ಚೀನಾ ಬಗ್ಗೆ ಮೋದಿ ಒಳ್ಳೆಯ ಮೂಡಲಿಲ್ಲ; ಮಧ್ಯಸ್ಥಿಕೆ ವಹಿಸಲು ನಾವ್ ಸಿದ್ಧ: ಟ್ರಂಪ್

PM Modi: ಭಾರತದಲ್ಲಿ ನನ್ನನ್ನು ಇಷ್ಟಪಡುತ್ತಾರೆ. ಅಮೆರಿಕದ ಮಾಧ್ಯಮಗಳಿಗಿಂತ ನನ್ನನ್ನು ಅಲ್ಲಿನವರು ಇಷ್ಟಪಡುತ್ತಾರೆ. ನನಗೆ ಮೋದಿ ಕಂಡರೆ ಇಷ್ಟ. ನಿನ್ನ ಪ್ರಧಾನಿ ಒಬ್ಬ ಒಳ್ಳೆಯ ಜೆಂಟಲ್​ಮನ್ ಎಂದು ಟ್ರಂಪ್ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ

ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ

  • News18
  • Last Updated :
  • Share this:
ನವದೆಹಲಿ(ಮೇ 29): ಗಡಿಬಿಕ್ಕಟ್ಟಿನಲ್ಲಿ ಭಾರತ ಮತ್ತು ಚೀನಾ ಮಧ್ಯೆ ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದರು. ವಾಷಿಂಗ್ಟನ್​ನಲ್ಲಿರುವ ತಮ್ಮ ಗೃಹ ಕಚೇರಿ ಶ್ವೇತ ಭವನದ ಓವಲ್ ಆಫೀಸ್​ನಲ್ಲಿ ಪತ್ರಕರ್ತರೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಚೀನಾ ಮಧ್ಯೆ ದೊಡ್ಡ ಸಂಘರ್ಷ ಆಗುತ್ತಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಇರಿಸುಮುರುಸು ಆಗಿದೆ ಎಂದರು.

ತಾನು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿದೆ. ಅವರು ಈ ಗಡಿಬಿಕ್ಕಟ್ಟಿನ ವಿಚಾರದಲ್ಲಿ ಒಳ್ಳೆಯ ಮೂಡ್​ನಲ್ಲಿಲ್ಲ ಎಂದು ಟ್ರಂಪ್ ವಿವರಿಸಿದರು. ಈ ವೇಳೆ, ಅವರು ಭಾರತ ಮತ್ತು ಚೀನಾ ನಡುವಿನ ವಿಷಮ ಸ್ಥಿತಿಯನ್ನು ಶಮನಗೊಳಿಸಲು ಅಮೆರಿಕ ನೆರವಾಗುತ್ತದಾ ಎಂಬ ಪ್ರಶ್ನೆಗೆ ಟ್ರಂಪ್ ಹೌದೆಂದು ಉತ್ತರ ಕೊಟ್ಟರು.

“ಭಾರತ ಮತ್ತು ಚೀನಾ ಮಧ್ಯೆ ದೊಡ್ಡ ಸಂಘರ್ಷ ಇದೆ. ಎರಡೂ ದೇಶಗಳು 140 ಕೋಟಿ ಜನಸಂಖ್ಯೆ ಹೊಂದಿವೆ. ಎರಡೂ ಕೂಡ ಪ್ರಬಲ ಮಿಲಿಟರಿ ಇರುವ ರಾಷ್ಟ್ರಗಳು. ಭಾರತ ಸಂತೋಷವಾಗಿಲ್ಲ, ಚೀನಾ ಕೂಡ ಖುಷಿಯಾಗಿಲ್ಲ… ಎರಡೂ ದೇಶಗಳು ಒಪ್ಪಿದರೆ ಮಧ್ಯಸ್ಥಿಕೆ ವಹಿಸಲು ನಾವು ಸಿದ್ಧರಿದ್ದೇವೆ” ಎಂದು ಟ್ರಂಪ್ ತಿಳಿಸಿದರು.

“ಭಾರತದಲ್ಲಿ ನನ್ನನ್ನು ಇಷ್ಟಪಡುತ್ತಾರೆ. ಅಮೆರಿಕದ ಮಾಧ್ಯಮಗಳಿಗಿಂತ ನನ್ನನ್ನು ಅಲ್ಲಿನವರು ಇಷ್ಟಪಡುತ್ತಾರೆ. ನನಗೆ ಮೋದಿ ಕಂಡರೆ ಇಷ್ಟ. ನಿನ್ನ ಪ್ರಧಾನಿ ಒಬ್ಬ ಒಳ್ಳೆಯ ಜೆಂಟಲ್​ಮನ್” ಎಂದು ಭಾರತೀಯ ಪತ್ರಕರ್ತರೊಬ್ಬರ ಪ್ರಶ್ನೆಗೆ ಟ್ರಂಪ್ ಈ ಉತ್ತರ ಕೊಟ್ಟರು.

“ನಾನು ಪ್ರಧಾನಿ ಮೋದಿ ಜೊತೆ ಮಾತನಾಡಿದೆ. ಆದರೆ ಚೀನಾ ಜೊತೆ ನಡೆಯುತ್ತಿರುವ ವಿದ್ಯಮಾನದ ಬಗ್ಗೆ ಅವರಿಗೆ ಬೇಸರ ಇದೆ” ಎಂದೂ ಟ್ರಂಪ್ ಹೇಳಿದರು.

ಇದನ್ನೂ ಓದಿ: ಲಡಾಕ್​ನಲ್ಲಿ ಆಗಿದ್ದು ಆಕಸ್ಮಿಕವಲ್ಲ; ಭಾರತೀಯರ ಪೂರ್ವನಿಯೋಜಿತ ತಂಟೆ: ಚೀನೀ ತಜ್ಞರ ಅನಿಸಿಕೆ

ನಿನ್ನೆ ಕೂಡ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಚೀನಾ ಬಿಕ್ಕಟ್ಟು ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧ ಎಂದು ಹೇಳಿದ್ದರು. ಎರಡೂ ದೇಶಗಳಿಗೆ ತಾನು ಆಫರ್ ಕೊಟ್ಟಿದ್ದೇನೆ. ಅವರಿಗೆ ನಮ್ಮ ಅಗತ್ಯ ಇದೆ ಎನಿಸಿದರೆ ಖಂಡಿತವಾಗಿ ನಾವು ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದ್ದರು.

ಭಾರತ ಮತ್ತು ಚೀನಾ ದೇಶಗಳ ಸೈನಿಕರು ಗಡಿಭಾಗದಲ್ಲಿ ಸಂಘರ್ಷಕ್ಕಿಳಿಯುತ್ತಿರುವ ಘಟನೆಗಳು ನಡೆಯುವುದು ಹೆಚ್ಚಾಗುತ್ತಿದೆ. 73 ದಿನಗಳ ಕಾಲ ಇದ್ದ ಡೋಕ್ಲಾಮ್ ಬಿಕ್ಕಟ್ಟು, ಕೆಲ ವಾರದ ಹಿಂದೆ ಸಿಕ್ಕಿಂನ ನಾಕು ಲಾನಲ್ಲಿ ನಡೆದ ಸಂಘರ್ಷ, ಕೆಲ ದಿನಗಳ ಹಿಂದೆ ಲಡಾಕ್​ನಲ್ಲಿ ನಡೆದ ಸಂಘರ್ಷಗಳು ಮುಂದಿನ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡುವ ಸೂಚನೆಗಳು ಎಂದು ಕೆಲವರು ವಿಶ್ಲೇಷಿಸುತ್ತಿದ್ಧಾರೆ. ಆದರೆ, ಭಾರತ ಮತ್ತು ಚೀನಾ ಗಡಿಭಾಗದ ವಾಸ್ತವ ಗಡಿನಿಯಂತ್ರಣ ರೇಖೆ (LAC) ಇನ್ನೂ ಸರಿಯಾಗಿ ಸ್ಪಷ್ಟವಿಲ್ಲದ ಕಾರಣ ಗೊಂದಲಗಳಿಂದಾಗಿ ಈ ಸಂಘರ್ಷಗಳು ಆಗುತ್ತಿವೆ. ಉನ್ನತ ಮಟ್ಟದಲ್ಲಿ ಮಾತುಕತೆ ನಡೆದು ಎಲ್​ಎಸಿ ಇತ್ಯರ್ಥವಾದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಇನ್ನೂ ಕೆಲ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಲಡಾಕ್ ಗಡಿಭಾಗದಲ್ಲಿ ಚೀನೀಯರು ತಂಟೆ ಮಾಡುತ್ತಿರುವುದು ಯಾಕೆ? ಭಾರತೀಯ ಸೇನಾಧಿಕಾರಿ ಹೇಳುವುದೇನು?

ಆದರೆ, ಲಡಾಕ್​ನಲ್ಲಿ ಎರಡೂ ದೇಶಗಳ ಭದ್ರತಾ ಪಡೆಗಳು ಎಲ್​ಎಸಿಯಲ್ಲಿ ಪಹರೆ ನಡೆಸುವಾಗ ಮುಖಾಮುಖಿಯಾಗಿದ್ದರು. ಈ ಜಾಗ ತಮ್ಮದು ಎಂಬುದು ಅವರ ವಾದ. ಇದೇ ಕಾರಣಕ್ಕೆ ಒಂದಷ್ಟು ಸಂಘರ್ಷಗಳಾದವು. ಸಂಘರ್ಷದ ಬಳಿಕ ಎರಡೂ ಕಡೆ ಸಾಕಷ್ಟು ಸೇನಾಪಡೆಗಳನ್ನು ಗಡಿಭಾಗಕ್ಕೆ ಸೇರಿಸಲಾಗಿದೆ. ಇದರಿಂದಾಗಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಚೀನಾ ತನ್ನ ಭೂಪ್ರದೇಶದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಆಕ್ರಮಣಕಾರಿಯಾಗಿ ಹೇಳುತ್ತಿದೆ. ಭಾರತ ಕೂಡ ಅದೇ ಮಾತನ್ನ ಹೇಳುತ್ತಿದೆ.
First published: