ಭಾರತ-ಚೀನಾ ಗಡಿಬಿಕ್ಕಟ್ಟು: ಎಂಥ ಪರಿಸ್ಥಿಗೂ ನಾವು ಸಿದ್ಧ: ಭಾರತೀಯ ವಾಯುಪಡೆ ಮುಖ್ಯಸ್ಥರ ಹೇಳಿಕೆ

ಲೆಹ್​ನಿಂದ ಹಶಿಮಾರಾದವರೆಗೆ ಚೀನಾದ ಗಡಿ ಭಾಗದುದ್ದಕ್ಕೂ ಇರುವ ಭಾರತೀಯ ವಾಯುನೆಲೆಗಳನ್ನ ಜಾಗೃತ ಸ್ಥಿತಿಯಲ್ಲಿಡಲಾಗಿದೆ. ಅದೇ ಗಡಿಯುದ್ಧಕ್ಕೂ ಇರುವ ಚೀನಾ ವಾಯುನೆಲೆಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ.

ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಭಡೂರಿಯಾ

ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಭಡೂರಿಯಾ

 • News18
 • Last Updated :
 • Share this:
  ಹೈದರಾಬಾದ್(ಜೂನ್ 20): ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಲಡಾಖ್​ನ ಎಲ್​ಎಸಿ ಗಡಿಭಾಗದಲ್ಲಿ ಸಂಘರ್ಷ ನಡೆದ ಬೆನ್ನಲ್ಲೇ ಭಾರತೀಯ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಭಡೋರಿಯಾ ಪ್ರತಿಕ್ರಿಯಿಸಿದ್ದು, ಗಡಿಭಾಗದಲ್ಲಿ ತಮ್ಮ ಪಡೆಗಳನ್ನ ನಿಯೋಜಿಸಲಾಗಿದ್ದು, ಯಾವುದೇ ಪರಿಸ್ಥಿತಿಗೂ ಸನ್ನದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ. ಇಲ್ಲಿ ಸೇನೆಯ ತೇರ್ಗಡೆ ಸಮಾರಂಭ (Passing out Ceremony)ದಲ್ಲಿ ಮಾತನಾಡುತ್ತಿದ್ದ ವಾಯುಸೇನೆ ಮುಖ್ಯಸ್ಥರು, “ನಾವು ಯಾವುದೇ ಪರಿಸ್ಥಿತಿಗೂ ಸಿದ್ಧವಾಗಿದ್ದು, ವಾಯುಪಡೆಗಳನ್ನ ಅಣಿಗೊಳಿಸಿದ್ದೇವೆ. ನಾವು ಎಂಥ ಕ್ರಮ ಕೈಗೊಳ್ಳಲು ಬದ್ಧವಾಗಿದ್ದು, ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲವೆಂದು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ” ಎಂದು ಪಣತೊಟ್ಟಿದ್ಧಾರೆ.

  ಸೋಮವಾರ ಚೀನೀ ಸೇನೆ ಅಮಾನುಷ ಹಲ್ಲೆ ನಡೆಸಿ 20 ಸೈನಿಕರನ್ನು ಬಲಿತೆಗೆದುಕೊಂಡ ಬೆನ್ನಲ್ಲೇ ಬುಧರವಾ ಮತ್ತು ಗುರುವಾರದಂದು ವಾಯುಸೇನೆ ಮುಖ್ಯಸ್ಥ ಭಡೋರಿಯಾ ಅವರು ಲಡಾಖ್ ಮತ್ತು ಕಾಶ್ಮೀರದಲ್ಲಿರುವ ಸೇನಾ ನೆಲೆಗಳಿಗೆ ಭೇಟಿ ನೀಡಿ ಕಾರ್ಯಾಚರಣೆಯ ಸಿದ್ಧತೆಗಳನ್ನ ಪರಿಶೀಲಿಸಿದರು. ಚೀನಾಗೆ ಎದುರಾಗಿರುವ ಫಾರ್ವರ್ಡ್ ಬೇಸ್​ಗಳಿಗೆ ಭಾರತೀಯ ವಾಯುಸೇನೆಯ ಸುಖೋಯ್-30ಎಂಕೆಐ, ಮಿಗ್-29 ಮತ್ತು ಜಾಗ್ವರ್ ಮೊದಲಾದ ಫ್ರಂಟ್​ಲೈನ್ ಫೈಟರ್ ವಿಮಾನಗಳು ಮತ್ತು ಹೆಲಿಕಾಪ್ಟರ್​ಗಳನ್ನ ನಿಯೋಜಿಸಲಾಗಿದೆ. ಅದೇ ವೇಳೆ, ಹೊಸದಾಗಿ ಖರೀದಿಸಲಾಗಿರುವ ಅಪಾಚೆ ಮತ್ತು ಚಿನೂಕ್ ಯುದ್ಧ ಹೆಲಿಕಾಪ್ಟರ್​ಗಳೂ ಕೂಡ ಲಡಾಖ್ ಭಾಗದಲ್ಲಿ ಹಾರುತ್ತಿದ್ದುದು ಕಂಡುಬಂತು.

  ಅಮೆರಿಕದ ಬೋಯಿಂಗ್ ಸಂಸ್ಥೆ ನಿರ್ಮಿತ ಅಪಾಚೆ ಹೆಲಿಕಾಪ್ಟರ್​ನಿಂದ ಕ್ಷಿಪಣಿ ಮತ್ತು ರಾಕೆಟ್ ದಾಳಿ ನಡೆಸಬಹುದಾಗಿದೆ. ಎದುರಾಳಿ ಪಡೆಗಳ ಟ್ಯಾಂಕ್​ಗಳನ್ನ ಹೊಡೆದುರುಳಿಸಲು ಇದು ಸಮರ್ಥವಾಗಿದೆ. ಭಾರತ ಸೇರಿದಂತೆ 15-20 ದೇಶಗಳಲ್ಲಿ ಈ ಹೆಲಿಕಾಪ್ಟರ್ ಇದೆ. ಇನ್ನು, ಅಮೆರಿಕದ ವೆರ್ಟೋಲ್ ಸಂಸ್ಥೆ ಅಭಿವೃದ್ಧಿಪಡಿಸಿದ ಚಿನೂಕ್ ಹೆಲಿಕಾಪ್ಟರ್​ಗಳು ಅತಿ ಭಾರದ ವಸ್ತುಗಳನ್ನ ಹೊತ್ತೊಯ್ಯಬಲ್ಲಷ್ಟು ಸಮರ್ಥವಾಗಿವೆ. ಸೈನಿಕರನ್ನು ಮತ್ತು ಆರ್ಟಿಲರಿ ಶಸ್ತ್ರಗಳನ್ನ ದುರ್ಗಮ ಸ್ಥಳಗಳಿಗೆ ಸಾಗಿಸಲು ಈ ಚಿನೂಕ್ ಕಾಪ್ಟರ್​ಗಳು ನೆರವಾಗುತ್ತವೆ.

  ಇದನ್ನೂ ಓದಿ: ಯಾವ ಯುದ್ಧವನ್ನೂ ಗೆಲ್ಲದ ಚೀನಾಗೆ ನಾವು ಹೆದರುವುದ್ಯಾಕೆ? ನಿವೃತ್ತ ಸೇನಾಧಿಕಾರಿ ಮನೋಜ್ಞ ಲೇಖನ

  ಇದೇ ವೇಳೆ, ಚೀನಾ ಗಡಿಯೊಳಗೆಯೂ ಯುದ್ಧವಿಮಾನ ಸಾಗಣೆ ಇತ್ಯಾದಿ ವಾಯುಚಟುವಟಿಕೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಕೂಡ ಭಾರತದ ವಾಯುಸೇನೆ ಮುಖ್ಯಸ್ಥರು ಹೈದರಾಬಾದ್​ನ ಈ ಸಮಾರಂಭದಲ್ಲಿ ಪ್ರಸ್ತಾಪಿಸಿದರು.

  “ಈ ಅವಧಿಯಲ್ಲಿ ಚೀನಾ ದೇಶ ತರಬೇತಿಗೆಂದು ಸಾಕಷ್ಟು ಯುದ್ಧ ವಿಮಾನಗಳನ್ನ ಅಣಿಗೊಳಿಸುತ್ತದೆ. ಆದರೆ, ಈ ಬಾರಿ ಇದರ ಪ್ರಮಾಣ ಸಾಕಷ್ಟು ಹೆಚ್ಚಿದೆ. ನಮಗೇನಾದರೂ ಅನುಮಾನ ಬರುವಂಥ ಚಟಿವಟಿಕೆ ಗಮನಕ್ಕೆ ಬಂದರೆ ನಾವೂ ಕೂಡ ನಮ್ಮ ವಿಮಾನಗಳನ್ನ ನಿಯೋಜಿಸಿ ಪರಿಸ್ಥಿತಿ ಪರಿಶೀಲಿಸುತ್ತೇವೆ. ಎಲ್​ಎಸಿ ಅಥವಾ ಏನೇ ಇರಲಿ, ನಮಗೆ ಈಗಿರುವ ಸನ್ನಿವೇಶ ಸ್ಪಷ್ಟವಾಗಿ ತಿಳಿದಿದೆ. ಎದುರಾಳಿಗಳ ವಾಯುಪಡೆ ನಿಯೋಜನೆಯನ್ನೂ ನಾವು ಗಮನಿಸುತ್ತಿದ್ದೇವೆ” ಎಂದು ಭಡೂರಿಯಾ ತಿಳಿಸಿದರು.

  ಲಡಾಖ್​ನ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ದೊಡ್ಡ ಘರ್ಷಣೆಯೇ ನಡೆದಿತ್ತು. ಮದ್ದು ಗುಂಡುಗಳಿಲ್ಲದೇ ಸೈನಿಕರು ಕೈ ಕೈ ಮಿಲಾಯಿಸಲಾಯಿಸಿದ್ದರು. ಕಬ್ಬಿಣದ ರಾಡ್, ಮೊಳೆಗಳಿರುವ ದೊಣ್ಣೆಗಳಿಂದ ಚೀನೀಯರು ಅಮಾನುಷವಾಗಿ ದಾಳಿ ಮಾಡಿದ್ದರು. ಈ ಘಟನೆಯಲ್ಲಿ 20 ಭಾರತೀಯರು ಹುತಾತ್ಮರಾದರು. ಚೀನಾ ಕಡೆ ಎಷ್ಟು ಜನ ಸತ್ತರೆಂದು ಸ್ಪಷ್ಟವಾಗಿಲ್ಲ.

  ಇದನ್ನೂ ಓದಿ: ಚೀನಾ ಬಗ್ಗೆ ಭಾರತೀಯರ ಒಲುವು ಹೇಗಿದೆ; ನ್ಯೂಸ್ 18 ನಡೆಸಿದ ಸಮೀಕ್ಷೆಯಲ್ಲಿ ಹೊರಬಿದ್ದ ಸತ್ಯಾಂಶವೇನು?

  ಈ ಘಟನೆ ನಂತರ ಲೆಹ್​ನಿಂದ ಹಶಿಮಾರಾದವರೆಗೆ ಚೀನಾದ ಗಡಿ ಭಾಗದುದ್ದಕ್ಕೂ ಇರುವ ಭಾರತೀಯ ವಾಯುನೆಲೆಗಳನ್ನ ಜಾಗೃತ ಸ್ಥಿತಿಯಲ್ಲಿಡಲಾಗಿದೆ. ಅದೇ ಗಡಿಯುದ್ಧಕ್ಕೂ ಇರುವ ಚೀನಾ ವಾಯುನೆಲೆಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ.  ಟಿಬೆಟ್​ನಲ್ಲಿರುವ ಚೀನಾದ ವಾಯುನೆಲೆಗಳಿಗೆ ಹೋಲಿಸಿದರೆ ಭಾರತ ಮೇಲುಗೈ ಹೊಂದಿದೆ. ಏರ್​ಸ್ಟ್ರೈಕ್​ನಲ್ಲಿ ಚೀನಾದವರಿಗಿಂತ ಭಾರತ ಹೆಚ್ಚು ಪಕ್ವತೆ ಮತ್ತು ವ್ಯವಸ್ಥೆ ಹೊಂದಿದೆ. ಹೋಟನ್ ಹೊರತುಪಡಿಸಿ ಟಿಬೆಟ್​ನಲ್ಲಿರುವ ಚೀನಾ ಯಾವ ವಾಯುನೆಲೆಯಲ್ಲೂ ಯುದ್ಧ ವಿಮಾನದ ದಾಳಿ ನಡೆಸಲು ಸಾದ್ಯವಿಲ್ಲ. ಕ್ಷಿಪಣಿ ದಾಳಿಯನ್ನು ಎದುರಿಸುವಷ್ಟು ಸುರಕ್ಷಾ ವ್ಯವಸ್ಥೆ ಚೀನಾದ ವಾಯುನೆಲೆಗಳಲ್ಲಿಲ್ಲ ಎಂದು ಗ್ರೂಪ್ ಕ್ಯಾಪ್ಟನ್ ಎಂಜೆ ಆಗಸ್ಟಿನ್ ಹೇಳುತ್ತಾರೆ.

  - Shreya Dhoundia, CNN-News18
  First published: