ನವದೆಹಲಿ(ಮೇ 26): ಭಾರತ-ಚೀನಾ ಗಡಿಭಾಗದಲ್ಲಿ ಕಳವಳಕಾರಿ ಎನಿಸುವಂಥ ವಾತಾವರಣ ನಿರ್ಮಾಣವಾಗುತ್ತಿದೆ. ಒಂದು ಕಡೆ ಚೀನಾ, ಮತ್ತೊಂದು ಕಡೆ ಪಾಕಿಸ್ತಾನ, ಮಗದೊಂದೆಡೆ ನೇಪಾಳ ಈಗ ಭಾರತಕ್ಕೆ ಗಡಿನೋವು ತಂದಿವೆ. ಲಡಾಕ್ನ ಭಾರತ-ಚೀನಾ ಗಡಿಭಾಗದಲ್ಲಿ ಚೀನೀ ಸೈನಿಕರು ಬಹಳ ಉಗ್ರವಾಗಿ ವರ್ತಿಸುತ್ತಿದ್ಧಾರೆ. ಯುದ್ದಕ್ಕೆ ಅಣಿಗೊಳ್ಳುತ್ತಿರುವಂತೆ ಗಡಿಭಾಗದಲ್ಲಿ ಹೆಚ್ಚೆಚ್ಚು ಸೇನಾ ನಿಯೋಜನೆ ಮಾಡುತ್ತಿದೆ. ಇತ್ತ, ಭಾರತದ ಪಾಳಯದಲ್ಲಿ ಕೆಲ ದೌರ್ಬಲ್ಯಗಳು ವ್ಯಕ್ತವಾಗತೊಡಗಿವೆ. ದೇಶದ ಗಡಿಕಾಯುವ ಭಾರತೀಯ ಅರೆಸೇನಾ ಪಡೆಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಕೊರತೆ ಇರುವುದು ಬೆಳಕಿಗೆ ಬಂದಿದೆ.
ಭಾರತ ಮತ್ತು ಚೀನಾದ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು (LAC) ಕಾಯುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ಹೆಚ್ಚುವರಿ ಎಡಿಜಿಪಿ ಮಟ್ಟದ ಮೂರು ಹುದ್ದೆಗಳು ಖಾಲಿ ಇವೆ. ಇನ್ನು, ಐಜಿ ಮಟ್ಟದಲ್ಲಿ ಶೇ. 50 ಹುದ್ದೆಗಳು ಖಾಲಿ ಬಿದ್ದಿವೆ. ಅಂದರೆ, 10 ಐಜಿ ಹುದ್ದೆಗಳಿಗೆ ನೇಮಕಾತಿ ಆಗಿಲ್ಲ.
ಇದನ್ನೂ ಓದಿ: ಕೊರೋನಾ ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್: ತಾತ್ಕಾಲಿಕವಾಗಿ ಪ್ರಯೋಗ ನಿಲ್ಲಿಸಿದ ಡಬ್ಲ್ಯೂಎಚ್ಒ
ಇದು ಚೀನಾ ಗಡಿ ಕಾಯುವ ಪಡೆಯ ಕಥೆ ಆದರೆ, ಪಾಕಿಸ್ತಾನದ ಗಡಿ ಕಾಯುವ ಬಿಎಸ್ಎಫ್ ಕಥೆ ಇನ್ನೂ ಕಳವಳಕಾರಿಯಾದುದು. 45 ಐಜಿ ಹುದ್ದೆಗಳ ಪೈಕಿ ನೇಮಕಾತಿ ಆಗಿರುವುದು ಕೇವಲ 12 ಮಾತ್ರ. ಅಂದರೆ, ಶೇ. 73ರಷ್ಟು ಹುದ್ದೆ ಖಾಲಿ ಬಿದ್ದಿದೆ.
ವಿಪರ್ಯಾಸವೆಂದರೆ, ಈ ಎರಡು ಪ್ರತ್ಯೇಕ ಅರೆಸೇನಾ ಪಡೆಗಳಿಗೆ ಒಬ್ಬರೇ ಡಿಜಿ ಇದ್ದಾರೆ. ಎಸ್.ಎಸ್. ದೇಸ್ವಾಲ್ ಅವರು ಎರಡಕ್ಕೂ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡೆರಡು ಹುದ್ದೆ ಹೊಂದಿದರೆ ಸಂಕಷ್ಟ ಕಾಲದಲ್ಲಿ ಗಮನ ಹರಿಸಲು ಕಷ್ಟವಾಗುತ್ತದೆ. ಎಸ್.ಎಸ್. ದೇಸ್ವಾಲ್ ಅವರಿಗೆ ಆಗುತ್ತಿರುವುದು ಅದೆಯೇ. ಗಡಿ ಭದ್ರತಾ ಪಡೆಗೆ ಪೂರ್ಣಪ್ರಮಾಣದ ಡಿಜಿಪಿ ನೇಮಕಾತಿ ಆದರೆ ದೇಸ್ವಾಲ್ ಅವರು ಐಟಿಬಿಪಿ ಕಡೆ ಗಮನ ಹರಿಸಬಹುದು.
ತಮ್ಮ ಪಡೆಗೆ ಸೀಮಿತವಾದ ಅಧಿಕಾರಿ ಇದ್ದರೆ ಅದು ಆ ಪಡೆಗೆ ಬಲ. ಇಲ್ಲದಿದ್ದರೆ ಸೈನಿಕರು ಮಾನಸಿಕವಾಗಿಯೂ ಕುಗ್ಗಿಹೋಗಬಹುದು ಎಂದು ಬಿಎಸ್ಎಫ್ನ ಮಾಜಿ ಮಹಾನಿರ್ದೇಶಕ ಪ್ರಕಾಶ್ ಸಿಂಗ್ ಹೇಳುತ್ತಾರೆ.
ಇದನ್ನೂ ಓದಿ: Domestic Flights: ಭಾರತದಲ್ಲಿ ವಿಮಾನ ಏರೋ ಮೊದಲು ಈ ನಿಯಮಗಳನ್ನು ನೀವು ಕಡ್ಡಾಯವಾಗಿ ಪಾಲಿಸಲೇಬೇಕು
ಕೊರೋನಾ ವೈರಸ್ ಬಿಕ್ಕಟ್ಟಿನ ಸ್ಥಿತಿಯನ್ನು ಚೀನಾ ಮತ್ತು ಪಾಕಿಸ್ತಾನ ದುರುಪಯೋಗಿಸಿಕೊಳ್ಳಲು ಮುಂದಾಗಿವೆ. ಈ ವೇಳೆ, ಉನ್ನತ ಮಟ್ಟದಲ್ಲಿ ನಾಯಕತ್ವ ಇಲ್ಲದಿದ್ದರೆ ಅದು ಸೈನಿಕರ ಮಾನಸಿಕ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲುದು ಎಂದವರು ಎಚ್ಚರಿಸುತ್ತಾರೆ.
“ಸುಮಾರು 2 ಲಕ್ಷ ಸಂಖ್ಯೆ ಇರುವ ಸೈನಿಕ ಪಡೆಗೆ ಸಾಮಾನ್ಯ ಸಂದರ್ಭದಲ್ಲೇ ಒಬ್ಬ ಪ್ರತ್ಯೇಕ ಡೈರೆಕ್ಟರ್ ಜನರಲ್ ಅಗತ್ಯ ಇರುತ್ತದೆ. ಈಗ ಸಂಕಷ್ಟದ ಕಾಲದಲ್ಲಿ ಯಾಕೆ ಡಿಜಿ ನೇಮಕ ಆಗಿಲ್ಲ? ಅಧಿಕಾರಿಗಳು ನಿವೃತ್ತಿ ಹೊಂದುವ ದಿನ ಮುಂಚೆಯೇ ಗೊತ್ತಿರುವುದಿಲ್ಲವಾ? ಆ ಸ್ಥಾನಕ್ಕೆ ನೇಮಕಾತಿ ಮಾಡಲು ಹೊಸಬರನ್ನ ಹುಡುಕುವ ಅಗತ್ಯ ಇರುವುದಿಲ್ಲ. ಅಲ್ಲೇ ಇತರ ಅಧಿಕಾರಿಗಳಲ್ಲಿ ಒಬ್ಬರನ್ನು ಡಿಜಿಯಾಗಿ ನೇಮಕ ಮಾಡಲು ಏನು ತೊಂದರೆ? ನಾಯಕತ್ವ ಇಲ್ಲದ ಸ್ಥಿತಿಯಲ್ಲಿ ಸೇನೆ ಇರುವುದು ಸರಿಯಲ್ಲ” ಎಂದು ಬಿಎಸ್ಎಫ್ನ ಮಾಜಿ ಡಿಜಿ ಆದ ಪ್ರಕಾಶ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ