ಗಡಿಯಲ್ಲಿ ಯಥಾಸ್ಥಿತಿ ಕದಡುವ ಪ್ರಯತ್ನ ಮಾಡಿದರೆ ಭಾರೀ ಪರಿಣಾಮ ಎದುರಿಸಬೇಕಾದೀತು; ಚೀನಾಗೆ ಭಾರತ ಎಚ್ಚರಿಕೆ

India-China Conflict: ಗಾಲ್ವಾನ್​ ಕಣಿವೆ ಚೀನಾಗೆ ಸೇರಿದ್ದು ಎಂಬುದು ಅಸಮರ್ಥವಾದ ವಾದ. ಇಂತಹ ಹೇಳಿಕೆಗಳಿಂದ ಗಡಿಯಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆಯೇ ಹೊರತು ಸುಧಾರಿಸುವುದಿಲ್ಲ ಎಂದು ಚೀನಾದ ಭಾರತ ರಾಯಭಾರಿ ವಿಕ್ರಂ ಮಿಸ್ರಿ ಹೇಳಿದ್ದಾರೆ.

ಭಾರತ ಮತ್ತು ಚೀನಾ ಗಡಿ

ಭಾರತ ಮತ್ತು ಚೀನಾ ಗಡಿ

 • Share this:
  ನವದೆಹಲಿ (ಜೂ. 27): ಎಲ್​ಎಸಿಯ ನಿಯಮಗಳನ್ನು ಮೀರಿ, ಗಡಿಯಲ್ಲಿ ತಗಾದೆ ತೆಗೆಯುವುದು ಕೇವಲ ಎರಡೂ ದೇಶಗಳ ಶಾಂತಿಯನ್ನು ಮಾತ್ರ ಕದಡುವುದಿಲ್ಲ. ಇದರಿಂದ ದ್ವಿಪಕ್ಷೀಯ ಸಂಬಂಧವೂ ಹಾಳಾಗುತ್ತದೆ. ಅಲ್ಲದೆ, ಗಡಿಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನ ಮಾಡಿದರೆ ವ್ಯತಿರಿಕ್ತ ಪರಿಣಾಮವನ್ನೂ ಚೀನಾ ಎದುರಿಸಬೇಕಾದೀತು. ಹೀಗಾಗಿ, ಲಡಾಖ್​ನಲ್ಲಿ ಬೀಜಿಂಗ್ ತನ್ನ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಭಾರತ ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

  ಬೀಜಿಂಗ್ ಪೂರ್ವ ಲಡಾಖ್​ನಲ್ಲಿ ತನ್ನ ಚಟುವಟಿಕೆಗಳನ್ನು ನಿಲ್ಲಿಸುವುದೊಂದೇ ಈಗಿರುವ ಪರಿಹಾರ. ಬಲವಂತವಾಗಿ ಎಲ್​ಸಿಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವುದು ಸುಲಭವಲ್ಲ ಮತ್ತು ಅದು ಸರಿಯಾದ ನಿರ್ಧಾರವೂ ಅಲ್ಲ ಎಂಬುದನ್ನು ಚೀನಾ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಚೀನಾದ ಭಾರತ ರಾಯಭಾರಿ ವಿಕ್ರಂ ಮಿಸ್ರಿ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

  ಭಾರತ ಮತ್ತು ಚೀನಾ ನಡುವಿನ ಸಂಬಂಧ ಸುಧಾರಿಸಬೇಕೆಂದರೆ ಗಡಿಯಲ್ಲಿ ಮತ್ತೊಮ್ಮೆ ಈ ರೀತಿಯ ಘಟನೆಗಳು ಪುನರಾವರ್ತಿತವಾಗಬಾರದು. ಗಡಿ ಗಲಭೆಯ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ನಿರ್ಧಾರ ಮಾಡಬೇಕಾಗಿದ್ದು ಸಂಪೂರ್ಣವಾಗಿ ಚೀನಾದ ಜವಾಬ್ದಾರಿಯಾಗಿತ್ತು. ಆದರೆ, ಚೀನಾ ಅದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ವಿಕ್ರಂ ಮಿಸ್ರಿ ಹೇಳಿದ್ದಾರೆ.

  ಇದನ್ನೂ ಓದಿ: ದಿಲ್ಲಿ ಪೋಸ್ಟ್ | ಚೀನಾ ವಿರುದ್ಧ ಕುರಿಗಳೊಂದಿಗೆ ಪ್ರತಿಭಟನೆ ಮಾಡಿದ್ದ ವಾಜಪೇಯಿ; 18 ಸಲ ಕ್ಸಿ ಜಿನ್‌ ಪಿಂಗ್ ಭೇಟಿ ಮಾಡಿರುವ ಮೋದಿ!

  ಗಾಲ್ವಾನ್​ ಕಣಿವೆಯ ಮೇಲೆ ನಮಗೆ ಸಂಪೂರ್ಣ ಹಕ್ಕಿದೆ ಎಂದು ಚೀನಾ ಹೇಳಿಕೆ ನೀಡಿತ್ತು. ಈ ಹೇಳಿಕೆ ಕುರಿತು ಮಾತನಾಡಿರುವ ಭಾರತದ ರಾಯಭಾರಿ ವಿಕ್ರಂ ಮಿಸ್ರಿ, ಗಾಲ್ವಾನ್​ ಕಣಿವೆ ಚೀನಾಗೆ ಸೇರಿದ್ದು ಎಂಬುದು ಅಸಮರ್ಥವಾದ ವಾದ. ಇಂತಹ ಹೇಳಿಕೆಗಳಿಂದ ಗಡಿಯಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆಯೇ ಹೊರತು ಸುಧಾರಿಸುವುದಿಲ್ಲ ಎಂಬುದನ್ನು ಚೀನಾ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

  ಗಾಲ್ವಾನ್​ ಕಣಿವೆಯಲ್ಲಿ ಉಂಟಾದ ಸಂಘರ್ಷಕ್ಕೆ ಚೀನಾ ದೇಶವೇ ಕಾರಣ. ಇದು ದಿಢೀರಾಗಿ ಶುರುವಾದ ಗಲಾಟೆಯಲ್ಲ. ಮೇ ಆರಂಭದಿಂದಲೇ ಎಲ್​ಎಸಿಯಲ್ಲಿ ಚೀನಾ ತಗಾದೆ ತೆಗೆಯಲು ಆರಂಭಿಸಿತ್ತು. ಗಡಿಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿತ್ತು. ಮೇ ಮಧ್ಯಭಾಗದಲ್ಲಿ ಗಡಿಯ ಯಥಾಸ್ಥಿತಿಯನ್ನು ಬದಲಿಸಲು ಚೀನಾ ಪ್ರಯತ್ನಿಸಿತ್ತು. ಭಾರತದ ಮೇಲೆ ದಾಳಿ ನಡೆಸಲು ಚೀನಾ ಮೊದಲಿನಿಂದಲೇ ಸಿದ್ಧತೆ ಮಾಡಿಕೊಂಡಿತ್ತು ಎಂದು ಕೇಂದ್ರದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ ಶ್ರೀವಾಸ್ತವ್ ಹೇಳಿದ್ದರು. ಅದರ ಬೆನ್ನಲ್ಲೇ ಚೀನಾದ ಭಾರತದ ರಾಯಭಾರಿ ವಿಕ್ರಂ ಮಿಸ್ರಿ ಪ್ರತಿಕ್ರಿಯೆ ನೀಡಿದ್ದಾರೆ.
  First published: