ಅತ್ತ ಪಾಕಿಸ್ತಾನ, ಇತ್ತ ಚೀನಾ; ದ್ವಿಮುಖಿ ಯುದ್ಧದ ಸಾಧ್ಯತೆಯಲ್ಲಿ ಭಾರತ

ಜನವರಿಯಿಂದ ಈಚೆಗೆ ಎಲ್ಒಸಿಯಲ್ಲಿ ಪಾಕಿಸ್ತಾನ ಮಾಡುತ್ತಿರುವ ಕಿತಾಪತಿ ಹಾಗೂ ಎಲ್ಎಸಿಯಲ್ಲಿ ಚೀನಾ ಮಾಡುತ್ತಿರುವ ಅತಿಕ್ರಮಣ ಪ್ರಯತ್ನವನ್ನು ಗಮನಿಸಿದರೆ ಆ ಎರಡೂ ದೇಶಗಳೊಂದಿಗೆ ಭಾರತ ಏಕಕಾಲದಲ್ಲಿ ಯುದ್ಧ ಮಾಡಬೇಕಾಗಿ ಬರಬಹುದು ಎನ್ನಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ(ಸೆ. 15): ಭಾರತದ ಉತ್ತರ ಭಾಗದ ಎರಡೂ ಕಡೆಯ ಗಡಿಭಾಗದಲ್ಲಿ ನೆರೆ ದೇಶಗಳ ಅಟ್ಟಹಾಸ ಹೆಚ್ಚುತ್ತಲೇ ಇದೆ. ಎಲ್​ಒಸಿಯಲ್ಲಿ ಪಾಕಿಸ್ತಾನ ಪದೇಪದೇ ಕದನವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ. ಕಳೆದ 17 ವರ್ಷಗಳಲ್ಲೇ ಇಲ್ಲಿ ಪಾಕಿಸ್ತಾನ ಈಗ ಅತಿಹೆಚ್ಚು ಕಿತಾಪತಿ ಮಾಡುತ್ತಿದೆ. ಇನ್ನೊಂದೆಡೆ ಚೀನಾ ದೇಶ ಲಡಾಖ್​ನ ಎಲ್​ಎಸಿಯಲ್ಲಿ ಭಾರತದ ಭೂಭಾಗವನ್ನೇ ಅತಿಕ್ರಮಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈಗ ಲಡಾಖ್​ನಲ್ಲಿ ಚೀನೀ ಸೈನಿಕರು ಆಪ್ಟಿಕಲ್ ಫೈಬರ್ ಕೇಬಲ್​ಗಳನ್ನ ಅಳವಡಿಸುತ್ತಿರುವ ಸುದ್ದಿ ಕೇಳಿಬಂದಿದೆ. ಇವೆಲ್ಲವನ್ನೂ ಗಮನಿಸಿದರೆ ಭಾರತ ಏಕಕಾಲದಲ್ಲಿ ಇಬ್ಬರು ಶತ್ರುಗಳ ಜೊತೆ ಯುದ್ಧ ಮಾಡಬೇಕಾಗಿಬರಬಹುದು ಎನ್ನಲಾಗುತ್ತಿದೆ.

  ಜನವರಿ 1ರಿಂದ ಸೆಪ್ಟೆಂಬರ್ 7ರವರೆಗೆ ಪಾಕಿಸ್ತಾನ ಸೇನೆಯಿಂದ 3,186 ಬಾರಿ ಯುದ್ಧವಿರಾಮ ಉಲ್ಲಂಘನೆ ಪ್ರಕರಣಗಳು ನಡೆದಿವೆ. ಹಾಗೆಯೇ, ಇದೇ ಅವಧಿಯಲ್ಲಿ 242 ಬಾರಿ ಗಡಿಭಾಗದಲ್ಲಿ ಗುಂಡಿನ ಚಕಮಕಿಯ ಘಟನೆಗಳು ನಡೆದಿವೆ. ನಿನ್ನೆ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್​ನಲ್ಲಿ ಮಂಡಿಸಲಾದ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಸಂಸತ್​ನಲ್ಲಿ ಈ ಸಂಬಂಧ ಹೇಳಿಕೆ ಹೊರಡಿಸುವ ಸಾಧ್ಯತೆ ಇದೆ.

  ಇದನ್ನೂ ಓದಿ: ಆಗ್ರಾದ ಮೊಘಲ್ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಹೆಸರಿಡಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧಾರ

  ಇನ್ನು, ಲಡಾಖ್​ನ ಪಾಂಗಾಂಗ್ ಟ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಚೀನೀ ಸೈನಿಕರು ಫೈಬರ್ ಕೇಬಲ್ ಅಳವಡಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ. ಇದೇ ಭಾಗದಲ್ಲೇ ಇತ್ತೀಚೆಗೆ ಭಾರತದ ಭಾಗವನ್ನು ಅತಿಕ್ರಮಿಸಲು ಚೀನಾ ಮಾಡಿದ ಪ್ರಯತ್ನವನ್ನು ಭಾರತದ ಸೈನಿಕರು ವಿಫಲಗೊಳಿಸಿದ್ದರು. ಈಗ ಸರೋವರದ ಉತ್ತರ ಮತ್ತು ದಕ್ಷಿಣ ಭಾಗದ ಅನೇಕ ಮಹತ್ವದ ಎತ್ತರದ ಜಾಗಗಳು ಭಾರತದ ವಶದಲ್ಲಿವೆ. ಆದರೂ ಚೀನಾ ಸೇನೆ ತನ್ನ ಹಠಮಾರಿತನ ಹೆಚ್ಚು ಮಾಡುತ್ತಿರುವಂತಿದೆ. ಫೈಬರ್ ಆಪ್ಟಿಕ್ ಕೇಬಲ್ ಅಳವಡಿಸುವುದರಿಂದ ಚೀನಾದ ಸೇನಾ ನೆಲೆಗಳ ಸಂವಹನಕ್ಕೆ ಅನುಕೂಲ ಮಾಡಿಕೊಡುತ್ತದೆ. ಪಾಂಗಾಂಗ್ ಸರೋವರದ ಉತ್ತರ ಭಾಗದಲ್ಲೂ ಚೀನಾ ಕೇಬಲ್ ಹಾಕುತ್ತಿದ್ದುದನ್ನು ಭಾರತದ ಗುಪ್ತಚರ ಸಂಸ್ಥೆಗಳು ಕಳೆದ ತಿಂಗಳಷ್ಟೇ ಪತ್ತೆ ಹಚ್ಚಿದ್ದವು.

  ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಸ್ಥಾಪನೆಯಾಗಿದೆ ವಾರೆಂಟ್‌ ಇಲ್ಲದೆಯೂ ವ್ಯಕ್ತಿಯನ್ನು ಬಂಧಿಸುವ-ಶೋಧಿಸುವ ವಿಶೇಷ ಭದ್ರತಾ ಪಡೆ

  ಲಡಾಖ್ ಗಡಿಭಾಗದಲ್ಲಿ ಚೀನಾ ಮಾರ್ಚ್ ತಿಂಗಳಿಗೂ ಮುಂಚಿನಿಂದಲೇ ಕಿತಾಪತಿ ಪ್ರಾರಂಭ ಮಾಡಿತ್ತೆನ್ನಲಾಗಿದೆ. ಪಾಕಿಸ್ತಾನ ಜನವರಿಯಿಂದ ಕದನವಿರಾಮ ಉಲ್ಲಂಘನೆ ಮಾಡುತ್ತಾ ಬಂದಿದೆ. ಎರಡೂ ದೇಶಗಳು ಹೆಚ್ಚೂಕಡಿಮೆ ಒಟ್ಟಿಗೇ ತಂಟೆಕೋರತನ ತೋರುತ್ತಿದೆ. ರಾಜಕೀಯವಾಗಿ ಮತ್ತು ವ್ಯಾವಹಾರಿಕವಾಗಿ ಚೀನಾ ಮತ್ತು ಪಾಕಿಸ್ತಾನದ ಮಧ್ಯೆ ಗಾಢ ಸ್ನೇಹ ಬೆಳೆದಿದೆ. ಪಾಕಿಸ್ತಾನಕ್ಕೆ ಎಲ್ಲಾ ರೀತಿಯಲ್ಲೂ ಚೀನಾ ಸಹಾಯ ಮಾಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತದ ಮೇಲೆ ಎರಗಿಬೀಳಲು ಎರಡೂ ದೇಶಗಳು ಒಟ್ಟಿಗೆ ಕೈ ಜೋಡಿಸಿದ್ದರೆ ಅಚ್ಚರಿ ಇಲ್ಲ.

  ಇವತ್ತು ಸಂಸತ್​ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎರಡೂ ಗಡಿಭಾಗದ ಸ್ಥಿತಿ ಬಗ್ಗೆ ವಿವರಣೆ ನೀಡಲಿದ್ದಾರೆ.
  Published by:Vijayasarthy SN
  First published: