ನವದೆಹಲಿ: ಕಳ್ಳ ಮಾರ್ಗವಾಗಿ ದೇಶದ ಗಡಿ ವಿಸ್ತರಿಸಿಕೊಳ್ಳಲು ಮುಂದಾಗಿರುವ ಚೀನಾ(China) ಗೆ ಭಾರತ ಟಕ್ಕರ್ ನೀಡಿದೆ. ಇದೇ ಮೊದಲ ಬಾರಿಗೆ ಲಡಾಕ್ ಗಡಿಗೆ ಭಾರತದ ಕೆ9-ವಜ್ರ (K9 Vajra)ಹೊವಿಟ್ಜರ್ ತಲುಪಿವೆ. ಸೆಲ್ಫ್-ಪ್ರೊಫೈಲ್ಡ್ ಹೊವಿಟ್ಜರ್ ಗಳಾಗಿದ್ದು 50 ಕಿಲೋಮೀಟರ್ ದೂರದವರೆಗೆ ಗುರಿಯನ್ನು ಇರಿಸುವ ಸಾಮರ್ಥ್ಯವನ್ನು ಹೊಂದಿವೆ. ದಕ್ಷಿಣ ಕೊರಿಯಾದ ಹನ್ವಾ ಡಿಫೆನ್ಸ್ ತಂತ್ರಜ್ಞಾನ ಬಳಲಿ ಎಲ್ ಆ್ಯಂಡ್ ಟಿ ಕಂಪನಿ ಕೆ-9 ವಜ್ರಗಳನ್ನು ಸಿದ್ಧಪಡಿಸಿದೆ. ಕಳೆದ ಒಂದು ವರ್ಷದಿಂದ ಚೀನಾ ಜೊತೆಗಿನ ಸಂಘರ್ಷ ಹಿನ್ನೆಲೆ ಭಾರತ ಗಡಿಯಲ್ಲಿ ಸೇನಾ ತುಕಡಿಗಳ ಜೊತೆಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಲುಪಿಸುತ್ತಿದೆ. ಇದರ ಜೊತೆಗೆ ಲಡಾಕ್ ಗಡಿಯಲ್ಲಿ ಟಿ-90 (T-90) ಟ್ಯಾಂಕ್ ಗಳನ್ನು ನಿಯೋಜಿಸಿದೆ.
ಕೆ9 ವಜ್ರದಿಂದ ಸೇನೆ ಮತ್ತಷ್ಟು ಬಲಿಷ್ಠ
ಗಡಿ ಪ್ರದೇಶದಲ್ಲಿ ಕೆ-9 ವಜ್ರಗಳಿಂದ ಸೇನೆ ಮತ್ತಷ್ಟು ಬಲಿಷ್ಠವಾಗಲಿದೆ. ಈಗಾಗಲೇ ಕೆ-9 ವಜ್ರಗಳ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಮುಂದೆ ಸೇನೆಯ ಎಲ್ಲ ರೆಜಿಮೆಂಟ್ ಗಳನ್ನು ಕೆ-9 ವಜ್ರ ಸೇರ್ಪಡೆಯಾಗಲಿವೆ. ಸೇನೆಯ ಚೀಫ್ ಜನರಲ್ ಮನೋಜ್ ಮುಕುಂದ್ (Army Chief General Manoj Mukund Naravane) ಚೀನಾ ಮತ್ತು ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ್ದಾರೆ. ನಾವು ಚೀನಾವನ್ನ ಎದುರಿಸಲು ಲಡಾಕ್ ಗಡಿ ಭಾಗದಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸೈನಿಕರ ಸಂಖ್ಯೆಯಲ್ಲಿ ಹೆಚ್ಚಳ
ಚೀನಾ ತನ್ನ ಕಳ್ಳಾಟ ಹೆಚ್ಚು ಮಾಡುತ್ತಿರುವ ಹಿನ್ನೆಲೆ ಭಾರತೀಯ ಸೇನೆ ಹೆಚ್ಚು ಸೈನಿಕರನ್ನು ನಿಯೋಜನೆ ಮಾಡುತ್ತಿದೆ. ಪ್ರತಿ ವಾರ ಪಾಕಿಸ್ತಾನ ಸೇನೆಯ ಜೊತೆ ಡೈರೆಕ್ಟರ್ ಜನರಲ್ ಆಫ್ ಮಿಲಿಟ್ರಿ ಆಪರೇಷನ್ (ಡಿಜಿಎಂಓ) ಲೆವಲ್ ನಲ್ಲಿ ಮಾತುಕತೆ ನಡೆಯುತ್ತಿರುತ್ತದೆ. ಈ ಮಾತುಕತೆಯಲ್ಲಿ ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಬಾರದು ಎಂದು ಮನೋಜ್ ಮುಕುಂದ್ ಎಚ್ಚರಿಕೆ ನೀಡಿದ್ದಾರೆ.
ಅಕ್ಟೋಬರ್ 2ನೇ ವಾರದಲ್ಲಿ ಚೀನಾ ಜೊತೆ ಮಾತುಕತೆ
ಇತ್ತ ಚೀನಾ ಸಹ ಪೂರ್ವ ಮತ್ತು ಉತ್ತರ ಲಡಾಖ್ ಭಾಗದಲ್ಲಿ ತನ್ನ ಸೇನೆಯನ್ನು ನಿಯೋಜಿಸುತ್ತಿದೆ. ಭಾರತ ಮತ್ತು ಚೀನಾ ನಡುವೆ ಅಕ್ಟೋಬರ್ ಎರಡನೇ ವಾರದಲ್ಲಿ 13ನೇ ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಗಳಿವೆ. ಈ ವೇಳೆ ಗಡಿ ಭಾಗದಲ್ಲಿ ಉಂಟಾಗುತ್ತಿರುವ ಅಕ್ರಮ ಒಳನುಸಳುವಿಕೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
5 ತಿಂಗಳು ಬಳಿಕ ಕದನ ವಿರಾಮ ಉಲ್ಲಂಘಿಸಿದ ಪಾಕ್
ಫೆಬ್ರವರಿಯಿಂದ ಜೂನ್ 2021ರವರೆಗೆ ಪಾಕಿಸ್ತಾನ ಯಾವುದೇ ಕದನ ವಿರಾಮ ಉಲ್ಲಂಘಿಸಿರಲಿಲ್ಲ. ಆದ್ರೆ ಕಳೆದ 15 ದಿನಗಳಿಂದ ದೇಶದೊಳಗೆ ನುಸಳಲು ಪಾಕ್ ಪ್ರಯತ್ನಿಸುತ್ತಿದೆ. ಕಳೆದ 10 ದಿನಗಳಲ್ಲಿ ಎರಡು ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ.
ಹೊಸ ಟೆಂಟ್ ನಿರ್ಮಿಸುತ್ತಿರುವ ಚೀನಾ
ಗುಪ್ತಚರ ಮಾಹಿತಿ ಪ್ರಕಾರ, ಚೀನಾ ಪೂರ್ವ ಲಡಾಕ್ ಬಳಿಯಲ್ಲಿಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯ ಎಂಟು ಲೊಕೇಶನ್ ಗಳಲ್ಲಿ ಹೊಸ 84 ಮ್ಯಾಡ್ಯೂಲರ್ ಕಂಟೇನರ್ (ತಾತ್ಕಾಲಿಕ ಟೆಂಟ್) ನಿರ್ಮಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: China- Pakistan: ಚೀನಾ ಆರ್ಮಿ ಪ್ರಧಾನ ಕಚೇರಿಗೆ ಪಾಕ್ ಸೈನ್ಯದ ಅಧಿಕಾರಿಗಳ ನಿಯೋಜನೆ
ಮಾಧ್ಯಮಗಳ ವರದಿ ಪ್ರಕಾರ, ಪೀಪುಲ್ಸ್ ಲಿಬರೇಶನ್ ಆರ್ಮಿ ಉತ್ತರ ಕಾರಾಕೋರಮ್ ಸಮೀಪ ವಹಾಬ್ ಜಿಲ್ಗಾದಿಂದ ಪಿಯು, ಹಾಟ್ ಸ್ಪ್ರಿಂಗ್ಸ್, ಚಂಗ್ ಲಾ, ನಾಶಿಗಾಂಗ್, ಮಾನ್ಜಾ ಮತ್ತು ಚುರೂಪ್ ವರೆಗೆ ಸೈನಿಕರ ಶೆಲ್ಟರ್ ನಿರ್ಮಿಸುತ್ತಿದೆ. ಈಗಾಗಲೇ ಅಲ್ಲಿ ಹಳೆಯ ಟೆಂಟ್ ಗಳಿದ್ರೂ ಮತ್ತೆ ಹೊಸ ಶೆಲ್ಟರ್ ಗಳ ನಿರ್ಮಾಣಕ್ಕೆ ಮುಂದಾಗಿದೆ. ಚೀನಾದ ಈ ಬೆಳವಣಿಗೆಯಿಂದ ಅದು ತನ್ನ ಸೇನೆಯನ್ನು ಹಿಂಪಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ದೀರ್ಘ ಸಮಯದವರೆಗೆ ಚೀನಾ ತನ್ನ ಸೈನಿಕರನ್ನು ನಿಯೋಜಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ವರದಿ: ಮಹ್ಮದ್ ರಫೀಕ್ ಕೆ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ