ಭಾರತದ ಮೇಲೆ ಚೀನಾದ ಆಕ್ರಮಣಕಾರಿ ವರ್ತನೆ ಖಂಡಿಸುವ ರಕ್ಷಣಾ ಮಸೂದೆಗೆ ಅಮೆರಿಕದ ಸಂಸತ್ ಮತ್ತೊಮ್ಮೆ ಅಂಗೀಕಾರ

ಭಾರತದ ಗಡಿಭಾಗ, ಸಾಗರ ಪ್ರದೇಶಗಳಲ್ಲಿ ಚೀನಾ ದೇಶ ತನ್ನ ನೆರೆ ರಾಷ್ಟ್ರಗಳೊಂದಿಗೆ ಸಂಘರ್ಷಕ್ಕೆ ನಿಂತಿರುವುದನ್ನು ಖಂಡಿಸುವ ನಿರ್ಣಯ ಸೇರಿದಂತೆ ಹಲವು ಮಹತ್ವದ ಅಂಶಗಳಿರುವ ಎನ್​ಡಿಎಎ ಕಾಯ್ದೆಗೆ ಅಮೆರಿಕದ ಸಂಸತ್ತು ಅನುಮೋದನೆ ನೀಡಿದೆ.

ಅಮೆರಿಕದ ಲೋಕಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ

ಅಮೆರಿಕದ ಲೋಕಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ

 • Share this:
  ವಾಷಿಂಗ್ಟನ್(ಜ. 02): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರೋಧದ ನಡುವೆಯೂ ಇಂದು ರಕ್ಷಣಾ ಮಸೂದೆಗೆ ಅಮೆರಿಕ ಸಂಸತ್ತು (ದ್ವಿಪಕ್ಷೀಯ ಜಂಟಿ ಸದನ) ಅನುಮೋದನೆ ನೀಡಿದೆ. ಇದರೊಂದಿಗೆ 740 ಬಿಲಿಯನ್ ಡಾಲರ್ (54 ಲಕ್ಷ ಕೋಟಿ ರೂ) ಮೊತ್ತದ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಗೆ (NDAA) ಮತ್ತೆ ಅಂಗೀಕಾರ ಸಿಕ್ಕಂತಾಗಿದೆ. ಶುಕ್ರವಾರದಿಂದಲೇ ಕಾಯ್ದೆ ಜಾರಿಗೆ ಬರಲಿದೆ. ಕಳೆದ ಡಿಸೆಂಬರ್ ತಿಂಗಳ ಮೂರನೇ ವಾರದಲ್ಲೂ ಎನ್​ಡಿಎಎಗೆ ಸಂಸತ್ ಅನುಮೋದನೆ ನೀಡಿತ್ತಾದರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಡಿ. 23ರಂದು ಭದ್ರತಾ ಅಪಾಯದ ಕಾರಣವೊಡ್ಡಿ ಈ ಕಾಯ್ದೆಯನ್ನು ಹಿಂಪಡೆದುಕೊಂಡಿದ್ದರು. ಇದೀಗ ಟ್ರಂಪ್ ಅವರ ಆದೇಶವನ್ನು ಬದಿಗಿಟ್ಟು ಮತ್ತೊಮ್ಮೆ ಈ ಕಾಯ್ದೆಗೆ ಸಂಸತ್ ಜೀವ ತುಂಬಿದೆ.

  ಭಾರತ ಸೇರಿದಂತೆ ನೆರೆಯ ದೇಶಗಳ ಮೇಲೆ ಚೀನಾದ ಆಕ್ರಮಣಕಾರಿ ಧೋರಣೆಗಳನ್ನ ಖಂಡಿಸುವುದು ಸೇರಿದಂತೆ ಹಲವು ಮಹತ್ವದ ಅಂಶಗಳನ್ನ ಈ ಕಾಯ್ದೆ ಒಳಗೊಂಡಿದೆ. ಭಾರತದೊಂದಿಗಿನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ)ಯಲ್ಲಿ ಚೀನಾದಿಂದ ಮಿಲಿಟರಿ ಅತಿಕ್ರಮಣ ನಿಲ್ಲಬೇಕೆಂದು ಒತ್ತಾಯಿಸುವ ನಿರ್ಣಯವೂ ಇದರಲ್ಲಿ ಒಳಗೊಂಡಿದೆ. ಹಾಗೆಯೇ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಇತರ ನೆರೆ ದೇಶಗಳೊಂದಿಗೆ ಚೀನಾ ನಡೆಸುತ್ತಿರುವ ತಿಕ್ಕಾಟವನ್ನು ಖಂಡಿಸಬೇಕೆಂಬ ನಿರ್ಣಯ ಸೇರಿದಂತೆ ಇನ್ನೂ ಹಲವು ಅಂಶಗಳು ಈ ಕಾಯ್ದೆಯಲ್ಲಿವೆ.

  ಇದನ್ನೂ ಓದಿ: ಸುವೇಂದು ಬೆನ್ನಲ್ಲೇ ಸೋದರ ಸೌಮೇಂದು ಸೇರಿ 15 ಟಿಎಂಸಿ ಪುರಸಭೆ ಸದಸ್ಯರೂ ಬಿಜೆಪಿ ಸೇರ್ಪಡೆ

  ಭಾರತದ ಗಡಿಭಾಗ ಸೇರಿ ನೆರೆ ದೇಶಗಳಲ್ಲಿ ಚೀನಾದ ತಂಟೆಕೋರತನವನ್ನ ಖಂಡಿಸುವ ನಿರ್ಣಯದ ಅಂಶಗಳನ್ನ ಪ್ರಸ್ತಾಪಿಸಿದ್ದು ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ. “ಭಾರತದೊಂದಿಗಿನ ಎಲ್​ಎಸಿ ಹಾಗೂ ಇತರೆಡೆ ಚಿನಾದ ಆಕ್ರಮಣಕಾರಿ ಮಿಲಿಟರಿ ವರ್ತನೆ ಸಹಿಸಲು ಸಾಧ್ಯವಿಲ್ಲ. ಈ ಶಾಸನವು ಕಾಯ್ದೆಯಾಗಿ ರೂಪುಗೊಂಡಿರುವುದು ಹೊಸ ವರ್ಷದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ವಿಶ್ವಾದ್ಯಂತ ಭಾರತ ಸೇರಿದಂತೆ ನಮ್ಮ ಮಿತ್ರರೊಂದಿಗೆ ನಾವಿದ್ದೇವೆ ಎಂಬ ಸ್ಪಷ್ಟ ಸಂದೇಶ ಜಗಜ್ಜಾಹೀರುಗೊಂಡಿದೆ” ಎಂದು ರಾಜ ಕೃಷ್ಣಮೂರ್ತಿ ಹೇಳಿದ್ದಾರೆ.

  ಭಾರತದೊಂದಿಗಿನ ಗಡಿತಿಕ್ಕಾಟವನ್ನು ಚೀನಾ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಬಲವಂತದ ಬದಲು ರಾಜತಾಂತ್ರಿಕ ಮಾರ್ಗದ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ದಕ್ಷಿಣ ಚೀನಾ ಸಮುದ್ರ, ಪೂರ್ವ ಚೀನಾ ಸಮುದ್ರ, ಭೂತಾನ್ ಮೊದಲಾದೆಡೆ ಸಲ್ಲದ ಗಡಿ ಕ್ಯಾತೆ ತೆಗೆಯುವ ಪ್ರಯತ್ನಗಳ ಮೂಲಕ ಚೀನಾ ದೇಶ ಪ್ರಾದೇಶಿಕ ಅಸ್ಥಿರತೆ ಹಾಗೂ ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡುತ್ತಿದೆ ಎಂದು ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ.
  Published by:Vijayasarthy SN
  First published: