ಪಂಜಾಬ್ (ಅಕ್ಟೋಬರ್ 15): ಭಾರತದಲ್ಲಿ ಮಹಿಳಾ ಮೀಸಲಾತಿಯ ಕೂಗು ಹಲವು ದಶಕಗಳಿಂದ ಕೇಳಿ ಬರುತ್ತಲೇ ಇದೆ. ಸಾಂವಿಧಾನಿಕವಾಗಿ ಮಹಿಳೆಯರ ಅಭಿವೃದ್ಧಿಯ ಸಲುವಾಗಿ ಸಂವಿಧಾನದಲ್ಲಿ ಮೀಸಲಾತಿ ನೀಡಲಾಗುತ್ತಿದೆಯಾದರೂ ಈ ಮೀಸಲಾತಿ ಮಹಿಳೆಯರ ಪಾಲಿಗೆ ನ್ಯಾಯಯುತವಾಗಿ ದಕ್ಕುತ್ತಿಲ್ಲ ಎಂಬ ಕೂಗುಗಳು ಸಹ ಕೇಳಿ ಬರುತ್ತಲೇ ಇದೆ. ಈ ನಡುವೆ ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರ ಅಭಿವೃದ್ಧಿಗೆ ಪಣತೊಟ್ಟಿರುವ ಪಂಜಾಬ್ ಸರ್ಕಾರ ನಾಗರಿಕ ಸೇವೆಗಳಲ್ಲಿ ಮಹಿಳೆಯರಿಗೆ ಕೊನೆಗೂ ಶೇ.33 ರಷ್ಟು ಮೀಸಲಾತಿಗೆ ಅನುಮೋದನೆ ನೀಡಿದೆ. ಮಹಿಳೆಯರನ್ನು ಮತ್ತಷ್ಟು ಸಬಲೀಕರಣಗೊಳಿಸುವ ಸಲುವಾಗಿ ಪಂಜಾಬ್ ಸರ್ಕಾರ ಸರ್ಕಾರಿ ಉದ್ಯೋಗಗಳಲ್ಲಿ ಶೇ.33 ರಷ್ಟು ಮೀಸಲಾತಿಯನ್ನು ಘೋಷಿಸಿದೆ. ಇದು ಪಂಜಾಬ್ ರಾಜ್ಯ ನಾಗರಿಕ ಸೇವೆಗಳ ನೇರನೇಮಕಾತಿಗೆ ಅನ್ವಯಿಸುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇಂದು ತಿಳಿಸಿದ್ದಾರೆ. ಹೀಗಾಗಿ ಪಂಜಾಬ್ ಸರ್ಕಾರದ ಈ ನಿರ್ಧಾರವನ್ನು ಅನೇಕರು ಐತಿಹಾಸಿಕ ನಿರ್ಣಯ ಎಂದು ಕೊಂಡಾಡಿದ್ದಾರೆ.
ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅಧ್ಯಕ್ಷತೆಯ ರಾಜ್ಯ ಸಚಿವ ಸಂಪುಟ ಸಭೆಯು, ಪಂಜಾಬ್ ನಾಗರೀಕ ಸೇವೆ ನಿಯಮಗಳು-2020ಕ್ಕೆ ಅನುಮೋದನೆ ನೀಡಿತು. ಇದು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ನಿಗಮಗಳಿಗೆ ಸಂಬಂಧಿಸಿದ ಎ, ಬಿ, ಸಿ ಮತ್ತು ಡಿ ಗ್ರೂಪ್‌ಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲಿದೆ.
Today is a historic day for the women of Punjab as our Council of Ministers has approved 33% reservation for women in Government jobs. I am sure this will go a long way in further empowering our daughters and help in creating a more equitable society.
— Capt.Amarinder Singh (@capt_amarinder) October 14, 2020
ಬಿಹಾರದ ನಂತರ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ಎರಡನೇ ರಾಜ್ಯ ಪಂಜಾಬ್. ನ್ಯಾಯಾಲಯದ ಪ್ರಕರಣಗಳು ಮತ್ತು ಕಾನೂನು ವಿಷಯಗಳನ್ನು ಸಮಯೋಚಿತವಾಗಿ ಪರಿಣಾಮಕಾರಿಯಾಗಿ ಮುಂದುವರಿಸಲು, ಗುಮಾಸ್ತ (ಕಾನೂನು) ಕೇಡರ್ ರಚನೆಗಾಗಿ 1976 ರ ಪಂಜಾಬ್ ಸಿವಿಲ್ ಸೆಕ್ರೆಟರಿಯಟ್ ನಿಯಮಗಳಿಗೆ ತಿದ್ದುಪಡಿ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿತು. ಸಾಮಾನ್ಯ ಗುಮಾಸ್ತ ಕೇಡರ್‌ನಿಂದ 100 ಹುದ್ದೆಗಳನ್ನು ತೆಗೆದುಕೊಂಡು ಆರ್ಥಿಕ ಪರಿಣಾಮಗಳಿಲ್ಲ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಇದನ್ನು ಮಾಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ