ಯಾವ ಯುದ್ಧವನ್ನೂ ಗೆಲ್ಲದ ಚೀನಾಗೆ ನಾವು ಹೆದರುವುದ್ಯಾಕೆ? ನಿವೃತ್ತ ಸೇನಾಧಿಕಾರಿ ಮನೋಜ್ಞ ಲೇಖನ

1962ರಲ್ಲಿ ಭಾರತದೊಂದಿಗಿನ ಅಸಮಾನ ಯುದ್ಧ ಹೊರತುಪಡಿಸಿ ಚೀನಾ ಬೇರೆ ಯಾವ ಯುದ್ಧವನ್ನೂ ಗೆದ್ದದ್ದಿಲ್ಲ. 1967ರಲ್ಲಿ ಭಾರತೀಯ ಸೈನಿಕರ ಪ್ರತಿರೋಧಕ್ಕೆ ಚೀನೀಯರು ಬೇಸ್ತುಬಿದ್ದಿದ್ದರು ಎಂದು ನಿವೃತ್ತ ಸೇನಾಧಿಕಾರಿ ಲೆ| ಕರ್ನಲ್ ಪಿ.ಸಿ. ಕಟೋಚ್ ಹೇಳುತ್ತಾರೆ.

ಚೀನಾ- ಭಾರತ ಗಡಿಯಲ್ಲಿ ಸೈನಿಕರು

ಚೀನಾ- ಭಾರತ ಗಡಿಯಲ್ಲಿ ಸೈನಿಕರು

 • Share this:
  ಜೂನ್ 15ರಂದು ಚೀನೀ ಸೈನಿಕರು ಲಡಾಖ್ ಗಡಿಭಾಗದಲ್ಲಿ ಭಾರತೀಯ ಯೋಧರ ಮೇಲೆ ಅಮಾನುಷವಾಗಿ ಹಲ್ಲೆ ಎಸಗಿದರು. 20 ಭಾರತೀಯ ಸೈನಿಕರನ್ನ ಬಲಿತೆಗೆದುಕೊಂಡರು. ಗಡಿಯಿಂದ ಸೇನಾ ಪಡೆಗಳ ನಿರ್ಗಮನ ಪ್ರಕ್ರಿಯೆ ನಡೆಯುತ್ತಿರುವಾಗಲೇ ಇಂಥದ್ದೊಂದು ಘಟನೆ ನಡೆದಿದ್ದು ದೇಶಕ್ಕೆ ಆಘಾತ ಕೊಟ್ಟಿದೆ. ಈ ದುರ್ಘಟನೆ ನಡೆಯುವ ಎರಡು ವಾರ ಮೊದಲು, ಜೂನ್ 1ರಂದು ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪಿ.ಸಿ. ಕಟೋಚ್ ಅವರು ನ್ಯೂಸ್18ಗೆ ಪುಟ್ಟ ಲೇಖನವೊಂದನ್ನ ಬರೆದಿದ್ದರು. ಅದರಲ್ಲಿ ಅವರು ಚೀನೀ ಸೈನಿಕರ ಪುಕ್ಕಲತನ ಮತ್ತು ವೈಫಲ್ಯಗಳನ್ನ ಎತ್ತಿತೋರಿಸಿದ್ದಾರೆ. ಇಂಥ ಚೀನೀ ಎದುರಾಳಿಗಳ ಎದುರು ಅನುಭವಿ ಭಾರತೀಯ ಸೈನಿಕರು ಅವಮಾನ ಪಡುವಂಥ ಸ್ಥಿತಿ ಯಾಕೆ ಬಂತು ಎಂದು ಪ್ರಶ್ನಿಸಿದ್ದಾರೆ. ಜೂ. 1ರಂದು ಅವರು ಬರೆದ ಲೇಖನದ ಮರುಪ್ರಕಟ ಇದು.

  ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಹಲವಾರು ವರ್ಷಗಳಿಂದ ಘರ್ಷಣೆಗಳು ನಡೆಯುತ್ತಿದೆ. ಪ್ರಾಯಶಃ ವಿಶ್ವದ ಬೇರೆಡೆ ಯಾವುದೇ ಎರಡು ದೇಶಗಳ ಯೋಧರು ಈ ರೀತಿ ಮುಖಾಮುಖಿಯಾಗಿದ್ದು ನನಗೆ ಗೊತ್ತಿಲ್ಲ. ಈ ರೀತಿಯ ತಳ್ಳಾಟ, ಕೈಕೈ ಮಿಲಾಯಿಸುವಿಕೆಯನ್ನು ರಾಜಕೀಯ ಪ್ರತಿಭಟನೆಗಳಲ್ಲಿ, ಕೆಲ ದೇಶಗಳ ಸಂಸದೀಯ ಅಧಿವೇಶನಗಳಲ್ಲಿ ನಡೆಯುವುದನ್ನು ಸುದ್ದಿವಾಹಿನಿಗಳಲ್ಲಿ ನೀವು ಕಂಡಿರಬಹುದು. ಆದರೆ ಸೇನೆಗಳ ಮಧ್ಯೆ ಇಂಥ ವಿಚಿತ್ರ ಜಟಾಪಟಿ ಸಾಮಾನ್ಯವಾಗಿ ನಡೆಯುವುದಿಲ್ಲ. ಭಾರತ ಮತ್ತು ಚೀನಾ ಸೈನಿಕರು ಬರೀ ನೂಕಾಟಕ್ಕೇ ಸೀಮಿತವಾಗಿದ್ದರೆ ಈ ಲೇಖನ ಬರೆಯುವ ಅಗತ್ಯ ಇರಲಿಲ್ಲ. ವಿಚಾರ ಸಾಕಷ್ಟು ಮುಂದಕ್ಕೆ ಹೋಗಿದೆ.

  2017, ಆಗಸ್ಟ್ 15ರಂದು ಪ್ಯಾಂಗಾಂಗ್ ಟ್ಸೋ ಸರೋವರದ ಬಳಿ ನಮ್ಮ ಗಸ್ತು ಪಡೆ ಮೇಲೆ ಚೀನಾದ ಪಿಎಲ್​ಎ ಸೈನಿಕರು ಕಲ್ಲು ತೂರಾಟ ಹಾಗೂ ಕಬ್ಬಿಣದ ರಾಡ್​ಗಳಿಂದ ದಾಳಿ ಮಾಡಿದ್ದರು. ಟಿವಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಆ ಘಟನೆಯ ಒಂದು ವಿಡಿಯೋ ವೈರಲ್ ಆಗಿತ್ತು. ಪಿಎಲ್​ಎ ಸೈನಿಕರು ಮೊದಲ ಬಾರಿಗೆ ಕಲ್ಲು ತೂರಾಟ ನಡೆಸಿದ್ದರು. ಅವರ ಕಲ್ಲು ತೂರಾಟದ ವರ್ತನೆಗೆ ಕಾರಣ ಇಲ್ಲದಿಲ್ಲ ಬಿಡಿ. ಜಮ್ಮು-ಕಾಶ್ಮೀರದಲ್ಲಿ ದುಡ್ಡು ಪಡೆದ ಕೆಲ ಜನರು (Paid Mobs) ನಮ್ಮ ಸೈನಿಕರ ಮೇಲೆ ಕಲ್ಲು ತೂರಾಟ ನಡೆಸುವುದನ್ನು, ಮತ್ತು ಆತ್ಮರಕ್ಷಣೆಗೆ ಗುಂಡು ಹಾರಿಸುವ ಸೈನಿಕರ ಮೇಲೆಯೇ ಎಫ್​ಐಆರ್ ದಾಖಲಾಗುವುದನ್ನು ಚೀನಾ ನೋಡುತ್ತಲೇ ಬಂದಿದೆ. ಇದೇ ಸ್ಥಿತಿ, ಅಂದರೆ ಭದ್ರತಾ ಪಡೆಗಳ ಮೇಲೆ ವ್ಯಕ್ತಿಗಳು ಕಲ್ಲು ತೂರಾಟ ಮಾಡುವ ಪರಿಸ್ಥಿತಿಯನ್ನು ಚೀನಾ ಅಥವಾ ಪಾಕಿಸ್ತಾನದಲ್ಲಿ ನೀವು ಕಲ್ಪಿಸಿಕೊಳ್ಳಲು ಸಾಧ್ಯವೇ? ಇಸ್ರೇಲ್ ದೇಶದಲ್ಲಿ ಕಲ್ಲು ತೂರಾಟ ಮಾಡುವವರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸುತ್ತಾರೆ.

  ಎಲೆಕ್ಟ್ರಾನಿಕ್ ಮೀಡಿಯಾ (ಟಿವಿ) ದೆಸೆಯಿಂದಾಗಿ 1999ರ ಕಾರ್ಗಿಲ್ ಸಂಘರ್ಷವನ್ನ ಮನೆಯಲ್ಲೇ ಕೂತು ನೋಡುವಂತಾಯಿತು. ವಾಸ್ತವ ಗಡಿ ನಿಯಂತ್ರಣ ರೇಖೆ (LAC - Line of Actual Control)ಯಲ್ಲಿ ನಡೆದ ಕೆಲ ಘರ್ಷಣೆಗಳ ದೃಶ್ಯವನ್ನ ಸಾರ್ವಜನಿಕರು ನೋಡುವಂತಾಗಿದ್ದು ಅನಿರೀಕ್ಷಿತವೇನಲ್ಲ. ಇಂಥ ಸಂಘರ್ಷಗಳು ನಡೆದಾಗೆಲ್ಲಾ ಎರಡೂ ಕಡೆಯವರು ವಿಡಿಯೋ ರೆಕಾರ್ಡ್ ಮಾಡಿ ಆ ಕ್ಲಿಪ್​ಗಳನ್ನ ತಮ್ಮ ಮೇಲಧಿಕಾರಿಗಳಿಗೆ ಕಳುಹಿಸುತ್ತಾರೆ. 2017ರ ಆ ಘಟನೆಯ ವಿಡಿಯೋ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಚೀನೀಯರು ಇದ್ದ ಜಾಗದಿಂದ ರೆಕಾರ್ಡಿಂಗ್ ಮಾಡಿದ್ದಂತಿತ್ತು.

  2020 ಮೇ ತಿಂಗಳಲ್ಲಿ ಗಾಲ್ವನ್ ಪ್ರದೇಶಗಳು, ಪ್ಯಾಂಗಾಂಗ್ ಟ್ಸೋ(Pangong Tso) ಸರೋವರಕ್ಕೆ ಹೊಂದಿಕೊಂಡಿರುವ ಬೆಟ್ಟದ ಸಾಲುಗಳು (Fingers), ಪೂರ್ವ ಲಡಾಖ್​ನ ಡೆಮ್​ಚೋಕ್ ಮತ್ತು ಸಿಕ್ಕಿಂನ ನಾಕು ಲಾ ಬಳಿ ಪಿಎಲ್​ಎ ಸೈನಿಕರು ಅತಿಕ್ರಮ ಪ್ರವೇಶ ಮಾಡಿದರು. ಸುತ್ತಲೂ ಮೊಳೆ ಹೊಡೆದಿರುವ ದೊಣ್ಣೆ, ಕಬ್ಬಿಣದ ರಾಡ್​ಗಳನ್ನ ಹೊಂದಿದ್ದ ಅವರು ದೊಡ್ಡ ಸಂಖ್ಯೆಯಲ್ಲಿದ್ದರು. ಕಲ್ಲು ತೂರಾಟ ಕೂಡ ನಡೆಸಿದರು. ನಮ್ಮ ಸೈನಿಕರೂ ಕೂಡ ಕಲ್ಲುಗಳಿಂದಲೇ ಉತ್ತರ ಕೊಡಬೇಕಿತ್ತು. ಯಾವ ಕಡೆಯವರಿಗೆ ಎಷ್ಟು ಹಾನಿಯಾಯಿತು ಎಂಬ ಪ್ರಶ್ನೆ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋಗಳು ಹಾಗೂ ಅದನ್ನ ಸಮರ್ಥಿಸುವ ಅಥವಾ ನಿರಾಕರಿಸುವ ವಿಚಾರವಲ್ಲ ಇದು. ಮಾರಕವಲ್ಲದ ಶಸ್ತ್ರಗಳಿಗಿಂತ ಹೆಚ್ಚು ಅಪಾಯಕಾರಿಯಾಗಿರುವ ವಸ್ತುಗಳಿಂದ ಹಲ್ಲೆ ಮಾಡಿರುವ ವಿಚಾರ ಇದಾಗಿದೆ.

  ಇದನ್ನೂ ಓದಿ: ಭಾರತದ ಯಾವ ಪ್ರದೇಶವನ್ನೂ ಚೀನಾ ಆಕ್ರಮಿಸಿಕೊಂಡಿಲ್ಲ; ಸರ್ವಪಕ್ಷ ಸಭೆಯಲ್ಲಿ ಪಿಎಂ ಮೋದಿ ಹೇಳಿಕೆ

  ಪುಕ್ಕಲ ಚೀನೀ ಸೈನಿಕ:

  ಪಿಎಲ್​ಎ ಸೈನಿಕರ ಮನಸ್ಥಿತಿ ಬಗ್ಗೆ ಚೀನಾದಲ್ಲಿ ಒಂದು ಬಗೆಯಲ್ಲಿ ಚರ್ಚೆಯಾಗುತ್ತಿದೆ. ಆ ದೇಶದ ಒಂದು ಮಗು ಕುಟುಂಬ ನೀತಿಯ (One-child policy) ಕಾರಣದಿಂದಾಗಿ ಅಲ್ಲಿನ ಸೈನಿಕ ಒಬ್ಬ ಪುಕ್ಕಲ, ಹೇಡಿ ಎಂದು ಅಲ್ಲಿನವರೇ ಅಪಹಾಸ್ಯ ಮಾಡುತ್ತಾರೆ. 1962ರ ಯುದ್ಧವನ್ನು ಗೆದ್ದರೆಂದು ಕೆಲವರು ವಾದ ಮಾಡಬಹುದು. ಆದರೆ, 1962ರಲ್ಲಿ ಚೀನೀಯರು ‘ಮಾನವ ಅಲೆ’ ತಂತ್ರ ಪ್ರಯೋಗಿಸಿದರು. ನಮ್ಮ ಭಾರತೀಯ ಸೈನಿಕರಿಗೆ ಶಸ್ತ್ರಾಸ್ತ್ರದ ಕೊರತೆ ಎದುರಾಯಿತು. ಟುಲುಂಗ್ ಲಾ, ಮಾಗೋ, ಪೋಷಿಂಗ್ ಲಾ ಮೂಲಕ ದೊಡ್ಡ ಪ್ರಮಾಣದಲ್ಲಿ ಚೀನೀ ಸೈನಿಕರು ನುಸುಳಿದರು. ನ್ಯುಕಮಡೋಂಗ್ ಮತ್ತು ಸ್ಯಾಪರ್ ಎಂಬ ಪ್ರದೇಶಗಳಲ್ಲಿ ರಸ್ತೆಗೆ ತಡೆ ನಿರ್ಮಿಸಿ, ಭಾರತಕ್ಕೆ ಅಗತ್ಯ ಸಾಮಗ್ರಿಗಳ ಪೂರೈಕೆ ಸಿಗದಂತೆ ಮಾಡಿದರು. ಜವಾಹರಲಾಲ್ ನೆಹರೂ ನಾಯಕತ್ವದಲ್ಲಿ ಮೊದಲೇ ಸೊರಗಿಹೋಗಿದ್ದ ಭಾರತೀಯ ಸೇನೆ ಆ ಸಂದರ್ಭದಲ್ಲಿ ಇನ್ನಷ್ಟು ಕಷ್ಟಕ್ಕೆ ಈಡಾಯಿತು. ಆದರೂ ಕೂಡ ಭಾರತೀಯ ಸೈನಿಕರ ಪ್ರತಿರೋಧ ಮಾತ್ರದಿಂದಲೇ ಚೀನಾದ ಪಿಎಲ್​ಎ ಸೇನೆಯ 2,419 ಸೈನಿಕರಿಗೆ ಹಾನಿ (Casualities) ಆಯಿತು. ಅಧಿಕೃತ ಲೆಕ್ಕದ ಪ್ರಕಾರವೇ 722 ಚೀನೀ ಸೈನಿಕರು ಸತ್ತರು. ವಾಸ್ತವದಲ್ಲಿ ಈ ಅಂಕಿ ಇನ್ನೂ ಹೆಚ್ಚು. ಕುತೂಹಲದ ಸಂಗತಿ ಎಂದರೆ, 1962ರ ಯುದ್ಧಕ್ಕಾಗಿ ಚೀನಾ ದೊಡ್ಡ ಸಂಖ್ಯೆಯಲ್ಲಿ ಟಿಬೆಟಿಯನ್ ಮತ್ತು ಉಯ್ಘರ್(Uyghur) ಜನರನ್ನ ಬಳಸಿಕೊಂಡಿತು.

  ವಿಯೆಟ್ನಾಂ ಪೆಟ್ಟು:

  ಪಿಎಲ್​ಎ ಸೇನೆಯ ನಿಜವಾದ ಸಾಮರ್ಥ್ಯ ಅನಾವರಣಗೊಂಡಿದ್ದು 1979ರಲ್ಲಿ. ಆಗ ವಿಯೆಟ್ನಾಮ್ ದೇಶಕ್ಕೆ ಪಾಠ ಕಲಿಸಲು ಚೀನಾ ಆಕ್ರಮಣ ಮಾಡಿತು. ಆ ಸಂದರ್ಭದಲ್ಲಾಗಲೇ ಚೀನಾದ ಒಂದು ಮಗು ನೀತಿ ಪರಿಣಾಮ ಬೀರಲು ಆರಂಭಿಸಿತ್ತು. 1979, ಫೆಬ್ರುವರಿ 17ರಿಂದ ಮಾರ್ಚ್ 16ರವರೆಗೆ ಮೂರು ವಾರ ಮತ್ತು ಆರು ದಿನ ಕಾಲ ಯುದ್ಧ ನಡೆಯಿತು. ವಿಯೆಟ್ನಾಂ ಪ್ರಕಾರ ಪಿಎಲ್​ಎ ಸೇನೆಯ 62,500 ಸೈನಿಕರಿಗೆ ಹಾನಿಯಾಯಿತು. 550 ಮಿಲಿಟರಿ ವಾಹನಗಳು ಮತ್ತು 115 ಆರ್ಟಿಲರಿ ಶಸ್ತ್ರಗಳು ನಾಶವಾದವು. ಈ ಅಂಕಿ ಅಂಶವನ್ನು ಚೀನಾ ಸ್ವಾಭಾವಿಕವಾಗಿ ಒಪ್ಪಿಕೊಳ್ಳುವುದಿಲ್ಲ. ಈಗ ಅಧ್ಯಕ್ಷರಾಗಿರುವ ಕ್ಸಿ ಜಿನ್​ಪಿಂಗ್ ಅವರು ಆಗ ಚೀನಾದ ರಕ್ಷಣಾ ಸಚಿವಾಲಯದ ಕಾರ್ಯದರ್ಶಿಯಾಗಿದ್ದರು. ವಿಯೆಟ್ನಾಮ್​ನಿಂದ ಚೀನಾ ಕಾಲ್ಕಿತ್ತಿತು. ಅದಾದ ಬಳಿಕ ವಿಯೆಟ್ನಾಂ 1989ರವರೆಗೆ ಕಾಂಬೋಡಿಯಾ ಪ್ರದೇಶವನ್ನು ವಶದಲ್ಲೇ ಇಟ್ಟುಕೊಂಡಿತು. 1990ರವರೆಗೂ ಚೀನಾ ಮತ್ತು ವಿಯೆಟ್ನಾಂ ಮಧ್ಯೆ ಗಡಿ ಸಂಘರ್ಷ ಮುಂದುವರಿದೇ ಇತ್ತು.

  ಯಾವ ಯುದ್ಧವನ್ನೇ ಗೆಲ್ಲದ ಚೀನಾಗೆ ಹೆದರಬೇಕಾ?:

  ನಾವು ಯಾವತ್ತೂ ಎದುರಾಳಿಯನ್ನು ಕಡಿಮೆ ಅಂದಾಜು ಮಾಡಬಾರದು ಎಂಬುದೇನೋ ಹೌದು. ಆದರೆ, 1962ರ ಅಸಮಾನ ಯುದ್ಧ (Unequal War) ಹೊರತುಪಡಿಸಿ ಚೀನಾದ ಪಿಎಲ್​ಎ ಸೇನೆ ಯಾವ ಯುದ್ಧವನ್ನೂ ಗೆದ್ದದ್ದಿಲ್ಲ. ಈಗಿರುವ ಪಿಎಲ್​ಎ ಸೈನಿಕರಿಗೆ ಯಾವ ಯುದ್ಧ ಅನುಭವವೂ ಇಲ್ಲ. ಹೀಗಿರುವಾಗ ಈ ಸೇನೆಯ ಹುಚ್ಚು ವರ್ತನೆಗಳಿಗೆ ನಮ್ಮ ಭಾರತೀಯ ಸೈನಿಕರು ಈಡಾಗಲು ಯಾಕೆ ಬಿಟ್ಟಿದ್ದೇವೆ ಎಂಬುದು ಪ್ರಶ್ನೆ. ಕಲ್ಲುಗಳನ್ನಿಟ್ಟುಕೊಂಡು ನಾಲ್ಕನೇ ವಿಶ್ವ ಮಹಾಯುದ್ಧಕ್ಕಾಗಿ ಸಿದ್ಧತೆ ನಡೆಸಿದ್ದೇವೆಯಾ? ಭಾರತೀಯ ಸೈನಿಕನ ಘನತೆ ಮತ್ತು ಹೋರಾಟದ ಕೆಚ್ಚಿಗೆ ಧಕ್ಕೆಯಾಗುತ್ತಿರುವುದು ಗಮನಕ್ಕೆ ಬಂದಿಲ್ಲವಾ? ಪಿಎಲ್​ಎ ಸೈನಿಕರು ಯಾವ ನೀತಿ ನಿಜಾಯಿತಿಗೂ ಬೆಲೆ ಕೊಡದೆ ಐರನ್ ರಾಡ್, ಮುಳ್ಳಿನ ತಂತಿಯ ದೊಣ್ಣೆಗಳನ್ನ ಬಳಸಿ ದಾಂಧಲೆ ನಡೆಸುವಾಗ ನಾವು ಮಾತ್ರ ಸೇನೆಯ ಪ್ರೋಟೋಕಾಲ್, ನೀತಿ ನಿಯಮಾವಳಿ ಅಂತ ಅಡಗಿಕೊಳ್ಳುವುದು ನಾಚಿಕೆಯ ವಿಷಯ ಅಲ್ಲವಾ? ದುರದೃಷ್ಟವೆಂದರೆ ರಕ್ಷಣಾ ಕ್ಷೇತ್ರಕ್ಕೆ ವಿನಿಯೋಗವಾಗುವ ಹಣದ ಪ್ರಮಾಣ ಕಡಿಮೆ ಇದೆ. 1962ರಲ್ಲಿದ್ದಕ್ಕಿಂತಲೂ ಕೆಲವೊಮ್ಮೆ ಹೀನ ಎನಿಸುತ್ತದೆ. ಆದರೂ ಕೂಡ ಎಲ್​ಎಸಿಯ ಕಲ್ಪಿತ ರೇಖೆಯ ಗೊಂದಲವೆಂದು ನೆಪ ಹೇಳುತ್ತಾ ಅತಿಕ್ರಮಣವನ್ನು ಗಂಭೀರವಾಗಿ ಪರಿಗಣಿಸದೇ ನಮ್ಮ ಸೈನಿಕರಿಗೆ ಇಂಥ ಅವಮಾನದ ಪರಿಸ್ಥಿತಿ ತಂದೊಡ್ಡುವುದು ಸರಿಯೇ?

  ಸಮರಾನುಭವಿ ಸೇನಾಧಿಕಾರಿಯೊಬ್ಬರು ಹೀಗೆ ಹೇಳುತ್ತಾರೆ: “1967ರ ನಾತು ಲಾ ಘಟನೆಯನ್ನ ಸ್ಮರಿಸಿಕೊಳ್ಳುವ ಸಂದರ್ಭ ಬಂದಿದೆ. ಒಂದೆಡೆ ಚೀನೀಯರು ಅತಿಕ್ರಮಿಸುತ್ತಿದ್ದರೆ ನಾವು ಉರುಳಿಸುತ್ತಲೇ ಹೋದೆವು. ವಾಸ್ತವ ಗಡಿ ರೇಖೆಯ ಬಿಲ್ಲಿ ಗಸ್ತು ಸ್ಥಳದ ಬಳಿ ಎರಡೂ ಕಡೆಯ ಸೈನಿಕರು ಬಹಳ ಆಕ್ರಮಣಕಾರಿ ರೀತಿಯಲ್ಲಿ ಪಹರೆ ನಡೆಸಿದ್ದರು. ಅಂತಿಮವಾಗಿ ಚೀನೀಯರು ಎರಗಿಬಿದ್ದರು. ನಾವು ಅಷ್ಟೇ ಪ್ರಬಲವಾಗಿ ತಿರುಗೇಟು ಕೊಟ್ಟೆವು” ಎನ್ನುತ್ತಾರೆ.

  2017ರಲ್ಲಿ ಪಾಂಗಾಂಗ್ ಟ್ಸೋದಲ್ಲಿ ಚೀನೀ ಸೈನಿಕರು ಕಲ್ಲು ತೂರಾಟ ಮತ್ತು ಐರನ್ ರಾಡ್​ಗಳನ್ನ ಬಳಸಿದ ಘಟನೆ ನಡೆದಾಗ ಸೇನಾ ಮುಖ್ಯಸ್ಥರಾಗಿದ್ದವರೇ ಈಗ ರಕ್ಷಣಾ ಮುಖ್ಯಸ್ಥ (ಸಿಡಿಎಸ್)ರಾಗಿದ್ದಾರೆ. ಅವರು ಆಗಲೇ ಏನಾದರೂ ಕ್ರಮ ಕೈಗೊಳ್ಳಬೇಕಿತ್ತು. ಏನೂ ಮಾಡಲಿಲ್ಲ. ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಈಗಲೂ ಅವರು ಪ್ರತಿಕ್ರಿಯೆ ನೀಡಿಲ್ಲ. ಈ ಮುಂಚೆಯೂ ಪಿಎಲ್​ಎ ಸೈನಿಕರು ನಮ್ಮ ರಕ್ಷಣಾ ಗೋಡೆ ಬಳಿ ಬಂದು ಕಾಲಿನಿಂದ ಒದೆಯುತ್ತಿದ್ದ ವಿಡಿಯೋ ಕ್ಲಿಪ್​ಗಳು ಬೆಳಕಿಗೆ ಬಂದಿದ್ದವು. ಇಂಥ ಕುಕೃತ್ಯಗಳನ್ನ ಹೇಗೆ ಒಪ್ಪಿಕೊಳ್ಳಲಾಗುತ್ತಿದೆ? ಚೀನೀಯರಿಗೆ ನಾವು ಸ್ಪಷ್ಟ ಸಂದೇಶ ರವಾನಿಸಬೇಕಿದೆ. ಅವರಿಗೆ ಬುದ್ಧಿಹೇಳಲು ನಾವು ಹೆದರುತ್ತಿದ್ದೇವೆಯೇ? ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ಆದೇಶ ಕ್ರಮ ವ್ಯವಸ್ಥೆಯನ್ನು ಬದಲಿಸುವ ತುರ್ತು ಅಗತ್ಯ ಇದೆ. ಎಲ್​ಎಸಿಯಲ್ಲಿ ನಿಯೋಜಿಸಲಾಗಿರುವ ಕೇಂದ್ರೀಯ ಶಸ್ತ್ರ ಪೊಲೀಸ್ ಪಡೆ (CAPF) ಸೇನೆಯ ಕಮ್ಯಾಂಡ್ ಅಡಿಯಲ್ಲಿ ಬರದೇ ತಮ್ಮದೇ ಪ್ರತ್ಯೇಕ ಕಮ್ಯಾಂಡ್ ವ್ಯವಸ್ಥೆ ಹೊಂದಿರುವುದು ಮೂರ್ಖತನ. ಇದನ್ನು ಸರಿಪಡಿಸುವ ಸಮಯ ಬಂದಿದೆ.

  - ನಿವೃತ್ತ ಲೆಫ್ಟಿನೆಂಟ್ ಜನರಲ್ ಪಿ.ಸಿ. ಕಟೋಚ್

  (ಲೇಖಕರು ನಿವೃತ್ತ ಭಾರತೀಯ ಸೇನಾಧಿಕಾರಿ. ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಅವರ ವೈಯಕ್ತಿಕ.)
  First published: