ನವದೆಹಲಿ: ಚೀನಾ ಕಿತಾಪತಿ ಮಾಡುತ್ತಿರುವ ಪೂರ್ವ ಲಡಾಖ್ನ ಎಲ್ಎಸಿ ಗಡಿಭಾಗದಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಿರುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಒಪ್ಪಿಕೊಂಡಿದ್ದಾರೆ. ಪರಿಸ್ಥಿತಿ ಗಂಭೀರವಾಗಿದ್ದು, ಎರಡೂ ಕಡೆಯಿಂದ ರಾಜಕೀಯ ಮಟ್ಟದಲ್ಲಿ ಬಹಳ ಸುದೀರ್ಘ ಮಾತುಕತೆ ನಡೆಯುವ ಅಗತ್ಯತೆ ಇದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಗಡಿವಿವಾದ ಹಾಗೂ ದ್ವಿಪಕ್ಷೀಯ ಸಂಬಂಧವನ್ನು ಬೇರೆ ಮಾಡಲು ಸಾಧ್ಯವಿಲ್ಲ. ಅವು ಒಂದಕ್ಕೊಂದು ಸಂಬಂಧ ಹೊಂದಿವೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯೊಂದಿಗೆ ನಿನ್ನೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಗಡಿಯಲ್ಲಿನ ಸ್ಥಿತಿಯನ್ನೂ ದ್ವಿಪಕ್ಷೀಯ ಸಂಬಂಧದ ಸ್ಥಿತಿಯನ್ನೂ ಬೇರೆ ಮಾಡಲು ಆಗುವುದಿಲ್ಲ. ಗಾಲ್ವನ್ನಲ್ಲಿ ಆ ದುರದೃಷ್ಟಕರ ಘಟನೆ ನಡೆಯುವ ಮುನ್ನ ನಾನು ಅದನ್ನು ಬರೆದಿದ್ದೆ” ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 10, ಅಂದರೆ ಗುರುವಾರದಂದು ಅವರು ರಷ್ಯಾದ ಮಾಸ್ಕೋದಲ್ಲಿ ಶಾಂಘೈ ಸಹಕಾರ ಸಂಘಟನೆ(ಎಸ್ಸಿಒ)ಗೆ ಸೇರಿದ ಎಂಟು ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಜೈಶಂಕರ್ ತೆರಳಲಿದ್ದಾರೆ. ಅಲ್ಲಿ, ಚೀನಾ ವಿದೇಶಾಂಗ ಸಚಿವ ವ್ಯಾಂಗ್ ಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಎರಡೂ ದೇಶಗಳ ಮಧ್ಯೆ ನಡೆಯಲಿರುವ ಮಾತುಕತೆಯ ಸ್ಪಷ್ಟ ಸ್ವರೂಪ ಏನೆಂದು ತಿಳಿಸಲು ನಿರಾಕರಿಸಿದರು.
ಇದನ್ನೂ ಓದಿ: ಭಾರತದ ಗಡಿಯೊಳಗೆ ನುಸುಳಲು ಚೀನಾ ಪ್ರಯತ್ನ; ಮುನ್ನೆಚ್ಚರಿಕೆ ವಹಿಸಲು ಭಾರತೀಯ ಸೈನಿಕರಿಗೆ ಸೂಚನೆ
“ಚೀನಾ ವಿದೇಶಾಂಗ ಸಚಿವರಿಗೆ ನಾನು ಏನು ಹೇಳುತ್ತೇನೆ ಎಂದು ನಿಮಗೆ ತಿಳಿಸಲು ಸಾಧ್ಯವೇ ಇಲ್ಲ” ಎಂದು ಸ್ಪಷ್ಟಪಡಿಸಿದ ಜೈಶಂಕರ್, ಸೆ. 10ರ ಮಾತುಕತೆಯಲ್ಲಿ ಭಾರತದ ವಾದ ಹೇಗಿರಬಹುದು ಎಂದು ಒಟ್ಟಾರೆ ಸ್ವರೂಪದ ಬಗ್ಗೆ ಅವರು ಬೆಳಕು ಚೆಲ್ಲಿದರು.
1993ರಿಂದಲೂ ಎರಡು ದೇಶಗಳ ನಡುವೆ ಆಗಿರುವ ಹಲವು ಒಪ್ಪಂದಗಳು ನಮ್ಮ ಗಡಿಯಲ್ಲಿ ಕಡಿಮೆ ಸಂಖ್ಯೆಯ ಪಡೆಗಳನ್ನ ನಿಯೋಜಿಸುವುದಕ್ಕೆ ಒತ್ತು ಕೊಟ್ಟಿರುವುದನ್ನು ಪ್ರಸ್ತಾಪಿಸಿದ ಜೈಶಂಕರ್, ಕಳೆದ 30 ವರ್ಷಗಳಿಂದ ಬೆಳೆದುಕೊಂಡು ಬಂದಿರುವ ಸಂಬಂಧದ ರೀತಿಯಲ್ಲಿ ಬಲಪಡಿಸಲು ಗಡಿಯಲ್ಲಿ ಶಾಂತಿಯ ಪರಿಸ್ಥಿತಿ ಎಷ್ಟು ಮುಖ್ಯ ಎಂಬುದನ್ನು ಮನಗಾಣಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದರು.
ಇದನ್ನೂ ಓದಿ: Loan Restructuring: 26 ಕ್ಷೇತ್ರಗಳ ಸಾಲ ಪುನರ್ ರಚನೆಗೆ ಮುಂದಾದ ಕೆ.ವಿ ಕಾಮತ್ ನೇತೃತ್ವದ ತಜ್ಞರ ಸಮಿತಿ
“ಈ ವಿಚಾರಗಳನ್ನ ಗಮನಿಸಲಿಲ್ಲವೆಂದರೆ ಬಹಳ ಮುಖ್ಯ ಪ್ರಶ್ನೆಗಳು ಹುಟ್ಟುತ್ತವೆ. ಈ ಗಂಭೀರ ಪರಸ್ಥಿತಿ ಮೇ ತಿಂಗಳಿಂದಲೂ ಇದ್ದು, ರಾಜಕೀಯ ಮಟ್ಟದಲ್ಲಿ ಎರಡೂ ದೇಶಗಳ ಮಧ್ಯೆ ಬಹಳ ಆಳವಾದ ಮಾತುಕತೆಯ ಅಗತ್ಯತೆ ಹೆಚ್ಚು ಇದೆ…. ಹಾಗೆಯೇ, ಇತಿಹಾಸದಲ್ಲಿ ಉಳಿದುಹೋಗಿರುವ ಸಮಸ್ಯೆಗಳು ಈಗಲೂ ಬಾಧಿಸುವುದನ್ನು ಮುಂದುವರಿಸಿವೆ” ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರು ಅಭಿಪ್ರಾಯಪಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ