ನವದೆಹಲಿ: ಈ ಐಪಿಎಲ್ನಲ್ಲಿ ಜಸ್ಪ್ರೀತ್ ಬುಮ್ರಾರಂಥ (Jasprit Bumrah) ಬೌಲರ್ನನ್ನು ಸಮರ್ಥವಾಗಿ ಎದುರಿಸಬಲ್ಲ ಒಬ್ಬ ವ್ಯಕ್ತಿ ಇದ್ದರೆ ಅದು ಎಬಿ ಡೀ ವಿಲಿಯರ್ಸ್ (AB De Villiers) ಮಾತ್ರ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ವಾಹಿನಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚರ್ಚಿಸುತ್ತಿದ್ದ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ (RCB team led by Virat Kohli) ತಂಡದಲ್ಲಿ ಬಹಳ ಒಳ್ಳೆಯ ಆಟಗಾರರು ಹಲವರಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ವಿರಾಟ್ ಕೊಹ್ಲಿ ಬಳಿ ಎಬಿ ಡೀವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರಂಥ ಆಟಗಾರರು ಇದ್ದಾರೆ. ಇಂಥವರನ್ನು ಪಡೆಯುವುದು ಅದೃಷ್ಟ. ಮ್ಯಾಕ್ಸ್ವೆಲ್ ಅಲ್ಲದೇ ಹೋದರೂ ಎಬಿ ಅವರು ಟೀಮ್ನಲ್ಲಿ ಇರುವುದು ದೊಡ್ಡ ವಿಷಯ. ಯಾಕೆಂದರೆ ಜಸ್ಪ್ರೀತ್ ಬುಮ್ರಾರಂಥ ಬೌಲರ್ನನ್ನು ಲೀಲಾಜಾಲವಾಗಿ ಎದುರಿಸಬಲ್ಲ ಒಬ್ಬನೇ ವ್ಯಕ್ತಿ ಎಂದರೆ ಅದು ಎಬಿ ಡೀ ವಿಲಿಯರ್ಸ್. ಬುಮ್ರಾ ಅವರ ಮೇಲೆ ಇಷ್ಟು ಪ್ರಾಬಲ್ಯ ಸಾಧಿಸಿದ ಇನ್ನೊಬ್ಬ ಬ್ಯಾಟ್ಸ್ಮನ್ನನ್ನು ನಾನು ನೋಡಿಯೇ ಇಲ್ಲ. ಎಬಿ ಬಹಳ ವಿಶೇಷ” ಎಂದು ಗಂಭೀರ್ ತಿಳಿಸಿದ್ದಾರೆ.
ಐಪಿಎಲ್ ಟೂರ್ನಿಯನ್ನು ಇದೂವರೆಗೂ ಗೆಲ್ಲಲು ವಿಫಲವಾಗಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಈ ಬಾರಿ ಹೊಸ ಕಳೆಯೊಂದಿಗೆ ಪ್ರಶಸ್ತಿ ಗಿಟ್ಟಿಸಲು ಇನ್ನಿಲ್ಲದ ಪ್ರಯತ್ನ ಹಾಕುತ್ತಿದೆ. ಈ ಋತುವಿನ ಅರ್ಧದ ಹಾದಿಯಲ್ಲಿ ಆರ್ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಏಳು ಪಂದ್ಯಳ ಪೈಕಿ ಐದರಲ್ಲಿ ಗೆದ್ದಿದೆ. ಎಬಿ ಡೀವಿಲಿಯರ್ಸ್ ಜೊತೆಗೆ ಗ್ಲೆನ್ ಮ್ಯಾಕ್ಸ್ವೆಲ್ ಎಂಬ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್ಮನ್ನ ಶಕ್ತಿ ಆರ್ಸಿಬಿಗೆ ಸಿಕ್ಕಿದೆ. ಕನ್ನಡಿಗ ದೇವದತ್ ಪಡಿಕ್ಕಲ್ ಅವರೂ ಉತ್ತಮ ಲಯದಲ್ಲಿದ್ಧಾರೆ. ಆದರೆ, ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿಯಿಂದ ಸ್ಥಿರ ಪ್ರದರ್ಶನದ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ಧಾರೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಟೀಮ್ಗಳಲ್ಲಿ ಆರ್ಸಿಬಿಯೂ ಇದೆ. ಗಂಭೀರ್ ಪ್ರಕಾರ ಈ ಪ್ರಶಸ್ತಿ ನಿರೀಕ್ಷೆಯು ಕೊಹ್ಲಿ ಮತ್ತು ಎಬಿಡಿ ಮೇಲೆ ಒತ್ತಡ ಹಾಕಿದೆಯಂತೆ.
“ವಿರಾಟ್ ಕೊಹ್ಲಿ ಮತ್ತು ಎಬಿ ಮೇಲೆ ಸಾಕಷ್ಟು ಒತ್ತಡ ಇರಬಬಹುದು. ತಂಡವು ಚಾಂಪಿಯನ್ ಆಗದೇ ವರ್ಷ ವರ್ಷ ಉರುಳಿದಂತೆ ಆ ಒತ್ತಡ ಹೆಚ್ಚುತ್ತಲೇ ಇರುತ್ತದೆ” ಎಂದು ಗಂಭೀರ್ ಹೇಳಿದ್ದಾರೆ.
“ವಿರಾಟ್ ಕೊಹ್ಲಿಯ ಸ್ಟಾಂಡರ್ಡ್ ಪರಿಗಣಿಸಿದರೆ ಆರ್ಸಿಬಿ ಈ ಬಾರಿ ಅಗ್ರೆಸಿವ್ ಆಗಿ ಆಡಲು ಬಯಸುತ್ತಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದು ತಂಡದಲ್ಲಿ ಐದಾರು ಟಾಪ್ ಇಂಟರ್ನ್ಯಾಷನಲ್ ಬೌಲರ್ಸ್ ಇರುತ್ತಾರೆ. ಐಪಿಎಲ್ನಲ್ಲಿ ಹಾಗಿರುವುದಿಲ್ಲ. ಒಂದು ಐಪಿಎಲ್ ತಂಡದಲ್ಲಿ ಎರಡರಿಂದ ಮೂರು ಅಂತರರಾಷ್ಟ್ರೀಯ ಮಟ್ಟದ ಬೌಲರ್ಸ್ ಇರುತ್ತಾರಷ್ಟೇ. ದೇಶೀಯ ಬೌಲರ್ಗಳ ಮೇಲೆ ಬ್ಯಾಟುಗಾರರು ಪ್ರಾಬಲ್ಯ ಸಾಧಿಸಲು ಮುಂದಾಗಬಹುದು” ಎಂಬುದು ಗಂಭೀರ್ ವಿಶ್ಲೇಷಣೆ.
ಇದನ್ನೂ ಓದಿ: Sourav Ganguly- ವಿರಾಟ್ ಕೊಹ್ಲಿ ಟಿ20 ಕ್ಯಾಪ್ಟನ್ಸಿ ವಿದಾಯಕ್ಕೆ ಸೌರವ್ ಗಂಗೂಲಿ ಪ್ರತಿಕ್ರಿಯೆ
ಎಬಿ ಡೀವಿಲಿಯರ್ಸ್ ಎಂಥ ಸಂಕಷ್ಟದ ಸ್ಥಿತಿಯಲ್ಲೂ ಗೇಮ್ ಚೇಂಜ್ ಮಾಡಬಲ್ಲ ಬ್ಯಾಟ್ಸ್ಮನ್. ಹೀಗಾಗಿ, ಇವರು ವಿರಾಟ್ ಕೊಹ್ಲಿಯಂತೆ ಆರ್ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಇಂಥ ಆಟಗಾರನಿದ್ದೂ ಆರ್ಸಿಬಿ ಒಮ್ಮೆಯೂ ಐಪಿಎಲ್ ಗೆಲ್ಲದೇ ಇರುವುದಕ್ಕೆ ಅನೇಕರು ಅಚ್ಚರಿ ಪಟ್ಟಿರುವುದುಂಟು. ಈ ಬಾರಿ ಗ್ಲೆನ್ ಮ್ಯಾಕ್ಸ್ವೆಲ್ ಅವರೂ ಆಗಮಿಸಿರುವುದು ಆರ್ಸಿಬಿ ಬಲ ಹೆಚ್ಚಿಸಿದೆ. ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಲ್ ಟ್ರಂಪ್ ಕಾರ್ಡ್ ಎನಿಸಿದ್ದಾರೆ. ಸೆ. 19ಕ್ಕೆ ಶುರುವಾಗುವ ಐಪಿಎಲ್ ಎರಡನೇ ಲೆಗ್ಗೆ ಮುಂಚೆ ಆರ್ಸಿಬಿ ನಡೆಸಿದ ಆಂತರಿಕ ಅಭ್ಯಾಸ ಪಂದ್ಯದಲ್ಲಿ ಎ ಬಿ ಡೀ ವಿಲಿಯರ್ಸ್ ಭರ್ಜರಿ ಶತಕ ಭಾರಿಸಿ ಇತರ ಐಪಿಎಲ್ ತಂಡಗಳಿಗೆ ಎಚ್ಚರಿಕೆಯ ಕರೆಗಂಟೆ ಒತ್ತಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಕೆಲ ಸ್ಫೋಟಕ ಇನ್ನಿಂಗ್ಸ್ ಆಡಿರುವ ಕೇರಳದ ಮೊಹಮ್ಮದ್ ಅಜರುದ್ದೀನ್, ಆಂಧ್ರದ ಕೆ ಎಸ್ ಭರತ್ ಅವರೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಸೆ. 20ರಂದು ಅಬುಧಾಬಿಯಲ್ಲಿ ಕೆಕೆಆರ್ ತಂಡವನ್ನ ಆರ್ಸಿಬಿ ಎದಿರುಗೊಳ್ಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ