ನವದೆಹಲಿ(ಜೂ.17): ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ನಡೆಸಿದ ದಾಳಿಯಲ್ಲಿ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ಧಾರೆ. ಈ ಹುತಾತ್ಮ ಯೋಧರಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿರುವುದೇಕೆ? ಎಂದು ಪ್ರಶ್ನಿಸಿದ್ಧಾರೆ.
ಭಾರತದ ಮೇಲೆ ಚೀನಾ ನಡೆಸಿದ ದಾಳಿಯಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿದ್ಧಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರ ಕುರಿತು ನನಗಾದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಎಲ್ಲಾ ಪ್ರೀತಿಪಾತ್ರರಿಗೆ ಸಂತಾಪ ಸೂಚಿಸುತ್ತೇನೆ. ಈ ಸಂಕಷ್ಟದ ಸಂದರ್ಭದಲ್ಲಿ ಹುತಾತ್ಮ ಯೋಧರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ ಎಂದರು ಟ್ವೀಟ್ ಮಾಡಿದ್ದಾರೆ ರಾಹುಲ್ ಗಾಂಧಿ.
ಪ್ರಧಾನಿ ಮೋದಿ ಮೌನವಾಗಿರುವುದೇಕೆ? ಮೋದಿಯೇಕೆ ಮುಚ್ಚಿಡುತ್ತಿದ್ದಾರೆ? ಆಗಿದ್ದು ಆಯ್ತು, ಈಗ ಏನಾಗುತ್ತಿದೆ ಎಂದು ನಮಗೆ ಹೇಳಿ. ನಮ್ಮ ಸೈನಿಕರನ್ನು ಹತ್ಯೆ ಮಾಡಲು ಚೀನಾಗೆ ಎಷ್ಟು ಧೈರ್ಯ? ನಮ್ಮ ಜಾಗವನ್ನು ವಶಪಡಿಸಿಕೊಳ್ಳಲು ಚೀನಾಗೆ ಎಷ್ಟು ಧೈರ್ಯ? ಎಂದು ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ ಸದ್ಯದ ವಸ್ತುಸ್ಥಿತಿ ತಿಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯ ಮಾಡಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಕಾಳಗ ಏರ್ಪಟ್ಟಿದೆ. ಇಲ್ಲಿನ ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಉಭಯ ರಾಷ್ಟ್ರಗಳ ನಡುವಿನ ಘರ್ಷಣೆಯಲ್ಲಿ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಹಾಗೆಯೇ ಭಾರತ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾದ 43 ಸೈನಿಕರು ಹತರಾಗಿದ್ದಾರೆ.
ಈ ಮಧ್ಯೆ ಭಾರತ-ಚೀನಾ ಗಡಿಭಾಗದಲ್ಲಿ ಆಗುತ್ತಿರುವ ಸಾವು-ನೋವಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕಾ, ಸಾಧ್ಯವಾದಷ್ಟು ಹಿಂಸಾಚಾರ ನಿಲ್ಲಿಸುವಂತೆ ಎರಡು ದೇಶಗಳಿಗೆ ಮನವಿ ಮಾಡಿದೆ. ಶಾಂತಿಯುತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ