ಲಡಾಖ್ನಲ್ಲಿ ಗಡಿ ಅತಿಕ್ರಮಣಕ್ಕೆ ಚೀನಾ ಮತ್ತೆ ಯತ್ನ; ಹಿಮ್ಮೆಟ್ಟಿಸಿದ ಭಾರತೀಯ ಸೈನಿಕರು
ಲಡಾಖ್ ಪೂರ್ವಭಾಗದ ಪ್ಯಾಂಗೋಂಗ್ ಸರೋವರದಲ್ಲಿ ಗಡಿ ಯಥಾಸ್ಥಿತಿಯನ್ನು ಉಲ್ಲಂಘಿಸಲು ಪಿಎಲ್ಎ ಸೈನಿಕರು ಮಾಡಿದ ಪ್ರಯತ್ನವನ್ನು ಭಾರತೀಯ ಪಡೆಗಳು ವಿಫಲಗೊಳಿಸಿವೆ. ಈಗ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ.
ನವದೆಹಲಿ(ಆ. 31): ಕೊಟ್ಟ ಮಾತನ್ನು ತಪ್ಪುವ ಚಾಳಿಯ ಚೀನಾ ದೇಶ ಲಡಾಖ್ನಲ್ಲಿ ಕಿತಾಪತಿ ಮುಂದುವರಿಸಿದೆ. ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಭಾರತದ ಭಾಗವನ್ನು ಅತಿಕ್ರಮಿಸಿ ಭಾರತೀಯ ಸೈನಿಕರ ಮೇಲೆಯೇ ಅಮಾನುಷ ಹಲ್ಲೆ ಎಸಗಿದ ಘಟನೆ ನಡೆದು ಎರಡು ತಿಂಗಳೂ ಕಳೆದಿಲ್ಲ ಅದಾಗಲೇ ಚೀನಾ ಮತ್ತೆ ಅತಿಕ್ರಮಣಕ್ಕೆ ಪ್ರಯತ್ನಿಸಿರುವ ವಿಚಾರ ಬೆಳಕಿಗೆ ಬಂದಿದೆ. ಗಾಲ್ವನ್ ಸಂಘರ್ಷದ ಬಳಿಕ ಎರಡೂ ಕಡೆಯವರು ಒಪ್ಪಿಕೊಂಡಿದ್ದ ಯಥಾಸ್ಥಿತಿಯನ್ನು ಚೀನಾ ಮುರಿದಿದೆ. ಆಗಸ್ಟ್ 29-30ರ ದಿನದಂದು, ಅಂದರೆ ಶುಕ್ರವಾರ ರಾತ್ರಿ ಪಾಂಗೋಂಗ್ ಟ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಚೀನಾದ ಪಿಎಲ್ಎ ಸೈನಿಕರು ಅತಿಕ್ರಮಣಕ್ಕೆ ಮುಂದಾಗಿದ್ದರೆನ್ನಲಾಗಿದೆ. ಇದನ್ನು ಮೊದಲೇ ಊಹಿಸಿದ್ದ ಭಾರತದ ಭದ್ರತಾ ಪಡೆಗಳು ತತ್ಕ್ಷಣವೇ ಜಾಗೃತಗೊಂಡು ಚೀನೀ ಸೈನಿಕರನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.
“ಪ್ಯಾಂಗೋಂಗ್ ಟ್ಸೋ ಸರೋವರದ ಭಾಗದಲ್ಲಿ ಚೀನೀ ಸೈನಿಕರಿಂದ ಈ ಚಟುವಟಿಕೆ ನಡೆಯಬಹುದು ಎಂದು ಭಾರತದ ಪಡೆಗಳು ಮೊದಲೇ ಅಂದಾಜು ಮಾಡಿದ್ದವು. ಹಾಗಾಗಿ, ನಮ್ಮ ಸೇನಾ ನಿಯೋಜನೆ ಹೆಚ್ಚಿಸಿದೆವು. ಗಡಿ ಯಥಾಸ್ಥಿತಿಯನ್ನು ಮಾರ್ಪಾಡು ಮಾಡುವ ಚೀನಾ ದುರುದ್ದೇಶವನ್ನು ವಿಫಲಗೊಳಿಸಲಾಯಿತು. ಮಾತುಕತೆ ಮೂಲಕ ಶಾಂತಿ ಕಾಪಾಡಲು ಭಾರತದ ಸೇನೆ ಬದ್ಧವಾಗಿದೆ. ಆದರೆ, ತನ್ನ ಭೂಪ್ರದೇಶದ ರಕ್ಷಣೆಗೂ ಅಷ್ಟೇ ಕಟಿಬದ್ಧವಾಗಿದೆ. ಚುಶುಲ್ ಪ್ರದೇಶದಲ್ಲಿ ಎರಡೂ ದೇಶಗಳ ಸೇನಾಪಡೆಗಳ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಫ್ಲಾಗ್ ಮೀಟಿಂಗ್ ನಡೆಯುತ್ತಿದ್ದು, ಇದರಲ್ಲಿ ಈ ವಿಚಾರಗಳನ್ನ ಚರ್ಚಿಸಲಾಗುತ್ತಿದೆ” ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಲಡಾಖ್ನಲ್ಲಿರುವ ಭಾರತ ಮತ್ತು ಚೀನಾದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಚೀನೀ ಸೈನಿಕರು ಕೆಲ ತಿಂಗಳ ಹಿಂದೆ ಅತಿಕ್ರಮಣ ಮಾಡಿದ್ದರು. ಪ್ಯಾಂಗೋಂಗ್ ಸರೋವರದ ಐದಾರು ಬೆಟ್ಟಗಳ ಶ್ರೇಣಿಗಳಿಗೆ ಅಕ್ರಮವಾಗಿ ಪ್ರವೇಶ ಮಾಡಿ ವಶದಲ್ಲಿಟ್ಟುಕೊಂಡಿದ್ದರು. ಭಾರತೀಯ ಸೈನಿಕರು ಪ್ರತಿರೋಧ ಒಡ್ಡಿದ ಪರಿಣಾಮ ಗಾಲ್ವನ್ ಕಣಿವೆಯಲ್ಲಿ ಪಿಎಲ್ಎ ಸೈನಿಕರು ಅಮಾನಷವಾಗಿ ಹಲ್ಲೆ ಎಸಗಿದ್ದರು. ಈ ಘಟನೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಹಾನಿಯಾಗಿದೆ. 20 ಭಾರತೀಯ ಸೈನಿಕರು ಮೃತಪಟ್ಟಿದ್ದರು. ಆ ಬಳಿಕ ಎರಡೂ ಕಡೆಯ ಸೇನಾ ಪಡೆಗಳು ವಿವಿಧ ಹಂತಗಳಲ್ಲಿ ಮಾತುಕತೆ ನಡೆಸಿ ಗಡಿಯಲ್ಲಿ ಯಥಾಸ್ಥಿತಿ ಪಾಲಿಸುವ ನಿರ್ಧಾರಕ್ಕೆ ಬರಲಾಯಿತು. ಗಾಲ್ವನ್ ಕಣಿವೆಯಲ್ಲಿನ ಎಲ್ಲಾ ವಿವಾದಿತ ಸ್ಥಳಗಳಿಂದ ವಾಪಸ್ ಹೋಗುವುದೆಂಬ ಒಪ್ಪಂದಕ್ಕೆ ಬರಲಾಯಿತು.
ಆದರೆ, ಸರೋವರ ಬೆಟ್ಟ ಶ್ರೇಣಿಯ 4 ಮತ್ತು 8ನೇ ಫಿಂಗರ್ ಪ್ರದೇಶಗಳಿಂದ ಚೀನೀ ಸೈನಿಕರು ಕಾಲ್ತೆಗೆಯಲು ಮೀನಮೇಷ ಎಣಿಸುತ್ತಿದ್ದಾರೆ. ಭಾರತ ನಿರಂತರವಾಗಿ ಒತ್ತಡ ಹಾಕುತ್ತಲೇ ಇದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ