ಮಾಸ್ಕೋ ಸಭೆ ನಂತರವೂ ಗಡಿಬಿಕ್ಕಟ್ಟಿಗೆ ಪರಿಹಾರ ಅನುಮಾನ; ಮುಂದುವರಿಯುತ್ತಾ ಚೀನಾ ಹಠಮಾರಿತನ?

ಮಾಸ್ಕೋದಲ್ಲಿ ಎರಡೂವರೆ ಗಂಟೆ ಕಾಲ ಮಾತುಕತೆ ನಡೆದ ಬಳಿಕವೂ ಚೀನಾದ ಧೋರಣೆಯಲ್ಲಿ ಯಾವುದೇ ಬದಲಾವಣೆ ಆದಂತೆ ಕಂಡುಬಂದಿಲ್ಲ ಎಂದು ಸರ್ಕಾರದ ಉನ್ನತ ಮಟ್ಟದ ಮೂಲಗಳು ಅಭಿಪ್ರಾಯಪಟ್ಟಿವೆ.

ಚೀನಾದ ಸೈನಿಕರು

ಚೀನಾದ ಸೈನಿಕರು

 • Share this:
  ನವದೆಹಲಿ(ಸೆ. 11): ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ಸಮಾವೇಶದ ವೇಳೆ ಭಾರತ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರು ಭೇಟಿಯಾಗಿ ಗಡಿಬಿಕ್ಕಟ್ಟು ಸಂಬಂಧ ಮಾತುಕತೆ ನಡೆಸಿದ್ದಾರೆ. ಈ ವೇಳೆ ಐದು ಅಂಶಗಳಿಗೆ ಎರಡೂ ದೇಶಗಳು ಸಹಮತ ಹೊಂದಿವೆ. ಆದರೆ, ಚೀನಾದ ಕೆಲ ಹೇಳಿಕೆಗಳು ಅದರ ಹಠಮಾರಿತನದ ಧೋರಣೆ ಮುಂದುವರಿಯಲಿರುವ ಸಾಧ್ಯತೆಯನ್ನು ಸೂಚಿಸುವಂತಿವೆ ಎಂದು ಸರ್ಕಾರದ ಉನ್ನತ ಮಟ್ಟದಲ್ಲಿರುವ ಮೂಲಗಳು ಅಭಿಪ್ರಾಯಪಟ್ಟಿವೆ. ಎಸ್ ಜೈಶಂಕರ್ ಮತ್ತು ವಾಂಗ್ ಯಿ ಮಧ್ಯೆ ಎರಡೂವರೆ ಗಂಟೆ ಕಾಲ ಮಾತುಕತೆ ನಡೆದ ಬಳಿಕ ಚೀನಾದ ನಿಲುವಿನಲ್ಲಿ ಯಾವುದೇ ಬದಲಾವಣೆ ಆದಂತಿಲ್ಲ. ಈ ಸಂಗತಿಯನ್ನು ಭಾರತದ ನಾಯಕತ್ವದ ಗಮನಕ್ಕೆ ತರಲಾಗಿದೆ ಎಂದು ಮೂಲಗಳು ಹೇಳಿವೆ.

  ಭಾರತ ಮತ್ತು ಚೀನಾ ಗಡಿನಿರ್ವಹಣೆ ಸಂಬಂಧ ಎಲ್ಲಾ ಒಪ್ಪಂದಗಳಿಗೆ ಬದ್ಧವಾಗಿರುವುದು, ಗಡಿಯಲ್ಲಿ ಶಾಂತಿ ಪಾಲನೆ ಮಾಡುವುದು ಇತ್ಯಾದಿ ಐದು ಅಂಶಗಳಿಗೆ ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ. ಆದರೆ, ಗಡಿಯಲ್ಲಿನ ಪರಿಸ್ಥಿತಿಗೂ ದ್ವಿಪಕ್ಷೀಯ ಸಂಬಂಧಕ್ಕೂ ಸಂಬಂಧ ಇಲ್ಲ ಎಂಬಂತೆ ಭಾರತ ಮಾತನಾಡುತ್ತಿದೆ ಎಂದು ಚೀನಾ ಅಸಮಾಧಾನವನ್ನೂ ವ್ಯಕ್ತಪಡಿಸಿದೆ.

  ಲಡಾಖ್​ನಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಿದೆ. ಪರಿಸ್ಥಿತಿಯನ್ನು ಬೇಗನೇ ನಿಯಂತ್ರಿಸುವುದು ಎರಡೂ ದೇಶಗಳ ಹಿತಾಸಕ್ತಿ ದೃಷ್ಟಿಯಿಂದ ಒಳ್ಳೆಯದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಚೀನಾಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರೆನ್ನಲಾಗಿದೆ.

  ಇದನ್ನೂ ಓದಿ: ಮಾಸ್ಕೋದಲ್ಲಿ ಭಾರತ, ಚೀನಾ ವಿದೇಶಾಂಗ ಸಚಿವರ ಭೇಟಿ; 5 ಅಂಶಗಳಿಗೆ ಸಹಮತ

  ಚೀನಾ ಕೂಡ ಇದನ್ನ ಅಂಗೀಕರಿಸಿದೆ. ಭಾರತ ಮತ್ತು ಚೀನಾ ಬೃಹತ್ ಅಭಿವೃದ್ಧಿಶೀಲ ದೇಶಗಳಾಗಿದ್ದು, ಪರಸ್ಪರ ಸಂಘರ್ಷದ ಬದಲು ಸಹಕಾರದ ಅಗತ್ಯತೆ ಇದೆ ಎಂಬುದನ್ನು ಚೀನಾ ಒಪ್ಪಿಕೊಂಡಿದೆ. ಹಾಗೆಯೇ, ಗಡಿ ಕಗ್ಗಂಟನ್ನು ನಿವಾರಿಸಲು ಬಹಳಷ್ಟು ಸಮಯ ಮತ್ತು ಪ್ರಯತ್ನಗಳ ಅಗತ್ಯ ಇದೆ. ಗಡಿ ಪ್ರದೇಶಗಳಲ್ಲಿ ಶಾಂತಿ ಪಾಲನೆ ಮಾಡುವುದು ಎರಡೂ ದೇಶಗಳ ಸಂಬಂಧವೃದ್ಧಿಗೆ ಅಗತ್ಯ ಎಂಬುದನ್ನು ಎರಡೂ ದೇಶಗಳು ಒಪ್ಪಿಕೊಂಡಿವೆ.

  ನೆರೆಯ ದೇಶಗಳಾಗಿರುವುದರಿಂದ ಭಾರತ ಮತ್ತು ಚೀನಾ ಮಧ್ಯೆ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಈಗ ಸಂಬಂಧ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಒಳಪಡುತ್ತಿದೆ. ನಾವು ಈ ಸವಾಲನ್ನು ಎದುರಿಸಿ ನಿಲ್ಲಬಲ್ಲೆವು ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಗಡಿಭಾಗದಲ್ಲಿ ಭಾರತವೇ ಪ್ರಚೋದನೆ ಮಾಡುತ್ತಿದೆ ಎಂಬ ಆಪಾದನೆಯನ್ನೂ ಅವರು ಮಾಡಿದರು. ಆದರೆ, ಚೀನಾದ ಈ ಆರೋಪವನ್ನು ಭಾರತ ಸ್ಪಷ್ಟವಾಗಿ ಅಲ್ಲಗಳೆಯಿತು. “ಎಲ್​ಎಸಿ ಗಡಿಯಾದ್ಯಂತ ಚೀನಾದ ಸೇನಾ ಪಡೆಗಳ ಆಕ್ರಮಣಕಾರಿ ವರ್ತನೆಯಿಂದಲೇ ಹಲವು ಸಂಘರ್ಷ ಘಟನೆಗಳು ಸಂಭವಿಸಿದ್ದು, ದ್ವಿಪಕ್ಷೀಯ ಒಪ್ಪಂದಗಳ ಆಶಯಕ್ಕೆ ಧಕ್ಕೆ ತಂದಿವೆ” ಎಂದು ಭಾರತ ತಿಳಿಸಿದೆ ಎನ್ನಲಾಗಿದೆ

  ಎಲ್​ಎಸಿ ಗಡಿಯಾದ್ಯಂತ ಶಸ್ತ್ರಸಜ್ಜಿತರಾಗಿ ಚೀನಾ ಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭಾರತ, ಇದರಿಂದ 1993 ಮತ್ತು 1996ರ ಒಪ್ಪಂದದ ಆಶಯಕ್ಕೆ ವಿರುದ್ಧವಾಗಿದೆ ಎಂದು ವಾದಿಸಿತು. ಆದರೆ, ಗಡಿಭಾಗದಲ್ಲಿ ಸೇನಾ ಜವಾವಣೆ ಬಗ್ಗೆ ಚೀನಾ ಸರಿಯಾದ ವಿವರಣೆ ನೀಡಲು ವಿಫಲವಾಯಿತು ಎಂದು ಮೂಲಗಳು ಹೇಳಿವೆ.

  ಇದನ್ನೂ ಓದಿ: ಟೀ ಶರ್ಟ್ ಮೇಲೆ ಟ್ರಂಪ್ ವಿರೋಧಿ ಬರಹ: ಆಕ್ಷೇಪಿಸಿದ್ದಕ್ಕೆ ಬಟ್ಟೆ ಕಳಚಿ ಬೆತ್ತಲಾಗಿ ವೋಟು ಹಾಕಿದ ಹುಡುಗಿ

  ಗಡಿ ಭಾಗದ ನಿರ್ವವಣೆ ಸಂಬಂಧ ಇರುವ ಎಲ್ಲಾ ಒಪ್ಪಂದಗಳಿಗೆ ಭಾರತ ಸಂಪೂರ್ಣವಾಗಿ ಬದ್ಧವಾಗಿರುತ್ತದೆ. ಏಕಪಕ್ಷೀಯವಾಗಿ ಗಡಿ ಸ್ಥಿತ್ಯಂತರಕ್ಕೆ ಪ್ರಯತ್ನ ಮಾಡುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಬಹಳ ಸ್ಪಷ್ಟವಾಗಿ ಚೀನಾಗೆ ತಿಳಿಸಿದ್ದಾರೆ.

  ಕೆಲ ತಿಂಗಳುಗಳಿಂದಲೂ ಲಡಾಖ್-ಟಿಬೆಟ್ ಗಡಿಭಾಗದಲ್ಲಿ ಚೀನೀ ಸೈನಿಕರು ಆಕ್ರಮಣಕಾರಿಯಾಗಿ ವರ್ತನೆ ತೋರುತ್ತಾ ಬಂದಿದ್ದಾರೆ. ಭಾರತದ ಸೈನಿಕರು ಅಷ್ಟೇ ಪ್ರಬಲವಾಗಿ ಪ್ರತಿರೋಧ ಒಡ್ಡುತ್ತಾ ಬಂದಿದ್ದಾರೆ. ಪ್ಯಾಂಗಾಂಗ್ ಸರೋವರದ ಉತ್ತರ ಭಾಗದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಸಂಘರ್ಷದ ವಾತಾವರಣಕ್ಕೆ ಎಡೆ ಮಾಡಿಕೊಟ್ಟಿದ್ದರು. ಗಾಲ್ವನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ಅಮಾನುಷವಾಗಿ ದಾಳಿ ನಡೆಸಿ 20 ಮಂದಿಯನ್ನು ಬಲಿತೆಗೆದುಕೊಂಡಿದ್ದರು. ಆ ಘಟನೆಯಲ್ಲಿ ಚೀನೀ ಸೈನಿಕರಿಗೂ ಹಾನಿಯಾಗಿದೆಯಾದರೂ ಎಷ್ಟು ಮಂದಿ ಸಾವನ್ನಪ್ಪಿದರೆಂಬ ಅಧಿಕೃತ ಮಾಹಿತಿ ಬಂದಿಲ್ಲ. ಅದಾದ ಬಳಿಕ ಪ್ಯಾಂಗಾಂಗ್ ಸರೋವರದ ದಕ್ಷಿಣ ಭಾಗದಲ್ಲಿ ಈಗ ಚೀನಾ ಕಿತಾಪತಿ ಮಾಡುತ್ತಿದೆ. ಭಾರತದ ಸೈನಿಕರು ಯಾವುದಕ್ಕೂ ಜಗ್ಗದೆ ಚೀನೀಯರನ್ನು ಹಿಮ್ಮೆಟ್ಟಿಸುತ್ತಿದ್ದಾರೆನ್ನಲಾಗುತ್ತಿದೆ. ಲಡಾಖ್ ಗಡಿಭಾಗದ ಆಯಕಟ್ಟಿನ ಅನೇಕ ಎತ್ತರ ಪ್ರದೇಶಗಳು ಭಾರತದ ವಶದಲ್ಲೇ ಇವೆ.
  Published by:Vijayasarthy SN
  First published: