ಭಾರತದ ಗಡಿ ಆಕ್ರಮಣಕ್ಕೆ ಮುಂದಾಗಿರುವ ಚೀನಾ ಜೊತೆ ಮಾತುಕತೆ ನಿಷ್ಪ್ರಯೋಜಕ: ಅಮೆರಿಕ

ಭಾರತದ ಗಡಿಭಾಗದ ಅತಿಕ್ರಮಣ ಸೇರಿ ಜಗತ್ತಿನ ಹಲವೆಡೆ ಆಕ್ರಮಣಕಾರಿ ವರ್ತನೆ ತೋರುವ ಚೀನಾ ದೇಶದ ವರ್ತನೆಯನ್ನು ಮಾತುಕತೆ ಮೂಲಕ ಬದಲಾಯಿಸಲು ಸಾಧ್ಯ ಇಲ್ಲ ಎಂದು ಅಮೆರಿಕದ ಭದ್ರತಾ ಸಲಹೆಗಾರ ರಾಬರ್ಟ್ ಓ-ಬ್ರಿಯನ್ ಅಭಿಪ್ರಾಯಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ(ಅ. 10): ಭಾರತದೊಂದಿಗೆ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಎಲ್​ಎಸಿ ಗಡಿಯನ್ನು ಚೀನಾ ಬಲವಂತವಾಗಿ ಅತಿಕ್ರಮಣಕ್ಕೆ ಮುಂದಾಗಲು ಯತ್ನಿಸುತ್ತಿದೆ. ಈ ವಿಚಾರದಲ್ಲಿ ಚೀನಾ ಜೊತೆ ಮಾತುಕತೆ ನಡೆಸಿ ಯಾವುದೇ ಪ್ರಯೋಜನ ಇಲ್ಲ ಎಂಬ ವಾಸ್ತವವನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ. ಲಡಾಖ್ ಗಡಿಭಾಗದಲ್ಲಿ ಅತಿಕ್ರಮಣಕ್ಕೆ ಮುಂದಾಗಿರುವ ಚೀನಾ ಜೊತೆ ಭಾರತ ಕಳೆದ ನಾಲ್ಕೈದು ತಿಂಗಳಿನಿಂದಲೂ ನಿರಂತರವಾಗಿ ಮಾತುಕತೆ ನಡೆಸುತ್ತಿದೆ. ಆದರೂ ಚೀನಾದ ನಿಲುವಿನಲ್ಲಿ ಯಾವುದೇ ಬದಲಾವಣೆ ಆದಂತೆ ಕಂಡುಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದ ಭದ್ರತಾ ಸಲಹೆಗಾರ ರಾಬರ್ಟ್ ಓಬ್ರಿಯನ್ ತಮ್ಮ ಅಭಿಪ್ರಾಯ ಹೇಳಿದ್ದು, ಚೀನಾವನ್ನು ಬದಲಾಯಿಸಲು ಸಾಧ್ಯವಾಗದು ಎಂದು ತಿಳಿಹೇಳಿದ್ದಾರೆ.

  “ಭಾರತದ ಎಲ್​ಎಸಿ ಗಡಿಭಾಗವನ್ನು ಬಲವಂತವಾಗಿ ಅತಿಕ್ರಮಿಸುತ್ತಿರುವ ಚೀನಾ ಕಮ್ಯೂನಿಸ್ಟ್ ಪಕ್ಷದ ಭೂದಾಹ ನಿಚ್ಚಳವಾಗಿ ತೋರಿದೆ. ಭಾರತ ಮತ್ತು ಚೀನಾ ಮಧ್ಯೆ 3,488 ಕಿಮೀ ಉದ್ದದ ಎಲ್​ಎಸಿ ಗಡಿ ವಿವಾದ ಇದೆ. ಭಾರತದ ಅರುಣಾಚಲ ಪ್ರದೇಶವನ್ನ ದಕ್ಷಿಣ ಟಿಬೆಟ್ ಎಂದು ಚೀನಾ ಹೇಳಿಕೊಳ್ಳುತ್ತದೆ. ಭಾರತ ಇದಕ್ಕೆ ಆಕ್ಷೇಪಿಸುತ್ತಿದೆ. ಹಾಗೆಯೇ, ತೈವಾನ್ ಜಲಸಂಧಿ ಬಳಿಯೂ ಪಿಎಲ್​ಎಯ ನೌಕಾಪಡೆ ಮತ್ತು ವಾಯುಪಡೆ ಮಿಲಿಟರಿ ಡ್ರಿಲ್​ಗಳಿಂದ ಬೆದರಿಕೆ ಹಾಕಿ ತೈವಾನ್ ಗಡಿ ಪ್ರದೇಶಗಳ ಅತಿಕ್ರಮಣಕ್ಕೆ ಮುಂದಾಗಿದೆ” ಎಂದು ಓಬ್ರಿಯನ್ ಹೇಳಿದ್ಧಾರೆ.

  ಇದನ್ನೂ ಓದಿ: ಚೀನಾ ಹೊಸ ವರಸೆ: ಕಳೆದ ವರ್ಷವೇ ವಿಶ್ವದ ಹಲವೆಡೆ ಕೊರೋನಾ ಇತ್ತೆನ್ನುತ್ತಿದೆ ಡ್ರಾಗನ್ ದೇಶ

  “ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಯಲ್ಲಿ ಭಾಗಿಯಾದ ದೇಶಗಳ ಬಡ ಕಂಪನಿಗಳು ಚೀನಾದ ಹಣಕಾಸು ಸಂಸ್ಥೆಗಳಿಂದ ಅಪಾಯಕಾರಿ ಎನಿಸುವ ಸಾಲಗಳನ್ನ ಪಡೆಯುತ್ತವೆ. ಬೆಲ್ಟ್ ಪ್ರಾಜೆಕ್ಟ್​ನ ಬಹಳಷ್ಟು ಯೋಜನೆಗಳು ನಿರರ್ಥಕವಾಗಿವೆ, ಬಿಳಿ ಆನೆಯಂತಿವೆ… ಈ ದೇಶಗಳು ಚೀನಾದ ಸಾಲದ ಮೇಲೆ ಅವಲಂಬಿತವಾದಂತೆ ಅವುಗಳ ಸಾರ್ವಭಾಮತ್ವವೂ ಕ್ಷೀಣಿಸುತ್ತದೆ. ಅಂತಿಮವಾಗಿ, ಚೀನೀ ಕಮ್ಯೂನಿಸ್ಟ್ ಪಕ್ಷದ ತಾಳಕ್ಕೆ ತಕ್ಕಂತೆ ಈ ದೇಶಗಳು ಕುಣಿಯಬೇಕಾಗುತ್ತದೆ… ಬೆಲ್ಟ್ ಪ್ರಾಜೆಕ್ಟ್ ಅಷ್ಟೇ ಅಲ್ಲ, ಚೀನಾ ನೀಡುತ್ತಿರುವ ಅಂತರರಾಷ್ಟ್ರೀಯ ನೆರವು ಕಾರ್ಯಗಳೂ ಕೂಡ ಇದೇ ಸ್ವರೂಪದ್ದು. ಚೀನಾ ದೇಶದ ವರ್ತನೆಯನ್ನು ಮಾತುಕತೆ ಮತ್ತು ಒಪ್ಪಂದಗಳ ಮೂಲಕ ಬದಲಾಯಿಸಲು ಸಾಧ್ಯ ಇಲ್ಲ ಎಂಬ ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಸಮಯ ಬಂದಿದೆ. ಅವರ ತಾಳ ಮೇಳಕ್ಕೆ ತಕ್ಕಂತೆ ಇದ್ದರೆ ಏನೂ ಪ್ರಯೋಜನ ಆಗದು. ನಾವು ಬಹಳ ಕಾಲದಿಂದ ಅದೇ ಕೆಲಸ ಮಾಡುತ್ತಾ ಬಂದಿದ್ದೇವೆ” ಎಂದು ಅಮೆರಿದ ರಾಷ್ಟ್ರೀಯ ಭದ್ರತಾ ಸಲಹೆಗಾರರು ತಿಳಿಸಿದ್ದಾರೆ.

  ಇದನ್ನೂ ಓದಿ: ಭಾರತೀಯ ಮಾಧ್ಯಮದ ಮೇಲೆ ಸೆನ್ಸಾರ್​ ಹೇರಲು ಮುಂದಾದ ಚೀನಾಗೆ ಗೆಟ್​ ಲಾಸ್ಟ್ ಎಂದ ತೈವಾನ್

  ಅಮೆರಿಕದ ಟ್ರಂಪ್ ಸರ್ಕಾರ ಚೀನಾ ವಿಚಾರದಲ್ಲಿ ಕಠಿಣ ನಿಲುವು ತಳೆದಿದೆ. ಚೀನಾ ಒಡ್ಡುತ್ತಿರುವ ಸವಾಲುಗಳನ್ನ ಎದುರಿಸಲು ವಿವಿಧ ದೇಶಗಳೊಂದಿಗೆ ಮೈತ್ರಿಕೂಟ ಮತ್ತು ಸಹಭಾಗಿತ್ವ ಸಾಧಿಸುತ್ತಿದೆ. ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳ ಹಿತಾಸಕ್ತಿಗೆ ಧಕ್ಕೆ ತರುವಂತೆ ನಡೆದರೆ ಚೀನಾ ದುಬಾರಿ ಬೆಲೆ ತೆರಬೇಕಾದ ಪರಿಸ್ಥಿತಿಯನ್ನು ಅಮೆರಿಕ ಹೇರಲು ಯೋಜಿಸಿದೆ. ಈ ನಿಟ್ಟಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಚೀನಾದ ಕಮ್ಯೂನಿಸ್ಟ್ ಪಕ್ಷಕ್ಕೆ ಉತ್ತರದಾಯಿತ್ವವಾಗಿರುವ ಚೀನೀ ಟೆಲಿಕಾಂ ಕಂಪನಿಗಳಿಗೆ ನಿರ್ಬಂಧ ಹಾಕಲಾಗುತ್ತಿದೆ ಎಂದು ಓಬ್ರಿಯಾನ್ ವಿವರಿಸಿದ್ದಾರೆ.

  ಇದನ್ನೂ ಓದಿ: ಇನ್ನೂ ಜೀವಂತವಾಗಿದೆ ಜಾತಿ ಪದ್ಧತಿ; ಪಂಚಾಯತ್​ ಅಧ್ಯಕ್ಷರನ್ನೇ ನೆಲದ ಮೇಲೆ ಕೂರಿಸಿದ ಸದಸ್ಯರು
  Published by:Vijayasarthy SN
  First published: