HOME » NEWS » India-china » WAR WAS ON BRING BUT WAS AVERTED BY INDIA SAYS ARMY OFFICER LT GEN YK JOSHI SNVS

ಗಡಿಯಲ್ಲಿ ಚೀನಾವನ್ನು ಹತಾಶೆಗೆ ನೂಕಿತ್ತು ಆ ಒಂದು ಬೆಳವಣಿಗೆ; ಸೇನಾಧಿಕಾರಿ ಲೆ. ಜ. ಜೋಶಿ ಬಿಚ್ಚಿಟ್ಟಿದ್ಧಾರೆ ಸತ್ಯ

ಆಗಸ್ಟ್ 29 ಮತ್ತು 30ರಂದು ಲಡಾಖ್​ನ ಪಾಂಗಾಂಗ್ ಸೌಥ್​ನಲ್ಲಿರುವ ಈ ಒಂದು ಪ್ರದೇಶವನ್ನು ಭಾರತೀಯ ಸೇನಾಪಡೆಗಳು ವಶಕ್ಕೆ ಪಡೆದದ್ದು ಚೀನಾವನ್ನು ತಲ್ಲಣಗೊಳಿಸಿತ್ತು. ಅದನ್ನ ಆಕ್ರಮಿಸಿಕೊಳ್ಳಲು ಚೀನಾ ಪ್ರತಿಕಾರ್ಯಾಚರಣೆ ನಡೆಸಿದಾಗ ಯುದ್ಧದ ಕಾರ್ಮೋಡ ಕವಿದಿತ್ತಂತೆ.

news18
Updated:February 18, 2021, 11:39 AM IST
ಗಡಿಯಲ್ಲಿ ಚೀನಾವನ್ನು ಹತಾಶೆಗೆ ನೂಕಿತ್ತು ಆ ಒಂದು ಬೆಳವಣಿಗೆ; ಸೇನಾಧಿಕಾರಿ ಲೆ. ಜ. ಜೋಶಿ ಬಿಚ್ಚಿಟ್ಟಿದ್ಧಾರೆ ಸತ್ಯ
ಲೆಫ್ಟಿನೆಂಟ್ ಜನರಲ್ ವೈಕೆ ಜೋಷಿ
  • News18
  • Last Updated: February 18, 2021, 11:39 AM IST
  • Share this:
ನವದೆಹಲಿ: ಕಳೆದ ವರ್ಷದ ಲಡಾಖ್​ನ ಗಡಿಭಾಗದಲ್ಲಿ ಭಾರತ ಮತ್ತು ಚೀನಾ ಮಧ್ಯೆ 9 ತಿಂಗಳ ಕಾಲ ತಿಕ್ಕಾಟ ನಡೆದ ಘಟನೆ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆಯುವಷ್ಟು ಗಂಭೀರವಾಗಿದೆ. ಈಗ ಎರಡೂ ದೇಶಗಳ ಸೇನಾಪಡೆಗಳು ಎಲ್​ಎಸಿ ಗಡಿಭಾಗದಿಂದ ಹಿಂದಕ್ಕೆ ಸರಿಯಲು ಒಪ್ಪಿಕೊಂಡು ಆ ಪ್ರಕ್ರಿಯೆ ಚಾಲನೆಯಲ್ಲಿದೆ. ಕೆಲವೇ ತಿಂಗಳಲ್ಲಿ ಎಲ್ಲವೂ ಅಂದುಕೊಂಡಂತೆ ಆದರೆ ಭಾರತ-ಚೀನಾ ಗಡಿ ಸಂಘರ್ಷ ಒಂದು ಅನಿರ್ದಿಷ್ಟ ವಿರಾಮ ಸಿಗಬಹುದು. ಆದರೆ, ಲಡಾಖ್ ಗಡಿ ತಿಕ್ಕಾಟದ ಆ 9 ತಿಂಗಳಲ್ಲಿ ಆದ ಬೆಳವಣಿಗೆ ಒಂದು ದೊಡ್ಡ ಯುದ್ಧಕ್ಕೇ ಎಡೆ ಮಾಡಿಕೊಡುವ ಅಪಾಯ ಇತ್ತೆನ್ನಲಾಗಿದೆ. ಭಾರತೀಯ ಸೇನೆಯ ನಾರ್ತರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ ಕೆ ಜೋಷಿ ಅವರು ನ್ಯೂಸ್18 ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಇದೂ ಸೇರಿದಂತೆ ಅನೇಕ ವಿಚಾರಗಳನ್ನ ಹಂಚಿಕೊಂಡಿದ್ಧಾರೆ. ಆಗಸ್ಟ್ 31ರಂದು ಚೀನಾ ಯುದ್ಧಕ್ಕೆ ಎರಗಿ ಬರುವಷ್ಟು ಹತಾಶೆಗೊಂಡ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಆ ಬೆಳವಣಿಗೆಗೆ ಕಾರಣವಾದರೂ ಏನು?

“ಪೂರ್ವ ಲಡಾಖ್​ನಲ್ಲಿ ಚೀನಾ ಜೊತೆ 9 ತಿಂಗಳ ತಿಕ್ಕಾಟದಲ್ಲಿ ಹಲವು ಬಿಸಿ ಕ್ಷಣಗಳು ಉದ್ಭವವಾಗಿದ್ದವು. ಕಳೆದ ತಿಂಗಳ ಆಗಸ್ಟ್ 31ರಂದು ಭಾರತ ಮತ್ತು ಚೀನಾ ಬಹುತೇಕ ಯುದ್ಧದ ಅಂಚಿನಲ್ಲಿ ನಿಂತಿದ್ದವು. ಆಗಸ್ಟ್ 29 ಮತ್ತು 30ರಂದು ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿರುವ ಕೈಲಾಶ್ ಶ್ರೇಣಿಗಳನ್ನ ಭಾರತ ವಶಪಡಿಸಿಕೊಂಡಿತ್ತು. ಚೀನಾಗೆ ಒಂದು ಪ್ರಮುಖ ಆಯಕಟ್ಟಿನ ಪ್ರದೇಶ ಕೈತಪ್ಪಿದಂತಾಗಿತ್ತು. ಭಾರತದ ಈ ದಿಢೀರ್ ನಡೆಯಿಂದ ಚೀನಾ ಸಂಪೂರ್ಣ ಹತಾಶೆಗೊಂಡಿತು. ಇದಕ್ಕೆ ಪ್ರತಿಯಾಗಿ ಚೀನಾ ಸೇನಾ ಕಾರ್ಯಾಚರಣೆಗೆ ಮುಂದಾಯಿತು” ಎಂದು ಲೆ| ಜ| ಜೋಷಿ ಹೇಳಿದ್ದಾರೆ.

ಯುದ್ಧದ ಸಂದರ್ಭ ಎದುರಾದರೆ ಈ ಕೈಲಾಸ್ ರೇಂಜ್ ಪ್ರದೇಶಗಳು ಬಹಳ ಮಹತ್ವ ಪಡೆಯುತ್ತವೆ. ಇಲ್ಲಿಂದ ಶತ್ರು ಸೈನಿಕರ ಮೇಲೆ ಮುಗಿಬೀಳುವುದು ಸೇರಿದಂತೆ ಅನೇಕ ವಿಧದ ಅನುಕೂಲಗಳು ಸಿಗುತ್ತವೆ. ಭಾರತೀಯ ಸೇನಾಪಡೆಗಳು ಈ ಪ್ರದೇಶವನ್ನ ವಶಪಡಿಸಿಕೊಂಡ ಬೆನ್ನಲ್ಲೇ ಅದನ್ನ ಮರಳಿ ಪಡೆಯಲು ಚೀನಾದ ಪಿಎಲ್​ಎ ಸೇನಾ ಪಡೆಗಳು ಆ ಪ್ರದೇಶಕ್ಕೆ ಬರುತ್ತವೆ. ಆಗ ಬಹುತೇಕ ಯುದ್ಧದ ಸಂದರ್ಭವೇ ಎದುರಾಗಿತ್ತು ಎನ್ನುತ್ತಾರೆ ಭಾರತೀಯ ಸೇನಾಧಿಕಾರಿ.

ಇದನ್ನೂ ಓದಿ: Petrol Diesel Price: ಪೆಟ್ರೋಲ್‌, ಡೀಸೆಲ್‌ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದೇಕೆ?; ಇಲ್ಲಿದೆ ಸಂಪೂರ್ಣ ಮಾಹಿತಿ...!

“ಈ ಬೆಳವಣಿಗೆ ಮುಂಚೆ ಅದಾಗಲೇ ಗಾಲ್ವನ್ ಘಟನೆ ಆಗಿ ಹೋಗಿತ್ತು. ನಮಗೆ ಬೇಕಾದಂತೆ ಕಾರ್ಯಾಚರಣೆ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ನಮ್ಮ ಶತ್ರುಗಳು ಮೇಲೆ ಬರುತ್ತಿರುವುದು ಕಾಣುತ್ತಿರುವಂತೆಯೇ ನನ್ನ ತಂಡದ ಸದಸ್ಯರು ಜಾಗೃತಗೊಂಡರು. ಟ್ರಿಗರ್ ಒತ್ತಲು ಧೈರ್ಯ ಬೇಕಾಗಿರಲಿಲ್ಲ. ಆದರೆ, ಟ್ರಿಗರ್ ಒತ್ತದೇ ತಾಳ್ಮೆ ತೋರುವುದಕ್ಕೆ ಬೇಕಿತ್ತು ನಿಜವಾದ ಧೈರ್ಯ. ನಾವಂದು ಆ ಧೈರ್ಯ ತೋರಿದ್ದರಿಂದಲೇ ಯುದ್ಧ ಆರಂಭಗೊಳ್ಳುವುದು ತಪ್ಪಿತು. ನಾವು ಯುದ್ಧದ ಅಂಚಿಗಂತೂ ತಲುಪಿದ್ದೆವು” ಎಂದು ಲೆ| ಜ| ವೈ ಎನ್ ಜೋಶಿ ನ್ಯೂಸ್18 ಗೆ ತಿಳಿಸಿದ್ದಾರೆ.

ಇದೇ ವೇಳೆ, ಅನೇಕ ಚರ್ಚೆ, ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿರುವ ಗಾಲ್ವನ್ ಕಣಿವೆ ಸಂಘರ್ಷದಲ್ಲಿ ಚೀನಾ ಕಡೆ ಎಷ್ಟು ಮಂದಿ ಘಾಸಿಗೊಂಡರೆಂಬ ಬಗ್ಗೆ ಸೇನಾಧಿಕಾರಿ ಮೊದಲ ಬಾರಿಗೆ ಮಾಹಿತಿ ಬಿಚ್ಚಿಟ್ಟಿದ್ಧಾರೆ. ಇವರ ಪ್ರಕಾರ ಗಾಲ್ವನ್ ಸಂಘರ್ಷದಲ್ಲಿ 45 ಮಂದಿ ಚೀನೀ ಸೈನಿಕರಿಗೆ ಸಾವು ಅಥವಾ ಗಾಯಗಳಾಗಿವೆಯಂತೆ. ಆ ಘಟನೆಯಲ್ಲಿ 20 ಭಾರತೀಯ ಸೈನಿಕರು ಬಲಿಯಾಗಿದ್ದಾರೆ ಎಂದು ನಮ್ಮ ಸೇನೆ ಅಧಿಕೃತವಾಗಿ ಒಪ್ಪಿಕೊಂಡಿದೆಯಾದರೂ ಚೀನಾ ಮಾತ್ರ ಈ ವಿಚಾರದಲ್ಲಿ ಅಂಕಿ ಬಿಡುಗಡೆ ಮಾಡಲು ನಿರಾಕರಿಸಿದೆ.

“ಈ ಬಗ್ಗೆ ಅಂದಾಜು ಮಾಡುವ ಇಚ್ಛೆ ಇಲ್ಲ. ಆ ಘಟನೆ ನಡೆದಾಗ ನಮ್ಮ ಪರಿವೀಕ್ಷಣೆಯ ತಂಡಗಳು ಎಲ್ಲವನ್ನೂ ವೀಕ್ಷಿಸಿದ್ದವು. ಆ ಸಂಘರ್ಷದಲ್ಲಿ ಶತ್ರುಗಳು ಸ್ಟ್ರೆಚರ್​ಗಳಲ್ಲಿರುವುದನ್ನು ನಾವು ಗುರುತಿಸಲು ಸಾಧ್ಯವಾಯಿತು. ಘಾಸಿಗೊಂಡ ಚೀನೀ ಸೈನಿಕರ ಸಂಖ್ಯೆ 60ಕ್ಕಿಂತ ಹೆಚ್ಚು ಎಂಬುದು ವಾಸ್ತವ. ಆದರೆ, ಈ 60 ಜನರಲ್ಲಿ ಎಷ್ಟು ಮಂದಿ ಸತ್ತರು, ಎಷ್ಟು ಮಂದಿ ಗಾಯಗೊಂಡರು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ನಾನು ಒಂದು ಅಂತಿಮ ಅಂಕಿ ಸಂಖ್ಯೆ ನೀಡಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ TASS ಎಂಬ ರಷ್ಯನ್ ಸಂಸ್ಥೆ 45 ಸಂಖ್ಯೆ ಎಂದು ಹೇಳಿದೆ. ನಾವು ಕೂಡ ಅದೇ ಸಂಖ್ಯೆ ಎಂದು ಹೇಳಬಹುದು. ವಾಸ್ತವವಾಗಿ ಅದಕ್ಕಿಂತಲೂ ಹೆಚ್ಚೇ ಇರುತ್ತದೆ” ಎಂದು ನಾರ್ತರ್ನ್ ಕಮಾಂಡರ್ ಜೋಷಿ ಮಾಹಿತಿ ನೀಡಿದ್ದಾರೆ.ಲೆ. ಜ. ಜೋಷಿ ಜೊತೆ ನ್ಯೂಸ್18ನ ಶ್ರೇಯಾ ಅವರು ನಡೆಸಿದ ಸಂಪೂರ್ಣ ಸಂದರ್ಶನದ ಯೂಟ್ಯೂಬ್ ವಿಡಿಯೋ ಇಲ್ಲಿದೆ: 

Youtube Video


ಲೆಫ್ಟಿನೆಂಟ್ ಜನರಲ್ ವೈಕೆ ಜೋಷಿ ಅವರು ಒಬ್ಬ ಕಾರ್ಗಿಲ್ ಹೀರೋ ಆದವರು. ಲಡಾಖ್​ನ ಗುಡ್ಡಗಾಡುಗಳಲ್ಲೇ ತಮ್ಮ ವೃತ್ತಿಜೀವನದ ಹೆಚ್ಚಿನ ಸಮಯ ಕಳೆದಿದ್ದಾರೆ. ಇವರು ಚೀನಾದ ಮಂದಾರಿನ್ ಭಾಷೆಯನ್ನೂ ಚೆನ್ನಾಗಿ ಬಲ್ಲವರು. ಇವರ ಪ್ರಕಾರ, ಕಳೆದ ವರ್ಷದ ಲಡಾಖ್ ಗಡಿಕಿತಾಪತಿ ಮಾಡಿ ಚೀನಾದವರಿಗೆ ಲಾಭವಾಗಿದ್ದು ಏನಿಲ್ಲ. ಬರೀ ಹೆಸರು ಕೆಡಿಸಿಕೊಂಡಿದ್ದಾರಂತೆ.

“ನನಗೆ ಒಂದು ಮಂದಾರಿನ್ ನಾಣ್ನುಡಿ ನೆನಪಿಗೆ ಬರುತ್ತದೆ. ದೂರದಲ್ಲಿರುವ ಸಂಬಂಧಿಕರನ್ನು ಯಾವತ್ತೂ ಕೂಡ ನಮ್ಮ ನೆರೆಹೊರೆಯವರಿಗೆ ಹೋಲಿಕೆ ಮಾಡಲಾಗದು ಎಂದು ಹೇಳಲಾಗುತ್ತದೆ. ಅಂದರೆ, ದೂರದಲ್ಲಿರುವ ಸಂಬಂಧಿಕರನ್ನ ಅವಲಂಬಿಸುವುದಕ್ಕಿಂತ ನೆರೆಹೊರೆಯವರೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವುದು ಲೇಸು ಎಂದರ್ಥ. ಇದನ್ನು ಚೀನೀಯರು ಯಾವಾಗಲೂ ಹೇಳುತ್ತಾ ಬಂದಿದ್ದರು. ನಾನು ಈ ನಾಣ್ನುಡಿಯನ್ನು ಚೀನೀಯರಿಗೆ ಮರಳಿ ಹೇಳಲು ಬಯಸುತ್ತೇನೆ. ನಾವು ಒಳ್ಳೆಯ ನೆರೆಹೊರೆಯವರಾಗಬೇಕಾದರೆ ಎರಡೂ ಕಡೆಯಿಂದ ನಂಬಿಕೆಗಳು ಬರಬೇಕು. ಈ ನಂಬಿಕೆ ಬೆಳೆಸುವ ಜವಾಬ್ದಾರಿ ಈಗ ಚೀನೀಯರಿಗೆ ಇದೆ” ಎಂದು ಸೇನಾಧಿಕಾರಿ ಹೇಳಿದ್ದಾರೆ.

ಸಂದರ್ಶಕಿ: ಶ್ರೇಯಾ ಧೌಂಡಿಯಾಲ್, ನ್ಯೂಸ್18
Published by: Vijayasarthy SN
First published: February 18, 2021, 11:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories