ವಿಜಯಪುರ(ಜೂ.18): ಚೀನಾ ವಿಚಾರದಲ್ಲಿ ಭಾರತ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ಈ ಹಿಂದೆ ಗಡಿಯಲ್ಲಿ ಕೆಲಸ ಮಾಡಿದ್ದ ಮಾಜಿ ಮತ್ತು ಹಾಲಿ ಹಿರಿಯ ರಕ್ಷಣಾ ಅಧಿಕಾರಿಗಳ ಸಲಹೆ ಸೂಚನೆ ಪಡೆದು ಮುಂದಡಿ ಇಡಬೇಕು ಎಂದು ಮಾಜಿ ಗೃಹ ಸಚಿವ ಸಚಿವ ಎಂ.ಬಿ ಪಾಟೀಲ ಹೇಳಿದ್ದಾರೆ.
ಈ ಸಂಬಂಧ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಎಂಬಿ ಪಾಟೀಲ್ ಅವರು, ಚೀನಾ ಯಾವಾಗಲೂ ಆಕ್ರಮಣಕಾರಿಯಾಗಿರುತ್ತದೆ. ನಮ್ಮ ಸುತ್ತಮುತ್ತಲಿನ ಮಾಲ್ಡಿವ್ಸ್, ಶ್ರೀಲಂಕಾ, ಪಾಕಿಸ್ತಾನ, ನೇಪಾಳಗಳನ್ನು ಚೀನಾ ಎತ್ತಿ ಕಟ್ಟುತ್ತಿದೆ. ನಾವು ನಮ್ಮ ನೆಲೆಯಲ್ಲಿ ಎಚ್ಚರಿಕೆಯಿಂದ ಇರಬೇಕಾಗಿತ್ತು. ಆದರೆ, ಈಗ ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದರು.
ಇನ್ನು, ಭಾರತದ ಪ್ರಧಾನಿ ಜತೆ ಇಡೀ ರಾಷ್ಟ್ರವಿದೆ. ಇಲ್ಲಿ ಯಾವುದೇ ಪಕ್ಷ, ಪಂಗಡ ಸಂಬಂಧವಿಲ್ಲ. ದಿಟ್ಟತನದಿಂದ ಇದನ್ನು ಎದುರಿಸಬೇಕು. ಲಾಡಾಕ್ನಲ್ಲಿ ವೀರ ಮರಣ ಹೊಂದಿದ 20 ಸೈನಿಕರ ತ್ಯಾಗಕ್ಕೆ ಸರಿಯಾದ ಪ್ರತಿಫಲ ಸಿಗಲೇಬೇಕು. ಅವರ ಮರಣ ವ್ಯರ್ಥವಾಗಬಾರದು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಈಗ ಈ ವಿಚಾರ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಎಲ್ಲಿ ನಾವು ಎಡವಿದ್ದೇವೆ ಎಂಬುದರ ಕುರಿತು ಚರ್ಚಿಸಬೇಕು ಎಂದರು.
ಈ ಹಿಂದೆ ಭಾರತ-ಚೀನಾ ಗಡಿಯಲ್ಲಿ ಸೇವೆ ಸಲ್ಲಿಸಿದ ಹಿರಿಯ ರಕ್ಷಣಾ ಅಧಿಕಾರಿಗಳ ಅನುಭವ ಬಳಸಿಕೊಳ್ಳಬೇಕು. ಎಲ್ಲರ ಸಲಹೆ, ಸೂಚನೆ ಪಡೆದು ಈಗ ಕಾರ್ಯತಂತ್ರ ರೂಪಿಸಬೇಕಾಗಿದೆ. ಇದು ಯಾರನ್ನೂ ಟೀಕೆ ಮಾಡುವ ಸಮಯವಲ್ಲ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಇದನ್ನೂ ಓದಿ: ಮಲೆನಾಡಿನಲ್ಲಿ ಧಾರಾಕಾರ ಮಳೆ; ತುಂಬಿದ ಗಾಜನೂರು ಡ್ಯಾಮ್, ತುಂಗಾ ನದಿಗೆ ನೀರು ಬಿಡುಗಡೆ
ಭಾರತ-ಚೀನಾ ಗಡಿ ವಿಚಾರ ಕುರಿತು ಮಾಹಿತಿ ನೀಡದಿರುವುದು ದೇಶದ್ರೋಹದ ಕೆಲಸ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಮಾಡಿರುವ ಟ್ವೀಟ್ ಕುರಿತು ಕೇಳಲಾದ ಪ್ರಶ್ನೆಗೆ ಎಂಬಿ ಪಾಟೀಲ್ ಉತ್ತರಿಸಿದರು. ಪ್ರಧಾನಿ ನರೇಂದ್ರ ಮೋದಿ ಈಗ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ. ಕೆಲವು ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದರು.
ಭಾರತದ 20 ಸೈನಿಕರು ಹುತಾತ್ಮರಾಗಿದ್ದು, ದುರದೃಷ್ಟಕರ. ವೀರಮರಣ ಹೊಂದಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವೆ. ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಎಂ. ಬಿ. ಪಾಟೀಲ ಇದೇ ಸಂದರ್ಭದಲ್ಲಿ ಹೇಳಿದರು.
ರಾಜ್ಯಸಭೆ ಸದಸ್ಯರಾಗಿದ್ದ ಬಿ.ಕೆ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಈ ಬಾರಿ ವಿಧಾನ ಪರಿಷತ್ ಗೆ ಟಿಕೆಟ್ ನೀಡಿರುವುದರ ಕುರಿತು ಪ್ರತಿಕ್ರಿಯೆ ನೀಡಿದ ಎಂಬಿ ಪಾಟೀಲ್, ಇದು ಪಕ್ಷದ ಹೈಕಮಾಂಡ್ ನಿರ್ಧಾರ. ಅದನ್ನು ಎಲ್ಲರು ಒಪ್ಪುತ್ತೇವೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ