ನವದೆಹಲಿ (ಜೂ. 17): ಕೊರೋನಾ ಸಂಕಷ್ಟದ ನಡುವೆ ಲಡಾಖ್ನಲ್ಲಿರುವ ಭಾರತ- ಚೀನಾ ಗಡಿಯಲ್ಲಿ ನಡೆದ ದಾಳಿಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ನಾಲ್ವರು ಯೋಧರ ಸ್ಥಿತಿ ಗಂಭೀರವಾಗಿದೆ. ಹಠಾತ್ತನೆ ನಡೆದ ಈ ಘಟನೆಯಿಂದ ಚೀನಾ-ಭಾರತದ ನಡುವಿನ ದ್ವೇಷ ಇನ್ನಷ್ಟು ಹೆಚ್ಚಾಗಿದೆ. ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ದೇಶಕ್ಕಾಗಿ ಭಾರತೀಯ ಸೈನಿಕರು ಮಾಡಿದ ಈ ತ್ಯಾಗವನ್ನು ದೇಶದ ಜನರು ಎಂದೂ ಮರೆಯುವುದಿಲ್ಲ. ಈ ಘಟನೆಯಿಂದ ಮನಸಿಗೆ ಬಹಳ ನೋವಾಗಿದೆ ಎಂದಿದ್ದಾರೆ.
ಭಾರತ-ಚೀನಾ ದೇಶಗಳ ಸೇನಾ ಕಮಾಂಡರ್ಗಳು ಜೂ. 6ರಂದು ಸಭೆ ನಡೆಸಿ, ಗಡಿಯಿಂದ ಸೈನ್ಯವನ್ನು ಹಿಂಪಡೆಯುವ ಬಗ್ಗೆ ಚರ್ಚೆ ನಡೆಸಿದ್ದರು. ಆದರೂ ಲಡಾಖ್ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಲೇ ಇತ್ತು. ಇದರಿಂದ ಹೆಚ್ಚುವರಿ ಸೇನಾ ಸಿಬ್ಬಂದಿಯನ್ನು ಅಲ್ಲಿ ನೇಮಕ ಮಾಡಲಾಗಿತ್ತು. ಗಾಲ್ವಾನ್ ನದಿ ಕಣಿವೆಯಲ್ಲಿ ಸೋಮವಾರ ರಾತ್ರಿಯಿಂದ 8 ಗಂಟೆಗೂ ಹೆಚ್ಚು ಕಾಲ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಜೊತೆಗೆ ಚೀನಾದ 43 ಸೈನಿಕರು ಕೂಡ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಚೀನಾ ದಾಳಿಯಿಂದ ಗಾಯಗೊಂಡ ನಾಲ್ವರು ಸೈನಿಕರ ಸ್ಥಿತಿ ಗಂಭೀರ!
ಈ ಬಗ್ಗೆ ಟ್ವಿಟ್ಟರ್ನಲ್ಲಿ ಬೇಸರ ಹೊರಹಾಕಿರುವ ಸಚಿವ ರಾಜನಾಥ ಸಿಂಗ್, ದೇಶಕ್ಕಾಗಿ ಚೀನಾ ಗಡಿಯಲ್ಲಿ ಹೋರಾಡಿ, ಪ್ರಾಣತ್ಯಾಗ ಮಾಡಿದ ವೀರಯೋಧರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಕುಟುಂಬಸ್ಥರ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ಬಹಳ ದುಃಖವಾಗುತ್ತಿದೆ. ಅವರಿಗೆ ನೈತಿಕ ಬೆಂಬಲವಾಗಿ ಇಡೀ ದೇಶದ ಜನರು ಜೊತೆಗಿದ್ದೇವೆ. ಇಂತಹ ಕಷ್ಟಕಾಲದಲ್ಲಿ ನಾವೆಲ್ಲರೂ ಹುತಾತ್ಮರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಬೇಕಾಗಿದೆ ಎಂದಿದ್ದಾರೆ.
ಕೆಚ್ಚೆದೆಯಿಂದ ಗಡಿಯಲ್ಲಿ ಹೋರಾಡಿದ ಯೋಧರ ಬಗ್ಗೆ ನಮಗೆ ಅತೀವವಾದ ಹೆಮ್ಮೆಯಿದೆ. ನಮ್ಮ ದೇಶದ ಸೈನಿಕರನ್ನು ಕಳೆದುಕೊಂಡಿರುವುದು ಬಹಳ ನೋವುಂಟುಮಾಡಿದೆ. ದೇಶಕ್ಕಾಗಿ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿದ ಸೈನಿಕರು ಮತ್ತೊಮ್ಮೆ ಭಾರತೀಯ ಸೇನೆಯ ಬಗ್ಗೆ ದೇಶದ ಜನರಿಗಿರುವ ಅಭಿಮಾನವನ್ನು ಹೆಚ್ಚಿಸಿದ್ದಾರೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಹಿನ್ನೆಲೆ ಇಂದು ಸೇನಾ ಮುಖ್ಯಸ್ಥರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮೂರು ಸೇನಾ ಮುಖ್ಯಸ್ಥರು ಭಾಗಿಯಾಗಿದ್ದಾರೆ. ಸಿಎಸ್ ಡಿ ಬಿಪಿನ್ ರಾವತ್ ಕೂಡ ಭಾಗಿಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ