ಹುಟ್ಟುಹಬ್ಬದ ಸಂಭ್ರಮಕ್ಕೂ ಮೊದಲೇ ಚೀನಾ ಸೈನಿಕರ ಗುಂಡಿಗೆ ಬಲಿಯಾದ ತಮಿಳುನಾಡು ಯೋಧ ಪಳನಿ

ಪಳನಿ ಅವರ ಅಪ್ಪ-ಅಮ್ಮ ಮನೆಯಲ್ಲಿ ಮಗನ ಬರುವಿಕೆಗಾಗಿ ಕಾಯುತ್ತಿದ್ದರು. ಮಕ್ಕಳು ಅಪ್ಪನೊಡನೆ ಕಾಲ ಕಳೆಯುವ ದಿನಗಳು ಹತ್ತಿರ ಬಂದಿತು ಎಂಬ ಸಂತೋಷದಲ್ಲಿದ್ದರು. ಆದರೆ, ನಿವೃತ್ತಿಗೂ ಒಂದು ವರ್ಷ ಮೊದಲು ಪಳನಿ ಇಹಲೋಕ ತ್ಯಜಿಸಿದ್ದಾರೆ.

ತಮಿಳುನಾಡಿನ ಹುತಾತ್ಮ ಯೋಧ ಪಳನಿ

ತಮಿಳುನಾಡಿನ ಹುತಾತ್ಮ ಯೋಧ ಪಳನಿ

  • Share this:
ಭಾರತ- ಚೀನಾ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ನಿನ್ನೆ ಗಾಲ್ವಾನ್​ ಕಣಿವೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತಮಿಳುನಾಡಿನ ಯೋಧ ಕೆ. ಪಳನಿ ಕೂಡ ಸಾವನ್ನಪ್ಪಿದ್ದಾರೆ. ನಿವೃತ್ತರಾಗಲು ಇನ್ನು ಒಂದೇ ಒಂದು ವರ್ಷ ಉಳಿದಿರುವಾಗಲೆ ಅವರು ಹುತಾತ್ಮರಾಗಿದ್ದಾರೆ. ತಾವು ಪ್ರೀತಿಯಿಂದ ಕಟ್ಟಿಸಿದ ಮನೆಯ ಗ್ರಹಪ್ರವೇಶಕ್ಕೂ ಪಳನಿ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ಅವರ 40ನೇ ವರ್ಷದ ಹುಟ್ಟುಹಬ್ಬ ಮತ್ತು ಮನೆಯ ಗ್ರಹಪ್ರವೇಶದ ಸಂಭ್ರಮವನ್ನು ಒಟ್ಟಾಗಿ ಆಚರಿಸಬೇಕೆಂಬ ಆಸೆಯನ್ನು ಇಟ್ಟುಕೊಂಡಿದ್ದ ಮನೆಯವರಿಗೆ ಇದು ದೊಡ್ಡ ಆಘಾತ ನೀಡಿದೆ.

ಮುಂದಿನ ವರ್ಷ ನಿವೃತ್ತಿಯಾಗಲಿದ್ದ ಪಳನಿ ತಮ್ಮ ಕುಟುಂಬದವರ ಜೊತೆ ದಿನ ಕಳೆಯಬೇಕೆಂಬ ಕಾರಣಕ್ಕೆ ಮನೆಯೊಂದನ್ನು ಕಟ್ಟಿಸಿದ್ದರು. ಜೂ. 3ರಂದು ಅದರ ಗೃಹಪ್ರವೇಶವೂ ನೆರವೇರಿತ್ತು. ಆದರೆ, ಅದರಲ್ಲಿ ಪಳನಿ ಪಾಲ್ಗೊಳ್ಳದ ಕಾರಣ ಮುಂದಿನ ಬಾರಿ ಬಂದಾಗ ಮನೆಯ ಗ್ರಹಪ್ರವೇಶ ಸಂಭ್ರಮಾಚರಣೆ ಮತ್ತು ಅವರ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಬೇಕೆಂದು ಅವರ ಮನೆಯವರು ಪ್ಲಾನ್ ಮಾಡಿದ್ದರು. ಆದರೆ, ಪಳನಿ ಮನೆಗೆ ಬಂದಿದ್ದು ಮಾತ್ರ ಶವವಾಗಿ!

ಇದನ್ನೂ ಓದಿ: India China Border Violence: ಲಡಾಖ್ ಗಡಿ ಸಂಘರ್ಷ; ಗಾಲ್ವಾನ್ ಕಣಿವೆಯ ದಾಳಿ ಬಗ್ಗೆ ಚೀನಾ ಮಾಧ್ಯಮಗಳು ಹೇಳಿದ್ದೇನು?

ತಮಿಳುನಾಡಿನ ಪಳನಿ ಅವರು 35 ವರ್ಷದ ಹೆಂಡತಿ ವಸಂತಿ ದೇವಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ತಮ್ಮ ಮಗ ಸೇನೆಗೆ ಸೇರಬೇಕು ಎಂಬುದು ಪಳನಿ ಅವರ ಕನಸಾಗಿತ್ತು. ಗಾಲ್ವಾನ್​ ಕಣಿವೆಯ ಸ್ಥಿತಿ ಬಗ್ಗೆ ಹೆಂಡತಿ ಬಳಿ ಮಾತನಾಡಿದ್ದ ಯೋಧ ಪಳನಿ, ಇಲ್ಲಿನ ಪರಿಸ್ಥಿತಿ ತುಂಬ ಹದಗೆಡುತ್ತಿದೆ. ನಾನು ಮನೆಯ ಗೃಹಪ್ರವೇಶಕ್ಕೆ ಬರಲು ಸಾಧ್ಯವಿಲ್ಲ. ನೀವೆಲ್ಲ ಸೇರಿ ಕಾರ್ಯಕ್ರಮ ಮಾಡಿ. ನಾನು ಆದಷ್ಟು ಬೇಗ ಮನೆಗೆ ಬರುತ್ತೇನೆ ಎಂದಿದ್ದರು.

ಪಳನಿ ಅವರ ವಯಸ್ಸಾದ ಅಪ್ಪ-ಅಮ್ಮ ಮನೆಯಲ್ಲಿ ಮಗನ ಬರುವಿಕೆಗಾಗಿ ಕಾಯುತ್ತಿದ್ದರು. ಮಕ್ಕಳು ಅಪ್ಪನೊಡನೆ ಕಾಲ ಕಳೆಯುವ ದಿನಗಳು ಹತ್ತಿರ ಬಂದಿತು ಎಂಬ ಸಂತೋಷದಲ್ಲಿದ್ದರು. ಆದರೆ, ನಿವೃತ್ತಿಗೂ ಒಂದು ವರ್ಷ ಮೊದಲು ಪಳನಿ ಇಹಲೋಕ ತ್ಯಜಿಸಿದ್ದಾರೆ. ರೈತನ ಮಗನಾಗಿರುವ ಪಳನಿ ಬಿ.ಎ ಪದವೀಧರ. ಪಿಯುಸಿ ಮುಗಿದ ಬಳಿಕ 18ನೇ ವರ್ಷಕ್ಕೆ ಅವರು ಸೇನೆಗೆ ಸೇರಿದ್ದರು. ನಂತರ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ದೂರಶಿಕ್ಷಣದ ಮೂಲಕ ಬಿಎ ಪದವಿ ಪಡೆದಿದ್ದರು. ತಮ್ಮ ಬಡ ಕುಟುಂಬಕ್ಕೆ ಪಳನಿ ಅವರ ಆದಾಯವೇ ಆಸರೆಯಾಗಿತ್ತು. ಇಂದು ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪಳನಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

(ವರದಿ: ಪೂರ್ಣಿಮಾ ಮುರಳಿ)
First published: