ಬೀಜಿಂಗ್(ಮೇ 27): ಲಡಾಕ್ನಲ್ಲಿ ಭಾರತ ಮತ್ತು ಚೀನಾದ ಸೈನಿಕರು ವಾಸ್ತವ ಗಡಿ ನಿಯಂತ್ರಣ ರೇಖೆಯ ಗಸ್ತು ತಿರುಗುವಾಗ ಮುಖಾಮುಖಿಯಾಗಿ ಒಂದಷ್ಟು ವಾಗ್ವಾದಗಳಿಗೆ ಎಡೆ ಮಾಡಿಕೊಟ್ಟಿತ್ತು. ಎಲ್ಎಸಿ ವಿಚಾರವಾಗಿ ಭಿನ್ನಾಭಿಪ್ರಾಯಗಳಿಂದ ಈ ಸಂಘರ್ಷವಾಗಿದೆ ಎಂದು ಹೇಳಲಾಗುತ್ತಿದೆ. ಎಲ್ಎಸಿ ಗಡಿಭಾಗದಲ್ಲಿ ಭಾರತೀಯ ಸೈನಿಕರ ಗಸ್ತು ಕಾರ್ಯಕ್ಕೆ ಚೀನೀಯರು ಅಡ್ಡಿಪಡಿಸುತ್ತಿದ್ದಾರೆ ಎಂದು ಭಾರತ ಆರೋಪಿಸುತ್ತಿದೆ. ಆದರೆ, ಚೀನಾದ ರಾಜಕೀಯ ತಜ್ಞರು ಈ ಘಟನೆಯನ್ನು ಬೇರೆ ರೀತಿಯಲ್ಲಿ ಅರ್ಥೈಸಿದ್ದಾರೆ. ಭಾರತದ ವಿರುದ್ಧವೇ ಗುರುತರ ಆರೋಪ ಮಾಡಿದ್ದಾರೆ.
ಲಡಾಕ್ನಲ್ಲಿ ನಡೆದಿರುವುದು ಬೇರೆಯ ರೀತಿಯೇ. ಗಡಿಭಾಗದಲ್ಲಿ ಈವರೆಗೂ ನಡೆದಿರುವ ಭಾರತ-ಚೀನಾ ಸಂಘರ್ಷಕ್ಕಿಂತ ಇದು ಭಿನ್ನ. ಲಡಾಕ್ ಘಟನೆ ಆಕಸ್ಮಿಕವಲ್ಲ. ಭಾರತದ ಯೋಜಿತ ನಡೆ ಅದು ಎಂದು ಚೆಂಗ್ಡು ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಅಫೇರ್ಸ್ ಸಂಸ್ಥೆಯ ಅಧ್ಯಕ್ಷ ಲಾಂಗ್ ಕ್ಲಿಂಗ್ಚುನ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಯುದ್ಧಸ್ಥಿತಿಗೆ ಸನ್ನದ್ಧರಾಗಿ: ಮಿಲಿಟರಿ ಪಡೆಗಳಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸೂಚನೆ
“ಗಾಲ್ವನ್ ಕಣಿವೆ ಪ್ರದೇಶದ ಗಡಿ ಭಾಗವನ್ನು ದಾಟಿ ಚೀನೀ ಪ್ರದೇಶಕ್ಕೆ ಭಾರತ ಅಕ್ರಮ ಪ್ರವೇಶ ಮಾಡಿದೆ. ಚೀನಾದ ಸೈನಿಕರ ಜೊತೆ ಭಾರತೀಯ ಸೈನಿಕರು ಬೇಕೆಂದೇ ಸಂಘರ್ಷಕ್ಕಿಳಿದಿದ್ದಾರೆ. ಭಾರತ ಇಂಥ ಪ್ರಚೋದನಕಾರಿ ವರ್ತನೆಗಳನ್ನ ಚೀನಾ-ಭಾರತದ ಸಂಬಂಧಕ್ಕೆ ಧಕ್ಕೆಯಾಗುತ್ತದೆ. ಡೋಕ್ಲಾಮ್ ಸಂಘರ್ಷವನ್ನೂ ಮೀರಿದ ಬೆಳವಣಿಗೆಯಾಗಬಹುದು” ಎಂದು ಲಾಂಗ್ ಕ್ಸಿಂಗ್ಚುನ್ ಅವರು ಗ್ಲೋಬಲ್ ಟೈಮ್ಸ್ ಪತ್ರಿಕೆಯ ಲೇಖನದಲ್ಲಿ ಬರೆದಿದ್ದಾರೆ.
ಚೀನೀಯವರು ಹೇಳುತ್ತಿರುವುದು ಭಾರತದ ನಿಲುವಿಗೆ ತದ್ವಿರುದ್ಧವಾಗಿದೆ. ಭಾರತದಿಂದ ಯಾವುದೇ ಅಕ್ರಮ ಪ್ರವೇಶ ಆಗಿಲ್ಲ. ಗಡಿ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಹೇಳುತ್ತಿರುವ ಭಾರತ, ಲಡಾಕ್ ಮತ್ತು ಸಿಕ್ಕಿಮ್ನ ಎಲ್ಎಸಿ ಗಡಿಭಾಗದಲ್ಲಿ ಭಾರತೀಯ ಸೈನಿಕರು ಸಹಜವಾಗಿ ನಡೆಸುತ್ತಿರುವ ಪಹರೆಗೆ ಚೀನೀ ಸೇನೆ ಅಡ್ಡಿಪಡಿಸುತ್ತಿದೆ ಎಂದು ಆರೋಪ ಮಾಡಿದೆ.
ಇದನ್ನೂ ಓದಿ: ಲಡಾಕ್ ಗಡಿಭಾಗದಲ್ಲಿ ಚೀನೀಯರು ತಂಟೆ ಮಾಡುತ್ತಿರುವುದು ಯಾಕೆ? ಭಾರತೀಯ ಸೇನಾಧಿಕಾರಿ ಹೇಳುವುದೇನು?
ಗಡಿಯಲ್ಲಿನ ಭಾರತೀಯರ ಚಟವಟಿಕೆಗಳೆಲ್ಲವೂ ನಮ್ಮ ಭಾಗದಲ್ಲೇ ನಡೆಯುತ್ತಿರುವುದು. ಗಡಿನಿರ್ವಹಣೆ ವಿಚಾರದಲ್ಲಿ ಭಾರತ ಯಾವತ್ತೂ ಕೂಡ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾ ಬಂದಿದೆ. ಭಾರತದ ಸಾರ್ವಭೌಮತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತ-ಚೀನಾ ಗಡಿಭಾಗದಲ್ಲಿ ವಾಸ್ತವ ಗಡಿನಿಯಂತ್ರಣ ರೇಖೆ ಹೇಗಿದೆ ಎಂಬುದು ಭಾರತೀಯ ಸೇನಾಪಡೆಗೆ ಚೆನ್ನಾಗಿ ಅರಿವಿದೆ, ಅದಕ್ಕೆ ಬದ್ಧವಾಗಿಯೂ ಇದ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಕಳೆದ ವಾರವಷ್ಟೇ ಸ್ಪಷ್ಟಪಡಿಸಿದ್ದರು.
ನಿನ್ನೆ ಗೃಹ ಸಚಿವ ರಾಜನಾಥ್ ಸಿಂಗ್ ಅವರೂ ಕೂಡ ಲಡಾಕ್ನ ಗಡಿಭಾಗಕ್ಕೆ ಹೋಗಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ