• Home
  • »
  • News
  • »
  • india-china
  • »
  • ಜಗತ್ತಿನ ಯಾವ ಶಕ್ತಿಯೂ ನಮ್ಮ ಸೈನಿಕರ ಗಡಿಪಹರೆ ತಡೆಯಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್

ಜಗತ್ತಿನ ಯಾವ ಶಕ್ತಿಯೂ ನಮ್ಮ ಸೈನಿಕರ ಗಡಿಪಹರೆ ತಡೆಯಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ಭಾರತದ ಹಿತಾಸಕ್ತಿ ಕಾಪಾಡಲು ಯಾವುದೇ ಅಪಾಯಕಾರಿ ಹಾಗೂ ಕಠಿಣ ನಿರ್ಧಾರಕ್ಕೂ ಸರ್ಕಾರ ಸಿದ್ಧವಿದೆ ಎಂದು ರಾಜ್ಯಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

  • News18
  • 4-MIN READ
  • Last Updated :
  • Share this:

ನವದೆಹಲಿ(ಸೆ. 17): ಭಾರತ ಮತ್ತು ಚೀನಾ ಗಡಿಬಿಕ್ಕಟ್ಟಿನ ವಿಚಾರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದು, ಜಗತ್ತಿನ ಯಾವ ಶಕ್ತಿಯೂ ಭಾರತೀಯ ಸೈನಿಕರನ್ನು ಗಡಿಭಾಗದಲ್ಲಿ ಪಹರೆ ನಡೆಸದಂತೆ ತಡೆಯಲು ಅಸಾಧ್ಯ ಎಂದು ಹೇಳಿದರು. ಮಾಜಿ ರಕ್ಷಣಾ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎ.ಕೆ. ಆಂಟನಿ ಅವರ ಪ್ರಶ್ನೆಗೆ ಉತ್ತರಿಸುತ್ತಾ ರಾಜನಾಥ್ ಸಿಂಗ್ ಭಾರತದ ನಿಲುವನ್ನು ಸ್ಪಷ್ಟಪಡಿಸಿದರು. ಭಾರತ ಮತ್ತು ಚೀನಾ ಮಧ್ಯೆ ರಾಜತಾಂತ್ರಿಕ ಹಾಗೂ ಮಿಲಿಟರಿ ಮಟ್ಟದಲ್ಲಿ ಸಭೆಗಳು ನಡೆದಿರುವ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರು ಮತ್ತೆ ಗಡಿಪಹರೆ ನಡೆಸುತ್ತಾರಾ ಎಂಬುದು ಆಂಟನಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ಪ್ರಶ್ನೆಯಾಗಿತ್ತು. ಅದಕ್ಕೆ ಉತ್ತರಿಸಿದ ರಾಜನಾಥ್ ಸಿಂಗ್, ಭಾರತೀಯ ಸೈನಿಕರು ಸಾಂಪ್ರದಾಯಿಕವಾಗಿ ಮಾಡಿಕೊಂಡು ಬರುತ್ತಿದ್ದ ಪಹರೆಯನ್ನು ಮುಂದುವರಿಸುತ್ತಾರೆ ಎಂದು ತಿಳಿಸಿದರು. ಏಪ್ರಿಲ್​ಗಿಂತ ಮುಂಚೆ ಯಾವ ರೀತಿಯಲ್ಲಿದ್ದ ಪ್ರಕಾರವೇ ನಮ್ಮ ಸೈನಿಕರು ಪಹರೆ ನಡೆಸಲಿದ್ಧಾರೆ ಎಂದು ರಕ್ಷಣಾ ಸಚಿವರು ಸ್ಪಷ್ಟಪಡಿಸಿದರು.


“ಇದಕ್ಕಾಗಿಯೇ ನಮ್ಮ ಸೈನಿಕರು ಬಲಿದಾನವಾಗಿದ್ದು… ಪಹರೆಯಲ್ಲಿ ಯಾವುದೇ ಬದಲಾವಣೆ (ಏಪ್ರಿಲ್​ಗಿಂತ ಮುಂಚಿನ ಸ್ಥಿತಿ) ಇರುವುದಿಲ್ಲ ಎಂಬುದನ್ನು ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರಿಗೆ ಭರವಸೆ ನೀಡಬಯಸುತ್ತೇನೆ. ಕೆಲ ಕಾರ್ಯಾಚರಣೆ ಕಾರಣದಿಂದ ಈ ಸಂದರ್ಭದಲ್ಲಿ ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಆಗುವುದಿಲ್ಲ” ಎಂದು ರಾಜ್ಯಸಭೆಯಲ್ಲಿ ರಾಜನಾಥ್ ಸಿಂಗ್ ತಿಳಿಸಿದರು.


ಇದನ್ನೂ ಓದಿ: ಲಡಾಖ್, ಅರುಣಾಚಲದಲ್ಲಿ ಚೀನಾದಿಂದ 1.28 ಲಕ್ಷ ಚ.ಕಿ. ಪ್ರದೇಶ ಅತಿಕ್ರಮಣ: ರಕ್ಷಣಾ ಸಚಿವ ರಾಜನಾಥ್ ಸಿಂಗ್


“ದೇಶದ ಹಿತಾಸಕ್ತಿಗೋಸ್ಕರ ಯಾವುದೇ ಅಪಾಯಕಾರಿ ಮತ್ತು ಕಠಿಣ ನಿರ್ಧಾರ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ… ಚೀನಾದ ಚಟುವಟಿಕೆ ಗಮನಿಸಿದರೆ ಅವರ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ. ಮಾತುಕತೆ ನಡೆಯುತ್ತಿರುವ ವೇಳೆಯಲ್ಲೂ ಆಗಸ್ಟ್ 29-30ರ ರಾತ್ರಿ ಚೀನೀ ಸೈನಿಕರು ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯ ಭಾಗದಲ್ಲಿ ಅತಿಕ್ರಮಣಕ್ಕೆ ಪ್ರಯತ್ನ ಮಾಡಿದ್ದು ಗಮನಿಸಬೇಕಾದ ವಿಷಯ” ಎಂದು ರಕ್ಷಣಾ ಸಚಿವರು ಚೀನಾವನ್ನು ತರಾಟೆಗೆ ತೆಗೆದುಕೊಂಡರು.


ರಾಜನಾಥ್ ಸಿಂಗ್ ಭಾಷಣದ ಬಳಿಕ ಸದನದಲ್ಲಿದ್ದ ಎಲ್ಲಾ ಪಕ್ಷಗಳ ಮುಖಂಡರು ಭಾರತೀಯ ಸೇನೆ ಮತ್ತು ಸರ್ಕಾರಕ್ಕೆ ಒಮ್ಮತದ ಬೆಂಬಲ ವ್ಯಕ್ತಪಡಿಸಿದರು. ಭಾರತದ ಈ ಒಗ್ಗಟ್ಟನ್ನು ಎಷ್ಟು ಪ್ರಶಂಸಿಸಿದರೂ ಸಾಲದು ಹರ್ಷ ವ್ಯಕ್ತಪಡಿಸಿದ ರಾಜನಾಥ್ ಸಿಂಗ್. “ಎಷ್ಟೇ ದೊಡ್ಡ ಸವಾಲು ಇದ್ದರೂ ನಮ್ಮ ಸೈನಿಕರ ಹಿಂದೆ ಇಡೀ ದೇಶವೇ ನಿಂತಿದೆ ಎಂದು ಈ ಸದನ ಭರವಸೆ ನೀಡಿದೆ” ಎಂದು ಅವರು ಹೇಳಿದರು.


ಇದನ್ನೂ ಓದಿ: PM Modi Birthday - ನರೇಂದ್ರ ಮೋದಿಗೆ 70 ವರ್ಷ; ಇಲ್ಲಿದೆ ಅವರು ಬೆಳೆದುಬಂದ ಹಾದಿ


ಇದೇ ವೇಳೆ, ರಾಜ್ಯಸಭೆ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಚೀನಾ ಗಡಿವಿಚಾರದಲ್ಲಿ ಅಪಸ್ವರ ಎತ್ತಿದ ಕೆಲ ನಾಯಕರಿಗೆ ಬುದ್ಧಿಮಾತು ಹೇಳುವ ಕೆಲಸವನ್ನೂ ಮಾಡಿದರು. “ಭಾರತದ ವಿರುದ್ಧ ಪಿತೂರಿ ರೂಪಿಸಲು ಕೆಲ ವಿದೇಶೀ ಮಾಧ್ಯಮಗಳು ಕೆಲ ಭಾರತೀಯ ನಾಯಕರ ಹೇಳಿಕೆಗಳನ್ನ ಬಳಕೆ ಮಾಡಿಕೊಳ್ಳುತ್ತಿವೆ. ನಮ್ಮ ನಾಯಕರು ಅಂಥ ಹೇಳಿಕೆಗಳನ್ನ ಕೊಡಬಾರದಿತ್ತು. ನಾವೆಲ್ಲರೂ ಒಟ್ಟಿಗಿದ್ದು ಒಂದೇ ಧ್ವನಿಯಲ್ಲಿ ಮಾತನಾಡಬೇಕು” ಎಂದು ವೆಂಕಯ್ಯ ನಾಯ್ಡು ತಿಳಿಹೇಳಿದರು.


ಇನ್ನು, ರಾಜನಾಥ್ ಸಿಂಗ್ ಅವರು ಚೀನಾದಿಂದ ದ್ವಿಪಕ್ಷೀಯ ಒಪ್ಪಂದಗಳ ಉಲ್ಲಂಘನೆಯಾಗಿರುವುದನ್ನ ಎತ್ತಿತೋರಿಸಿದರು. “ಎರಡೂ ಕಡೆಯ ಸೇನಾ ಕಮಾಂಡರ್​ಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿರುವ ವೇಳೆಯೂ ಲಡಾಖ್​ನಲ್ಲಿ ಚೀನಾ ಪದೇಪದೇ ಮಿಲಿಟರಿ ಕಾರ್ಯಾಚರಣೆ ನಡೆಸುವ ಮೂಲಕ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಅಗೌರವ ತೋರಿದೆ. ಎಲ್​ಎಸಿಯಾದ್ಯಂತ ಚೀನಾ ಸೇನೆ ಅಧಿಕ ಪ್ರಮಾಣದ ತುಕಡಿಗಳನ್ನ ನಿಯೋಜಿಸಿದೆ. ಪೂರ್ವ ಲಡಾಖ್​ನ ಗೋಗ್ರಾ, ಕೋಂಕಾ ಲಾ, ಪಾಂಗೋಂಗ್ ಸರೋವರದ ಉತ್ತಮ ಮತ್ತು ದಕ್ಷಿಣ ಭಾಗಗಳಲ್ಲಿ ಹಲವು ಘರ್ಷಣೆಗಳು ನಡೆದಿವೆ. ಚೀನಾಕ್ಕೆ ಪ್ರತಿಯಾಗಿ ನಮ್ಮ ಸೈನಿಕರನ್ನೂ ನಿಯೋಜಿಸಿದ್ದೇವೆ” ಎಂದು ರಕ್ಷಣಾ ಸಚಿವರು ಮಾಹಿತಿ ನೀಡಿದರು.

Published by:Vijayasarthy SN
First published: