ಘರ್ಷಣೆಯ ಸ್ಥಳಗಳಿಂದ ವಾಪಸ್ ಆಗಲು ಪರಸ್ಪರ ಸಮ್ಮತಿಸಿದ ಭಾರತ ಮತ್ತು ಚೀನಾ ಪಡೆಗಳು

ಮೋಲ್ಡೋ ಪ್ರದೇಶದಲ್ಲಿ 11 ಗಂಟೆ ಕಾಲ ನಡೆದ ಈ ಮಾತುಕತೆ ಬಹಳ ಸಕರಾತ್ಮಕ ಮತ್ತು ಸೌಹಾರ್ದಯುತವಾಗಿತ್ತು. ಯಾವ್ಯಾವ ರೀತಿ ಸೇನೆಯನ್ನ ಹಿಂಪಡೆಯುವುದು ಎಂಬುದನ್ನು ಚರ್ಚಿಸಿ ನಿರ್ಧರಿಸಲಾಯಿತು ಎಂದು ಭಾರತೀಯ ಸೇನೆ ಹೇಳಿದೆ.

ಚೀನಾ ಗಡಿಭಾಗದಲ್ಲಿ ಭಾರತೀಯ ಸೈನಿಕರ ಗಸ್ತು

ಚೀನಾ ಗಡಿಭಾಗದಲ್ಲಿ ಭಾರತೀಯ ಸೈನಿಕರ ಗಸ್ತು

 • News18
 • Last Updated :
 • Share this:
  ನವದೆಹಲಿ(ಜೂನ್ 23): ಲಡಾಖ್​ನ ಗಾಲ್ವನ್ ಕಣಿವೆಯಲ್ಲಿ ಚೀನೀ ಸೈನಿಕರ ಅಮಾನುಷ ವರ್ತನೆ ಹೊರತಾಗಿಯೂ ಭಾರತ ಸೇನೆ ಶಾಂತಿಪಾಲನೆಗೆ ಪ್ರಯತ್ನ ಹಾಕಿದೆ. ಪೂರ್ವ ಲಡಾಖ್​ನಲ್ಲಿ ಘರ್ಷಣೆಯಾಗಿರುವ ಎಲ್ಲಾ ಸ್ಥಳಗಳಿಂದಲೂ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಎರಡೂ ಸೇನೆಗಳು ಒಪ್ಪಿಕೊಂಡಿವೆ. ಚೀನೀ ಗಡಿಭಾಗದ ಬಳಿ ಎರಡೂ ಸೇನೆಗಳ ಹಿರಿಯ ಕಮಾಂಡರ್​ಗಳ ಮಟ್ಟದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಭಾರತೀಯ ಸೇನೆ ಹೇಳಿಕೆ ನೀಡಿದೆ.

  ಮೋಲ್ಡೋ ಪ್ರದೇಶದಲ್ಲಿ 11 ಗಂಟೆ ಕಾಲ ನಡೆದ ಈ ಮಾತುಕತೆ ಬಹಳ ಸಕರಾತ್ಮಕ ಮತ್ತು ಸೌಹಾರ್ದಯುತವಾಗಿತ್ತು. ಯಾವ್ಯಾವ ರೀತಿ ಸೇನೆಯನ್ನ ಹಿಂಪಡೆಯುವುದು ಎಂಬುದನ್ನು ಚರ್ಚಿಸಿ ನಿರ್ಧರಿಸಲಾಯಿತು. ಅದರಂತೆ ಈಗ ಎರಡೂ ಕಡೆ ಕಾರ್ಯಾನುಷ್ಠಾನಕ್ಕೆ ತರಲಾಗುತ್ತದೆ ಎಂದು ಸೇನೆ ಹೇಳಿದೆ.

  ಚೀನಾದ ವಿದೇಶಾಂಗ ಇಲಾಖೆ ವಕ್ತಾರರೂ ಕೂಡ ಈ ಸಭೆಯಿಂದ ಸಕಾರಾತ್ಮಕ ಫಲಿತಾಂಶ ಬಂದಿದೆ ಎಂದು ಹೇಳಿದ್ಧಾರೆ.

  ನಿನ್ನೆ ಎರಡೂ ಸೇನೆಗಳು ಲೆಫ್ಟಿನೆಂಟ್ ಜನರಲ್ ಮಟ್ಟದಲ್ಲಿ ಎರಡನೇ ಸಭೆ ನಡೆಸಿದವು. ಇಲ್ಲಿಯೂ ಪರಿಸ್ಥಿತಿ ತಿಳಿಗೊಳಿಸಲು ಅಗತ್ಯವಿದ್ದ ವಿಚಾರಗಳನ್ನ ಚರ್ಚಿಸಲಾಯಿತು. ಆದರೆ, ಜೂನ್ 6ರಂದು ನಡೆದಿದ್ದ ಇದೇ ಉನ್ನತ ಮಟ್ಟದ ಮೊದಲ ಸಭೆಯಲ್ಲೂ ಸೈನಿಕರನ್ನ ವಾಪಸ್ ಕರೆಸಿಕೊಳ್ಳುವುದೆಂದು ತೀರ್ಮಾನಿಸಲಾಗಿತ್ತು. ಆದರೆ, ಚೀನೀ ಸೈನಿಕರು ವಾಪಸ್ ಬಂದು ಮತ್ತೆ ಟೆಂಟ್ ಹಾಕಿದ್ದರು. ಈ ವೇಳೆ ಮಾತುಕತೆಯಲ್ಲಿ ತೀರ್ಮಾನವಾಗಿದ್ದಂತೆ ಭಾರತೀಯ ಸೈನಿಕರು ಚೀನೀಯರ ಟೆಂಟನ್ನ ತೆಗೆದುಹಾಕಿದ್ದರು. ಇದು ಅಂತಿಮವಾಗಿ ಜೂನ್ 15ರಂದು ಚೀನೀ ಸೈನಿಕರ ದಿಢೀರ್ ದಾಳಿಗೆ ಕಾರಣವಾಗಿದೆ.

  ಇದನ್ನೂ ಓದಿ: ‘ಚೀನಾ, ಆರ್ಥಿಕ, ಕೊರೋನಾ ಎಲ್ಲಾ ಸಮಸ್ಯೆಗಳಿಗೂ ಮೋದಿ ಸರ್ಕಾರದ ತಪ್ಪು ನಡೆಗಳೇ ಕಾರಣ‘ - ಸೋನಿಯಾ ಗಾಂಧಿ

  ಅನಿರೀಕ್ಷಿತವಾಗಿ ಎರಗಿ ಬಂದ ಚೀನೀಯರ ಈ ಕುಕೃತ್ಯದಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟರೆನ್ನಲಾಗಿದೆ. ಮದ್ದುಗುಂಡುಗಳ ಶಸ್ತ್ರಾಸ್ತ್ರ ಇಲ್ಲದೆ ನಡೆದ ಈ ಜಟಾಪಟಿಯಲ್ಲಿ ಚೀನೀ ಸೈನಿಕರು ಎಷ್ಟು ಮಂದಿ ಸತ್ತರೆಂಬ ಮಾಹಿತಿ ಗೊತ್ತಾಗಿಲ್ಲ. ನಿನ್ನೆ ನಡೆದ ಮಾತುಕತೆಯಲ್ಲೂ ಈಗ ಸೈನಿಕರನ್ನ ಹಿಂಪಡೆಯಲು ನಿರ್ಧರಿಸಲಾಗಿದೆ. ನಿಗದಿಯಾಗಿರುವ ಸ್ಥಳದಿಂದ ಎರಡೂ ಕಡೆಯ ಸೈನಿಕರು ದೂರ ಹೋಗಬೇಕಾಗುತ್ತದೆ. ಆದರೆ, ಚೀನೀಯರು ಮಾತು ಉಳಿಸಿಕೊಳ್ಳುತ್ತಾರಾ ಇಲ್ಲವಾ ಎಂಬುದು ಗೊತ್ತಿಲ್ಲ.  ಭಾರತೀಯ ವಾಯುಪಡೆಯು ಮುನ್ನೆಚ್ಚರಿಕೆಯಾಗಿ ತನ್ನ ಹಲವು ಫೈಟರ್ ವಿಮಾನ ಮತ್ತು ಹೆಲಿಕಾಪ್ಟರ್​ಗಳನ್ನ ಲಡಾಖ್​ನಲ್ಲಿ ನಿಯೋಜಿಸಿದೆ. ಎಂಥದ್ದೇ ಸಂದರ್ಭ ಬಂದರೂ ಎದುರಿಸಲು ಸನ್ನದ್ಧವಾಗಿರುವುದಾಗಿ ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ಆರ್.ಎಸ್. ಭದೋರಿಯಾ ಹೇಳಿದ್ಧಾರೆ.
  First published: