ಚೀನಾ ಗಡಿ ವಾಸ್ತವತೆ ಕುರಿತು ಆಳುವವರು ಮೌನ ವಹಿಸುವುದು ದೇಶದ್ರೋಹ; ಸಿದ್ದರಾಮಯ್ಯ ಟೀಕೆ

India-China Face-Off: ಚೀನಾ ಗಡಿಯಲ್ಲಿನ ಬೆಳವಣಿಗೆಗಳ ನಿಜ ಸಂಗತಿಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಾಗಲಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಾಗಲಿ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

 • Share this:
  ಬೆಂಗಳೂರು (ಜೂ. 17): ಲಡಾಖ್ ಗಡಿಯ ಗಾಲ್ವಾನ್​ ನದಿ ಕಣಿವೆಯಲ್ಲಿ ಸೋಮವಾರ ರಾತ್ರಿಯಿಂದ ಭಾರತ ಮತ್ತು ಚೀನಾ ಸೇನೆಯ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದೆ. ಇದರ ಜೊತೆಗೆ ಚೀನಾದ 43 ಸೈನಿಕರು ಕೂಡ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗಡಿಯಲ್ಲಿ ಚೀನಾ ತಗಾದೆ ತೆಗೆದು 7 ವಾರಗಳಾದರೂ ಅಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ಈ ರೀತಿ ಮೌನ ವಹಿಸುವುದು ಜನದ್ರೋಹವಷ್ಟೇ ಅಲ್ಲ; ದೇಶದ್ರೋಹವೂ ಹೌದು ಎಂದು ಟೀಕಾಪ್ರಹಾರ ನಡೆಸಿದ್ದಾರೆ.

  ದೇಶಕ್ಕಾಗಿ ಬೆವರು-ರಕ್ತ ಹರಿಸಿದ ನಾಯಕರ ಪಕ್ಷವಾದ ಕಾಂಗ್ರೆಸ್ ಪಕ್ಷ ಭಾರತದ ಏಕತೆ,ಅಖಂಡತೆ ಮತ್ತು ಸಾರ್ವಭೌಮತೆಗೆ ಸದಾ ಬದ್ಧವಾಗಿದೆ. ವೀರ ಸೈನಿಕರ ಬಲಿದಾನ ವ್ಯರ್ಥವಾಗಬಾರದು. ಹುತಾತ್ಮರ ಕುಟುಂಬಕ್ಕೆ ಗೌರವದ ಶ್ರದ್ಧಾಂಜಲಿ ಸಲ್ಲಿಸೋಣ. ಚೀನಾದ ದುಷ್ಕೃತ್ಯವನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸೋಣ ಎಂದು ಚೀನಾ ದಾಳಿಯ ಬಗ್ಗೆ ಸಿದ್ದರಾಮಯ್ಯ ಟ್ವಿಟ್ಟರ್​ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.  ಶತ್ರು ದೇಶದ ವಿರುದ್ಧ ಹೋರಾಡುವುದು ನಮ್ಮ ದೇಶವೇ ಹೊರತು ಸರ್ಕಾರವಲ್ಲ. ಸರ್ಕಾರ ದೇಶಕ್ಕೆ, ಈ ದೇಶದ ಜನರಿಗೆ ಉತ್ತರದಾಯಿ ಎಂಬುದನ್ನು ಮರೆಯಬಾರದು. ದೇಶದ ಪ್ರತಿಯೊಬ್ಬ ಪ್ರಜೆಗಳೂ ಕೇಂದ್ರ ಸರ್ಕಾರವನ್ನು ನಂಬಿದ್ದಾರೆ. ಜನರನ್ನು ವಿಶ್ವಾಸಕ್ಕೆ‌ ತೆಗೆದುಕೊಂಡು ನಂಬಿಕೆಯನ್ನು ಉಳಿಸಿಕೊಳ್ಳುವ ಹೊಣೆಯೂ ಕೇಂದ್ರ ಸರ್ಕಾರದ ಮೇಲಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: Indo-China Conflict: ಗಾಲ್ವಾನ್‌ ಕಣಿವೆಯಲ್ಲಿ ಸತ್ತ ಚೀನಾ ಸೈನಿಕರ ಸಂಖ್ಯೆ ಎಷ್ಟು? ಪ್ರತಿಕ್ರಿಯಿಸಲು ನಿರಾಕರಿಸಿದ ಚೀನಾ

  ಚೀನಾ ದೇಶ ಗಡಿತಂಟೆ ಶುರುಮಾಡಿ 7 ವಾರಗಳಾಯಿತು. ಅಲ್ಲಿನ ಬೆಳವಣಿಗೆಗಳ ನಿಜ ಸಂಗತಿಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಾಗಲಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಾಗಲಿ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆಳುವವರು ಈ ರೀತಿ ಮೌನ ವಹಿಸುವುದು ಜನದ್ರೋಹ ಮಾತ್ರವಲ್ಲ, ದೇಶದ್ರೋಹವೂ ಹೌದು ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದಾರೆ.

  First published: