ನವದೆಹಲಿ(ಜುಲೈ 29): ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಗಡಿಭಾಗದಲ್ಲಿ ವೈಮಾನಿಕ ಘರ್ಷಣೆ ಆದಾಗ ಭಾರತದಲ್ಲಿ ರಫೇಲ್ ಯುದ್ಧವಿಮಾನ ಇದ್ದಿದ್ದರೆ ಕಥೆಯೇ ಬೇರೆ ಇರುತ್ತಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದನ್ನು ನಾವು ಗಮನಿಸಿರಬಹುದು. ಫ್ರಾನ್ಸ್ ದೇಶದ ಡಸಾಲ್ಟ್ ಸಂಸ್ಥೆ ತಯಾರಿಸಿದ ರಫೇಲ್ ಯುದ್ಧವಿಮಾನ ಭಾರತದ ಬತ್ತಳಿಕೆಯಲ್ಲಿರುವ ಪ್ರಬಲ ಆಯುಧಗಳಲ್ಲೊಂದೆನಿಸಿದೆ. ಜುಲೈ 29ರಂದು 5 ರಫೇಲ್ ಯುದ್ದವಿಮಾನಗಳು ಭಾರತದಲ್ಲಿ ಬಂದಿಳಿಯಲಿವೆ. ಇದು ವಿಶ್ವದ ಅತ್ಯಂತ ಪ್ರಬಲ ಯುದ್ಧವಿಮಾನಗಳ ಸಾಲಿಗೆ ಸೇರುತ್ತದೆ.
ಭಾರತದಲ್ಲಿ ಪ್ರಬಲ ಕ್ಷಿಪಣಿಗಳಿವೆಯಾದರೂ ಶಕ್ತಿಶಾಲಿ ಯುದ್ಧವಿಮಾನಗಳ ಕೊರತೆ ಇದೆ. ಸುಖೋಯ್, ಮಿಗ್ ಫೈಟರ್ ಜೆಟ್ಗಳಂಥ ಪ್ರಬಲ ಯುದ್ಧವಿಮಾನಗಳಿವೆಯಾದರೂ ಚೀನಾದ ಜೆ-20, ಅಮೆರಿಕದ ಎಫ್16ನಂಥ ಫೈಟರ್ ಜೆಟ್ಗಳಿಗೆ ಸಾಟಿಯಾಗಬಲ್ಲಂಥದ್ದು ಭಾರತಕ್ಕೆ ಇರಲಿಲ್ಲ. ಈಗ ರಫೇಲ್ನಿಂದ ಆ ಕೊರತೆ ನೀಗಿದಂತಾಗಿದೆ ಎನ್ನುತ್ತಾರೆ ಡಿಫೆನ್ಸ್ ಸ್ಪೆಷಲಿಸ್ಟ್.
ಚೀನಾದ ಬಳಿ ಚೆಂಗ್ಡು ಜೆ-20 ಸ್ಟೀಲ್ತ್ ಏರ್ಕ್ರಾಫ್ಟ್ ಇದೆ. ಇದು ಚೀನಾ ಬತ್ತಳಿಕೆಯಲ್ಲಿರುವ ಅತ್ಯುತ್ತಮ ಯುದ್ಧವಿಮಾನ. ಇನ್ನು, ಚೀನಾ ಸಹಾಯದಿಂದಲೇ ನಿರ್ಮಾಣವಾದ ಚೆಂಗ್ಡು ಜೆಎಫ್-17 ಥಂಡರ್ ಯುದ್ಧವಿಮಾನ ಪಾಕಿಸ್ತಾನದ ಬತ್ತಳಿಕೆಯಲ್ಲಿದೆ. ಇದಲ್ಲದೆ ಪಾಕಿಸ್ತಾನದ ಬಳಿ ಅಮೆರಿಕದಿಂದ ಕೊಡಲಾದ ಎಫ್-16 ಯುದ್ಧವಿಮಾನವೂ ಇದೆ. ಭಾರತ ಮತ್ತು ಪಾಕ್ ಬಳಿ ಗಡಿಭಾಗದ ವೈಮಾನಿಕ ಘರ್ಷಣೆಯ ಬಳಿಕ ಎಫ್-16 ಯುದ್ಧವಿಮಾನದ ಬಗ್ಗೆ ಚರ್ಚೆಯೂ ಆಗಿತ್ತು.
ಭಾರತ ಮತ್ತು ಚೀನಾ ಮಧ್ಯೆ ಗಡಿಸಮಸ್ಯೆ ಸೂಕ್ಷ್ಮವಾಗಿರುವುದರಿಂದ ಯಾವಾಗ ಬೇಕಾದರೂ ವೈಮಾನಿಕ ಘರ್ಷಣೆ ಆಗುವ ಸಂಭವ ಇದ್ದೇ ಇದೆ. ಹಾಗೆಯೇ, ಭಾರತ ಮತ್ತು ಪಾಕಿಸ್ತಾನದ ಮಧ್ಯೆಯೂ ಘರ್ಷಣೆಯ ಸಂಭವನೀಯತೆ ಗಟ್ಟಿಯಾಗಿಯೇ ಇದೆ. ಹಾಗೇನಾದರೂ ಆದರೆ, ಆಗಸದಲ್ಲಿ ಕಣಕ್ಕಿಳಿಯುವುದು ರಫೇಲ್, ಜೆಎಫ್-17 ಮತ್ತು ಜೆ-20 ಯುದ್ಧ ವಿಮಾನಗಳೇ. ಪಾಕ್ ಬಳಿ ಎಫ್-16 ಇದೆಯಾದರೂ ಅದರ ಬಳಕೆ ಕೇವಲ ಭಯೋತ್ಪಾದನೆ ನಿಗ್ರಹಕ್ಕೆ ಎಂಬ ಷರತ್ತಿನ ಮೇಲೆ ಅಮೆರಿಕದಿಂದ ಸರಬರಾಜು ಆಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಎಫ್-16 ಬಳಕೆ ಮಾಡುವುದು ಅನುಮಾನ. ಈ ಹಿನ್ನೆಲೆಯಲ್ಲಿ ರಫೇಲ್, ಜೆಫ್-17 ಮತ್ತು ಜೆ-20 ಯುದ್ಧವಿಮಾನಗಳೇ ವಾಸ್ತವದಲ್ಲಿ ರಣರಂಗಕ್ಕೆ ಅಡಿ ಇಡುವ ಸಾಧ್ಯತೆ ಇದೆ. ಹೀಗಾಗಿ, ಈ ಮೂರು ಯುದ್ಧವಿಮಾನಗಳಲ್ಲಿ ಯಾವುದು ಹೆಚ್ಚು ಶಕ್ತಿಶಾಲಿ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿಬರುತ್ತದೆ.
ಯಾವುದು ಉತ್ತಮ?
ತಂತ್ರಜ್ಞಾನ:
ಫ್ರಾನ್ಸ್ ನಿರ್ಮಿತ ರಫೇಲ್ 4ನೇ ತಲೆಮಾರಿನ ತಂತ್ರಜ್ಞಾನ ಇರುವ ಯುದ್ಧವಿಮಾನವೆಂದು ಪರಿಗಣಿಸಲಾಗಿದೆ. ಜೆಎಫ್-17 ಕೂಡ ಫೋರ್ತ್ ಜೆನರೇಶನ್ ಏರ್ಕ್ರಾಫ್ಟ್. ಇನ್ನು, ಜೆ-20 ಐದನೇ ತಲೆಮಾರಿನ ಯುದ್ಧವಿಮಾನವಾಗಿದೆ. ಜೆಎಫ್-17 ಮತ್ತು ಜೆ-20 ಮಲ್ಟಿರೋಲ್ ಯುದ್ಧವಿಮಾನಗಳಾಗಿವೆ. ಅಂದರೆ ಬಹುಕಾರ್ಯಗಳಿಗೆ ಇವುಗಳ ಬಳಕೆಯಾಗುತ್ತದೆ. ಆಗಸದ ಸಮರ, ಮೇಲಿಂದ ನೆಲದಲ್ಲಿರುವ ಗುರಿಗೆ ದಾಳಿ, ಶತ್ರು ವಿಮಾನ ಛೇದ, ಶತ್ರುಗಳ ವಾಯು ರಕ್ಷಣಾ ವ್ಯೂಹವನ್ನು ನಾಶ ಮಾಡುವುದು ಇತ್ಯಾದಿ ಅನೇಕ ಕಾರ್ಯಗಳಿಗೆ ಮಲ್ಟಿರೋಲ್ ಯುದ್ಧವಿಮಾನಗಳ ಬಳಕೆಯಾಗುತ್ತದೆ. ಇನ್ನು, ರಫೇಲ್ಗೆ ಆಮ್ನಿರೋಲ್ ಏರ್ಕ್ರಾಫ್ಟ್ ಎಂಬ ಹೆಗ್ಗಳಿಕೆ ಇದೆ. ಇದು ಮಲ್ಟಿರೋಲ್ಗಿಂತ ಮೀರಿದ ಸಾಮರ್ಥ್ಯ ಹೊಂದಿರುವ ಯುದ್ಧವಿಮಾನವಾಗಿದೆ.
ತೂಕ ಮತ್ತು ಬಲ:
ಖಾಲಿ ಯುದ್ಧವಿಮಾನಗಳನ್ನ ತೂಗಿದರೆ ಚೀನಾ ಜೆ-20 ಅತ್ಯಂತ ಭಾರದ್ದಾಗಿದೆ. ಇದು 19 ಸಾವಿರ ಕಿಲೋ ತೂಗುತ್ತದೆ. ರಫೇಲ್ ಸುಮಾರು 10 ಸಾವಿರ ಕಿಲೋ ಇದೆ. ಪಾಕಿಸ್ತಾನದ ಜೆಎಫ್-17 ಸುಮಾರು 6,400 ಕಿಲೋ ಭಾರ ಇದೆ. ಆದರೆ, ಒಟ್ಟಾರೆ ತೂಕ ಹೊರುವುದರಲ್ಲಿ ಜೆ-20 ಮುಂದಿದೆ. ಇದು 37 ಸಾವಿರ ಕಿಲೋ ಭಾರ ಹೊತ್ತು ಹಾರಾಟ ನಡೆಸಬಲ್ಲುದು. ರಫೇಲ್ ಯುದ್ಧವಿಮಾನಕ್ಕೆ 24,500 ಕಿಲೋ ಸಾಮರ್ಥ್ಯ ಇದೆ. ಜೆಎಫ್-17 ಕೇವಲ 12,474 ಕಿಲೋ ತೂಕ ಹೊತ್ತು ಹೋಗಬಲ್ಲುದು.
ಗಾತ್ರ:
ಗಾತ್ರದ ವಿಚಾರಕ್ಕೆ ಬಂದರೆ ಪಾಕಿಸ್ತಾನದ ಜೆಎಫ್-17 ಅತ್ಯಂತ ಸ್ಲಿಮ್ ಏರ್ಕ್ರಾಫ್ಟ್ ಎನಿಸಿದೆ. ಇದು 14.93 ಮೀಟರ್ ಉದ್ದ ಇದೆ. ವಿಮಾನದ ರೆಕ್ಕೆಯನ್ನ ಆ ಬದಿಯಿಂದ ಈ ಬದಿಗೆ ಅಳೆದರೆ 9.48 ಮೀಟರ್ ಬರುತ್ತದೆ. ಈ ವಿಮಾನದ ಎತ್ತರ 4.77 ಮೀಟರ್ ಇದೆ. ಭಾರತದ ರಫೇಲ್ ಇದಕ್ಕಿಂತ ಸ್ವಲ್ಪ ದೊಡ್ಡದಿದೆ. 15.30 ಮೀಟರ್ ಉದ್ದ, 5.3 ಮೀಟರ್ ಎತ್ತರ ಮತ್ತು 10.9 ಮೀಟರ್ ಅಗಲ (ರೆಕ್ಕೆವರೆಗಿನ ಅಳತೆ) ಇದೆ. ಇವೆರಡಕ್ಕೆ ಹೋಲಿಸಿದರೆ ಚೀನಾದ ಅತ್ಯುನ್ನತ ಜೆ-20 ಜೆಟ್ ಗಜಗಾತ್ರ ಎನಿಸುತ್ತದೆ. ಇದು 20 ಮೀಟರ್ಗಿಂತಲೂ ಹೆಚ್ಚು ಉದ್ದ ಇದೆ. ಆದರೆ, ರಫೇಲ್ ವಿಮಾನದ ರೆಕ್ಕೆಯಲ್ಲಿ ಬಹಳ ವಿಶೇಷತೆ ಇದೆ. ಯಾವುದೇ ಕೋನದಿಂದ ಬೇಕಾದರೂ ಪರಿಣಾಮಕಾರಿಯಾಗಿ ದಾಳಿ ನಡೆಸಲು ಸಾಧ್ಯವಾಗುವಂತೆ ಇದರ ವಿಂಗ್ ಡಿಸೈನ್ ಮಾಡಲಾಗಿದೆಯಂತೆ.
ವೇಗ ಮತ್ತು ಶಕ್ತಿ:
ಇದರಲ್ಲಿ ಜೆ-20 ಜೆಟ್ ವಿಮಾನ ಗಂಟೆಗೆ 2,400 ಕಿಮೀ ವೇಗದಲ್ಲಿ ಹಾದು ಹೋಗಬಲ್ಲುದು. ರಫೇಲ್ ವಿಮಾನದ ಗರಿಷ್ಠ ವೇಗ 2,222 ಕಿಮೀ ಇದೆ. ಜೆಎಫ್-17 ವಿಮಾನವು 1,975 ಕಿಮೀವರೆಗೆ ವೇಗ ಪಡೆಯಬಲ್ಲುದು.
ವೈಮಾನಿಕ ಘರ್ಷಣೆ ವೇಳೆ ಬಹಳ ಮಹತ್ವದ ಪಾತ್ರ ವಹಿಸುವ ಸರ್ವಿಸ್ ಸೀಲಿಂಗ್ ವಿಚಾರದಲ್ಲಿ ಜೆ-20 ಅತ್ಯುತ್ತಮ ಎನಿಸಿದೆ. ಇದು 65 ಸಾವಿರ ಅಡಿ ಎತ್ತರದವರೆಗೆ ಸರ್ವಿಸ್ ಸೀಲಿಂಗ್ ಸಾಮರ್ಥ್ಯ ಹೊಂದಿದೆ. ಜೆಎಫ್-17 ಥಂಡರ್ 54,000 ಅಡಿ ಮತ್ತು ರಫೇಲ್ ಸುಮಾರು 50 ಸಾವಿರ ಅಡಿ ಸರ್ವಿಸ್ ಸೀಲಿಂಗ್ ಹೊಂದಿವೆ. ಈ ವಿಚಾರದಲ್ಲಿ ಚೀನಾದ ಈ ಯುದ್ಧವಿಮಾನಕ್ಕೆ ಸಾಟಿಯಾಗಿರುವಂಥವು ವಿಶ್ವದಲ್ಲಿ ಕಡಿಮೆ ಎನ್ನಲಾಗಿದೆ.
ಏನಿದು ಸರ್ವಿಸ್ ಸೀಲಿಂಗ್?: ಒಂದು ಯುದ್ಧವಿಮಾನ ಇಂತಿಷ್ಟು ಎತ್ತರಕ್ಕೆ ಹೋದಾಗ ಅದು ಇನ್ನಷ್ಟು ಮೇಲೇರುವ ವೇಗ ತೀರಾ ಕಡಿಮೆಯಾಗುತ್ತದೆ. ನಿಮಿಷಕ್ಕೆ 500 ಅಡಿ ಮಾತ್ರ ಏರಬಲ್ಲುದು. ವೈಮಾನಿಕ ಘರ್ಷಣೆ ವೇಳೆ ಯುದ್ಧವಿಮಾನಗಳು ಎತ್ತರಕ್ಕೆ ಹೋಗಿ ಅಲ್ಲಿಂದ ಶತ್ರು ವಿಮಾನಗಳ ಮೇಲೆ ದಾಳಿ ಮಾಡುತ್ತವೆ. ಇಂಥ ಸನ್ನಿವೇಶ ಬಂದಾಗ ಸರ್ವಿಸ್ ಸೀಲಿಂಗ್ ಸಾಮರ್ಥ್ಯ ಮುಖ್ಯ ಪಾತ್ರ ವಹಿಸುತ್ತದೆ.
ಹೆಚ್ಚು ದೂರ ಹಾರಾಟ:
ಕೆಲವೊಮ್ಮೆ ಯುದ್ಧ ಸುದೀರ್ಘವಾಗಿ ನಡೆಯುತ್ತದೆ. ದಿನವಿಡೀ ವೈಮಾನಿಕ ಘರ್ಷಣೆ ಆಗಬಹುದು. ಅಂಥ ಸಂದರ್ಭದಲ್ಲಿ ಹೆಚ್ಚು ಹೊತ್ತು ಹಾರಾಟ ನಡೆಸಬಲ್ಲ ಯುದ್ಧವಿಮಾನ ಬಹಳ ಅನುಕೂಲಕರ. ಈ ವಿಚಾರದಲ್ಲಿ ರಫೇಲ್ ವಿಮಾನಕ್ಕೆ ಸಾಟಿ ಇಲ್ಲ. ಇದಕ್ಕೆ ಒಮ್ಮೆ ಇಂಧನ ತುಂಬಿ ಕಳುಹಿಸಿದರೆ ಬರೋಬ್ಬರಿ 3,700 ಕಿಮೀ ದೂರ ಸಾಗಬಲ್ಲುದು. ಆದರೆ, ಜೆ-20 ಮತ್ತು ಜೆಎಪ್-17 ಯುದ್ಧವಿಮಾನಗಳ ಗರಿಷ್ಠ ಹಾರಾಟ ಅವಧಿ 2 ಸಾವಿರ ಕಿಮೀ ಮಾತ್ರ ಎನ್ನಲಾಗಿದೆ. ಭಾರತದ ರಫೇಲ್ ಹೆಚ್ಚು ವ್ಯಾಪ್ತಿಯಲ್ಲಿ ತನ್ನ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತದೆ.
ರಫೇಲ್ ಗೆಲ್ಲೋದು ಇಲ್ಲೇ….
ಇವೆಲ್ಲಕ್ಕಿಂತ ಮುಖ್ಯವಾದುದು ಯುದ್ಧವಿಮಾನಗಳ ಉಪಯುಕ್ತತೆ. ಯುದ್ಧವಿಮಾನ ಎಷ್ಟೇ ವೇಗವಾಗಿ ಹೋಗಲಿ, ಎಷ್ಟೇ ಎತ್ತರಕ್ಕೆ ಏರಲಿ ಅಂತಿಮವಾಗಿ ಮಹತ್ವ ಪಡೆಯುವುದು ಅದ ಬತ್ತಳಿಕೆಯಲ್ಲಿರುವ ಶಸ್ತ್ರಗಳು ಮತ್ತು ಅದರ ಪರಿಣಾಮಕಾರಿ ಬಳಕೆ. ವಿಶ್ವದಲ್ಲಿ ಸದ್ಯ ಲಭ್ಯ ಇರುವ ಅತ್ಯುತ್ತಮ ವಿವಿಧ ರೀತಿಯ ಕ್ಷಿಪಣಿಗಳನ್ನ ರಫೇಲ್ ಯುದ್ಧ ವಿಮಾನವು ಹೊತ್ತೊಯ್ಯಬಲ್ಲುದು. ಏರ್-ಟು-ಏರ್ ಮಿಸೈಲ್, ಏರ್-ಟು-ಸರ್ಫೇಸ್ ಮಿಸೈಲ್, ಆತ್ಮರಕ್ಷಕ ಕ್ಷಿಪಣಿ, ಹಡಗು ನಾಶಕ ಕ್ಷಿಪಣಿ, ಲೇಸರ್ ಆಧಾರಿತ ಬಾಂಬ್ ಇತ್ಯಾದಿ ಅನೇಕ ರೀತಿಯ ಅಸ್ತ್ರಗಳನ್ನ ರಫೇಲ್ನ ಬತ್ತಳಿಕೆಯಲ್ಲಿ ಇರಿಸಿಕೊಂಡು ಬಳಕೆ ಮಾಡಬಹುದಾಗಿದೆ. ಹಾಗೆಯೇ, ರಫೇಲ್ ಬಳಿ ಎಲೆಕ್ಟ್ರಾನಿಕ್ ಸ್ಕ್ಯಾನಿಂಗ್ ರಾಡಾರ್ ವ್ಯವಸ್ಥೆ ಹೊಂದಿದೆ. ಇದು ಶತ್ರುಗಳ ಹಲವು ಯುದ್ಧವಿಮಾನಗಳನ್ನ ಏಕಕಾಲದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಗುರುತಿಸಬಲ್ಲುದು.
ಇನ್ನು ರಫೇಲ್ ಯುದ್ಧವಿಮಾನ ಈಗಾಗಲೇ ಹಲವು ಯುದ್ಧಗಳಲ್ಲಿ ಬಳಕೆಯಾಗಿ ತನ್ನ ಉಪಯುಕ್ತತೆಯನ್ನು ಸಾಬೀತು ಮಾಡಿದೆ. ಆಫ್ಘಾನಿಸ್ತಾನ, ಲಿಬಿಯಾ, ಮಾಲಿ, ಇರಾಕ್ ಮತ್ತು ಸಿರಿಯಾ ದೇಶಗಳಲ್ಲಿ ರಫೇಲ್ ಜೆಟ್ಗಳ ಬಳಕೆಯಾಗಿದೆ. ಆದರೆ, ಚೀನಾದ ಜೆ-20 ಯುದ್ಧವಿಮಾನಕ್ಕೆ ಇನ್ನೂ ನೈಜ ಯುದ್ಧದ ಅಗ್ನಿಪರೀಕ್ಷೆಯಾಗಿಲ್ಲ. ಜೆ-20 ಅನ್ನು ಸ್ಟೀಲ್ತ್ ಏರ್ಕ್ರಾಫ್ಟ್ ಎಂದು ಚೀನಾ ಹೇಳಿಕೊಳ್ಳುತ್ತದೆ. ಸ್ಟೀಲ್ತ್ ಎಂದರೆ ರಾಡಾರ್ ಕಣ್ಣಿಗೆ ಕಾಣಿಸದ ಹಾಗೆ ಕ್ರಮಿಸಿವುದು. ಆದರೆ, ಜೆ-20 ಯುದ್ಧವಿಮಾನಗಳು ಪ್ರಯೋಗಾರ್ಥ ಹಾರುವಾಗ ಭಾರತದ ರಾಡಾರ್ಗಳ ಕಣ್ಣಿಗೆ ಬಿದ್ದಿರುವ ಉದಾಹರಣೆಗಳುಂಟು. ಹೀಗಾಗಿ, ನೈಜ ಯುದ್ಧದಲ್ಲಿ ಯುದ್ಧವಿಮಾನಗಳ ನಿಜವಾದ ಸಾಮರ್ಥ್ಯ ಒರೆಗೆ ಹಚ್ಚಲ್ಪಡುತ್ತದೆ. ಈ ವಿಚಾರದಲ್ಲಿ ರಫೇಲ್ ಯುದ್ಧ ವಿಮಾನ ಹೆಚ್ಚು ಮೇಲುಗೈ ಹೊಂದಿದೆ. ಆದರೆ, ಅಂತಿಮವಾಗಿ ಯುದ್ಧವಿಮಾನದ ಪರಿಣಾಮಕಾರಿ ಬಳಕೆ ಇರುವುದು ಅದರ ಚಾಲಕನ ಸಾಮರ್ಥ್ಯದ ಮೇಲೆಯೇ.
ಮಾಹಿತಿ: ರಾಜೀವ್ ಕುಮಾರ್, CNN-News18
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ