ನವದೆಹಲಿ (ಜೂ. 22): ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿರುವುದರಿಂದ ಗಡಿ ಒಪ್ಪಂದದ ವಿಚಾರವಾಗಿ, ಲೈನ್ ಆಫ್ ಆಕ್ಚ್ಯುವಲ್ ಕಂಟ್ರೋಲ್ (ಎಲ್ಎಸಿ) ಉದ್ದಕ್ಕೂ ಶಸ್ತ್ರಾಸ್ತ್ರ ಬಳಸುವ ಬಗ್ಗೆ ಕೆಲವು ನಿಯಮಗಳನ್ನು ಬದಲಿಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ.
1962 ಮತ್ತು 2005ರಲ್ಲಿ ಭಾರತ ಮತ್ತು ಚೀನಾ ನಡುವೆ ಆಗಿರುವ ಒಪ್ಪಂದದ ಅನುಸಾರ 3,488 ಕಿಲೋ ಮೀಟರ್ ಲೈನ್ ಆಫ್ ಆಕ್ಚ್ಯುಯಲ್ ಕಂಟ್ರೋಲ್ ಉದ್ದಕ್ಕೂ ಎರಡೂ ದೇಶಗಳು ಶಸ್ತ್ರಾಸ್ತ್ರ ಬಳಸುವಂತಿಲ್ಲ. ಈಗ ಚೀನಾ ಈ ಒಪ್ಪಂದವನ್ನು ಉಲ್ಲಂಘಿಸಿರುವುದರಿಂದ ಭಾರತ ಕೂಡ ತಾನು ಪಾಲಿಸಬೇಕಾದ ನಿಯಮಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿದೆ. "ಅಸಾಧಾರಣ ಸಂದರ್ಭಗಳಲ್ಲಿ" ಶಸ್ತ್ರಾಸ್ತ್ರ ಬಳಸಲು ತೀರ್ಮಾನಿಸಿದೆ.
ಇದನ್ನೂ ಓದಿ: ‘ಗಾಲ್ವಾನ್ ಸಮಸ್ಯೆಯನ್ನು ಸಮರ್ಥವಾಗಿ ನಿರ್ವಹಿಸದ ಮೋದಿ ಸರ್ಕಾರ‘ - ನಟ ಕಮಲ್ ಹಾಸನ್ ಟೀಕೆ
ಈ ವಿಷಯಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀಫ್ ಆಫ್ ಡಿಫೆನ್ಸ್ ಸ್ಟಾಪ್ ಬಿಪಿನ್ ರಾವತ್ ಹಾಗೂ ಮೂರೂ ಸೇನೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ. ಬಳಿಕ ಲೈನ್ ಆಫ್ ಆಕ್ಚ್ಯುಯಲ್ ಕಂಟ್ರೋಲ್ ಬಳಿ ನಿಯೋಜಿತರಾಗಿರುವ ಕ್ಷೇತ್ರ ಕಮಾಂಡರ್ಗಳಿಗೆ "ಅಸಾಧಾರಣ ಸಂದರ್ಭಗಳಲ್ಲಿ ಶಸ್ತ್ರಾಸ್ತ್ರ ಬಳಸಬಹುದು" ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಲಡಾಖ್ ಗಡಿ ಸಂಘರ್ಷ; ಚೀನಾ ಉತ್ಪನ್ನಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಸಿದ್ಧತೆ
ಹಿಂದಿನ ಒಪ್ಪಂದದ ಪ್ರಕಾರ ಲೈನ್ ಆಫ್ ಆಕ್ಚ್ಯುಯಲ್ ಕಂಟ್ರೋಲ್ ಎರಡೂ ಕಡೆ ಎರಡು ಕಿಲೋ ಮೀಟರ್ ವ್ಯಾಪ್ತಿವರೆಗೆ ಯಾವುದೇ ರೀತಿಯ ಸ್ಫೋಟಕ ಅಥವಾ ಬಂದೂಕು ಬಳಸುವಂತಿರಲಿಲ್ಲ. ಈ ಬೆಳವಣಿಗೆ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ, ಚೀನಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ