India China Standoff - ಗಡಿ ನಿಯಮ ಮೀರಿ ಭಾರತೀಯ ಸೈನಿಕರಿಂದ ಫೈರಿಂಗ್: ಚೀನಾ ಆರೋಪ
ಗುಂಡಿನ ದಾಳಿ ಮಾಡಬಾರದು ಎಂಬ ನಿಯಮ ಇದ್ದರೂ ಚೀನೀ ಸೈನಿಕರು ಮುಖಾಮುಖಿಯಾದಾಗ ಭಾರತೀಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರೆಂದು ಚೀನಾ ಆಪಾದನೆ ಮಾಡಿದೆ. ಪ್ಯಾಂಗೋಂಗ್ ಸರೋವರದ ಬಳಿಯ ಗಡಿಯಲ್ಲಿ ಈ ಘಟನೆ ನಡೆದಿದೆ.
ನವದೆಹಲಿ(ಸೆ. 08): ಲಡಾಖ್ ಬಳಿಕ ಗಡಿಭಾಗದಲ್ಲಿ ಆತಂಕ ಮುಂದುವರಿದಿದೆ. ಪ್ಯಾಂಗೋಂಗ್ ಸರೋವರದ ಶೆನ್ ಪಾವೊ ಪರ್ವತಗಳ ಬಳಿ ಇರುವ ಗಡಿಭಾಗದಲ್ಲಿ ತಮ್ಮ ಸೈನಿಕರೊಂದಿಗೆ ಮುಖಾಮುಖಿಯಾದ ಭಾರತೀಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು. ಇದು ದ್ವಿಪಕ್ಷೀಯ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಚೀನಾ ಆರೋಪ ಮಾಡಿದೆ. ಚೀನಾ ಸೇನೆಯ ವೆಸ್ಟರ್ನ್ ಕಮಾಂಡ್ನ ವಕ್ತಾರ ಝಾಂಗ್ ಶುಲಿ ಅವರು ಚೀನೀ ಮಿಲಿಟರಿ ವೆಬ್ಸೈಟ್ನಲ್ಲಿ ಈ ವಿಚಾರ ತಿಳಿಸಿದ್ದು, ಭಾರತೀಯ ಸೈನಿಕರ ಫೈರಿಂಗ್ಗೆ ಪ್ರತಿಯಾಗಿ ಚೀನೀ ಗಡಿ ಭದ್ರತಾ ಪಡೆಗಳು ಪ್ರತಿರೋಧ ಕ್ರಮಗಳನ್ನ ಕೈಗೊಂಡು ಪರಿಸ್ಥಿತಿ ನಿಭಾಯಿಸಲಾಯಿತು ಎಂದಿದ್ದಾರೆ. ಆದರೆ, ಪರಿಸ್ಥಿತಿ ನಿಭಾಯಿಸಲು ಚೀನೀಯರು ಯಾವ ಕ್ರಮ ಕೈಗೊಂಡರು ಎಂಬುದು ಮಾತ್ರ ಗೊತ್ತಾಗಿಲ್ಲ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರತ ಮತ್ತು ಚೀನಾ ಗಡಿಭಾಗದಲ್ಲಿ ಸೈನಿಕರು ಗುಂಡಿನ ಬಳಕೆ ಮಾಡಬಾರದು ಎಂಬ ನಿಯಮ ಇದೆ. ದ್ವಿಪಕ್ಷೀಯ ಒಪ್ಪಂದದಲ್ಲಿರುವ ನಿಯಮಗಳಲ್ಲಿ ಇದೂ ಒಂದು. ಬಹಳ ವರ್ಷಗಳಿಂದ ಇದನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಆದಾಗ್ಯೂ ಗನ್, ಬಂದೂಕು ಇಲ್ಲದೆಯೂ ಎರಡೂ ಕಡೆಯ ಸೈನಿಕರು ಕೈಕೈ ಮಿಲಾಯಿಸಿರುವ ಹಲವು ಘಟನೆಗಳು ನಡೆದಿವೆ. ಅನೇಕ ಸಾವುಗಳಾಗಿರುವುದು ಹೌದು.
ಇತ್ತೀಚೆಗಷ್ಟೇ ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಚೀನೀ ಸೈನಿಕರು ಬಡಿಗೆ ಇತ್ಯಾದಿಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿ 20 ಮಂದಿಯನ್ನು ಬಲಿತೆಗೆದುಕೊಂಡಿದ್ದರು. ಜೂನ್ನಲ್ಲಿ ನಡೆದ ಈ ಗಲಾಟೆಯಲ್ಲಿ ಅನೇಕ ಚೀನೀ ಸೈನಿಕರು ಸತ್ತರೆಂಬ ಅನಧಿಕೃತ ಮಾಹಿತಿ ಇದೆ. ಚೀನಾ ತಮ್ಮ ಕಡೆಯವರ ಸಾವಿನ ಸಂಖ್ಯೆ ಬಗ್ಗೆ ಇವತ್ತಿಗೂ ಬಾಯಿಬಿಟ್ಟಿಲ್ಲ. ಆ ಘಟನೆ ನಡೆದಾಗಿನಿಂದಲೂ ಭಾರತ ಮತ್ತು ಚೀನಾ ಗಡಿಯಾದ್ಯಂತ ಸೂಕ್ಷ್ಮ ಪರಿಸ್ಥಿತಿ ನೆಲಸಿದೆ. ಎರಡೂ ಕಡೆ ಸಾವಿರಾರು ತುಕಡಿಗಳು ಜಮಾಯಿಸಿದ್ದು ಅಘೋಷಿತ ಯುದ್ಧದ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಭಾರತೀಯ ಸೈನಿಕರಿಂದ ಫೈರಿಂಗ್ ಆಗಿದೆ ಎಂದು ಚೀನಾ ಆರೋಪ ಮಾಡಿದೆ. “ಭಾರತೀಯ ಸೈನಿಕರು ಕೂಡಲೇ ಇಂಥ ಅಪಾಯಕಾರಿ ಕ್ರಮಗಳನ್ನ ಕೈಬಿಡಬೇಕು. ಘಟನೆಯ ತನಿಖೆ ನಡೆಸಿ, ಗುಂಡು ಹಾರಿಸಿದ ಸೈನಿಕರಿಗೆ ಶಿಕ್ಷೆ ನೀಡಿ, ಮತ್ತೆ ಇಂಥ ಘಟನೆ ಮರುಕಳಿಸದ ಹಾಗೆ ನೋಡಿಕೊಳ್ಳಬೇಕೆಂದು ಭಾರತೀಯ ಸೇನೆಗೆ ನಾವು ಮನವಿ ಮಾಡುತ್ತೇವೆ” ಎಂದು ಝಾಂಗ್ ಶುಲಿ ಹೇಳಿದ್ದಾರೆ.
ಆದರೆ, ಭಾರತ ಈ ಆರೋಪಗಳನ್ನ ಅಲ್ಲಗಳೆದಿದೆ. ಚೀನಾದೊಂದಿಗಿನ ಎಲ್ಎಸಿ ಗಡಿಭಾಗದಲ್ಲಿ ಭಾರತೀಯ ಸೈನಿಕರು ಯಾವುದೇ ಗುಂಡು ಹಾರಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
(ರಾಯ್ಟರ್ಸ್ಸ್ ಸುದ್ದಿ ಸಂಸ್ಥೆ ವರದಿ)
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ