ವಿವಾದಿತ ಗಡಿಯಿಂದ ಭಾರತ-ಚೀನಾ ಸೇನಾ ಹಿಂತೆಗೆತಕ್ಕೆ ನಿರ್ಧಾರ; ಚೀನಾಗೆ ಒಂದಿಂಚೂ ನೆಲ ಬಿಟ್ಟಿಲ್ಲ ಎಂದ ರಾಜನಾಥ್
ಏಕಪಕ್ಷೀಯವಾಗಿ ಗಡಿ ನಿಯಂತ್ರಣ ಬದಲಿಸುವ ಪ್ರಯತ್ನ ಸಮ್ಮತವಲ್ಲ ಎಂಬುದನ್ನು ಚೀನಾಗೆ ತಿಳಿಸಿಕೊಟ್ಟಿದ್ದೇವೆ. ಕಳೆದ ವರ್ಷ ಲಡಾಖ್ನಲ್ಲಿ ಆದ ಗಡಿಬಿಕ್ಕಟ್ಟಿನಲ್ಲಿ ಭಾರತ ಒಂದಿಂಚೂ ನೆಲವನ್ನ ಚೀನಾಗೆ ಬಿಟ್ಟುಕೊಟ್ಟಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ನವದೆಹಲಿ(ಫೆ. 11): ಲಡಾಖ್ ಗಡಿಭಾಗದಲ್ಲಿ ಬಿಕ್ಕಟ್ಟು ಶಮನಗೊಳಿಸಲು ಭಾರತ ನಡೆಸಿದ ಅವಿರತ ಮಾತುಕತೆ ಪ್ರಯತ್ನ ಫಲಕೊಡುತ್ತಿದೆ. ಲಡಾಖ್ನ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳಿಂದ ಭಾರತ ಮತ್ತು ಚೀನಾದ ಸೇನೆಗಳು ವಾಪಸ್ ಹೋಗುವ ಕೆಲಸ ಆರಂಭವಾಗಿದೆ. ಬಹಳ ಕಣ್ಗಾವಲಿನಲ್ಲಿ ಹಂತ ಹಂತವಾಗಿ ಎಚ್ಚರಿಕೆಯಿಂದ ಈ ಪ್ರಕ್ರಿಯೆ ನಡೆಯಲಿದೆ. ಪಾಂಗಾಂಗ್ ನಾರ್ತ್ ಬ್ಯಾಂಕ್ನಲ್ಲಿ ಜಮಾವಣೆ ಆಗಿರುವ ಉಭಯ ಸೇನಾಪಡೆಗಳನ್ನ ಮೊದಲು ಹಿಂದಕ್ಕೆ ಕರೆಸಲಾಗುತ್ತದೆ. ನಂತರ ದಕ್ಷಿಣ ದಂಡೆಯಿಂದ ತೆರವು ಕಾರ್ಯವಾಗಲಿದೆ. ಸರೋವರದ ದಕ್ಷಿಣ ದಂಡೆಯಿಂದ ಯುದ್ಧದ ಟ್ಯಾಂಕ್ಗಳನ್ನ ವಾಪಸ್ ಕಳುಹಿಸಲಾಗುತ್ತಿದೆ. ಅಲ್ಲಿರುವ ಭಾರತೀಯ ತುಕಡಿಗಳ ಪ್ರಮಾಣವನ್ನೂ ತಗ್ಗಿಸಲಾಗುತ್ತಿದೆ ಎಂದು ಮೂಲಗಳು ನ್ಯೂಸ್18 ಗೆ ತಿಳಿಸಿವೆ. ನಿನ್ನೆ ಚೀನಾದ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿತ್ತು. ಇಂದು ರಾಜ್ಯಸಭೆಯಲ್ಲೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವಿಚಾರವನ್ನ ದೃಢಪಡಿಸಿದ್ದಾರೆ.
“ಎಲ್ಎಸಿ (ವಾಸ್ತವ ಗಡಿ ರೇಖೆ) ಗಡಿಭಾಗದಲ್ಲಿ ಶಾಂತಿ ಪಾಲನೆ ಮಾಡುವುದು ನಮ್ಮ ಉದ್ದೇಶ. ಕಳೆದ ವರ್ಷ ಚೀನಾದ ನಡೆಯಿಂದಾಗಿ ಈ ಗಡಿಭಾಗದಲ್ಲಿ ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಿತ್ತು. ಗಡಿಭಾಗದಲ್ಲಿ ಸೇನಾ ಹಿಂತೆಗೆತ ಎಷ್ಟು ಮುಖ್ಯ ಎಂಬುದನ್ನು ನಾವು ಮನದಟ್ಟು ಮಾಡಿಕೊಟ್ಟಿದ್ದೇವೆ. ಅಲ್ಲದೇ ಗಡಿಯಲ್ಲಿ ಭಾರತ ಅಗತ್ಯಕ್ಕೆ ತಕ್ಕಂತೆ ಸೇನಾ ನಿಯೋಜನೆಗೂ ಸಿದ್ಧವಿದೆ” ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ಧಾರೆ.
ಏಕಪಕ್ಷೀಯವಾಗಿ ಗಡಿ ನಿಯಂತ್ರಣ ಬದಲಿಸುವ ಚೀನಾದ ಪ್ರಯತ್ನ ಸಮ್ಮತವಲ್ಲ ಎಂಬುದನ್ನು ಅವರಿಗೆ ತಿಳಿಸಿಕೊಟ್ಟಿರುವುದಾಗಿ ಹೇಳಿದ ರಾಜನಾಥ್ ಸಿಂಗ್, ಕಳೆದ ವರ್ಷ ಲಡಾಖ್ನಲ್ಲಿ ಆದ ಗಡಿಬಿಕ್ಕಟ್ಟಿನಲ್ಲಿ ಭಾರತ ಒಂದಿಂಚೂ ನೆಲವನ್ನ ಚೀನಾಗೆ ಬಿಟ್ಟುಕೊಟ್ಟಿಲ್ಲ ಎಂದು ಪುನರುಚ್ಚರಿಸಿದ್ಧಾರೆ.
“1962ರ ಯುದ್ಧದಲ್ಲಿ ಚೀನಾ 38,000 ಚ.ಕೀ. ಪ್ರದೇಶವನ್ನ ಆಕ್ರಮಿಸಿಕೊಂಡಿತು. ಲಡಾಖ್ನಲ್ಲಿ ಪಾಕಿಸ್ತಾನವು 5,180 ಚ.ಕೀ. ಪ್ರದೇಶವನ್ನು ಚೀನಾಗೆ ಅಕ್ರಮವಾಗಿ ನೀಡಿದೆ. ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತಕ್ಕೆ ಸೇರಿದ 90,000 ಚ.ಕೀ. ಪ್ರದೇಶವನ್ನು ಚೀನಾ ತನ್ನದೆಂದು ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಈ ಅನ್ಯಾಯವನ್ನು ನಾವು ಒಪ್ಪಿಲ್ಲ. ಎರಡೂ ದೇಶಗಳಿಂದ ಪ್ರಾಮಾಣಿಕ ಪ್ರಯತ್ನ ಆಗದ ಹೊರತು ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಸಾಧ್ಯವಿಲ್ಲ ಎಂದು ನಾನು ಹೇಳುತ್ತಲೇ ಇದ್ದೇವೆ. ಚೀನಾದೊಂದಿಗಿನ ಮಾತುಕತೆ ವೇಳೆ ನಾವು ಒಂದಿಂಚೂ ನೆಲವನ್ನೂ ಬಿಟ್ಟುಕೊಟ್ಟಿಲ್ಲ ಎಂಬ ವಿಚಾರ ಇಲ್ಲಿ ತಿಳಿಸಬಯಸುತ್ತೇವೆ” ಎಂದು ರಾಜ್ಯಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪೂರ್ವ ಲಡಾಖ್ನ ಎಲ್ಎಸಿ ಬಳಿ ಹಲವು ಪುಟ್ಟ ಪ್ರದೇಶಗಳನ್ನ ನಿರ್ಮಿಸಲಾಗಿದೆ. ಗಡಿ ಬಳಿ ಹಾಗೂ ನಮ್ಮ ಗಡಿಭಾಗದ ಸಮೀಪವೇ ಚೀನಾ ದೊಡ್ಡ ಪ್ರಮಾಣದಲ್ಲಿ ಸೇನಾ ಪಡೆ ಹಾಗೂ ಮದ್ದು ಗುಂಡುಗಳನ್ನ ನಿಯೋಜಿಸಿದೆ. ನಮ್ಮ ಸೇನಾಪಡೆಗಳು ಅದಕ್ಕೆ ತಕ್ಕಂತೆ ನಿಯೋಜನೆಗೊಂಡಿವೆ. ಭಾರತದ ಸಾರ್ವಭೌಮತೆಯನ್ನ ರಕ್ಷಿಸಲು ಎಂಥದ್ದೇ ಕ್ಲಿಷ್ಟ ಸಂದರ್ಭ ಎದುರಾದರೂ ಎದುರಿಸಲು ನಮ್ಮ ಭದ್ರತಾ ಪಡೆಗಳು ಸಮರ್ಥ ಇವೆ ಎಂಬುದು ನಿಚ್ಚಳವಾಗಿದೆ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಮಾತುಕತೆಯಂತೆ ಪಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿರುವ ಫಿಂಗರ್ 8 ಪ್ರದೇಶದ ಪೂರ್ವ ಭಾಗದಲ್ಲಿ ಚೀನಾ ತನ್ನ ಸೇನಾ ತುಕಡಿಗಳ ನಿಯೋಜನೆ ಮುಂದುವರಿಸಲಿದೆ. ಭಾರತವು ಫಿಂಗರ್ 3 ಪ್ರದೇಶದಲ್ಲಿರುವ ತನ್ನ ಖಾಯಂ ನೆಲೆಯಲ್ಲಿ ಸೇನಾ ನಿಯೋಜನೆ ಇರಲಿಸಲಿದೆ ಎಂದೂ ರಕ್ಷಣಾ ಸಚಿವರು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ಧಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ