಳಲ್ಲಿ ಕೊಹ್ಲಿಗೆ ಅತಿ ಹೆಚ್ಚು ಉಪಯೋಗಕ್ಕೆ ಬಂದಿದ್ದು ಮೊದಲ ಸಲಹೆ. ಅಂದರೆ ಬ್ಯಾಟ್ ಮಾಡುವಾಗ ಚೆಂಡಿನ ಮೇಲೆ ಗಮನ ಇರುವ ಸಲಹೆ ಕೊಹ್ಲಿಯ ಫಾರ್ಮ್ ಮೇಲೆ ಪ್ರಭಾವ ಬೀರಿತು. ಬ್ಯಾಟಿಂಗ್ ಮಾಡುವಾಗ ಗೊಂದಲವಾದರೆ ಏನು ಮಾಡಬೇಕು ಎಂದು ನಾನು ಕೇಳಿದಾಗ ಎಬಿಡಿ ಕೊಟ್ಟ ಸಿಂಪಲ್ ಸಲಹೆ ಎಂದರೆ ಚೆಂಡಿನ ಮೇಲೆ ಗಮನ ಇರಿಸಬೇಕೆಂಬುದಾಗಿತ್ತು. ಚೆಂಡಿನ ಮೇಲೆ ಫೋಕಸ್ ಮಾಡಿದಾಗ ಎಲ್ಲವೂ ಸರಿಯಾಗಿ ಸಾಗುತ್ತದೆ ಎಂದವರು ಹೇಳಿದರು. ಅಂತೆಯೇ ಆ ಸಲಹೆಯನ್ನ ಪಾಲಿಸಿದೆ. ಬಹಳ ಉಪಯೋಗಕ್ಕೆ ಬಂತು ಎಂದನ್ನುತ್ತಾರೆ ವಿರಾಟ್ ಕೊಹ್ಲಿ.
Published by:Vijayasarthy SN
First published: