ನವದೆಹಲಿ(ಜೂನ್ 17): ಲಡಾಖ್ನಲ್ಲಿ ಭಾರತ ಮತ್ತು ಚೀನಾ ಮಧ್ಯೆ ನಡೆದ ಘರ್ಷಣೆ ಮತ್ತು ಚೀನಾದ ಅತಿಕ್ರಮಣದ ಬಗ್ಗೆ ಕೇಂದ್ರ ಸರ್ಕಾರ ವಹಿಸಿರುವ ಮೌನವನ್ನು ವಿಪಕ್ಷ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಕ್ಷೇಪಿಸಿದ್ದಾರೆ. ಲಡಾಖ್ನ ವಾಸ್ತವ ಗಡಿ ರೇಖೆಯಲ್ಲಿನ ಸ್ಥಿತಿ ಬಗ್ಗೆ ದೇಶಕ್ಕೆ ವಸ್ತುಸ್ಥಿತಿ ತಿಳಿಸಬೇಕೆಂದು ಆಗ್ರಹಿಸಿದ್ದಾರೆ.
ಗಾಲ್ವನ್ ಕಣಿವೆಯಲ್ಲಿ ಚೀನೀ ಸೈನಿಕರ ದಾಳಿಯಲ್ಲಿ ಮೃತಪಟ್ಟ 20 ಭಾರತೀಯ ಸೈನಿಕರಿಗೆ ವಿಡಿಯೋ ಸಂದೇಶದ ಮೂಲಕ ಗೌರವ ಸಲ್ಲಿಸಿದ ಸೋನಿಯಾ ಗಾಂಧಿ, ಈ ಗಡಿಬಿಕ್ಕಟ್ಟನ್ನು ಎದುರಿಸಲು ಕೇಂದ್ರ ಸರ್ಕಾರ ಕೈಗೊಳ್ಳಬೇಕೆಂದಿರುವ ಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕೆಂದು ಒತ್ತಾಯಿಸಿದ್ಧಾರೆ.
“ನಮ್ಮ 20 ಸೈನಿಕರ ಬಲಿದಾನ ಇಡೀ ದೇಶದ ಸಾಕ್ಷಿಪ್ರಜ್ಞೆಯನ್ನು ಅಲುಗಾಡಿಸಿದೆ… ಕಳೆದ ಒಂದೂವರೆ ತಿಂಗಳಲ್ಲಿ ಚೀನಾ ಲಡಾಖ್ನಲ್ಲಿ ನಮ್ಮ ಭೂಭಾಗವನ್ನ ಅತಿಕ್ರಮಿಸಿರುವುದು ಎಲ್ಲರಿಗೂ ಗೊತ್ತು. ಇವತ್ತು ಭಾರತ ಕೋಪೋದ್ರೇಕಗೊಂಡಿದೆ. ಚೀನಾ ನಮ್ಮ ಭಾರತದ ನೆಲವನ್ನ ವಶಪಡಿಸಿಕೊಳ್ಳಲು ಹಾಗೂ 20 ಸೈನಿಕರ ಬಲಿ ತೆಗೆದುಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬುದನ್ನು ಪ್ರಧಾನ ಮಂತ್ರಿಗಳು ವಿವರಿಸಲಿ” ಎಂದು ಸೋನಿಯಾ ಗಾಂಧಿ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: India China Border violence: ಭಾರತೀಯ ಸೈನಿಕರ ಸಾವಿನ ನೋವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ; ಅಮಿತ್ ಶಾ ಸಂತಾಪ
“ನಾಪತ್ತೆಯಾಗಿರುವ ಸೈನಿಕರು ಇದ್ದಾರೆಯೇ? ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಸೈನಿಕರು ಮತ್ತು ಸೇನಾಧಿಕಾರಿಗಳ ಸಂಖ್ಯೆ ಎಷ್ಟು? ಚೀನಾ ಯಾವೆಲ್ಲಾ ಪ್ರದೇಶಗಳನ್ನ ವಶಪಡಿಸಿಕೊಂಡಿದೆ? ಇದರ ಬಗ್ಗೆ ಸರ್ಕಾರದ ಚಿಂತನೆ ಮತ್ತು ತಂತ್ರಗಳೇನು?” ಎಂದು ಎಐಸಿಸಿ ಅಧ್ಯಕ್ಷೆ ಪ್ರಶ್ನೆಗಳನ್ನ ಹಾಕಿದ್ದಾರೆ.
ಇದೇ ವೇಳೆ, ಈ ಮಹತ್ತರ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ಹಾಗೂ ಸೇನೆಯ ಜೊತೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದ ಅವರು, ಶತ್ರುಗಳ ಎದುರು ಇಡೀ ದೇಶವೇ ಒಗ್ಗೂಡಿ ನಿಲ್ಲುತ್ತದೆ ಎಂದು ಆಶಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ