ನವದೆಹಲಿ(ಜೂ.22): ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಮರ್ಥವಾಗಿ ಎದುರಿಸುತ್ತಿಲ್ಲ ಎಂದು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಪಕ್ಷದ ನಾಯಕರು ಕಿಡಿಕಾರಿದ್ದಾರೆ. ಗಡಿ ಘರ್ಷಣೆ ಕುರಿತು ಮೋದಿ ಸರ್ಕಾರದ ವಿರುದ್ಧ ಹಲವು ವಿರೋಧ ಪಕ್ಷದ ನಾಯಕರು ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೀಗ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ಧಾರೆ.
ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಡಾ. ಮನಮೋಹನ್ ಸಿಂಗ್, ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಸಂಭವಿಸಿದ ಭಾರತ-ಚೀನಾ ಸೈನಿಕರ ನಡುವಿನ ಹಿಂಸಾತ್ಮಕ ಸಂಘರ್ಷದ ಬಗ್ಗೆ ಆಂತಕ ವ್ಯಕ್ತಪಡಿಸಿದ್ದಾರೆ. ಈ ಪತ್ರದಲ್ಲಿ ಹುತಾತ್ಮ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇನ್ನು, ಪತ್ರದಲ್ಲಿ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಆಡಿದ ಮಾತಿನ ಬಗ್ಗೆಯೂ ಉಲ್ಲೇಖಿಸಿದ್ಧಾರೆ. ಈ ಸಂಬಂಧ ಮೋದಿಯವರು ಯಾವುದೇ ಹೇಳಿಕೆ ನೀಡುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಮುನ್ನ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಕೋವಿಡ್-19 ಹಾವಳಿ: ಒಂದೇ ದಿನ 14,821 ಕೇಸ್ ಪತ್ತೆ, 4,25,282 ಸೋಂಕಿತರು
ಭಾರತದ ಮೇಲೆ ಚೀನಾದ ನಡೆಸಿದ ಹಿಂಸಾತ್ಮಕ ದಾಳಿ ಅತ್ಯಂತ ಖೇದಕರ. ಗಡಿಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಕೇಂದ್ರದ ಜವಾಬ್ದಾರಿ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ ಸಿಂಗ್.
ದೇಶಕ್ಕಾಗಿ ಪ್ರಾಣತೆತ್ತ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸಬೇಕು. ಕೇಂದ್ರ ಸರ್ಕಾರ ರಾಷ್ಟ್ರದ ಹಿತಾಸಕ್ತಿಗಾಗಿ ಯಾವುದೇ ನಿರ್ಧಾರ ತಾಳಿದರೂ ಕಾಂಗ್ರೆಸ್ ಬೆಂಬಲಿಸಲಿದೆ. ಗಡಿ ಸುರಕ್ಷತೆ ಹಾಗೂ ದೇಶದ ಸಾರ್ವಭೌಮತ್ವ ಕಾಪಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ